ಬೆಂಗಳೂರು: ತರಕಾರಿ, ದವಸ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ನಾಳೆಯಿಂದ ಮತ್ತಷ್ಟು ದುನಿಯಾ ದುಬಾರಿ ಎನಿಸಲಿದೆ. ಹೊರಗಡೆ ಪ್ರಯಾಣಿಸುವಾಗ ಹಸಿವಾಯಿತೆಂದು ಹೊಟೇಲ್ ಒಳಗೆ ಕಾಲಿಟ್ಟರೆ ಜೇಬು ಭರ್ತಿಯಿಲ್ಲದೆ ಹೋದರೆ ಅರ್ಧ ಹೊಟ್ಟೆ ತುಂಬಿಸಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಬಹುದು.
ಇದನ್ನೂ ಓದಿ:ಜೇಬು ಸುಡುತ್ತಿದೆ ಹೋಟೆಲ್ ಬಿಲ್ ; ಟಿ, ಕಾಫೀ, ತಿಂಡಿ ಊಟದ ದರ ಹೆಚ್ಚಳ
ನಾಳೆ ಆಗಸ್ಟ್-1 ರಿಂದ ನಂದಿನಿ ಹಾಲಿನ ದರ 3 ರೂಪಾಯಿ ಹೆಚ್ಚಾದರೆ, ಹೋಟೆಲ್ ತಿಂಡಿ, ತಿನಿಸು ಕೂಡ ದುಬಾರಿ ಆಗಲಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್-1 ರಿಂದ ಹೋಟೆಲ್ ಕಾಫಿ, ಟೀ, ತಿಂಡಿ-ತಿನಿಸುಗಳ ದರ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ. ಹೊಟೇಲ್ ಮಾಲೀಕರುಗಳ ಸಂಘದ ಅಧ್ಯಕ್ಷ ಪಿ ಸಿ ರಾವ್ ಅವರು ಮಾಹಿತಿ ನೀಡಿರುವ ಪ್ರಕಾರ, ತಿಂಡಿ ತಿನಿಸು ಜೊತೆಗೆ ಕಾಫಿ-ಟೀ ದರವನ್ನು ಶೇಕಡ-10 ರಷ್ಟು ಸಹ ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ.
ಅನೇಕ ಹೋಟೆಲ್ ನವರು ಶೇಕಡ 20 ರಷ್ಟು ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ನಾಳೆಯಿಂದ ಒಂದು ಲೀಟರ್ ಹಾಲು 42 ರೂಪಾಯಿ ಆಗಲಿದೆ. ಹೀಗಾಗಿ ಕಾಫಿ ಹಾಗೂ ಟೀ ಬೆಲೆಯನ್ನು 3 ರೂಪಾಯಿ ಏರಿಸಲು ಹಾಗೂ ತಿಂಡಿ ತಿನಿಸುಗಳ ದರ 5 ಹಾಗೂ ಊಟದ ದರ 10 ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದಾರೆ.