ನವದೆಹಲಿ: ಬಡವರಿಗೆ, ಅದರಲ್ಲೂ ಮಹಿಳೆಯರಿಗೆ ಸ್ವಲ್ಪಮಟ್ಟಿಗಾದರೂ ಪರಿಹಾರ ಒದಗಿಸುವ ಸ್ಕೀಮುಗಳನ್ನು ‘ಉಚಿತ ಕೊಡುಗೆಗಳು’ ಎನ್ನುತ್ತ, ಅವುಗಳಿಂದಾಗಿ ಮತ್ತು ಉಚಿತ ಪಡಿತರದಿಂದಾಗಿ ಜನರು, ಅದರಲ್ಲೂ ಮಹಿಳೆಯರು ಶ್ರಮಪಡಲು, ಕೆಲಸ ಮಾಡಲು ಸಿದ್ಧರಾಗುತ್ತಿಲ್ಲ, ಕೃಷಿಕರಿಗೆ ಕೂಲಿಯಾಳುಗಳು ಸಿಗುತ್ತಿಲ್ಲ ಎಂದು ಸುಪ್ರಿಂ ಕೋರ್ಟಿನ ನ್ಯಾಯ ಮೂರ್ತಿ ಬಿ.ಆರ್.ಗವಾಯಿ ಟಿಪ್ಪಣಿ ಮಾಡಿದರು ಎಂದು ವರದಿಯಾಗಿವೆ.
ಈ ಟಿಪ್ಪಣಿಗಳು ಸತ್ಯದೂರವಾದವುಗಳು ಎಂದು ಮಾಜಿ ರಾಜ್ಯಸಭಾ ಸದಸ್ಯೆ ಮತ್ತು ಸಿಪಿಐ(ಎಂ)ನ ಹಿರಿಯ ಮುಖಂಡರಾದ ಬೃಂದಾಕಾರಟ್ ಈ ಕುರಿತು ನ್ಯಾಯಮೂರ್ತಿಗಳಿಗೆ ಬರೆದಿರುವ ಬಹಿರಂಗ ಪತ್ರ ಬರೆದು ಹೇಳಿದ್ದಾರೆ.
“ನಿಮ್ಮ ಟಿಪ್ಪಣಿಗಳು ಭಾರತದ ಶ್ರಮಪಟ್ಟು ದುಡಿಯುವ ಮಹಿಳೆಯರಿಗೆ ನ್ಯಾಯ ಒದಗಿಸುವುದಿಲ್ಲ. ಅಷ್ಟೇ ಅಲ್ಲ, ವ್ಯಾಪಕವಾಗಿರುವ ನಿರುದ್ಯೋಗ, ಲಭ್ಯವಿರುವ ಕೆಲಸದ ಅನಿಶ್ಚಿತ ಸ್ವರೂಪ ಮತ್ತು ಕಡಿಮೆಕೂಲಿಗಳೀಂದಾಗಿ ಭಾರತದ ಶ್ರಮಜೀವಿ ಜನರು ಬದುಕುಳಿಯಲು ಎದುರಿಸುತ್ತಿರುವ ಕಠಿಣ ಹೋರಾಟವನ್ನು ಅವು ಗುರುತಿಸುವುದಿಲ್ಲ. ದೇಶದ ಅತ್ಯುನ್ನತ ನ್ಯಾಯಾಲಯವು ಮಾಡಿರುವುದೆಂದು ವರದಿಯಾಗಿರುವ ಟಿಪ್ಪಣಿಗಳ ಮೂಲಕ ಬಡವರ ಘನತೆಯನ್ನು ಕಳಚಿ ಹಾಕಬಾರದು” ಎಂದಿರುವ ಬೃಂದಾಕಾರಟ್ ಅವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಉಚಿತ ಕೊಡುಗೆಗಳು ಎಂದು ಕರೆಯಲ್ಪಡುವವುಗಳು ಕನಿಷ್ಠ ಕೂಲಿ ಮತ್ತು ಇತರ ಕಾರ್ಮಿಕರ ಹಕ್ಕುಗಳ ಅನುಷ್ಠಾನವಾಗದಿರುವುದಕ್ಕೆ ಒಂದು ಕಳಪೆ ಪರಿಹಾರವಾಗಿದೆವೆಯಷ್ಟೇ. ಇವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ, ವಿಶೇಷವಾಗಿ ವಿಶ್ವದ ಅತ್ಯಂತ ಅಸಮಾನ ಸಮಾಜಗಳಲ್ಲಿ ಒಂದಾದ ನಮ್ಮಂತಹ ದೇಶದಲ್ಲಿ, ಪೂರೈಸಬೇಕಾದ ಸಾಂವಿಧಾನಿಕ ಅವಶ್ಯಕತೆಗಳು ಎಂದೂ ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಉಲ್ಬಣಗೊಂಡ ಮಂಗನ ಕಾಯಿಲೆ: ಒಂದೇ ದಿನ ನಾಲ್ವರಲ್ಲಿ ದೃಢ
ಅವರ ಬಹಿರಂಗ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
“ಶ್ರಮಿಕ ವರ್ಗಗಳಲ್ಲಿ ನಡುವೆ, ವಿಶೇಷವಾಗಿ ಬಡ ಮಹಿಳೆಯರ ನಡುವೆ ಸಾಮಾಜಿಕ ಮತ್ತು ರಾಜಕೀಯ ಕೆಲಸಗಳಲ್ಲಿ ವಿವಿಧ ರೀತಿಗಳಲ್ಲಿ ತೊಡಗಿಸಿಕೊಂಡಿರುವ ಒಬ್ಬ ವ್ಯಕ್ತಿಯಾಗಿ ನಾನು ನಿಮಗೆ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ವಸತಿಹೀನರ ಹಕ್ಕುಗಳ ಕುರಿತ ಅರ್ಜಿಯ ವಿಚಾರಣೆಯ ಸಮಯದಲ್ಲಿ ನೀವು “ಉಚಿತ ಕೊಡುಗೆಗಳ” ಬಗ್ಗೆ ಮಾಡಿದಿರಿ ಎಂದು ವರದಿಯಾಗಿರುವ ಟಿಪ್ಪಣಿಗಳಿಗೆ ಇದು ಸಂಬಂಧಿಸಿದೆ.
ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಕಟವಾಗಿರುವ ಈ ಟಿಪ್ಪಣಿಗಳು ನೀವು “ಉಚಿತ ಕೊಡುಗೆಗಳು” ಎಂದು ಉಲ್ಲೇಖಿಸಿರುವುದನ್ನು ಪಡೆಯುವವರ ವಿರುದ್ಧ ಸಾಮಾಜಿಕ ಅಭಿಪ್ರಾಯವನ್ನು ಪೂರ್ವಾಗ್ರಹ-ಪೀಡಿತಗೊಳಿಸಬಹುದು ಎಂಬ ಕಾರಣಕ್ಕೆ ಈ ಪತ್ರ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಒಂದು ಅರ್ಜಿ ಬಾಕಿ ಉಳಿದಿದೆ ಮತ್ತು ತೀರ್ಪಿಗಾಗಿ ಕಾಯುತ್ತಿದೆ ಎಂದು ನನಗೆ ತಿಳಿದಿದೆ. ಆದರೆ ಕೆಲವು ಟಿಪ್ಪಣಿಗಳ ಮರುಪರಿಶೀಲನೆಗಾಗಿ.ಈ ಪತ್ರದ ಮೂಲಕ ನನ್ನ ಮನವಿ.
ಸರ್, ನೀವು “ದುರದೃಷ್ಟವಶಾತ್, ಚುನಾವಣೆಗಳ ಸಂದರ್ಭದಲ್ಲಿ ಬರುವ ಈ ಉಚಿತ ಕೊಡುಗೆಗಳು… ಯಾವುದೋ ಲಾಡ್ಕಿ ಬಹಿನ್ ಮತ್ತು ಇತರ ಯಾವುದೋ ಯೋಜನೆಯಿಂದಾಗಿ, ಜನರು ಕೆಲಸ ಮಾಡಲು ಸಿದ್ಧರಾಗುತ್ತಿಲ್ಲ. ಅವರಿಗೆ ಉಚಿತ ಪಡಿತರ ಸಿಗುತ್ತಿದೆ, ಅವರಿಗೆ ಯಾವುದೇ ಕೆಲಸವಿಲ್ಲದೆ ಹಣ ಸಿಗುತ್ತಿದೆ, ಅವರು ಏಕೆ ಕೆಲಸ ಮಾಡಬೇಕು?… ಬದಲಿಗೆ ಅವರನ್ನು ಸಮಾಜದ ಮುಖ್ಯವಾಹಿನಿಯ ಭಾಗವನ್ನಾಗಿ ಮಾಡಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ನೀಡುವುದು ಉತ್ತಮವಲ್ಲವೇ?” ಎಂದೂ, “ನಾನು ನಿಮಗೆ ಪ್ರಾಯೋಗಿಕ ಅನುಭವಗಳ ಬಗ್ಗೆ ಹೇಳುತ್ತಿದ್ದೇನೆ.
ಈ ಉಚಿತ ಕೊಡುಗೆಗಳಿಂದಾಗಿ, ಕೆಲವು ರಾಜ್ಯಗಳು ನೀಡುತ್ತಿರುವ ಉಚಿತ ಪಡಿತರದಿಂದಾಗಿ ಜನರು ಕೆಲಸ ಮಾಡಲು ಬಯಸುವುದಿಲ್ಲ. ನಾನು ಕೃಷಿಕ ಕುಟುಂಬದಿಂದ ಬಂದಿದ್ದೇನೆ. ಮಹಾರಾಷ್ಟ್ರದಲ್ಲಿ ಚುನಾವಣೆಗೆ ಮುನ್ನವಷ್ಟೇ ಪ್ರಕಟಿಸಿದ ಉಚಿತ ಕೊಡುಗೆಗಳಿಂದಾಗಿ, ರೈತರಿಗೆ ಕೂಲಿಯಾಳುಗಳು ಸಿಗುತ್ತಿಲ್ಲ. ಎಲ್ಲರೂ ಮನೆಯಲ್ಲಿ ಉಚಿತವಾಗಿ ಕೊಡುಗೆಗಳನ್ನು ಪಡೆಯುತ್ತಿರುವಾಗ, ಅವರು ಏಕೆ ಕೆಲಸ ಮಾಡಲು ಬಯಸುತ್ತಾರೆ?”ಎಂದೂ ಹೇಳಿರುವುದಾಗಿ ವರದಿಯಾಗಿದೆ.
ನೀವು ಹೇಳಿರುವ “ಲಾಡ್ಕಿ-ಬೆಹೆನ್ ಯೋಜನೆ” ಬಹುಶಃ ಒಂಬತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ 1000 ರಿಂದ 2000 ರೂಪಾಯಿಗಳ ವರೆಗಿನ ನೇರ ನಗದು ಪ್ರಯೋಜನ ವರ್ಗಾವಣೆಯನ್ನು ಸೂಚಿಸುತ್ತದೆ; ಚುನಾವಣಾ ಪೂರ್ವ ಭರವಸೆಗಳನ್ನು ನೋಡಿದರೆ, ಇಂತಹ ರಾಜ್ಯಗಳ ಸಂಖ್ಯೆ, ಕನಿಷ್ಠ 12 ಕ್ಕೆ ಏರುವ ನಿರೀಕ್ಷೆಯಿದೆ. ಈ ಹಣದ ಕಾರಣದಿಂದಾಗಿ, ಜನರು-ಮಹಿಳಾ ಸಂಬಂಧಿ ಯೋಜನೆಗಳ ಸಂದರ್ಭದಲ್ಲಿ, ಮಹಿಳೆಯರು- ಕೆಲಸ ಮಾಡಲು ಸಿದ್ಧರಿಲ್ಲ ಎಂದು ನೀವು ಹೇಳಿದ್ದೀರಿ ಎಂದು ವರದಿಯಾಗಿದೆ. ಇದು ವಾಸ್ತವಿಕವಾಗಿ ತಪ್ಪಾಗಿದೆ.
