ಫ್ರಾನ್ಸಿನಲ್ಲೂ ಎಡ ಮುನ್ನಡೆ, ಅಧ್ಯಕ್ಷ ಮ್ಯಾಕ್ರಾನ್ ಕೂಟಕ್ಕೆ ಬಹುಮತ ನಷ್ಟ

ವಸಂತರಾಜ ಎನ್.ಕೆ

ಕೊಲಂಬಿಯಾದ ಚುನಾವಣೆಯ ದಿನವೇ (ಜೂನ್ 19) ನಡೆದ ಫ್ರಾನ್ಸಿನ ಪಾರ್ಲಿಮೆಂಟರಿ ಚುನಾವಣೆಯಲ್ಲೂ ಗಮನಾರ್ಹ ಎಡ ಮುನ್ನಡೆ ಕಂಡು ಬಂದಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಇತ್ತೀಚೆಗಷ್ಟೇ ಗೆದ್ದಿದ್ದ ಮತ್ತು ಹಿಂದಿನ (2017ರಲ್ಲಿ ಚುನಾಯಿತವಾದ) ಪಾರ್ಲಿಮೆಂಟಿನಲ್ಲಿ ಭಾರೀ ಬಹುಮತ  ಹೊಂದಿದ್ದ ಮಾಕ್ರಾನ್ ಅವರ ಪಕ್ಷ ಮತ್ತು ಕೂಟ ಬಹುಮತ ಕಳೆದುಕೊಂಡಿದೆ. ಎಡ-ಪರಿಸರವಾದಿ ಕೂಟ ಎರಡನೆಯ ಅತಿ ದೊಡ್ಡ ಕೂಟವಾಗಿ ಹೊಮ್ಮಿದೆ. ಹಿಂದೆ ಹಲವು ಬಾರಿ ಆಳುವ ಪಕ್ಷವಾಗಿದ್ದ ರಿಪಬ್ಲಿಕನ್ ಒಳಗೊಂಡ ಬಲಪಂಥೀಯ ಕೂಟ ಅರ್ಧದಷ್ಟು ಸೀಟುಗಳನ್ನು ಕಳೆದುಕೊಂಡು ಇನ್ನಷ್ಟು ದುರ್ಬಲವಾಗಿದೆ. ಉಗ್ರ ಬಲಪಂಥೀಯ ಕೂಟ ರಿಪಬ್ಲಿಕನ್ ಬಲಪಂಥೀಯ ಕೂಟವನ್ನು ಹಿಂದೆ ಹಾಕಿ ಹಿಂದಿಗಿಂತ 10 ಪಟ್ಟು ಹೆಚ್ಚು ಸೀಟು ಪಡೆದು ಮೂರನೆಯ ಸ್ಥಾನ ಪಡೆದಿದೆ. ಇದು ಅಧ್ಯಕ್ಷ ಮ್ಯಾಕ್ರಾನ್ ಅವರ ‘ಕೆನ್ನೆಗೆ ತಪರಾಕಿ’ ಎಂದು ಮಾಧ್ಯಮಗಳು ಬಣ್ಣಿಸಿವೆ.

ನಡು-ಎಡ, ನಡು-ಬಲಪಂಥೀಯರು ಸೇರಿದಂತೆ ನಡುಪಂಥೀಯ ಪಕ್ಷಗಳು ಕೂಟಗಳು ದುರ್ಬಲವಾಗಿ ಅಧಿಕಾರ ಕಳೆದುಕೊಳ್ಳುತ್ತಿವುದು, ಎಡ ಮತ್ತು ಉಗ್ರ ಬಲಪಂಥೀಯ ಪಕ್ಷಗಳು ಕೂಟಗಳು ಪ್ರಬಲಗೊಳ್ಳುತ್ತಿರುವುದು ಹೆಚ್ಚಿನ ಬಂಡವಾಳಶಾಹಿ ದೇಶಗಳಲ್ಲಿ ಕಂಡು ಬಂದಿರುವ ಟ್ರೆಂಡ್.  ಆದರೆ ಎಡ ಕೂಟ ಎರಡನೆಯ ಸ್ಥಾನ ಪಡೆದಿರುವುದು ಫ್ರಾನ್ಸಿನ ವಿಶೇಷತೆ.  ಮೊದಲ ಸುತ್ತಿನಲ್ಲಿ ಮ್ಯಾಕ್ರಾನ್ ಅವರ ನಡುಪಂಥೀಯ ಎನ್ಸೆಂಬಲ್ ಮತ್ತು ಎಡ-ಪರಿಸರವಾದಿ ಕೂಟ ಹೆಚ್ಚು ಕಡಿಮೆ ಒಂದೇ ಮತಗಳಿಕೆ (ಶೇ. 25.7) ಹೊಂದಿದ್ದವು ಎಂಬುದು ಇನ್ನೊಂದು ವಿಶೇಷತೆ.

ಕಳೆದ ಚುನಾವಣೆಯಲ್ಲಿ 577 ಸೀಟುಗಳ ಪಾರ್ಲಿಮೆಂಟಿನಲ್ಲಿ 346 ಸೀಟುಗಳನ್ನು ಗೆದ್ದಿದ್ದ ಮ್ಯಾಕ್ರಾನ್ ಅವರ ನಡುಪಂಥೀಯ ಎನ್ಸೆಂಬಲ್ ಕೂಟ, ಈ ಬಾರಿ  245 ಸೀಟುಗಳಿಗೆ ಕುಸಿದಿದೆ. ಅದಕ್ಕೆ ಬಹುಮತಕ್ಕೆ 44 ಸೀಟುಗಳ ಕೊರತೆಯಿದೆ. ಅದು ಶೇ.10 ಮತಗಳನ್ನು ಕಳೆದುಕೊಂಡಿದ್ದು, ಅದರ (ಎರಡನೆಯ ಸುತ್ತಿನ) ಮತಗಳಿಕೆ ಶೇ.38.6 ಕ್ಕೆ ಕುಸಿದಿದೆ. ಎಡ-ಪರಿಸರವಾದಿ ಕೂಟ ಹಿಂದಿನ 66 ಸೀಟುಗಳನ್ನು ಇಮ್ಮಡಿಗೊಳಿಸಿಕೊಂಡು 131 ಸೀಟು ಗಳಿಸಿದೆ. ಅದರ (ಎರಡನೆಯ ಸುತ್ತಿನ) ಶೇ.31.6 ಮತಗಳಿಕೆ ಹಿಂದಿನ ಮತಗಳಿಕೆಯ ಸುಮಾರು ಮೂರು ಪಟ್ಟಾಗಿದೆ. ಕಳೆದ ಚುನಾವಣೆಯಲ್ಲಿ ಕೇವಲ 8 ಸೀಟು ಹೊಂದಿದ್ದ ಉಗ್ರ ಬಲಪಂಥೀಯ ನ್ಯಾಶನಲ‍್ ರಾಲಿ 89 ಸೀಟು ಪಡೆದಿದೆ. ಮತಗಳಿಕೆಯನ್ನೂ ಇಮ್ಮಡಿಗೊಳಿಸಿಕೊಂಡು ಶೇ.17.3 ಮತಪ್ರಮಾಣ ಗಳಿಸಿದೆ. ರಿಪಬ್ಲಿಕನ್ ಬಲಪಂಥೀಯ ಕೂಟ ಅರ್ಧದಷ್ಟು ಸೀಟುಗಳನ್ನು ಮತ್ತು ಮೂರನೆಯ ಎರಡು ಭಾಗ ಮತ ಕಳೆದುಕೊಂಡು ಕೇವಲ 64 ಸೀಟುಗಳನ್ನು ಹಾಗೂ  ಶೇ.7.3 ಮತ ಪ್ರಮಾಣವನ್ನು ಗಳಿಸಿದೆ.

 

ಎನ್ಸೆಂಬಲ್, NUPES ಕೂಟಗಳ ವಿವರವಾದ ಫಲಿತಾಂಶಗಳು (ಮೂಲ : ವಿಕಿಪಿಡಿಯಾ)

ನೇಶನಲ್ ರಾಲಿ, ರಿಪಬ್ಲಿಕನ್ ಬಲಪಂಥೀಯ ಕೂಟಗಳ ವಿವರವಾದ ಫಲಿತಾಂಶಗಳು (ಮೂಲ : ವಿಕಿಪಿಡಿಯಾ)

