10 ದಿನಗಳಲ್ಲಿ ಮೂರನೇ ಬಾರಿ ಇಂಧನ ದರ ಏರಿಕೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಭಾರೀ ಹೆಚ್ಚಳ

ನವದೆಹಲಿ: ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಮತ್ತೆ ಏರಿಸಲಾಗಿದ್ದು, ಕಳೆದ 10 ದಿನಗಳ ಅವಧಿಯಲ್ಲಿ ಇದು ಮೂರನೇ ಬಾರಿ ಇಂಧನ ದರ ಹೆಚ್ಚಳವಾಗಿದೆ. ಪೆಟ್ರೋಲ್‌ ದರ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್‌ ದರ 91 ಪೈಸೆ ಹೆಚ್ಚಳವಾಗಿರುವುದರಿಂದ ವಾಹನ ಸವಾರರು ಮತ್ತು ಸಾಮಾನ್ಯ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಹೊಸ ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 99 ರೂಪಾಯಿ 51 ಪೈಸೆ ಮತ್ತು ಡೀಸೆಲ್‌ 92 ರೂಪಾಯಿ 49 ಪೈಸೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್‌ 108 ರೂಪಾಯಿ 49 ಪೈಸೆ ಹಾಗೂ ಡೀಸೆಲ್‌ 95 ರೂಪಾಯಿ 02 ಪೈಸೆಗೆ ತಲುಪಿದೆ. ಕೋಲ್ಕತ್ತಾ, ಚೆನ್ನೈ ಸೇರಿದಂತೆ ಇತರೆ ಮಹಾನಗರಗಳಲ್ಲೂ ದರ ಏರಿಕೆ ಜಾರಿಯಾಗಿದೆ.

ಮೇ 15ರಂದು ಮೊದಲ ಬಾರಿ ಲೀಟರ್‌ಗೆ ಸುಮಾರು 3 ರೂಪಾಯಿ ಏರಿಕೆ ಮಾಡಲಾಗಿತ್ತು. ನಂತರ ಮೇ 19ರಂದು ಮತ್ತೆ ಸುಮಾರು 90 ಪೈಸೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ದರ ಏರಿಕೆ ಮಾಡಿರುವುದರಿಂದ ಒಟ್ಟಾರೆ 10 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸುಮಾರು 5 ರೂಪಾಯಿ ಏರಿಕೆಯಾದಂತಾಗಿದೆ.

ಇದನ್ನೂ ಓದಿ : ಮೇ 25 | ಫ್ರೀಡಂ ಪಾರ್ಕ್‌ನಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳ ಅನಿರ್ದಿಷ್ಟಾವಧಿ ಮುಷ್ಕರ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು, ಪಶ್ಚಿಮ ಏಷ್ಯಾದಲ್ಲಿನ ಯುದ್ಧಭೀತಿ ಮತ್ತು ಉದ್ವಿಗ್ನ ಪರಿಸ್ಥಿತಿ, ರೂಪಾಯಿ ಮೌಲ್ಯದ ಕುಸಿತ ಹಾಗೂ ಆಮದು ವೆಚ್ಚ ಹೆಚ್ಚಳದಿಂದ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.

ಇಂಧನ ದರ ಏರಿಕೆಯಿಂದ ಸಾರ್ವಜನಿಕ ಸಾರಿಗೆ, ಸರಕು ಸಾಗಣೆ ಮತ್ತು ಕೃಷಿ ಚಟುವಟಿಕೆಗಳ ವೆಚ್ಚವೂ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ತರಕಾರಿ, ಧಾನ್ಯ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀಳಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೆಲವು ರಾಜ್ಯಗಳಲ್ಲಿ ಇಂಧನ ಕೊರತೆ ಎಂಬ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆ ಜನರು ಪೆಟ್ರೋಲ್‌ ಬಂಕ್‌ಗಳಿಗೆ ಮುಗಿಬಿದ್ದಿರುವ ಘಟನೆಗಳೂ ವರದಿಯಾಗಿವೆ. ಆದರೆ ದೇಶದಲ್ಲಿ ಇಂಧನ ಸಂಗ್ರಹ ಸಮರ್ಪಕವಾಗಿದ್ದು, ಯಾವುದೇ ಕೊರತೆ ಇಲ್ಲ ಎಂದು ಭಾರತೀಯ ತೈಲ ನಿಗಮ ಸ್ಪಷ್ಟಪಡಿಸಿದೆ.

ಇದನ್ನೂ ನೋಡಿ : ಗ್ರಾಮದ ನೀರು ವ್ಯವಸ್ಥೆ ಹೊತ್ತವರ ಬದುಕೇ ಅಸ್ಥಿರ; ನೀರಗಂಟಿಗಳ ಸಂಕಷ್ಟ Janashakthi Media

Donate Janashakthi Media

Leave a Reply

Your email address will not be published. Required fields are marked *