ಏಕೆಂದರೆ ಹೆಚ್ಚಿನ ಮಹಿಳೆಯರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ – ಮನೆಕೆಲಸದಲ್ಲಿ ಮತ್ತು ಕೃಷಿ ಕಾರ್ಯಾಚರಣೆಗಳು ಸೇರಿದಂತೆ ಕುಟುಂಬ ಉದ್ಯಮಗಳಲ್ಲಿಯೂ ಸಹ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರು ಕೆಲಸ ಮಾಡುತ್ತಿಲ್ಲ ಎಂಬುದಲ್ಲ ಇಲ್ಲಿ ಪ್ರಶ್ನೆ, ಬದಲಿಗೆ ಅವರು ಯಾವುದೇ ಸಂಭಾವನೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂಬುದೇ ಪ್ರಶ್ನೆ. ಸರಾಸರಿ ಭಾರತೀಯ ಮಹಿಳೆಯರು ಪ್ರತಿದಿನ 7.2 ಗಂಟೆಗಳ ಕಾಲ ಸಂಬಳ-ರಹಿತ ಮನೆಕೆಲಸದಲ್ಲಿ ಕಳೆಯುತ್ತಾರೆ. ಇದು ವಾರಕ್ಕೆ ಸುಮಾರು 50 ಗಂಟೆಗಳವರೆಗಿನ ಕೆಲಸವಾಗುತ್ತದೆ ಮನೆಯ ಹೊರಗೆ ಸಂಭಾವನೆ ಪಡೆಯುವ ಕೆಲಸ ಮಾಡುವ ಮಹಿಳೆಯರಿಗೆ, ಮನೆಕೆಲಸದ ಹೊರೆಯು ಅವರು ಪ್ರತಿದಿನ ಕೆಲಸ ಮಾಡುವ ಗಂಟೆಗಳ ಸಂಖ್ಯೆಗೆ ಸೇರುತ್ತದೆ.
2023-24 ರ ಎಸ್‌ಬಿಐ ಸಮೀಕ್ಷೆಯ ಪ್ರಕಾರ, ಮಹಿಳೆಯರ ಸಂಬಳ-ರಹಿತ ಕೆಲಸದ ಪ್ರಮಾಣವನ್ನು ಹಣದ ರೂಪಕ್ಕೆ ಪರಿವರ್ತಿಸಿದರೆ, ಅದು ವರ್ಷಕ್ಕೆ 22 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ, ಇದು ಆ ವರ್ಷದ ದೇಶದ ಜಿಡಿಪಿಯ ಸುಮಾರು 7 ಶೇ. ಎಂದು ಅಂದಾಜಿಸಲಾಗಿದೆ. ಕುಟುಂಬದ ಉಳಿವಿಗೆ ಮುಖ್ಯವಾಗಿರುವ ಭಾರತದ ಮಹಿಳೆಯರ ಈ ಸಂಬಳರಹಿತ ಕೆಲಸದ ಪ್ರಮಾಣ ವಿಶ್ವದಲ್ಲೇ ಅತ್ಯಧಿಕವಾಗಿದೆ. ಮಹಿಳೆಯರ ಈ ಕೆಲಸವನ್ನು ಸಾಮಾಜಿಕವಾಗಿ ಗುರುತಿಸಲಾಗಿಲ್ಲ ಮತ್ತು “ಮಹಿಳೆಯರು ಕೆಲಸ ಮಾಡುತ್ತಿಲ್ಲ” ಎಂದು ಕೀಳಾಗಿ ಕಾಣಲಾಗುತ್ತಿದೆ.
ವಿಷಾದದ ಸಂಗತಿಯೆಂದರೆ, ನಿಮ್ಮ ವರದಿಯಾದ ಟಿಪ್ಪಣಿಗಳು ಇಂತಹ ಕಲ್ಪನೆಗಳನ್ನು ಹೆಚ್ಚಿಸುತ್ತದೆ. ಈ ಯೋಜನೆಗಳ ಮೂಲಕ ಮಹಿಳೆಯರಿಗೆ ನೀಡುವ ಅಲ್ಪ ಮತ್ತು ಅಸಮರ್ಪಕ ಸ್ಟೈಫಂಡ್ ಅವರ ಹಕ್ಕು, ಸಾಮಾಜಿಕ ಪರಿಹಾರವಾಗಿ ಅದನ್ನು ಪರಿಗಣಿಸಬೇಕೇ ಹೊರತು, ,ಒಂದು ಔದಾರ್ಯ ಅಥವಾ ಉಚಿತ ಕೊಡುಗೆಯೆಂದಲ್ಲ. ರಾಜಕೀಯ ಪಕ್ಷಗಳು ಸಿನಿಕತನದಿಂದ, ಒಂದು ಹಕ್ಕನ್ನು ಒಂದು ಪ್ರಯೋಜನವೆಂದು ತಿರುಗಿಸಬಹುದು ಎಂಬುದು ಬೇರೆ ವಿಷಯ. ಕೇವಲ ಚುನಾವಣೆಯ ಮುನ್ನಾದಿನವಷ್ಟೇ ಮಹಿಳೆಯರ ಮತ ಪಡೆಯಲು ಯಾವುದೇ ರಾಜಕೀಯ ಪಕ್ಷ ಒಂದು ಯೋಜನೆಯನ್ನು ಆರಂಭಿಸುವುದನ್ನು ಟೀಕಿಸಿದರೆ ಅದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಮಹಿಳೆಯರು ಇಂತಹ ಯೋಜನೆಗಳಿಂದಾಗಿ “ಕೆಲಸ ಮಾಡ ಬಯಸುವುದಿಲ್ಲ “ ಎಂದು ಆಪಾದಿಸುವುದು ಸತ್ಯಸಂಗತಿಯಲ್ಲ, ಅದು ಮಹಿಳೆಯರಿಗೆ ಮಾಡುವ ಅನ್ಯಾಯವಾಗಿದೆ.
ಎತ್ತಿರುವ ಮತ್ತೊಂದು ಪ್ರಶ್ನೆಯೆಂದರೆ “ಉಚಿತ ಪಡಿತರ”. “ಬಹುಶಃ ಗೌರವಾನ್ವಿತ ನ್ಯಾಯಾಧೀಶರಿಗೆ ಸತ್ಯಸಂಗತಿಗಳ ಅರಿವಿಲ್ಲದಿರಬಹುದು. ಅವರು ಹೇಳುವ ಉಚಿತ ಪಡಿತರವು ಇಡೀ ತಿಂಗಳಿಗೆ ಒಬ್ಬ ವ್ಯಕ್ತಿಗೆ ಕೇವಲ 5 ಕೆಜಿ, ಅದು ಧಾನ್ಯಗಳು ಮಾತ್ರ, ಭಾರತದಲ್ಲಿ ಸರಾಸರಿ ತಲಾ ಧಾನ್ಯ ಬಳಕೆ ತಿಂಗಳಿಗೆ 9 ಕೆಜಿ ಎಂದು ಅಂದಾಜಿಸಲಾಗಿದೆ, ಇದು ಅದಕ್ಕಿಂತ ಕಡಿಮೆ. ನಿಜ ಹೇಳಬೇಕೆಂದರೆ, ಆಹಾರ ಹಣದುಬ್ಬರವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ, ಇದು ಕುಟುಂಬ ಬಜೆಟ್‌ಗಳನ್ನು ಅಲ್ಲೋಲಕಲ್ಲೋಲ ಮಾಡುತ್ತಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಪೌಷ್ಟಿಕ ಜನಸಂಖ್ಯೆಯನ್ನು ಹೊಂದಿದೆ. ಈ ಕಾರಣಗಳಿಂದಾಗಿಯೇ ಕಾಳಜಿ ಹೊಂದಿರುವ ನಾಗರಿಕರಿಗೆ ಮತ್ತು ಸಂಸ್ಥೆಗಳು ಪಡಿತರ ವ್ಯವಸ್ಥೆಯಲ್ಲಿ ಕೈಗೆಟುಕುವ ಬೆಲೆಗಳಲ್ಲಿ ಪ್ರೋಟೀನ್‌ಗಳು ಮತ್ತು ಹೆಚ್ಚು ಪೌಷ್ಟಿಕ ಆಹಾರವನ್ನು ಖಚಿತಪಡಿಸಲು ಇನ್ನಷ್ಟು ವಸ್ತುಗಳನ್ನು ಪಡಿತರ ವ್ಯವಸ್ಥೆಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದೇನೇ ಇರಲಿ, ಉಚಿತ ಪಡಿತರದಿಂದಷ್ಟೇ ಯಾರೂ ಬದುಕುಳಿಯಲು ಸಾಧ್ಯವಿಲ್ಲ.
ಸರ್, ನೀವು ಒಬ್ಬ ರೈತನಾಗಿ ನಿಮ್ಮ ವೈಯಕ್ತಿಕ ಅನುಭವವನ್ನು ಉಲ್ಲೇಖಿಸಿ “ಕೃಷಿಕರಿಗೆ ಕೂಲಿಯಾಳುಗಳು ಸಿಗುತ್ತಿಲ್ಲ, ಏಕೆಂದರೆ ಅವರು ಅದನ್ನು ಉಚಿತವಾಗಿ ಪಡೆಯುತ್ತಿದ್ದರೆ ಅವರು ಏಕೆ ಕೆಲಸ ಮಾಡುತ್ತಾರೆ?” ಎಂಬ ತೀರ್ಮಾನವನ್ನು ಹೇಳಿದ್ದೀರಿ. 100 ದಿನಗಳ ಖಾತರಿ ಕೆಲಸದ ಕಾನೂನನ್ನು ವಿರೋಧಿಸುವವರು, ವಿಶೇಷವಾಗಿ ಮಹಾರಾಷ್ಟ್ರದವರು ನೀಡುವ ಕಾರಣಗಳಲ್ಲಿ ಇದು ಒಂದು. ಈ ಯೋಜನೆಯು ಕೂಲಿಯಾಳುಗಳನ್ನು ಆಕರ್ಷಿಸುತ್ತದೆ, ಅದರಿಂದಾಗಿ ಕೃಷಿಕರಿಗೆ ಬೇಕಾದ ಆಳುಗಳು ಸಿಗುತ್ತಿಲ್ಲ ಎಂದು ಹೇಳಲಾಗುತ್ತದೆ.
ವಾಸ್ತವವಾಗಿ ಮನರೇಗ ಸೈಟ್‌ಗಳಲ್ಲಿನ ಕೆಲಸವು ನೋಡಿದರೆ, ಮುಖ್ಯವಾಗಿ ಮಣ್ಣೆತ್ತುವ ಕೆಲಸವು ಕೃಷಿ ಕೆಲಸಕ್ಕಿಂತ ಹೆಚ್ಚು ಕಷ್ಟಕರವಾಗಿರುತ್ತದೆ. ಇದು ತುಂಡು ದರದ ಕೆಲಸವಾಗಿರುವುದರಿಂದ ಕೆಲವೊಮ್ಮೆ ಉತ್ಪಾದಕತೆಯ ಮಾನದಂಡವು ತುಂಬಾ ಹೆಚ್ಚಾಗಿರುತ್ತದೆ, ಒಬ್ಬ ವ್ಯಕ್ತಿಯು ದಿನಕ್ಕೆ 2000 ಕೆಜಿ ಮಣ್ಣನ್ನು ಅಗೆಯಬೇಕಾಗುತ್ತದೆ. ಆದಾಗ್ಯೂ ಕಾನೂನು ಪುರುಷರು ಮತ್ತು ಮಹಿಳೆಯರ ನಡುವೆ ಸಮಾನ ವೇತನವನ್ನು ಖಚಿತಪಡಿಸುತ್ತದೆ. ಕೃಷಿಯಲ್ಲಿ ಹಾಗಲ್ಲ. ಕೂಲಿಯಾಳುಗಳು ಉಚಿತ ಪಡಿತರ ಅಥವಾ ಇತರ ಉಚಿತ ಕೊಡುಗೆಗಳನ್ನು ಪಡೆಯುತ್ತಿರುವುದರಿಂದ ಕೆಲಸ ಮಾಡುವುದಿಲ್ಲ ಎಂದೇನೂ ಅಲ್ಲ. ಬದಲಿಗೆ, ಕೃಷಿ ಕೂಲಿಕಾರರಿಗೆ ಕೂಲಿಗಳು ಹೆಚ್ಚಿಲ್ಲವಾದ್ದರಿಂದ ಅಥವ ಕಡಿಮೆಯಾಗಿರುವುದರಿಂದಾಗಿ. ಇತ್ತೀಚಿನ ಆರ್ಥಿಕ ಸಮೀಕ್ಷೆಯೇ ಗ್ರಾಮೀಣ ಕೂಲಿಗಳು ಸ್ಥಗಿತಗೊಂಡಿವೆ ಅಥವಾ ಕಡಿಮೆಯಾಗಿವೆ ಎಂದು ಸೂಚಿಸುತ್ತದೆ. ಆದ್ದರಿಂದ, ಕಾರ್ಮಿಕರು ಉಚಿತ ಕೊಡುಗೆಗಳನ್ನು ಪಡೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳುವುದು ಮತ್ತೆ ವಾಸ್ತವಿಕವಾಗಿ ಸರಿಯಲ್ಲ. ಇದಕ್ಕೆ ಬದಲಾಗಿ ಉಚಿತ ಕೊಡುಗೆಗಳು ಎಂದು ಕರೆಯಲ್ಪಡುವವುಗಳು ಕನಿಷ್ಠ ಕೂಲಿ ಮತ್ತು ಇತರ ಕಾರ್ಮಿಕರ ಹಕ್ಕುಗಳ ಅನುಷ್ಠಾನವಾಗದಿರುವುದಕ್ಕೆ ಒಂದು ಕಳಪೆ ಪರಿಹಾರವಾಗಿದೆ.
ಭಾರತ ಸರ್ಕಾರದ ಕಲ್ಯಾಣ ಯೋಜನೆಗಳು ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾದ ಸಾಂವಿಧಾನಿಕ ಅವಶ್ಯಕತೆಗಳು, ವಿಶೇಷವಾಗಿ ವಿಶ್ವದ ಅತ್ಯಂತ ಅಸಮಾನ ಸಮಾಜಗಳಲ್ಲಿ ಒಂದಾದ ನಮ್ಮಂತಹ ದೇಶದಲ್ಲಿ.
ಸರ್, ನಿಮ್ಮ ಟಿಪ್ಪಣಿಗಳು ಭಾರತದ ಶ್ರಮಪಟ್ಟು ದುಡಿಯುವ ಮಹಿಳೆಯರಿಗೆ ನ್ಯಾಯ ಒದಗಿಸುವುದಿಲ್ಲ. ಅಷ್ಟೇ ಅಲ್ಲ, ವ್ಯಾಪಕವಾಗಿರುವ ನಿರುದ್ಯೋಗ, ಲಭ್ಯವಿರುವ ಕೆಲಸದ ಅನಿಶ್ಚಿತ ಸ್ವರೂಪ ಮತ್ತು ಕಡಿಮೆಕೂಲಿಗಳು ಭಾರತದ ಶ್ರಮಜೀವಿ ಜನರು ಬದುಕುಳಿಯಲು ಎದುರಿಸುತ್ತಿರುವ ಕಠಿಣ ಹೋರಾಟವನ್ನು ಅವು ಗುರುತಿಸುವುದಿಲ್ಲ. ದೇಶದ ಅತ್ಯುನ್ನತ ನ್ಯಾಯಾಲಯವು ಮಾಡಿರುವುದೆಂದು ವರದಿಯಾಗಿರುವ ಟಿಪ್ಪಣಿಗಳ ಮೂಲಕ ಬಡವರ ಘನತೆಯನ್ನು ಕಳಚಿ ಹಾಕಬಾರದು.
ದಯವಿಟ್ಟು ನಿಮ್ಮ ಟಿಪ್ಪಣಿಗಳನ್ನು ಮರುಪರಿಶೀಲಿಸಿ ಎಂದು ನಾನು ವಿನಂತಿಸುತ್ತೇನೆ ಎಂದರು.
ಇದನ್ನೂ ನೋಡಿ: Union Budget 2025-2026 Budget neglected women- they are the worst sufferers – Mariam Dhawale