ಬೆಂಗಳೂರು: ನಗರದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, 14 ವರ್ಷದ ಎಲ್ಲಾ ಬಾಲಕಿಯರಿಗೆ ಉಚಿತ ಲಸಿಕೆ ನೀಡುವುದಾಗಿ ನೆನ್ನೆ ಬುಧವಾರ ಘೋಷಣೆ ಮಾಡಿದೆ. ಬೆಂಗಳೂರು
ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕದಲ್ಲಿ ಗರ್ಭಕಂಠ ಕ್ಯಾನ್ಸರ್ ನಿರ್ಮೂಲನಾ ಅಭಿಯಾನ’ಕ್ಕೆ ಚಾಲನೆ ನೀಡಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು. ಬೆಂಗಳೂರು
ಮಹಿಳೆಯರಲ್ಲಿ ಹೆಚ್ಚಾಗಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆಗೆ ಎಚ್‌ಪಿವಿ ಲಸಿಕೆ ಸಹಕಾರಿ. ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಈ ಲಸಿಕೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ.
ಇದನ್ನೂ ಓದಿ: 77 ಶೇ ಹೈಕೋರ್ಟ್ ನ್ಯಾಯಾಧೀಶರು ಮೇಲ್ಜಾತಿಯವರು: ಕಾನೂನು ಸಚಿವಾಲಯ
ಮುಂದಿನ ದಿನಗಳಲ್ಲಿ ಇದು ಕಾರ್ಯಗತವಾಗುವ ವಿಶ್ವಾಸವಿದೆ. ನವದೆಹಲಿ, ಪಂಜಾಬ್ ಮತ್ತು ಸಿಕ್ಕಿಂ ರಾಜ್ಯದಲ್ಲಿ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿಯೂ ಈ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ, ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.
ಹದಿಹರೆಯದ ಹೆಣ್ಣು ಮಕ್ಕಳಿಗೆ ಎಚ್‍ಪಿವಿ ಲಸಿಕೆ ಹಾಕುವುದರಿಂದ ಭವಿಷ್ಯದಲ್ಲಿ ಅವರಿಗೆ ಎದುರಾಗಬಹುದಾದ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಸ್ತಾವವು ಸರಕಾರದ ಮುಂದಿದ್ದು, ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ 90-70-90 ಸೂತ್ರಕ್ಕೆ (14 ವರ್ಷದೊಳಗಿನ ಶೇ.90ರಷ್ಟು ಹೆಣ್ಣು ಮಕ್ಕಳಿಗೆ ಲಸಿಕೆ, 25 ವರ್ಷದ ನಂತರ ಶೇ.70ರಷ್ಟು ಮಹಿಳೆಯರ ಸ್ಕ್ರೀನಿಂಗ್, ಬಾಧಿತರ ಪೈಕಿ ಶೇ.90ರಷ್ಟು ಮಹಿಳೆಯರಿಗೆ ಚಿಕಿತ್ಸೆ ಲಭ್ಯತೆ) ಅನುಗುಣವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನ ನಡೆಯಲಿದೆ. ಈ ವಿಷಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಬೇಕು ಎಂಬುದು ಸರಕಾರದ ಆಶಯವಾಗಿದೆ.
ಪ್ರಸಕ್ತ ವರ್ಷದ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಲಸಿಕೆ ಹಾಕುವ ಕಾರ್ಯಕ್ರಮ ಪ್ರಕಟಿಸಿ ಹಣ ತೆಗೆದಿಡಲಾಗಿದೆ. ಈ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷದ 14 ವರ್ಷ ಪೂರೈಸುವ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಮುಂಬರುವ ದಿನಗಳಲ್ಲಿ ಈ ಲಸಿಕೆಯ ಬೆಲೆ ತಗ್ಗುವ ಸಾಧ್ಯತೆ ಇದ್ದು, ಎಲ್ಲಾ ಹೆಣ್ಣು ಮಕ್ಕಳಿಗೂ ಇದು ಲಭ್ಯವಾಗಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದರು.
ಇದನ್ನೂ ನೋಡಿ: ರಂಗಭೂಮಿ ದಿನ | ಜರ್ನಿ ಥಿಯೇಟರ್ ತಂಡದಿಂದ ರಂಗಗೀತೆಗಳು Janashakthi Media