ಜನಚಳುವಳಿಗಾರ ಜಿ.ವಿ.ಶ್ರೀರಾಮರೆಡ್ಡಿ ನಿಧನಕ್ಕೆ ಹಲವು ಗಣ್ಯರ ಸಂತಾಪ

ಬಾಗೇಪಲ್ಲಿ ಕ್ಷೇತ್ರಕ್ಕೆ ಸಿಪಿಐ(ಎಂ) ಪಕ್ಷದಿಂದ ಎರಡು ಭಾರಿ ಶಾಸಕರಾಗಿದ್ದ ಜಿ ವಿ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದರು. ಅವರು ಶಾಸಕರಾಗಿ ಆಯ್ಕೆಯಾಗುವ ಮೊದಲಿನಿಂದಲೂ ತಮ್ಮ ವಿದ್ಯಾರ್ಥಿ ಜೀವನದ ಆರಂಭದ ದಿನಗಳಿಂದಲೇ ಜನ ಚಳುವಳಿಯೊಂದಿಗೆ ಗುರುತಿಸಿಕೊಂಡು, ತಮ್ಮ ಕೊನೆಯ ದಿನಗಳವರೆಗೂ ನಿರಂತರ ಜನಚಳುವಳಿಯನ್ನು ಸಂಘಟಿಸುತ್ತಾ ಹೋರಾಟದಲ್ಲಿ ತೊಡಗಿಕೊಂಡವರು.

ಇದನ್ನು ಓದಿ: ಮಾಜಿ ಶಾಸಕ, ಜನಪರ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ನಿಧನ

2018ರ ಚುನಾವಣೆಯಲ್ಲಿ 51,697 ಮತಗಳನ್ನು ಪಡೆದು ಅವರು ಸೋಲು ಕಂಡಿದ್ದರು. ತಮ್ಮ ಜನಪರ ನಿಲುವುಗಳಿಂದ ಪ್ರಸಿದ್ಧಿ ಪಡೆದಿದ್ದ ಜಿ. ವಿ. ಶ್ರೀರಾಮ ರೆಡ್ಡಿ ಸಿಪಿಐ(ಎಂ) ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಸರ್ಕಾರದ ಜನ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸುತ್ತಿದ್ದರು.

ಶ್ರೀರಾಮರೆಡ್ಡಿ ಅಂತಿಮ ದರ್ಶನಕ್ಕೆ ನಿಡುಮಾಮಿಡಿ ಮಠದ ಸ್ವಾಮೀಜಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

ಜಿ.ವಿ. ಶ್ರೀರಾಮರೆಡ್ಡಿ ಅವರು ನಿಧನರಾಗಿದ್ದು, ಅವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ ಸುಧಾಕರ್‌, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಜೆಡಿಎಸ್‌ ಮುಖಂಡರ ಹೆಚ್‌ ಡಿ ಕುಮಾರಸ್ವಾಮಿ ಒಳಗೊಂಡು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನು ಓದಿ: ಧೀಮಂತ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದು, ‘ಹಿರಿಯ ಕಾರ್ಮಿಕ ಹಾಗೂ ರೈತ ಮುಖಂಡರು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮಾಜಿ ಶಾಸಕರು ಜಿ.ವಿ. ಶ್ರೀರಾಮರೆಡ್ಡಿ ಅವರು ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ಕರುಣಿಸಿ ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್  ‘ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ಸದಸ್ಯರು ಹಾಗೂ ಬಂಧು-ಬಳಗಕ್ಕೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀರಾಮರಡ್ಡಿ ಅವರ ಅಂತಿಮ ದರ್ಶನಕ್ಕೆ ಮಾಜಿ ಸಚಿವರು, ಮಾಜಿ ಸಂಸದರೂ ಆದ ಕೆ. ಎಚ್.‌ ಮುನಿಯಪ್ಪ ಅವರು ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ‘ಸಿಪಿಎಂ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ‌ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಬಡವರು, ಕಾರ್ಮಿಕರು ಮತ್ತು ರೈತರ ಪರ ಹೋರಾಟಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ರೆಡ್ಡಿಯವರು ಇತ್ತೀಚಿನ ವರ್ಷಗಳಲ್ಲಿ‌ ಕೋಮುವಾದದ ವಿರುದ್ಧದ ಗಟ್ಟಿದನಿಯಾಗಿದ್ದರು. ವೈಯಕ್ತಿಕವಾಗಿ ನಾನು ಬಹುಕಾಲದ ಗೆಳೆಯನನ್ನು ಕಳೆದುಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಗತಿಪರ ಚಿಂತಕರು, ಕೃಷಿ-ಕಾರ್ಮಿಕರ ಪರ ಹೋರಾಟಗಾರರು ಹಾಗೂ ಮಾಜಿ ಶಾಸಕರಾದ ಕಾಮ್ರೇಡ್‌ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನದ ಸುದ್ದಿ ನನಗೆ ತೀವ್ರ ದುಃಖ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ನಾಳೆ ಹುಟ್ಟೂರಲ್ಲಿ ಜಿ ವಿ ಶ್ರೀರಾಮರೆಡ್ಡಿ ಅಂತ್ಯಕ್ರಿಯೆ

ಸಿಪಿಐ(ಎಂ) ಪಕ್ಷದಿಂದ ಎರಡು ಬಾರಿ ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆ ಆಗಿದ್ದ ಅವರು, ಮಾದರಿ ಜನಪ್ರತಿನಿಧಿಯಷ್ಟೇ ಅಲ್ಲ, ಅತ್ಯುತ್ತಮ ಸಂಸದೀಯ ಪಟುವೂ ಹೌದು. ಶ್ರೀರಾಮರೆಡ್ಡಿ ಅವರ ಅಗಲಿಕೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ವೈಚಾರಿಕಪರ ಹೋರಾಟದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಜಿ.ವಿ.ಶ್ರೀರಾಮರೆಡ್ಡಿ ಎರಡು ಬಾರಿ ಶಾಸಕರಾಗಿದ್ದು, ಕ್ಷೇತ್ರಕ್ಕೆ ದುಡಿದು ತಮ್ಮ ಅಪಾರ ಕೊಡುಗೆಯನ್ನು ನೀಡುವ ಮೂಲಕ ಕ್ಷೇತ್ರದ, ರಾಜ್ಯದ ಜನರ ವಿಶ್ವಾಸ ಗಳಿಸಿರುವುದು ಗಮನಾರ್ಹ. ಸಾಮಾಜಿಕ ಹೋರಾಟದಿಂದ ಸಮಾಜ ಸುಧಾರಣೆಗಾಗಿ ಶ್ರಮಿಸಿದರು. ಅವರ ಆತ್ಮಕ್ಕೆ ಚಿರಶಾಂತಿ, ಕುಟುಂಬ ವರ್ಗದವರಿಗೆ, ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *