ನಾಗರಾಜ್ ನಂಜುಂಡಯ್ಯ
ಚೀನಾ ಮತ್ತು ರಷ್ಯಾವನ್ನು ಪ್ರತ್ಯೇಕಿಸಿ, ಯುರೋಪಿಯನ್ ಒಕ್ಕೂಟವನ್ನು ಯು.ಎಸ್ ಜೊತೆ ನಿಕಟವಾಗಿ ಅಪ್ಪಿಕೊಳ್ಳಿ ಮತ್ತು ಇತರರ ಮೇಲೆ ಪಶ್ಚಿಮದ ಪ್ರಾಬಲ್ಯವನ್ನು ಪ್ರತಿಪಾದಿಸಿ ಎಂಬುದು ಬಿಡೆನ್ ರ ಕಾರ್ಯಸೂಚಿಯ ಅನುಷ್ಟಾನಕ್ಕೆ ಬದ್ದರಾಗುವುದೇ ಸಭೆಯ ಉದ್ದೇಶವಾಗಿತ್ತು.
ಜಿ-7 ದೇಶಗಳ ವಿದೇಶಾಂಗ ಮಂತ್ರಿಗಳು ಈ ವಾರ ಲಂಡನ್‌ನಲ್ಲಿ ಭೇಟಿಯಾಗಿದ್ದರು. ಜೂನ್ ತಿಂಗಳಲ್ಲಿ ನಡೆಯುವ ಜಿ-7 ಮುಖ್ಯಸ್ಥರ ಶೃಂಗ ಸಭೆಯಲ್ಲಿನ ಕಾರ್ಯಸೂಚಿಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದರು. ಆನಂತರ, ಒಂದು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ, ಪ್ರಮುಖವಾಗಿ ರಷ್ಯಾವನ್ನು ಖಳನಾಯಕನಂತೆ ಮತ್ತು ಚೀನಾವನ್ನು ಜಗತ್ತಿನ ಪೀಡಕನಂತೆ ಚಿತ್ರಿಸಲಾಗಿದೆ. ಈ ಸಭೆಯ ಮೂಲ ಉದ್ದೇಶಗಳು, ಚೀನಾ-ವಿರೋಧಿ ಮತ್ತು ರಷ್ಯಾ-ವಿರೋಧಿ ಅಭಿಯಾನವಾಗಿದೆ. ಚೀನಾ ಮತ್ತು ರಶ್ಯಾಗಳ ‘ಅಪರಾಧ ಪಟ್ಟಿ’ಯಲ್ಲಿ ಉಯಿಘರ್, ತೈವಾನ್, ಹಾಂಗ್ ಕಾಂಗ್, ಕ್ರಿಮಿಯ, ಉಕ್ರೇನ್ ಇತ್ಯಾದಿ ಪ್ರದೇಶಗಳಲ್ಲಿ ಅವುಗಳ ಕ್ರಮಗಳನ್ನು ಎಂದಿನಂತೆ ಸೇರಿಸಲಾಯಿತು. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ನಿಜವಾದ ಸ್ಥಾಪಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಬದಿಗೊತ್ತಿ, ಇಡೀ ಜಗತ್ತು ಹೇಗೆ ನಡೆಯಬೇಕೆಂದು ನಿರ್ಣಯಿಸುವ ತಮ್ಮ ಸ್ವೇಚ್ಛಾಚಾರವನ್ನು “ನಿಯಮ-ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆ” ಎಂದು ಜಗತ್ತಿನ ಮೇಲೆ ಹೊರಿಸುವ ಪ್ರಯತ್ನ ಮಾಡಲಾಯಿತು.
ಜಿ-7 ಗೆ “ಆಹ್ವಾನಿತ” ದೇಶವಾಗಲು, ಭಾರತವು ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾ ಗಳೊಂದಿಗೆ ‘ವೈಟಿಂಗ್ ಲಿಸ್ಟ್’ನಲ್ಲಿ ಕುಳಿತಿವೆ. ಜಿ-7 ಒಂದು ಮಾಜಿ ವಸಾಹತುಶಾಹಿ ಶಕ್ತಿಗಳ ಒಂದು ಕೂಟವಾಗಿದೆ. ಪ್ರಮುಖವಾಗಿ, ಯು.ಎಸ್, ಯು.ಕೆ, ಕೆನಡಾ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಜಪಾನ್ ದೇಶಗಳು ಈ ಕೂಟದ ಭಾಗಿಗಳು. ಜಗತ್ತು ಹೇಗೆ ನಡೆಯಬೇಕೆಂದು ನಿರ್ದೇಶಿಸಲು ಇವು ನಿರ್ಧರಿಸುತ್ತವೆ.