ಎಡ-ಪರಿಸರವಾದಿ ಕೂಟದಲ್ಲಿ (ನೂತನ ಪರಿಸರ ಮತ್ತು ಸಾಮಾಜಿಕ ಜನತಾ ಕೂಟ New Ecologic and Social Peoples Union – NUPES) ಫ್ರೆಂಚ್ ಕಮ್ಯುನಿಸ್ಟ್, ಸೋಶಲಿಸ್ಟ್, ಗ್ರೀನ್ ಪಕ್ಷಗಳಲ್ಲದೆ ಈ ಕೂಟದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಮೆಲೆಂಕೊನ್ ಅವರ ‘ಬಗ್ಗದ ಫ್ರಾನ್ಸ್” ಪಕ್ಷ ಹಾಗೂ ಇತರ ಪರಿಸರವಾದಿ ಮತ್ತು ಎಡ ಪಕ್ಷಗಳು ಇವೆ. ಈ ಕೂಟ ಈಗಿನ ಫ್ರಾನ್ಸ್ ನ ಸಮಸ್ಯೆಗಳಿಗೆ ಕಾರಣವಾದ ನವ-ಉದಾರವಾದಿ ನೀತಿಗಳಿಗೆ ಉತ್ತಮ ಪರ್ಯಾಯ ಒದಗಿಸುವ ನೀತಿಗಳ ಸಮಗ್ರ ಕಾರ್ಯಕ್ರಮವನ್ನು ಜನತೆಯ ಮುಂದಿಟ್ಟಿತ್ತು. ಚುನಾವಣಾ-ಪೂರ್ವ ಸಮೀಕ್ಷೆಗಳ ಪ್ರಕಾರ ಬಹುಮತ ಪಡೆಯಬಹುದು ಅಥವಾ ಅದರ ಹತ್ತಿರ ಬರಬಹುದು ಎಂಬ ನಿರೀಕ್ಷೆ ಹುಟ್ಟಿಸುವಷ್ಟು ಈ ಕೂಟ ಬಿರುಸಿನ ಪ್ರಚಾರ ನಡೆಸಿತ್ತು. ಎಡ-ಪರಿಸರವಾದಿ ಕೂಟವನ್ನು ಸೋಲಿಸುವಂತೆ ಎರಡನೆಯ ಸುತ್ತಿನ  ಮತಗಳ ಯೋಜನೆಯಲ್ಲಿ ಇತರ ಮೂರೂ ಕೂಟಗಳು ತಂತ್ರ ಹೂಡಿದ್ದರಿಂದ ಬಹುಮತ ಪಡೆಯಲಾಗಿಲ್ಲವೆಂದು ವಿಶ್ಲೇಷಕರು ಹೇಳಿದ್ದಾರೆ.

ಫ್ರಾನ್ಸ್ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಸಹ ಎರಡು ಸುತ್ತಿನ ಮತದಾನ ಪದ್ಧತಿಯನ್ನು ಅನುಸರಿಸುತ್ತದೆ. ಮೊದಲ ಸುತ್ತಿನಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಅತ್ಯಂತ ಹೆಚ್ಚು ಮತ ಮತ್ತು ಕನಿಷ್ಠ ಶೇ. 25 ಮತ ಗಳಿಸಿದ ಅಭ್ಯರ್ಥಿಯನ್ನು ಮೊದಲ ಸುತ್ತಿನಲ್ಲಿ ಚುನಾಯಿತರಾದರೆಂದು ಘೋಷಿಸಲಾಗುತ್ತದೆ. ಈ ನಾಲ್ಕು ಕೂಟಗಳ ನಡುವೆ ತೀವ್ರ ಪ್ರತಿಸ್ಪರ್ಧೆ ಇದ್ದಿದ್ದರಿಂದ 577 ಸೀಟುಗಳಲ್ಲಿ ಕೇವಲ 5 ಸೀಟುಗಳಲ್ಲಿ ಮಾತ್ರ ಮೊದಲ ಸುತ್ತಿನಲ್ಲಿ ಚುನಾಯಿತರಾದರು. ಇದರಲ್ಲಿ 4 ಎಡ-ಪರಿಸರ ಕೂಟದ ಅಭ್ಯರ್ಥಿಗಳು ಎಂಬುದು ಗಮನಾರ್ಹ. ಮೊದಲ ಸುತ್ತಿನಲ್ಲಿ ಚುನಾಯಿತರಾಗುವ ಮತಗಳಿಕೆಯ ಯಾವ ಅಭ್ಯರ್ಥಿಯೂ ಇಲ್ಲದಿದ್ದರೆ, ಅತ್ಯಂತ ಹೆಚ್ಚು ಮತ ಪಡೆದ ಎರಡು ಅಭ್ಯರ್ಥಿಗಳು ಮತ್ತು ಶೇ.12.5ಕ್ಕಿಂತ ಹೆಚ್ಚು ಮತ ಪಡೆದ ಅಭ್ಯರ್ಥಿಗಳು ಎರಡನೆಯ ಸುತ್ತಿಗೆ ಹೋಗುತ್ತಾರೆ. ಎರಡನೆಯ ಸುತ್ತಿನಲ್ಲಿ ಅತ್ಯಂತ ಹೆಚ್ಚು ಮತ ಪಡೆದ ಅಭ‍್ಯರ್ಥಿ ಚುನಾಯಿತರೆಂದು ಘೋಷಿತರಾಗುತ್ತಾರೆ.

