ಪ್ರೊ. ಪ್ರಭಾತ್ ಪಟ್ನಾಯಕ್
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಡೆದ ಜಿ-20 ಶೃಂಗಸಭೆಯು ಅದನ್ನು ನಿವಾರಿಸುವ ವಿಷಯದಲ್ಲಿ ಏನಾದರೂ ಉಪಕ್ರಮವನ್ನು ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆಯಿತ್ತು. ಈ ಹಿಂದೆ ಯುಎಸ್ ವಸತಿ ಗುಳ್ಳೆ ಒಡೆದ ನಂತರ ನಡೆದ ಜಿ -20 ಸಭೆ ಇದನ್ನು ಮಾಡಿತ್ತು. ಅಲ್ಲದೆ ಭಾರತವು ತನ್ನ ಜಿ-20 ನಾಯಕತ್ವವು ಭೌಗೋಳಿಕ ದಕ್ಷಿಣದ ದೇಶಗಳಿಗೆ ಅನುಕೂಲಕರ ಬೆಳವಣಿಗೆ ಎಂದು ಬಿಂಬಿಸುತ್ತಿದ್ದುದರಿಂದಲೂ ಈ ನಿರೀಕ್ಷೆ ಉಂಟಾಗಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಈ ಶೃಂಗಸಭೆಯಿಂದ ಮೂಡಿ ಬಂದ ದಿಲ್ಲಿ ಘೋಷಣೆಯು ಪ್ರಸಕ್ತ ಜ್ವಲಂತ ಆರ್ಥಿಕ ಸಮಸ್ಯೆಗಳ ಬಗ್ಗೆ, ಅದರಲ್ಲೂ ‘ ಭೌಗೋಳಿಕ ದಕ್ಷಿಣ’ದ ದೇಶಗಳ ಸಾಲಹೊರೆಗಳ ಬಗ್ಗೆ, ಏನೇನೂ ಹೇಳಿಲ್ಲ. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಶೃಂಗಸಭೆಯಲ್ಲಿ ಅತಿಥೇಯ ಸರ್ಕಾರದ ಅತ್ಯಾಸಕ್ತಿಯ ವಿಷಯವೆಂದರೆ, ಅದರಿಂದ ಗರಿಷ್ಠ ಪ್ರಚಾರವನ್ನು ಪಡೆಯುವುದಾಗಿತ್ತು, ಅದರಲ್ಲಿ ಯಶಸ್ವಿಯಾಗಿದೆ. ಅವರಿಗೆ ಅಷ್ಟು ಸಾಕು! ಆದಾಗ್ಯೂ ಒಂದು ಪ್ರಶ್ನೆ ಏಳುತ್ತದೆ: ಮುಂದುವರಿದ ಬಂಡವಾಳಶಾಹಿ ದೇಶದ ಸರ್ಕಾರಗಳು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಇಷ್ಟು ನಿರಾಳವಾಗಿ ಏಕೆ ತೆಗೆದುಕೊಳ್ಳುತ್ತವೆ? ಇದು ಈಗಿನ ಅಪಾಯಕಾರಿ ಸನ್ನಿವೇಶದತ್ತವೂ ಗಮನ ಸೆಳೆಯುತ್ತದೆ.
ವಿಶ್ವ ಅರ್ಥವ್ಯವಸ್ಥೆಯ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ದೆಹಲಿಯಲ್ಲಿ ಜಿ-20 ಸಭೆ ನಡೆದಿದೆ. ಮುಂದುವರಿದ ಬಂಡವಾಳಶಾಹಿ ಅರ್ಥವ್ಯವಸ್ಥೆಗಳು 2022 ರಲ್ಲಿ ಶೇಕಡಾ 2.7 ರಿಂದ 2023 ರಲ್ಲಿ ಶೇಕಡಾ 1.3 ಕ್ಕೆ ಬೆಳವಣಿಗೆಯ ಕುಸಿತವನ್ನು ಕಾಣಲಿವೆ ಎಂದು ಐಎಂಫ್ ನಿರೀಕ್ಷಿಸುತ್ತದೆ; ಐಎಂಎಫ್‌ನ ಪರ್ಯಾಯ ಅಂದಾಜಿನ ಪ್ರಕಾರ 2023 ರಲ್ಲಿ ಅವರ ಬೆಳವಣಿಗೆಯು ಶೇಕಡಾ 1 ಕ್ಕಿಂತ ಕಡಿಮೆಯಾಗಬಹುದು. ಅವರ ಶ್ರಮ ಉತ್ಪಾದಕತೆಯ ಬೆಳವಣಿಗೆಯ ದರವು ಈ ಅಂಕಿಅಂಶವನ್ನು ಮೀರುವ ಸಾಧ್ಯತೆಯಿರುವುದರಿಂದ, ಮುಂದುವರೆದ ಬಂಡವಾಳಶಾಹಿ ದೇಶಗಳ ನಿರುದ್ಯೋಗದಲ್ಲಿ ಗಣನೀಯ ಹೆಚ್ಚಳವಾಗಲಿದೆ ಎಂದು ಇದರ ಅರ್ಥ. ಇದು ಯುರೋಪಿಯನ್ ಒಕ್ಕೂಟದಲ್ಲಿ ವಿಶೇಷವಾಗಿ ಕೆಲವು ಸಮಯದಿಂದ ಸಂಭವಿಸುತ್ತಿರುವ ಪೂರ್ವ ಯುರೋಪ್‌ನಿಂದ ಅಪಾರ ಪ್ರಮಾಣದ ವಲಸೆ ಮತ್ತು ರಷ್ಯಾದ ವಿರುದ್ಧ ಉಕೇನಿನ ನಾಟೋ ಪ್ರೇರಿತ ಪರೋಕ್ಷ ಯುದ್ಧದಿಂದಾಗಿ ಉಕ್ರೇನ್‌ನಿಂದ ನಿರಾಶ್ರಿತರ ವಲಸೆಯಿಂದ ಇನ್ನಷ್ಟು ಉಲ್ಬಣಗೊಳ್ಳಬಹುದು.
ಯೂರೋಪ್‌ನಲ್ಲಿ ಫ್ಯಾಸಿಸಂ ಕಡೆಗೆ ಪ್ರವೃತ್ತಿಯು ಗಣನೀಯವಾಗಿ ವೇಗವನ್ನು ಪಡೆದುಕೊಂಡಿದೆ, ಇದು ನಿರುದ್ಯೋಗದಲ್ಲಿನ ಈ ಬೆಳವಣಿಗೆಯಿಂದ ಮತ್ತಷ್ಟು ಬೃಹತ್ ಉತ್ತೇಜನವನ್ನು ಪಡೆಯುತ್ತದೆ, ಇದು ವಲಸಿಗರ ಬಗ್ಗೆ ವೈರತ್ವವನ್ನು ಮತ್ತಷ್ಟು ಉತ್ತೇಜಿಸುತ್ತದೆ. ಜರ್ಮನಿಯಲ್ಲಿ ನವ-ನಾಜಿ ಎಎಫ್‌ಡಿ ಈಗಾಗಲೇ 20%ದಷ್ಟು ಮತಗಳನ್ನು ಪಡೆಯುತ್ತಿದೆ ಮತ್ತು ಇದುವರೆಗೆ ಅದನ್ನು ದೂರವಿಟ್ಟಿರುವ ಪಕ್ಷಗಳೊಂದಿಗೆ ಕನಿಷ್ಠ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರಕ್ಕೆ ಬರಲು ವ್ಯವಹಾರಗಳನ್ನು ನಡೆಸಲು ಸನ್ನದ್ಧವಾಗಿದೆ. ಫ್ರಾನ್ಸಿನಲ್ಲಿನ ಫ್ಯಾಸಿಸಂನ ಧ್ವಜಧಾರಕರಾದ ಮರೀನೆ ಲೆ ಪೆನ್ ಅವರು ಎಮ್ಯಾನುಯೆಲ್ ಮ್ಯಾಕ್ರನ್‌ಗಿಂತ
ಹೆಚ್ಚಿನ ಅನುಮೋದನೆಯನ್ನು ಹೊಂದಿದ್ದಾರೆಂದು ವರದಿಯಾಗಿದೆ.ಇಟಲಿ ಈಗಾಗಲೇ ಒಂದು ಫ್ಯಾಸಿಸ್ಟ್ ಸರ್ಕಾರವನ್ನು ಚುನಾಯಿಸಿದೆ ಮತ್ತು ಸಾಮಾನ್ಯವಾಗಿ ಹಾಗೆ ಮಾಡಬಹುದೆಂದು ನಿರೀಕ್ಷಿಸಲಾಗಿದ್ದ ಸ್ಪೇನ್ ತನ್ನ ಇತ್ತೀಚಿನ ಚುನಾವಣೆಗಳಲ್ಲಿ ತ್ರಿಶಂಕು ಫಲಿತಾಂಶವನ್ನು ಪುಟಿಯುವ ಮೂಲಕ ತಾತ್ಕಾಲಿಕ ವಿರಾಮವನ್ನು ಪಡೆದುಕೊಂಡಿದೆ. ಈ ಎಲ್ಲಾ ಅಂಶಗಳು ಮತ್ತಷ್ಟು ಉತ್ತೇಜನವನ್ನು ಪಡೆಯುತ್ತವೆ. ಜಾಗತಿಕ
ಮುಂದುವರಿದ ದೇಶಗಳ ಅರ್ಥವ್ಯವಸ್ಥೆಗಳು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ, ಇದರಿಂದಾಗಿ ಭಾರತದಂತಹ ಭೌಗೋಳಿಕ ದಕ್ಷಿಣದ ದೇಶಗಳೂ ಜಿಡಿಪಿ ಬೆಳವಣಿಗೆಯಲ್ಲಿನ ನಿಧಾನಗತಿಯಲ್ಲಿಯೂ, ಮತ್ತು ನಿರುದ್ಯೋಗದ ಹೆಚ್ಚಳ, ಸಾಲದ ಬಿಕ್ಕಟ್ಟಿನ ಉಲ್ಬಣ ಮತ್ತು ಫ್ಯಾಸಿಸಂನತ್ತ ಪ್ರವೃತ್ತಿ ಬಲಗೊಳ್ಳುವಲ್ಲಿಯೂ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಫ್ಯಾಸಿಸಂ ಎಲ್ಲಾ ಕಲ್ಯಾಣ ವೆಚ್ಚಗಳನ್ನು ತೊಡೆದುಹಾಕಲು ಬದ್ಧವಾಗಿರುವ ಅಧ್ಯಕ್ಷರನ್ನು ಆಯ್ಕೆ ಮಾಡಲು ಅರ್ಜೆಂಟೀನಾ ಸಿದ್ಧವಾಗುತ್ತಿದೆ; ಮತ್ತು ಈ ಆತಂಕಕಾರಿ ಪ್ರವೃತ್ತಿಯು ಈಗಾಗಲೇ ಹಾಗೆ ಮಾಡದ ದೇಶಗಳಿಗೂ ಹರಡಬಹುದು.
ಇದನ್ನೂ ಓದಿ: ಸಂಸತ್ತಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಸಂಸದನಿಗೆ ಪ್ರಮುಖ ಚುನಾವಣಾ ಜವಾಬ್ದಾರಿ ನೀಡಿದ ಬಿಜೆಪಿ!
ಇಂತಹ ಸನ್ನಿವೇಶದಲ್ಲಿ ನಡೆದ ಜಿ-20 ಶೃಂಗಸಭೆಯು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ವಿಷಯದಲ್ಲಿ ಸ್ವಲ್ಪ ಉಪಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಬಹುದಿತ್ತು. ಯುಎಸ್ ವಸತಿ ಗುಳ್ಳೆ ಒಡೆದ ನಂತರ ನಡೆದ ಜಿ -20 ಸಭೆ ಇದನ್ನು ಮಾಡಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತವು ತನ್ನ ಜಿ-20 ನಾಯಕತ್ವವು ಭೌಗೋಳಿಕ ದಕ್ಷಿಣದ ದೇಶಗಳಿಗೆ ಅನುಕೂಲಕರ ಬೆಳವಣಿಗೆ ಎಂದು ಬಿಂಬಿಸುತ್ತಿದ್ದುದರಿಂದ ಮತ್ತು ಕೆಲವು ಭಾರತೀಯ ಅಧಿಕೃತ ವಕ್ತಾರರು ತೃತೀಯ ಜಗತ್ತಿನ ಸಾಲದ ಪ್ರಶ್ನೆ ಒಂದು ಚರ್ಚೆಯಲ್ಲಿರುವ ವಿಷಯ ಎಂಬ ಸಂಕೇತಗಳನ್ನು ಕೊಡುತ್ತಿದ್ದುದರಿಂದ ಇಂತಹ ನಿರೀಕ್ಷೆ ಸಹಜವಾಗಿತ್ತು.
ಆದರೆ ಅಂಥದ್ದೇನೂ ಆಗಲಿಲ್ಲ. ಜಿ-20 ಭದ್ರತೆಯ ವಿಷಯಗಳಿಗಿಂತ ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಚೀನಾ ಮತ್ತು ರಷ್ಯಾದ ಪ್ರತಿನಿಧಿಗಳು ಯಾವಾಗಲೂ ಒತ್ತಿಹೇಳುತ್ತಿದ್ದರೂ ಈ ಶೃಂಗಸಭೆಯಿಂದ ಮೂಡಿ ಬಂದ ದಿಲ್ಲಿ ಘೋಷಣೆಯು ಪ್ರಸಕ್ತ ಜ್ವಲಂತ ಆರ್ಥಿಕ ಸಮಸ್ಯೆಗಳ ಬಗ್ಗೆ ಏನೇನೂ ಹೇಳಿಲ್ಲ. ನಿಜ, ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಹಿಂದಿನ ಶೃಂಗಸಭೆಯ ಘೋಷಣೆಗೆ ಹೋಲಿಸಿದರೆ ಈ ಘೋಷಣೆಯಲ್ಲಿ ನಿಲುವಿನ ಬದಲಾವಣೆ ನಿಸ್ಸಂದೇಹವಾಗಿಯೂ ಉಂಟಾಗಿದೆ. ರಷ್ಯಾ ಅಲ್ಲಿ ಸ್ಪಷ್ಟ ಟೀಕೆಗೆ ಗುರಿಯಾಗಿದ್ದರೆ, ದಿಲ್ಲಿಯಲ್ಲಿ ಯಾವುದೇ
ರೀತಿಯಲ್ಲಿ ರಷ್ಯಾವನ್ನು ದೂರುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಲಾಯಿತು. ಆದರೆ ಶಾಂತಿಗಾಗಿ ಅದರ ಕರೆ, ಶ್ಲಾಘನೀಯವಾಗಿದ್ದರೂ, ಅದರ ಪರಿಣಾಮ ಅತ್ಯಲ್ಪ.
ಶಾಂತಿಯ ಕರೆಯೂ ನಾಟೋವನ್ನು ಬಾಧಿಸದು
ಶಾಂತಿಗಾಗಿ ಎಲ್ಲಾ ಉಪಕ್ರಮಗಳನ್ನು ನಾಟೋ ದೇಶಗಳು ವಿಫಲಗೊಳಿಸಿವೆ, ಅವರು ರಷ್ಯಾದ ವಿರುದ್ಧದ ಜಗಳದಲ್ಲಿ ಉಕ್ರೇನಿಯನ್ ಜನರನ್ನು ತೋಪಿನ ಗುಂಡುಗಳಾಗಿ ಬಳಸಲು ನಿರ್ಧರಿಸಿದ್ದಾರೆ: ಮಿನ್ಸ್ಕ್ ಒಪ್ಪಂದವನ್ನು ಹಾಳುಗೆಡವಿದ್ದು ಯುಎಸ್ ಮತ್ತು ಬ್ರಿಟನ್; ರಷ್ಯಾದ ಸೇನಾ ಕಾರ್ಯಾಚರಣೆಗಳು ಪ್ರಾರಂಭವಾದ ಕೂಡಲೇ ಶಾಂತಿ ಮಾತುಕತೆಗಳನ್ನು ವಿಫಲಗೊಳಿಸಿದ್ದೂ ಅವೇ ದೇಶಗಳು; ಅವು ಈಗಲೂ ಯುದ್ಧವನ್ನು ಮುಂದುವರೆಸುವಂತೆ ಉಕ್ರೇನ್‌ನನ್ನು ಮುಂದಕ್ಕೆ ತಳ್ಳುವಲ್ಲಿ ನಿರತವಾಗಿವೆ. ಆದ್ದರಿಂದ ಯುದ್ಧವು ನಾಟೋ ಅದನ್ನು ಕೊನೆಗೊಳಿಸಲು ಇಚ್ಛಿಸಿದಾಗ ಮಾತ್ರ ಕೊನೆಗೊಳ್ಳುತ್ತದೆ. ಜಿ-20 ದೆಹಲಿ ಘೋಷಣೆಯಲ್ಲಿ ಅವರಿಗೆ ಅನುಕೂಲಕರವಾಗಿರದ ವಾಕ್ಯಗಳನ್ನು ಸೇರಿಸಲು ಒಪ್ಪಿಕೊಂಡಿದ್ದರೂ ಕೂಡ, ಆ ಘೋಷಣೆ ನಾಟೋದ ಇಚ್ಚೆಯ ಮೇಲೆ ಎಳ್ಳಷ್ಟೂ ಪ್ರಭಾವ ಬೀರುವುದಿಲ್ಲ, ಘೋಷಣೆಯಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ವೈವಿಧ್ಯತೆಗೆ ಗೌರವವನ್ನು ಶ್ಲಾಘಿಸುವ ಪರಿಚ್ಚೇಧಗಳೇನೋ ಇವೆ. ಇವುಗಳು ಖಂಡಿತವಾಗಿಯೂ ಶ್ಲಾಘನೀಯವಾಗಿದ್ದರೂ, ಅವುಗಳ ಪರಿಣಾಮ ಏನೇನೂ ಇಲ್ಲ. ಈ ಹೇಳಿಕೆಗೆ ಟರ್ಕಿಯ ಎರ್ಡೋಗನ್ ಮತ್ತು ಭಾರತದ ಮೋದಿ ಸಹಿ ಹಾಕಿದ್ದರೂ ಅವರ ದೇಶಗಳು ತಮ್ಮ ಸರ್ಕಾರಗಳ ಸಹಕಾರದೊಂದಿಗೆ ತದ್ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವಾಗಲೂ, ಅವನ್ನು ಟೊಳ್ಳು ನುಡಿಗಟ್ಟುಗಳಷ್ಟೇ ಎಂದು ಕಾಣಬಹುದಷ್ಟೇ.
ಘೋಷಣೆಯಲ್ಲಿ ಆರ್ಥಿಕ ಪ್ರಶ್ನೆಗಳು ಇಲ್ಲವೆಂದಲ್ಲ; ಆದರೆ ಅವನ್ನು ತುಂಬಾ ಲೋಕಾಭಿರಾಮವಾಗಿ ಉಲ್ಲೇಖಿಸಲಾಗಿದೆ. ಮೂರನೇ ಜಗತ್ತಿನ ಬಡ ದೇಶಗಳಿಗೆ ಸಾಲ ಪರಿಹಾರದ ಬಗ್ಗೆ ಚರ್ಚಿಸಲು ಅಂತಾರಾಷ್ಟ್ರೀಯ ಸಭೆ ನಡೆಸಬೇಕೆಂಬ ನಿರ್ದಿಷ್ಟ ಪ್ರಸ್ತಾವನೆ ಇಲ್ಲವಷ್ಟೇ ಅಲ್ಲ, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ವಿಷಯದಲ್ಲೂ, ಹಾಗೆ ಮಾಡುವ ವಿಧಾನಗಳ ಬಗ್ಗೆ ಒಂದೇ ಒಂದು ವಿಚಾರವೂ ಕಂಡುಬರುವುದಿಲ್ಲ. ಮೂರ್ತ ಪ್ರಸ್ತಾಪಗಳಿಗೆ ಘೋಷಣೆಯು ಸೂಕ್ತವಲ್ಲ ಎಂದು ವಾದಿಸಬಹುದು; ಆದರೆ ಈ ಪ್ರಸಕ್ತ ಜ್ವಲಂತ ಪ್ರಸ್ತುತ ಸಮಸ್ಯೆಗಳ ಕುರಿತು ಶೃಂಗಸಭೆಯಲ್ಲಿ ಯಾವುದೇ ಚರ್ಚೆ ನಡೆದಿರುವ ಬಗ್ಗೆ
ಪುರಾವೆಗಳೇನೂ ಇಲ್ಲ.
ಇದನ್ನೂ ಓದಿ: ರಾಮನಗರ : ಚುನಾವಣಾಧಿಕಾರಿ ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದೋಚಿದ ದುಷ್ಕರ್ಮಿಗಳು
ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಶೃಂಗಸಭೆಯಲ್ಲಿ ಅತಿಥೇಯ ಸರ್ಕಾರದ ಅತ್ಯಾಸಕ್ತಿಯ ವಿಷಯವೆಂದರೆ, ಅದರಿಂದ ಗರಿಷ್ಠ ಪ್ರಚಾರವನ್ನು ಪಡೆಯುವುದಾಗಿತ್ತು, ಅದನ್ನು ಪಡೆಯವುದರಲ್ಲಿ ಯಶಸ್ವಿಯಾಗಿದೆ. ನಡೆಯುತ್ತಿರುವ ಬಿಕ್ಕಟ್ಟಿನ ಪ್ರಮುಖ ಬಲಿಪಶುಗಳಾಗಿರುವ ಬಡ ದೇಶಗಳ, ಐಎಂಎಫ್ ಹೇರಿದ “ಮಿತವ್ಯಯ”ದ ಕ್ರಮಗಳಿಂದ ಹತ್ತಿಕ್ಕಲ್ಪಟ್ಟವರ ಪ್ರಾತಿನಿಧ್ಯವೇ ಈ ಶೃಂಗಸಭೆಯಲ್ಲಿ ಇರಲಿಲ್ಲ. ಮತ್ತು ಮುಂದುವರಿದ ದೇಶಗಳು ಆರ್ಥಿಕ ಬಿಕ್ಕಟ್ಟೆಂಬುದು ಇದೆಯೆಂಬುದನ್ನೇ ಒಪ್ಪಿಕೊಳ್ಳುವುದಿಲ್ಲವಾದ್ದರಿಂದ ಅದನ್ನು ನಿವಾರಿಸುವ ಪ್ರಸ್ತಾಪಗಳನ್ನು ಚರ್ಚಿಸುವ ಪ್ರಶ್ನೆಯೇ ಇಲ್ಲವಲ್ಲ. ನಿಜ, ಆ ದೇಶದ ಕೆಲವು “ಆಸ್ಥಾನ ಅರ್ಥಶಾಸ್ತ್ರಜ್ಞರು” ವೈಯಕ್ತಿಕವಾಗಿ ಬಿಕ್ಕಟ್ಟು ಇದೆ ಎಂಬುದನ್ನು ದೃಢೀಕರಿಸುತ್ತಾರೆ. ಸಂಕ್ಷಿಪ್ತವಾಗಿ, ಜಿ-20 ಸಭೆಯು ವಿಭಿನ್ನ ದೇಶಗಳು ತಮ್ಮದೇ ಆದ ನಿರ್ದಿಷ್ಟ ಕಾರಣಗಳಿಗಾಗಿ ಭಾಗವಹಿಸಿದ ಪ್ರದರ್ಶನವಾಗಿತ್ತು, ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕಾಳಜಿ ಅವುಗಳಿಗೆ ಬಹಳೇನೂ ಇದ್ದಂತಿರಲಿಲ್ಲ. ಜಾಗತಿಕ
ಬಿಕ್ಕಟ್ಟಿನ ಬಗ್ಗೆ ಏಕೆ ಈ ನಿರಾಳತೆ?
ಆದಾಗ್ಯೂ ಒಂದು ಪ್ರಶ್ನೆ ಏಳುತ್ತದೆ: ಮುಂದುವರಿದ ದೇಶದ ಸರ್ಕಾರಗಳು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಇಷ್ಟು ನಿರಾಳವಾಗಿ ಏಕೆ ತೆಗೆದುಕೊಳ್ಳುತ್ತವೆ? ಹಿಂದೊಮ್ಮೆ ನಿರುದ್ಯೋಗವು ಬಂಡವಾಳಶಾಹಿ ಸರ್ಕಾರಗಳಿಗೆ ಬಹಳ ಕಾಳಜಿಯ ವಿಷಯವಾಗಿತ್ತು, ಜಾನ್ ಮೇನಾರ್ಡ್ ಕೇನ್ಸ್, ಬಂಡವಾಳಶಾಹಿಯ ರಕ್ಷಣೆಗೆ ಕಂಕಣಬದ್ಧರಾಗಿದ್ದವರು ಕೂಡ, “ಇಂದಿನ ಬಂಡವಾಳಶಾಹಿ ವೈಯಕ್ತಿಕತೆಯೊಂದಿಗೆ ಸಂಬಂಧಿಸಿದ ನಿರುದ್ಯೋಗವನ್ನು ಜಗತ್ತು ಇನ್ನು ಮುಂದೆ ಸಹಿಸುವುದಿಲ್ಲ” ಎಂದು ಹೇಳಿದ್ದರು. ನಿಜ, ಆ ಹಿಂದಿನ ಯುಗದಲ್ಲಿ, ನಿರುದ್ಯೋಗವು ಆರ್ಥಿಕ ಹಿಂಜರಿತದ ಲಕ್ಷಣವಾಗಿತ್ತು, ಜತೆಗೆ ಲಾಭವೆಂಬುದನ್ನೂ
ಕಳೆದುಕೊಳ್ಳಬೇಕಾಗಿತ್ತು ನಿರುದ್ಯೋಗ ಕಾರ್ಮಿಕರು ಮತ್ತು ಬಂಡವಾಳಶಾಹಿಗಳು ಇಬ್ಬರನ್ನೂ ಬಾಧಿಸುವ ಬಿಕ್ಕಟ್ಟಿನ ಲಕ್ಷಣವಾಗಿತ್ತು.