ಭಾರತವನ್ನು ಈ ಕೂಟದ ಭಾಗವಾಗಿಸಲು ಮೋದಿ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ದೇಶದ ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ಅಡವಿಡಲು ಸಿದ್ದವಿದೆ. ಆದಾಗ್ಯೂ, ಇನ್ನೂ ಒಂದು ಸಭೆಗೂ ಆಹ್ವಾನಿಸಲಾಗಿಲ್ಲ. ಇದು ಸಾಲದೆಂಬಂತೆ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಸೇರಿದಂತೆ ಭಾರತೀಯ ನಿಯೋಗದ ಇಬ್ಬರು ಸದಸ್ಯರು ಕೋವಿಡ್-19 ಪಾಸಿಟಿವ್ ಬಂದು ಸಭೆಯಿಂದ ಹೊರಗುಳಿಯುವ ಮುಜುಗರವನ್ನು ಎದುರಿಸಬೇಕಾಯಿತು.
ಭಾರತದ ಉಪಸ್ಥಿತಿಯು ಜಿ-7 ಗೆ ಗೌರವವನ್ನು ತಂದುಕೊಡುತ್ತದೆ. ಆದರೆ, ಮಾಜಿ ವಸಾಹತುಶಾಹಿ ವಿಶ್ವ ದೃಷ್ಟಿಕೋನವು ನಮಗೆ ಅಥವಾ ಜಗತ್ತಿಗೆ ಏಕೆ ಮುಖ್ಯವಾಗಬೇಕು? 1943ರ ಬಂಗಾಳದ ಭೀಕರ ಬರದಲ್ಲಿ ಅಂದಾಜು 30 ಲಕ್ಷ ಜನರ ನರಮೇಧ ಸೇರಿದಂತೆ ಹಲವು ನರಮೇಧಗಳನ್ನು, ಗುಲಾಮರ ಸಾಗಾಣಿಕೆಗಳನ್ನು ನಡೆಸಿದ, ಜೀತದಾಳುಗಳನ್ನು ದುಡಿಸಿ ಐಶ್ವರ್ಯ ಕೂಡಿಸಿದ – ಇತ್ಯಾದಿ ಮಾನವ ಹಕ್ಕುಗಳ ವಿರುದ್ಧ ಹಲವು ಅಪರಾಧಗಳನ್ನು ಮಾಡಿರುವ, ಎಂದೂ ಅದಕ್ಕೆ ಪರಿಹಾರ ಕೊಡುವುದು ಬಿಡಿ, ಕ್ಷಮಾಪಣೆಯನ್ನು ಕೇಳದ ಯು.ಕೆ ಮತ್ತು ಅಂತಹದೇ ಇತರ ಮಾಜಿ ವಸಾಹತುಶಾಹಿ ದೇಶಗಳ ಕೂಟಕ್ಕೆ ಜಗತ್ತನ್ನು ಹೇಗೆ ನಡೆಸಬೇಕು ಎಂದು ನಿರ್ದೇಶಿಸಲು ಅಧಿಕಾರ ಕೊಟ್ಟವರು ಯಾರು ?
ಜಿ-7 ಪಾಶ್ಚಿಮಾತ್ಯ-ನ್ಯಾಟೋ ಸದಸ್ಯ ದೇಶಗಳ ಗುಂಪಾಗಿದೆ. ಇದರಲ್ಲಿ, ಯುರೋಪಿಯನ್ ಒಕ್ಕೂಟ (ಇಯು) ಆಯೋಗದ ಅಧ್ಯಕ್ಷ ಮತ್ತು ಅದರ ಪರಿಷತ್ತಿನ ಅಧ್ಯಕ್ಷರ ಮೂಲಕ ಖಾಯಂ ಅತಿಥಿಯಾಗಿ ನೆಪ ಮಾತ್ರಕ್ಕೆ ಭಾಗವಹಿಸುತ್ತಾರೆ. ಜಿ-7, 70 ರ ದಶಕದಲ್ಲಿ ರಚಿಸಲ್ಪಟ್ಟಿತು. ನ್ಯಾಟೋದ ತದ್ರೂಪಿ ಎಂದರೂ ತಪ್ಪಾಗದು. ಇದು ಮೊದಲಿಗೆ, ಕೈಗಾರಿಕಾವಾಗಿ ಮುಂದುವರಿದ ಐದು ಆರ್ಥಿಕತೆಗಳ ಕೂಟವಾಗಿತ್ತು. ಆನಂತರ ಸದಸ್ಯತ್ವ ಏಳಕ್ಕೆ ವಿಸ್ತರಿಸಿತು. ಯೆಲ್ಟ್ಸಿನ್ ಆಡಳಿತದ ಕಾಲದಲ್ಲಿ ಇದು ರಷ್ಯಾವನ್ನು ಒಳಗೊಂಡಿತ್ತು. ಆದರೆ, ಬಲವಾದ ಕಾರಣವಿಲ್ಲದೆ, 2014 ರಲ್ಲಿ ರಷ್ಯಾವನ್ನು ಹೊರದಬ್ಬಲ್ಪಟ್ಟಿತ್ತು. ಜಿ-7 ನ್ಯಾಟೋದ ರಾಜಕೀಯ ಮುಖವಾಗಿ ತನ್ನ ಮೂಲ ಪಾತ್ರಕ್ಕೆ ಮರಳಿತು. ಆಗಸ್ಟ್ 2019 ರಲ್ಲಿ ದಿ ಸ್ಪೆಕ್ಟೇಟರ್ ಹೇಳಿದಂತೆ, “ಅದರ ಸಂರಚನೆ ನೋಡಿ ಸರಳವಾಗಿ ಹೇಳಬೇಕೆಂದರೆ, ಜಿ-7 ಎಂಬುದು, ಬಿಳಿಯರ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವ ವಿಫಲ ಪ್ರಯತ್ನದಂತೆ ಕಾಣುತ್ತಿದೆ.”
ಚೀನಾ ಮತ್ತು ರಷ್ಯಾವನ್ನು ಪ್ರತ್ಯೇಕಿಸಿ, ಯುರೋಪಿಯನ್ ಒಕ್ಕೂಟವನ್ನು ಯು.ಎಸ್ ಜೊತೆ ನಿಕಟವಾಗಿ ಅಪ್ಪಿಕೊಳ್ಳಿ ಮತ್ತು ಇತರರ ಮೇಲೆ ಪಶ್ಚಿಮದ ಪ್ರಾಬಲ್ಯವನ್ನು ಪ್ರತಿಪಾದಿಸಿ ಎಂಬುದು ಬಿಡೆನ್ ರ ಕಾರ್ಯಸೂಚಿಯ ಅನುಷ್ಟಾನಕ್ಕೆ ಬದ್ದರಾಗುವುದೇ ಸಭೆಯ ಉದ್ದೇಶವಾಗಿತ್ತು. ಯು.ಎಸ್ ಮತ್ತೆ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಯಜಮಾನಿಕೆ ಗಳಿಸುವ ಹಂಬಲ ಬಿಡೆನ್ ರದ್ದು. ಯುರೋಪ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಯು.ಎಸ್ ಸೈನ್ಯವನ್ನು ಉಳಿಸಿಕೊಳ್ಳಲು ಅವು ಶತಕೋಟಿ ಡಾಲರ್ ಗಳನ್ನು ರಕ್ಷಣೆಯ ಹಣವಾಗಿ ಪಾವತಿಸಬೇಕೆಂಬ ಟ್ರಂಪ್ ತನ್ನ ‘ಅಮೇರಿಕಾ ಮೊದಲು’ ನೀತಿಯಿಂದ ಖಾಲಿ ಮಾಡಿದ್ದ ಸ್ಥಾನವನ್ನು ಮತ್ತೆ ತುಂಬುವುದು ಬಿಡೆನ್ ಪ್ರಯತ್ನ.
ರಷ್ಯಾವು, ಶೀತಲ ಸಮರದಲ್ಲಿ ಸೋತ ದೇಶವಾಗಿದೆ. ಹಾಗಾಗಿ, ನಮ್ಮ ಅಧೀನತೆಯನ್ನು ಒಪ್ಪಿಕೊಳ್ಳಲೇಬೇಕು ಎಂದು ಯುಎಸ್ ಮತ್ತು ಅದರ ನ್ಯಾಟೋ ಕೂಟ ರಷ್ಯಾಕ್ಕೆ ಸ್ಪಷ್ಟಪಡಿಸಿವೆ. ಅದು ತನ್ನ ಆರ್ಥಿಕತೆಯನ್ನು ಪಾಶ್ಚಿಮಾತ್ಯ ಬಂಡವಾಳಕ್ಕೆ ತೆರೆದುಕೊಳ್ಳಬೇಕು ಮತ್ತು ಯೆಲ್ಟ್ಸಿನ್ ಅನುಮತಿಸಿದಂತೆ ತನ್ನ ಸಂಪನ್ಮೂಲಗಳನ್ನು ಲೂಟಿ ಮಾಡಲು ಅವಕಾಶ ನೀಡಬೇಕು. ಹೀಗಾಗಿಯೇ, ಯುರೋಪಿನಲ್ಲಿ ಸ್ವತಂತ್ರ ಅವಕಾಶ ಗಳಿಸಲು ಪುಟಿನ್ ಪದೇ ಪದೇ ಪ್ರಯತ್ನಿಸಿದರೂ ವಿಫಲವಾಗಿದ್ದು. ನ್ಯಾಟೋವನ್ನು ಜರ್ಮನಿಯಿಂದ ಮೀರಿ ವಿಸ್ತರಿಸಲಾಗುವುದಿಲ್ಲ ಎಂಬ ಸೋವಿಯತ್ ಒಕ್ಕೂಟಕ್ಕೆ ನೀಡಿದ ಭರವಸೆಯನ್ನು ಗೌರವಿಸಲಾಗಿಲ್ಲ. ಇದನ್ನು ಉಲ್ಲಂಘಿಸಿ ನ್ಯಾಟೋ ಈಗ, ಬಾಲ್ಟಿಕ್ ರಾಜ್ಯಗಳು ಮತ್ತು ಪೋಲೆಂಡ್‌ನಲ್ಲಿ ಕ್ಷಿಪಣಿ ಬ್ಯಾಟರಿಗಳನ್ನು ಸ್ಥಾಪಿಸಿದೆ. ರಷ್ಯಾದ ಗಡಿಗಳ ಬಳಿ – ಬಾಲ್ಟಿಕ್ ರಾಜ್ಯಗಳು, ರೊಮೇನಿಯಾ ಮತ್ತು ಪೋಲೆಂಡ್‌ಗಳಲ್ಲಿ ಮಿಲಿಟರಿ ಕವಾಯತುಗಳನ್ನು ನಡೆಸುತ್ತದೆ. ಆದರೆ ರಷ್ಯಾದ ಅದರ ಗಡಿಯೊಳಗಿನ ಮಿಲಿಟರಿ ಕವಾಯತುಗಳಿಗೆ ಆಕ್ಷೇಪಗಳನ್ನು ಮಾಡುತ್ತದೆ.
ಯುರೋಪ್ ಮಾತ್ರವಲ್ಲದೇ, ಮಧ್ಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾದಲ್ಲಿ ಮಿಲಿಟರಿ ಶಕ್ತಿಯಾಗಿ ರಷ್ಯಾ ಪುನಃ ಹೊರ ಹೊಮ್ಮುತಿರುವುದು ನ್ಯಾಟೋಗೆ ಬಹು ದೊಡ್ಡ ಸವಾಲನ್ನು ಒಡ್ಡುತ್ತದೆ. ಹಾಗಾಗಿ, ರಷ್ಯಾವು ತನ್ನ ಮಿಲಿಟರಿ ಪಡೆಗಳು ಮತ್ತು ವ್ಯೂಹಾತ್ಮಕ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ನ್ಯಾಟೋ ಗೆ ಬೆದರಿಕೆಯಾಗಿವೆ. ಯುರೋಪಿಯನ್ ದೇಶಗಳಿಗೆ ರಷ್ಯಾದಲ್ಲಿರುವ ಅನಿಲ ಮತ್ತು ತೈಲ ಬೇಕಾಗಿದೆ. ಇದರಿಂದಾಗಿ ಯುರೋಪಿಯನ್ ಒಕ್ಕೂಟವು ರಷ್ಯಾವನ್ನು ಅವಲಂಬಿಸುತ್ತವೆ. ಆದರೆ, ಯುರೋಪ್ ರಷ್ಯಾವನ್ನು ಆರ್ಥಿಕವಾಗಿ ಬಹಿಷ್ಕರಿಸಬೇಕೆಂದು ಯುಎಸ್ ಬಯಸುತ್ತದೆ. ಈ ಹಿನ್ನೆಲೆಯಲ್ಲಿ, ಸಾಗರೋತ್ತರ ಪೈಪ್ ಲೈನ್ ನಾರ್ಡ್ ಸ್ಟ್ರೀಮ್-2 ಗೆ ನಿರ್ಬಂಧ ಹೇರಿ ತನ್ನ ಮಿತ್ರ ಜರ್ಮನಿಗೆನೇ ಯು.ಎಸ್ ಬೆದರಿಕೆ ಹಾಕಿದೆ. ರಷ್ಯಾ ವಿರುದ್ಧದ ಈ ಸಮರದಲ್ಲಿ ಯುರೋಪಿಯನ್ ಒಕ್ಕೂಟ ದೇಶಗಳನ್ನು ಸೆಳೆಯಲು ಯು.ಎಸ್ ಜಿ-7 ಅನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿದೆ. ಯೆಲ್ಟ್ಸಿನ್ ಕಾಲದಲ್ಲಿ ಆದಂತೆ ರಷ್ಯಾ ಕುಸಿಯುತ್ತಲೇ ಹೋಗುತ್ತದೆ ಎಂಬ ಯು.ಎಸ್. ನಂಬಿಕೆಯು ಹುಸಿಯಾಗಿದೆ.
ಪ್ರಸ್ತುತ ರಷ್ಯಾವು ಆರ್ಥಿಕವಾಗಿ ಮತ್ತು ಮಿಲಿಟರಿ ದೃಷ್ಟಿಯಿಂದ ತನ್ನನ್ನು ಬಲಪಡಿಸಿಕೊಂಡಿದೆ ಮತ್ತು ಸಿರಿಯಾದಲ್ಲಿ ತನ್ನ ಮಿಲಿಟರಿ ಶಕ್ತಿಯನ್ನು ಸಹ ತೋರಿಸಿ ಗಮನ ಸೆಳೆದಿದೆ. ನಾಟೋ ಪಡೆಗಳು ಕುಮ್ಮಕ್ಕು ಇದ್ದ ಅಲ್ ಖೈದಾ-ಇಸ್ಲಾಮಿಕ್ ಸ್ಟೇಟ್, ಟರ್ಕಿ ಮತ್ತು ಇಸ್ರೇಲಿನ – ಈ ಮೂರು ಮುಖಗಳ ದಾಳಿಯಿಂದ ಬದುಕುಳಿಯಲು ಅಸ್ಸಾದ್ ಸರ್ಕಾರಕ್ಕೆ ಸಹಾಯ ಮಾಡಿ ತನ್ನ ಮಿಲಿಟರಿ ಪ್ರಾಬಲ್ಯವನ್ನು ಮೆರೆಸಿದ್ದು ಯು.ಎಸ್. ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನ್ಯಾಟೋ ದಾಳಿಯ ಎರಡನೇ ಅಕ್ಷವು ಚೀನಾದ ವಿರುದ್ಧವಾಗಿದೆ. ಏಷ್ಯಾದಲ್ಲಿ ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ಮೇಲೆ ನಿಯಂತ್ರಣ ಸಾಧಿಸಲು ಸಮರ ಹೂಡಿದೆ. ಯು.ಎಸ್ ತನ್ನ ಸಾಗರಗಳ ಮೇಲಿನ ನಿಯಂತ್ರಣದಿಂದ, ಚೀನಾವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದೀಗ ಅದು ಇಂಡೋ-ಪೆಸಿಫಿಕ್ ಆಗಿ ಮಾರ್ಪಟ್ಟಿದೆ. ಚೀನಾವು 2028 ರ ವೇಳೆಗೆ ಯು.ಎಸ್. ಅನ್ನು ಆರ್ಥಿಕವಾಗಿ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲಿದೆ. ಹೀಗಾಗಿಯೇ, ಅಮೆರಿಕಾದ ಕೆಂಗಣ್ಣಿಗೆ ಚೀನಾ ಬಿದ್ದಿದೆ. ಚೀನಾದ ಈ ಮುನ್ನೆಡೆಯನ್ನು ಹಿಮ್ಮೆಟ್ಟಿಸಲು ಇಂಡೋ-ಪೆಸಿಪಿಕ್ ಸಹಾಯ ಮಾಡುತ್ತದೆ ಎಂಬ ನಂಬಿಕೆಯಿಂದ, ಚೀನಾದ ಅನೇಕ ಹೈಟೆಕ್ ಕಂಪನಿಗಳ ವಿರುದ್ಧ ಯು.ಎಸ್. ನಿರ್ಬಂಧಗಳನ್ನು ವಿಧಿಸಿದೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ನೌಕಾ ಶಕ್ತಿಯನ್ನು ಫ್ರೀಡಂ ಆಫ್ ನ್ಯಾವಿಗೇಷನ್ ಆಪರೇಶನ್ಸ್ (FONOP) ಸೋಗಿನಲ್ಲಿ ಬಳಸುತ್ತಿದೆ. ಇದು ಇತ್ತೀಚೆಗೆ ಲಕ್ಷದ್ವೀಪದಲ್ಲಿನ ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ನಡೆಸಿದಂತಹ ರೀತಿಯಲ್ಲಿಯೇ ಇರುತ್ತದೆ.
ಜಿ-7, ಸರ್ಕಾರಗಳ ಮುಖ್ಯಸ್ಥರ ಜೂನ್‌ನಲ್ಲಿ ನಡೆಯಲಿರುವ ಶೃಂಗ ಸಭೆಯಲ್ಲಿ ರಷ್ಯಾ ಮತ್ತು ಚೀನಾ ವಿರುದ್ಧ ಜಾಗತಿಕ ಅಕ್ಷವನ್ನು ಗಟ್ಡಿ ಮಾಡುವುದೇ ವಿದೇಶ ಮಂತ್ರಿಗಳ ಶೃಂಗಸಭೆಯ ಗುರಿಯಾಗಿದೆ. ರಷ್ಯಾ ವಿರುದ್ಧದ ಆರ್ಥಿಕ ದಿಗ್ಬಂಧನಗಳು, ಚೀನಾದ ವಿರುದ್ಧ ತಂತ್ರಜ್ಞಾನ ದಿಗ್ಬಂಧನಗಳನ್ನು ಹೇರಲಾಗಿದೆ. ರಷ್ಯಾ ಮತ್ತು ಚೀನಾವನ್ನು ಜಾಗತಿಕ ಆರ್ಥಿಕತೆಯಿಂದ ಪ್ರತ್ಯೇಕಿಸಲು ವಿಶ್ವದ ಹಣಕಾಸು ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಯು.ಎಸ್. ಬಳಸಿಕೊಳ್ಳುತ್ತದೆ. ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗ ಹೊರಟ ಚೀನಾದ ನಡೆಯನ್ನು ತಡೆಹಿಡಿಯಲು ಅಥವಾ ಹಿಮ್ಮುಖಗೊಳಿಸುವ ಆಶಯವನ್ನು ಅದು ಹೊಂದಿದೆ.
ಇದಕ್ಕೆ ರಷ್ಯಾ ಮತ್ತು ಚೀನಾದ ಪ್ರತಿಕ್ರಿಯೆ ಎರಡು ರೀತಿಯದ್ದಾಗಿದೆ. ಒಂದನೆಯದಾಗಿ, ಈ ಎರಡು ದೇಶಗಳು ಪರಸ್ಪರ ಪೂರಕವಾಗಿರುವುದರಿಂದ ಹೆಚ್ಚು ಹತ್ತಿರ ಬರುತ್ತಿವೆ. ರಷ್ಯಾ ಇನ್ನೂ ಪ್ರಮುಖ ಮಿಲಿಟರಿ ಶಕ್ತಿಯಾಗಿ ಮುಂದುವರೆಯುತ್ತಿರುವುದರಿಂದ ಯು.ಎಸ್. ಬೆದರಿಕೆಗಳಿಗೆ ಅದು ಬಗ್ಗುವುದಿಲ್ಲ. ಚೀನಾ ಈಗಾಗಲೇ ವಿಶ್ವದ ಸಾಮೂಹಿಕ ಉತ್ಪಾದನಾ ಕೇಂದ್ರವಾಗಿದ್ದು, ಬಲವಾದ ಕೈಗಾರಿಕಾ ಮತ್ತು ತಂತ್ರಜ್ಞಾನದ ನೆಲೆಯನ್ನು ನಿರ್ಮಿಸಿಕೊಂಡಿದೆ. ಚಿಪ್ ತಯಾರಿಕೆಯಲ್ಲಿ ಮಾತ್ರ ಇದರ ಏಕೈಕ ದೌರ್ಬಲ್ಯವಿದೆ ಎಂಬ ಅರಿವು ಅದಕ್ಕಿದೆ. ಈ ಪ್ರಕ್ರಿಯೆಯಲ್ಲಿ ಚೀನಾ ಯು.ಎಸ್.ಗಿಂತ 3-4 ವರ್ಷಗಳು ಹಿಂದೆ ಬಿದ್ದಿದೆ. ಆದರೆ ಇನ್ನುಳಿದ ಅನೇಕ ಕ್ಷೇತ್ರದಲ್ಲಿ ಮತ್ತು ಪ್ರದೇಶದಲ್ಲಿ ಅದು ಯು.ಎಸ್.ಗಿಂತ ಮುಂದಿದೆ. ಉದಾಹರಣೆಗೆ, 5ಜಿ, ಬ್ಯಾಟರಿಗಳಿಗೆ ಬೇಕಾದ ಅಪರೂಪದ ಸಾಮಗ್ರಿಗಳ ಉತ್ಪಾದನೆಯಲ್ಲಿ.
ವ್ಯೂಹಾತ್ಮಕ ಸ್ಪರ್ಧೆಯಲ್ಲಿ ಅಮೆರಿಕದ ದೌರ್ಬಲ್ಯವೆಂದರೆ ಅದರ ಬಲ ಕಡಲ ಶಕ್ತಿಯಾಗಿ ಮಾತ್ರ. ರಷ್ಯಾ ಮತ್ತು ಚೀನಾ ಎರಡೂ ಭೂ-ಆಧಾರಿತವಾದ ಪ್ರಬಲ ಶಕ್ತಿಗಳಾಗಿ ಹೊರಹೊಮ್ಮುತ್ತಿವೆ. ಅದಕ್ಕಾಗಿಯೇ ಚೀನಾದ ಬೆಲ್ಟ್-ರೋಡ್ ಇನಿಶಿಯೇಟಿವ್ (ಬಿ.ಆರ್.ಐ) ಯುರೇಷಿಯನ್ ಆರ್ಥಿಕತೆಯನ್ನು ಮರು ರೂಪಿಸುತ್ತಿದೆ. ಭೂ-ಆಧಾರಿತ ವ್ಯಾಪಾರವು ಮಧ್ಯ ಏಷ್ಯಾ ಮತ್ತು ಪೂರ್ವ ಯುರೋಪಿಯನ್ ದೇಶಗಳನ್ನು ಅಭಿವೃದ್ಧಿ ಪಡಿಸುವ ಚಾಲಕ ಶಕ್ತಿ ಆಗಿದೆ. ಜರ್ಮನಿ ಮತ್ತು ಪಶ್ಚಿಮ ಯುರೋಪಿಯನ್ ದೇಶಗಳಿಗೆ ಅದರ ವಿಸ್ತರಣೆಯು ಯುರೇಷಿಯನ್ ದೇಶಗಳಿಗೆ ಪರ್ಯಾಯ ಸಾಧ್ಯತೆಯನ್ನು ಒದಗಿಸುತ್ತದೆ. ಇಂಡೋ-ಪೆಸಿಫಿಕ್ ವಿಚಾರದಲ್ಲಿ ಯು.ಎಸ್. ದೃಷ್ಟಿಕೋನಕ್ಕೆ ಯು.ಕೆ. ಸಂಪೂರ್ಣವಾಗಿ ಬದ್ಧವಾಗಿದ್ದು, ಯುರೋಪಿಯನ್ ರಾಷ್ಟ್ರಗಳಾದ ಜರ್ಮನಿ ಮತ್ತು ಫ್ರಾನ್ಸ್ ಇನ್ನೂ ಉದಯೋನ್ಮುಖ ಯುರೇಷಿಯನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿವೆ. ಉಕ್ರೇನಿಯನ್ ಬಿಕ್ಕಟ್ಟಿನಲ್ಲಿ ಯುರೋಪಿಯನ್ ಒಕ್ಕೂಟ ವಹಿಸುತ್ತಿರುವ ಪಾತ್ರವನ್ನು ನೋಡಿದರೆ, ಅದು ಅವರ ಆರ್ಥಿಕ ಹಿತಾಸಕ್ತಿಯಲ್ಲದಿದ್ದರೂ ಸಹ, ಯು.ಎಸ್. ಒತ್ತಡಕ್ಕೆ ಪ್ರತಿರೋಧ ಒಡ್ಡುವ ಇಚ್ಛಾಶಕ್ತಿ ಇದ್ದಂತಿಲ್ಲ.