ಹಾಗಾಗಿಯೇ ಪಕ್ಷ/ಕೂಟಗಳ ಮೊದಲ ಮತ್ತು ಎರಡನೆಯ ಸುತ್ತಿನ ಮತಗಳಿಕೆ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಎನ್ಸೆಂಬಲ್ ಮತ್ತು ಎಡ=ಪರಿಸರವಾದಿ ಕೂಟಗಳು ಎರಡನೆಯ ಸುತ್ತಿನಲ್ಲಿ ಮೊದಲನೆಯ ಸುತ್ತಿಗಿಂತ ಗಮನಾರ್ಹವಾಗಿ ಹೆಚ್ಚಿನ ಮತ ಪ್ರಮಾಣವನ್ನು ಗಳಿಸಿವೆ, ಏಕೆಂದರೆ ಇವೆರಡು ಕೂಟಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಮೊದಲ ಎರಡು ಸ್ಥಾನ ಗಳಿಸಿ ಎರಡನೆಯ ಸುತ್ತಿಗೆ ಹೋಗಿದ್ದವು. ಎರಡನೆಯ ಸುತ್ತಿನಲ್ಲಿ ಉಳಿದ ಎರಡು ಕೂಟಗಳ ಮತಪ್ರಮಾಣ ಕಡಿಮೆಯಾಯಿತು.

ಆದರೂ ಎಡ-ಪರಿಸರವಾದಿ ಕೂಟದ (NUPES) ಚುನಾವಣಾ ಸಾಧನೆ ಗಮನಾರ್ಹವಾಗಿತ್ತು. 1997ರ ವಿಶಾಲ ಎಡ ಕೂಟದ ನಂತರ ಇದೇ ಎಡ ಕೂಟದ ಅತ್ಯಂತ ಗಮನಾರ್ಹ ಚುನಾವಣಾ ಸಾಧನೆಯೆಂದು ಹೇಳಬಹುದು. ಅದು ಪ್ರಬಲ ವಿರೋಧ ಪಕ್ಷದ ಕೂಟವಾಗಿ ಕೆಲಸ ಮಾಡಲಿದೆ. ದುಡಿಯುವ ಜನರ ವಿರೋಧಿ ನೀತಿಗಳಿಗೆ ಪಾರ್ಲಿಮೆಂಟಿನಲ್ಲೂ ಬೀದಿಗಳಲ್ಲೂ ಪ್ರತಿರೋಧ ಒಡ್ಡಲಿದೆ. ಉಗ್ರ ಬಲಪಂಥೀಯ ಕೂಟಕ್ಕೆ ಬಂದ ಮತಗಳು ಸಹ ನವ-ಉದಾರವಾದಿ ನೀತಿ-ವಿರೋಧಿ ಮತಗಳೇ. ಆದರೇ ಎಡ ಕೂಟ ಪರ್ಯಾಯ ನೀತಿಗಳನ್ನು ಸೂಚಿಸುವುದಲ್ಲದೆ ಸತತ ಹೋರಾಟ ರೂಪಿಸುವುದರಿಂದ ಉಗ್ರ ಬಲಪಂಥದ ಜನ ಬೆಂಬಲಕ್ಕೆ ಮತ್ತು ಖಂಡಿತ ಅದರ ವಿಸ್ತರಣೆಗೆ ಕಡಿವಾಣವಿರಲಿದೆ. ಇದೊಂದು ಸಕಾರಾತ್ಮಕ ಬದಲಾವಣೆ.

ಸಮಗ್ರ ಪರ್ಯಾಯ ಕಾರ್ಯಕ್ರಮದ ಸುತ್ತ ಎಡ-ಪರಿಸರವಾದಿ ಕೂಟದ ಬಿರುಸಿನ ಪ್ರಚಾರ

ಚುನಾವಣಾ ಫಲಿತಾಂಶಗಳು ಅಧ್ಯಕ್ಷ ಮ್ಯಾಕ್ರಾನ್ ಅವರ ಯೋಜನೆಗಳನ್ನು ತಲೆಕೆಳಗು ಮಾಡಿದ್ದು ಅವರ ನವ-ಉದಾರವಾದಿ ನೀತಿಗಳನ್ನು ಜಾರಿ ಮಾಡುವುದು ಕಷ್ಟವಾಗಲಿದೆ. ತಮ್ಮ ಆಯ್ಕೆಯ ಪ್ರಧಾನಿಯನ್ನು ಉಳಿಸಿಕೊಳ್ಳುವುದೂ ಕಷ್ಟವಾಗಲಿದೆ. ಈಗಾಗಲೇ ಈ ಪರಿಸ್ಥಿತಿಯನ್ನು ಗಮನಿಸಿ ಇತ್ತೀಚಿಗಷ್ಟೇ ಅವರು ನೇಮಿಸಿದ್ದ ಪ್ರಧಾನಿ ರಾಜೀನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ಇತರ ಯುರೋಪಿಯನ್ ದೇಶಗಳಂತೆ ಅಥವಾ ಇನ್ನೂ ಹೆಚ್ಚಾಗಿ ತೀವ್ರ ಆರ್ಥಿಕ-ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. 1970ರ ದಶಕದ ನಂತರ –  ಅತಿ ಹೆಚ್ಚು ತೀವ್ರ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ದುಡಿಯುವ ಜನರ ಆದಾಯ ಮತ್ತು ಸಾಮಾಜಿಕ ಭದ್ರತಾ ಕ್ರಮಗಳಲ್ಲಿ ಕಡಿತಗಳು ಸಾಮಾಜಿಕ ಅತೃಪ್ತಿ ಆಕ್ರೋಶಗಳನ್ನು ಹೆಚ್ಚಿಸಿವೆ. ಉಕ್ರೇನ್ ಯುದ್ಧ ಈ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಶ್ಯದ ಮೇಲೆ ಹೊರಿಸಿದ ಆರ್ಥಿಕ ದಿಗ್ಬಂಧನಗಳಿಂದಾಗಿ ಆಹಾರವಸ್ತುಗಳ, ಇಂಧನಗಳ ಅಭಾವ, ಬೆಲೆಏರಿಕೆ ಇನ್ನಷ್ಟು ದುರ್ಭರವಾಗಿದೆ. ಅದನ್ನು ಧಾರ್ಮಿಕ, ಜನಾಂಗೀಯ ಇತ್ಯಾದಿ ಅಲ್ಪಸಂಖ್ಯಾತರ, ವಲಸೆಗಾರರ ವಿರುದ್ಧ ತಿರುಗಿಸುವ, ಸರಕಾರದ ಮತ್ತು ಬಲಪಂಥೀಯ ಪ್ರಯತ್ನಗಳು ಸಾಮಾಜಿಕ ಕ್ಷೋಭೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಈ ಹಿನ್ನೆಲೆಯಲ್ಲಿ ಮ್ಯಾಕ್ರಾನ್ ಸರಕಾರದ ಮೇಲೆ ತನ್ನ ಜನ-ವಿರೋಧಿ ನೀತಿಗಳನ್ನು ಬದಲಾಯಿಸಲು ಎಡ-ಪರಿಸರವಾದಿ ಕೂಟ ತೀವ್ರ ಒತ್ತಡ ಹೇರಲಿದೆ. ಮ್ಯಾಕ್ರಾನ್ ಜತೆ ಸರಕಾರ ರಚನೆ ಅಥವಾ ಇತರ ಯಾವುದೇ ರೀತಿಯಲ್ಲಿ ಸಹಕರಿಸುವುದಿಲ್ಲವೆಂದು ಎಡ ಕೂಟ ಮತ್ತು ನ್ಯಾಶನಲ್ ರಾಲಿ ಸಹ ಖಡಾಖಂಡಿತವಾಗಿ ಹೇಳಿವೆ. ರಿಪಬ್ಲಿಕನ್ ನಾಯಕತ್ವದ ಬಲಪಂಥೀಯ ಕೂಟ ಮಾತ್ರ ಕೆಲವು ಷರತ್ತುಗಳ ಮೇಲೆ ಮ್ಯಾಕ್ರಾನ್ ಜತೆಗೆ ಮಾತುಕತೆ ನಡೆಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *