ಬೆಂಗಳೂರು: ರಾಜ್ಯದಲ್ಲಿರುವ 18 ವರ್ಷದಿಂದ 45 ವರ್ಷದವರೆಗಿನ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೋನಾ ವೈರಸ್ ಎರಡನೇ ಅಲೆಯ ಅಬ್ಬರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ದಿನಕ್ಕೆ 30 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಕೊರೊನಾ ಸೋಂಕು ತಡೆಗಟ್ಟುವ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಸಭೆಯ ಬಳಿಕ ಸುದ್ದಿಗಾರರಗೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ಹರಡುವಿಕೆ ತಡೆಯಲು 14 ದಿನ ಇಡೀ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಇದನ್ನು ಓದಿ: ನಾಳೆಯಿಂದ ಕರ್ನಾಟಕ್ ʼಲಾಕ್ʼ : ಸಂಪುಟ ಸಭೆ ತೀರ್ಮಾನ
ಮೇ 1 ರಿಂದ 18 ರಿಂದ 45 ವರ್ಷದೊಳಗಿನವರಿಗೆ ಎಲ್ಲರಿಗೂ ಉಚಿತವಾಗ ಕೊರೊನಾ ಲಸಿಕೆಯನ್ನು ನೀಡಲಾಗುವುದು. ಕೇಂದ್ರ ಸರ್ಕಾರದ ಸೂಚನೆಯಂತೆ 65 ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೆ ಸಂಬಂಧಸಿದಂತೆ ಏಪ್ರಿಲ್ 28ರಿಂದ ನೋಂದಣಿ ಆರಂಭವಾಗಲಿದೆ. ಎಲ್ಲರೂ ಲಸಿಕೆ ಪಡೆಯುವಂತೆ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ಜನವರಿ 16ರಿಂದ ದೇಶಾದ್ಯಂತ ಬೃಹತ್ ಲಸಿಕಾ ಅಭಿಯಾನ ಆರಂಭಗೊಂಡಿತ್ತು. ಮೂರನೇ ಹಂತದ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು ಎಂದು ಪ್ರಧಾನ ಮಂತ್ರಿಗಳು ಘೋಷಿಣೆ ಮಾಡಿದ್ದರು. ನಂತರದಲ್ಲಿ ಹಲವು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಘೋಷಣೆ ಮಾಡಿದ್ದವು. ಇದೀಗ ಕರ್ನಾಟಕ ಸರ್ಕಾರವೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ.
ಇದನ್ನು ಓದಿ: ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತನೆಯಾಗಿರುವ ರೈಲ್ವೆ ಬೋಗಿಗಳು : ಬೇಡಿಕೆ ಸಲ್ಲಿಸದ ರಾಜ್ಯ ಸರಕಾರ
ಬಡಜನರು ಹಣ ಕೊಟ್ಟು ಲಸಿಕೆ ಪಡೆಯಲು ಸಾಧ್ಯವಿಲ್ಲ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಸರ್ಕಾರವೇ ಮುಂದೆ ಬಂದು ಉಚಿತ ಲಸಿಕೆ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಸಾಕಷ್ಟು ಒತ್ತಡ ನೀಡುತ್ತಿದ್ದರು.
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳೂ ತೀವ್ರವಾದ ಟೀಕೆಗಳನ್ನು ಮಾಡಿತ್ತು. ಆಕ್ಸಿಜನ್, ರೆಮೆಡಿಸಿವಿರ್ ಇಂಜಕ್ಷನ್, ಬೆಡ್, ಐಸಿಯು, ಆ್ಯಂಬುಲೆನ್ಸ್ ಕೊರತೆಯಿಂದ ರಾಜ್ಯದ ಜನತೆ ತೀವ್ರವಾದ ಸಂಕಷ್ಟದಲ್ಲಿದ್ದಾರೆ. ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡುತ್ತಿದೆ. ಇಂತಹ ಸಂದರ್ಭದಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿಗಳಿಗೆ ಆಪ್ತರೂ ಸಹ ಸಲಹೆಗಳನ್ನು ನೀಡಿದ್ದರು.
ದೇಶದ 17 ರಾಜ್ಯಗಳು ತಮ್ಮತಮ್ಮ ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿವೆ. ಗೋವಾ, ಕೇರಳ, ಛತ್ತೀಸ್ಗಡ, ಜಾರ್ಖಂಡ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ, ಅಸ್ಸಾಂ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ಘೋಷಿಸಿದ್ದವು. ಇದೀಗ ಕರ್ನಾಟಕವೂ ಈ ಪಟ್ಟಿಯಲ್ಲಿ ಸೇರಿಕೊಂಡಿದೆ.