ಮಣಿಪುರ ಹಿಂಸಾಚಾರ ಹಾಗೂ ಸಾರ್ವಜನಿಕವಾಗಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಮನಕುಲ ತಲೆತಗ್ಗಿಸುವ ಕೃತ್ಯವನ್ನು ಖಂಡಿಸಿದ ಡಿವೈಎಫ್‌ಐ ಪಂಜಿಮೊಗರು ಘಟಕ, ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಒತ್ತಾಯಿಸಿ ಮಣಿಪುರ ಬಿಜೆಪಿ ಸರಕಾರದ ಹಾಗೂ ಕೇಂದ್ರ ಸರಕಾರದ ಮೌನದ ವಿರುದ್ದ ಕೂಳೂರು ಜಂಕ್ಷನ್‌ನಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಮಣಿಪುರ ಸರಕಾರದ ಹಾಗೂ ಕೇಂದ್ರ ಸರಕಾರದ ಜಾಣ ಮೌನದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು. ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ತಡೆಗಟ್ಟಲು ಮಿಲಿಟರಿ ಹಾಗೂ ಪೋಲೀಸರು ಶಕ್ತರಾಗಿದ್ದರೂ ಸರಕಾರ ಗಲಭೆಯನ್ನು ಜೀವಂತವಿರಿಸಲು ಪ್ರಯತ್ನಿಸುತ್ತಿದೆ , ಇಂಟರ್‌ನೆಟ್ ಸೇವೆ ಅಮಾನತು ಮಾಡಿದ ಹೊರತಾಗಿ ಭೀಕರವಾದ ವೀಡೀಯೋವೊಂದು ದೇಶಾದ್ಯಂತ ಸಂಚಲನ ಮೂಡಿಸಿದ್ದು ಇಂತಹ ಹಲವಾರು ಅತ್ಯಾಚಾರ ಪ್ರಕರಣಗಳು ನಡೆದಿದೆ ಇದು ಗಲಭೆಯ ಸ್ಯಾಂಪಲ್ ಅಷ್ಟೇ ಇಂತಹ ಹತ್ಯಾಕಾಂಡ ರಾಜಕೀಯ ಕಾರಣಕ್ಕಾಗಿಯೇ ನಡೆಯುತ್ತಿದೆ. ಮಣಿಪುರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮೇಲೆ ದೊಡ್ಡ ಮಟ್ಟದ ಹಿಂಸಾಚಾರ ನಡೆದಿದ್ದು ದೇಶದ ಸೌಹಾರ್ದಪ್ರಿಯ ಸರ್ವಧರ್ಮ ಜನತೆ ಅವರೊಂದಿಗಿದ್ದಾರೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದರು.
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಪ್ರಧಾನಿಗಳು ಮಾತನಾಡಬೇಕಾದ ಸಮಯವಿದು ಆದರೆ ಅವರು ಮೌನವಾಗಿದ್ದಾರೆ , ಚುನಾವಣೆ ಹತ್ತಿರ ಬರುತ್ತಿದ್ದಂತೆ ಗುಜರಾತ್ ಮಾದರಿಯಂತೆ ಮಣಿಪುರದಲ್ಲೂ ಗಲಭೆ ಸೃಷ್ಟಿಸಲಾಗಿದೆ ಎಂದು ದೂರಿದರು. ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದನ್ನೂ ಓದಿ:ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ : ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು
ಪ್ರತಿಭಟನೆ ಉದ್ದೇಶಿಸಿ ಡಿ.ವೈ.ಎಫ್.ಐ ನಗರಾಧ್ಯಕ್ಷರಾದ ನವೀನ್ ಕೊಂಚಾಡಿ ಮಾತನಾಡಿ ಮಣಿಪುರದಲ್ಲಿ ನಡೆದ ಕೃತ್ಯ , ಪ್ರಧಾನಿ ಮೌನ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಅನಿಲ್ ಡಿಸೋಜ, ಶ್ರೀನಾಥ್ ಕಾಟಿಪಳ್ಳ, ನೌಶಾದ್, ಅಸುಂತ ಡಿಸೋಜ, ಹನುಮಂತ, ಸೌಮ್ಯ, ಆಶಾ, ಸಾಮಾಜಿಕ ಮುಂದಾಳುಗಳಾದ ವಿನ್ಸೆಂಟ್,ಡೆನ್ನಿಸ್, ಕನಕದಾಸ್ ಕೂಳೂರು, ಸುಲೈಮಾನ್ ಜಾನ್ ಕೂಳೂರು,ಸಿದ್ದಿಕ್ ಮುಂತಾದವರು ಉಪಸ್ಥಿತರಿದ್ದರು. ಸಂತೋಷ್ ಡಿಸೋಜ ಸ್ವಾಗತಿಸಿ, ಪ್ರಮೀಳಾ ವಂದಿಸಿದ್ದಾರೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.