ಆದರೆ ಸಮಕಾಲೀನ ಬಂಡವಾಳಶಾಹಿಯಲ್ಲಿ ಹಾಗಿಲ್ಲ. ‘ಉತ್ಪಾದನೆಯು’ ಲಾಭದ ಏಕೈಕ ಮೂಲವಲ್ಲ, ಅಥವಾ ಮುಖ್ಯ ಮೂಲವೂ ಅಲ್ಲ; ಬಂಡವಾಳಿಗರು ಗಳಿಸುವ ಲಾಭದ್ಲ ಗಣನೀಯ ಭಾಗ ಹಣಕಾಸಿನ ಕಾರ್ಯಾಚರಣೆಗಳಿಂದ ಬರುತ್ತಿದೆ. ಆದ್ದರಿಂದ ಆರ್ಥಿಕ ಹಿಂಜರಿತದಲ್ಲಿಯೂ ಸಹ, ಬಂಡವಾಳಗಾರರ ಲಾಭಕ್ಕೇನೂ ಚ್ಯುತಿಯಿಲ್ಲ. ನಿಜ, ಹಣಕಾಸಿನ ಕಾರ್ಯಾಚರಣೆಗಳಲ್ಲಿ ಯಾವುದೇ ಹೆಚ್ಚುವರಿ ಮೌಲ್ಯವು ಉತ್ಪತ್ತಿಯಾಗುವುದಿಲ್ಲ, ಆದರೆ ಅವು ಸಂಪನ್ಮೂಲಗಳ ಮೇಲೆ ದಾವೆಗಳನ್ನು ಸೃಷ್ಟಿಸುತ್ತವೆ, ಇದರಿಂದಾಗಿ ಉತ್ಪಾದನೆಯು ಸ್ಥಗಿತಗೊಂಡಿದ್ದರೂ ಸಹ, ಸಾರ್ವಜನಿಕ ಸ್ವತ್ತುಗಳು, ಸಣ್ಣ ಬಂಡವಾಳಗಾರರ ಆಸ್ತಿಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಈ ದಾವೆಗಳು ಬೆಳೆಯುತ್ತಲೇ ಇರುತ್ತವೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಉತ್ಪಾದನೆಯಿಂದ ಸ್ವಾಧೀನಪಡಿಸಿಕೊಂಡ ಹೆಚ್ಚುವರಿ ಮೌಲ್ಯಕ್ಕೆ ಪೂರಕವಾಗಿ, ಸಮಕಾಲೀನ ಬಂಡವಾಳಶಾಹಿಯಲ್ಲಿ ದೊಡ್ಡ ಕಾರ್ಪೊರೇಟ್‌ಗಳು ಇತರ ಬಂಡವಾಳಶಾಹಿಗಳಿಂದ, ಪ್ರಭುತ್ವದಿಂದ ಮತ್ತು ಇದುವರೆಗೆ ಸರಕುಗಳಾಗಿಲ್ಲದ ವಲಯಗಳಿಂದ (ಕೇಂದ್ರೀಕರಣದ ಅಥವಾ ಬಂಡವಾಳದ ಆದಿಮ ಸಂಚಯದಿಂದ ಬರುವಂತವುಗಳು) ಗಳಿಸುವ ನೇರ ಆಸ್ತಿಗಳೂ ಇರುತ್ತವೆ. ಆದ್ದರಿಂದ ಸಮಕಾಲೀನ ಬಂಡವಾಳಶಾಹಿಯ ಅಡಿಯಲ್ಲಿ ಪ್ರಬಲವಾದ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಆರ್ಥಿಕ ಹಿಂಜರಿತವು ಅಷ್ಟೇನೂ ಪ್ರಾಮುಖ್ಯತೆಯನ್ನು ಹೊಂದಿಲ್ಲ.
ಭ್ರಮೆಯಲ್ಲಿ ಬದುಕಿದ್ದಾರೆ
ಆದರೆ, ಅದು ಸೃಷ್ಟಿಸಿದ ಸಾಮೂಹಿಕ ನಿರುದ್ಯೋಗ ಮತ್ತು ದಾರಿದ್ರ್ಯದಿಂದಾಗಿ ಉಂಟಾಗುವ ಸಾಮಾಜಿಕ ಅಸ್ಥಿರತೆಯ ಕತೆ ಏನು? ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂದುವರೆದ ದೇಶಗಳ ಮಹಾನಗರೀಯ ಪ್ರಭುತ್ವಗಳು ನಿರಾಳವಾಗಿ ಇರುವುದನ್ನು ಅರ್ಥಮಾಡಿಕೊಳ್ಳಲು ನಾವು ಕೀನ್ಸ್ ಬರೆಯುತ್ತಿದ್ದ ಸಂದರ್ಭವನ್ನು ಮತ್ತು ಅದಕ್ಕೂ, ಈಗಿನ ಸಂದರ್ಭಕ್ಕೂ ಇರುವ ವ್ಯತ್ಯಾಸವನ್ನು ನೋಡಬೇಕು. ಕೀನ್ಸ್ ಬೊಲ್ಶೆವಿಕ್ ಕ್ರಾಂತಿಯ ಹಿನ್ನೆಲೆಯಲ್ಲಿ ಬರೆಯುತ್ತಿದ್ದರು; ಆಗ ಸಮಾಜವಾದವು ಕೇವಲ ಒಂದು ಸಾಧ್ಯತೆಯಾಗಿಯಲ್ಲ, ಸನ್ನಿಹಿತವಾದ ವಾಸ್ತವವಾಗಿ ಕಾಣುತ್ತಿತ್ತು. ನಿರುದ್ಯೋಗದ ಬಗ್ಗೆ ತಕ್ಷಣವೇ ಏನಾದರೂ ಮಾಡದಿದ್ದಲ್ಲಿ, ಕಾರ್ಮಿಕರ ಅಸಮಾಧಾನವು ಬಂಡವಾಳಶಾಹಿಯನ್ನು ಮೀರಿ ಹೋಗುವ ಅಜೆಂಡಾ ಮುನ್ನೆಲೆಗೆ ಬರುತ್ತಿತ್ತು. ಆದರೇನು ಮಾಡುವುದು, ಈಗ ಅಂತಹ ಸನ್ನಿವೇಶವಿಲ್ಲ. ನಿಜವಾಗಿ ಅಸ್ತಿತ್ವದಲ್ಲಿರುವ ಸಮಾಜವಾದಕ್ಕೆ ಹಿನ್ನಡೆಯಾಗಿದೆ, ಮುಂದುವರೆದ ಬಂಡವಾಳಶಾಹಿ ದೇಶಗಳ ಸರ್ಕಾರಗಳು ಸಾಮಾಜಿಕ ಅಸ್ಥಿರತೆ ಸಂಭವಿಸುತ್ತವೆ ಎಂಬ ಬಗ್ಗೆ ಚಿಂತಿಸುವುದಿಲ್ಲ.
ನಿಜ, ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಪ್ರಾಬಲ್ಯಕ್ಕೆ ಸವಾಲನ್ನು ಎದುರಿಸುತ್ತಿವೆ, ಆದರೆ ಈ ಸವಾಲಿಗೆ ಈ ಹಿಂದೆ ಇದ್ದಂತಹ ತೀಕ್ಷ್ಣವಾದ ಸೈದ್ಧಾಂತಿಕ ಮೊನಚು ಇಲ್ಲ; ಮತ್ತು ಕಾರ್ಮಿಕ ವರ್ಗದಿಂದ ಬರುವ ಯಾವುದೇ ಬೆದರಿಕೆಯನ್ನು ಫ್ಯಾಸಿಸ್ಟ್ ಮಂದಿಯನ್ನು ಬಳಸಿ ಮೊಂಡಾಗಿಸಬಹುದು.
ಆದರೂ ಅವರು ಭ್ರಮೆಯಲ್ಲಿ ಬದುಕಿದ್ದಾರೆ. ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಕಾರ್ಮಿಕರಿಂದ ಈಗ ಬೃಹತ್ ಮುಷ್ಕರ-ಹೋರಾಟಗಳು ನಡೆಯುತ್ತಿವೆ; ಮತ್ತು ತನ್ನ ಸಮಯದಲ್ಲಿ ಬೋಲ್ಶೆವಿಕ್ ಕ್ರಾಂತಿಯು “ಇದ್ದಕ್ಕಿದ್ದಂತೆ ಪ್ರತ್ಯಕ್ಷ” ಗೊಂಡಿತ್ತು ಎಂಬುದನ್ನು ನಾವು ಮರೆಯಬಾರದು. ಜಾಗತಿಕ
(ಅನು: ಕೆ.ವಿ.)
ವಿಡಿಯೊ ನೋಡಿ:ಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್. ವಿಮಲಾ ಜೊತೆ ಮಾತುಕತೆ #womensreservationbill