ಯು.ಎಸ್. ಮತ್ತು ನ್ಯಾಟೋದ ಇಂಡೋ-ಪೆಸಿಫಿಕ್ ದೃಷ್ಟಿಕೋನದೊಂದಿಗೆ ಭಾರತವು ಜೊತೆ ಏಕಿದೆ? ಯು.ಎಸ್.ನ, ಯಾವ ಸಾಗರದಲ್ಲೂ ಹೋಗಬಹುದಾದ ನೌಕಾಸಾಗಾಣಿಕೆ ಸ್ವಾತಂತ್ರ್ಯ ಮತ್ತು ದಕ್ಷಿಣ ಚೀನಾ ಸಮುದ್ರವು ಎಲ್ಲರಿಗೂ ಮುಕ್ತ ಪ್ರದೇಶ ಎಂಬ ಇತರ ದೇಶಗಳ ಸಾರ್ವಭೌಮತೆಯನ್ನು ಧಿಕ್ಕರಿಸುವುದನ್ನು ಏಕೆ ಅನುಮೋದಿಸುತ್ತಿದೆ? ಭಾರತವು ತನ್ನ ಉತ್ತರದ ಗಡಿಗಳ ಬಗ್ಗೆ ಚೀನಾದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದೆ ಎಂಬುದು ನಿಜ. ಆದರೆ ಅದು ಭಾರತದ ಗಾತ್ರ ಮತ್ತು ನಿಲುವಿನ ವ್ಯೂಹಾತ್ಮಕ ಸ್ವಾಯತ್ತತೆಯ ಅಗತ್ಯವನ್ನು ಕುರುಡಾಗಿಸಬಾರದು ಅಲ್ಲವೇ? ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾದ ಜೊತೆಗೂಡಿ ಜಿ-7 ಗೆ ಬಾಲಂಗೋಚಿಯಾಗುವುದು ಸರಿಯಲ್ಲ. ಅದು ಹಿಂದೆ ಆಲಿಪ್ತ ಚಳವಳಿಯಲ್ಲಿ ಮತ್ತು ಜಾಗತಿಕ ವೇದಿಕೆಯಲ್ಲಿ ವಹಿಸಿದ ಪ್ರಮುಖ ಪಾತ್ರಕ್ಕೆ ಹೋಲಿಸಿದರೆ ಇದು ಅವನತಿ. ಮೋದಿ ಸರ್ಕಾರಕ್ಕೆ ಸ್ವತಂತ್ರ ವಿದೇಶಾಂಗ ನೀತಿಯ ಬಗ್ಗೆ ವ್ಯೂಹಾತ್ಮಕ ದೃಷ್ಟಿಕೋನವಿಲ್ಲ ಮತ್ತು ಭಾರತದ ಹಿತಾಸಕ್ತಿ ಏನು ಎಂಬುದರ ಕನಿಷ್ಟ ಪ್ರಜ್ಙೆಯೂ ಇಲ್ಲ. ಬದಲಾಗಿ, ಯು.ಎಸ್. ಒಂದು ದಿನ ಉನ್ನತ ಆಸನವನ್ನು ಕೊಡಬಹುದು ಎಂಬ ಭರವಸೆಯಿಂದಾಗಿ, ಯು.ಎಸ್.ಗೆ ಅಧೀನನಾಗಿ ತನ್ನ ಸ್ವಾಭಿಮಾನ ತೊರೆಯಲು ಬಯಸುತ್ತಿದೆ.