ಬೆಂಗಳೂರು : ಸಿಐಟಿಯು ಮುತುವರ್ಜಿಯಿಂದ ಕೋವಿಡ್ ನೆರವು ಅಭಿಯಾನ ಅಡಿಯಲ್ಲಿ ಬಸವನಗುಡಿಯ ಸಿಐಟಿಯು ಕಚೇರಿ ಜ್ಯೋತಿಬಸು ಭವನದಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸೇವಾ ಕೇಂದ್ರಕ್ಕೆ ಇಂದು ಚಾಲನೆ ನೀಡಲಾಯಿತು.
ವರ್ಚುವಲ್ ಮಾದರಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸಿಐಟಿಯು ಸಂಘಟನೆ ಇಂತಹ ದಿಟ್ಟ ಕಾರ್ಯಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿದರು.
ಐದು ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳ ಕ್ಲಿನಿಕ್ ಇದಾಗಿದ್ದು, ಕಾರ್ಮಿಕ ಆಯುಕ್ತ ಶ್ರೀ ಅಕ್ರಂಪಾಷ ಖುದ್ದು ಭೇಟಿ ನೀಡಿ ಪರಿಶೀಲಿನೆ ಮಾಡಿ ಸಿಐಟಿಯು ಕಾರ್ಯವನ್ನು ಶ್ಲಾಘಿಸಿದರು. ಅಸಂಘಟಿತ ವಲಯದ ಕಾರ್ಮಿಕರನ್ನು ದೃಷ್ಟಿಯಲ್ಲಿಟ್ಟು ಈ ಕೇಂದ್ರ ಸ್ಥಾಪಿಸಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ನಿಮ್ಮ ಅಕ್ಕಪಕ್ಕದಲ್ಲಿನ ಕೋವಿಡ್ ಪ್ರಕರಣಗಳನ್ನು ಸುಲಭವಾಗಿ ತಿಳಿಯಬಹುದು! ಹೇಗೆ ?
ಈಗಾಗಲೇ 11 ಜನ ವೈದ್ಯರನ್ನೊಳಗೊಂಡ ಆನ್‌ಲೈನ್ ಮೆಡಿಕಲ್ ಕೇರ್ ಕ್ಲಿನಿಕ್, 7 ಜನ ದಾದಿಯರನ್ನೊಳಗೊಂಡ ಆನ್‌ಲೈನ್ ನರ್ಸಿಂಗ್ ಕೇರ್ ಕ್ಲಿನಿಕ್ , ಉಚಿತ ಮೆಡಿಕಲ್ ಕಿಟ್ ಮತ್ತು ಆನ್‌ಲೈನ್ ಆಪ್ತ ಸಮಾಲೋಚನೆ ಕ್ಲಿನಿಕ್ ಆರಂಭಗೊಂಡು ಜನರಿಗೆ ಸೇವೆ ನೀಡುತ್ತಿವೆ. ಬೆಂಗಳೂರಿನ 26 ಕೇಂದ್ರಗಳಲ್ಲಿ ಅಗತ್ಯ ಇರುವ ಕೊರೊನಾ ಸೋಂಕಿತರಿಗೆ ಉಚಿತ ಔಷಧಿ ವಿತರಿಸಲಾಗುತ್ತಿದೆ. ರಾಜ್ಯದೆಲ್ಲೆಡೆ ಈ ಸೇವೆಯನ್ನು ವಿಸ್ತರಿಸಲು ಪ್ರಯತ್ನ ನಡೆದಿದೆ.
ತಜ್ಞ ವೈದ್ಯರೊಂದಿಗೆ ವೆಬಿನಾರ್ ಮೂಲಕ ಕೋವಿಡ್ ಬಗ್ಗೆ ಅರಿವು ಮೂಡಿಸಲು ಪ್ರಯತ್ನ ನಡೆದಿದೆ. ಬಾಗೇಪಲ್ಲಿಯ ಡಾ.ಅನಿಲ್ ಕುಮಾರ್ ಅವುಲುಪ್ಪ, ರಾಜೀವ್ ಗಾಂಧಿ ಯೂನಿವರ್ಸಿಟಿ ನಿವೃತ್ತ ಉಪ ಕುಲಪತಿ ಡಾ.ಪಿ.ಎಸ್.ಪ್ರಭಾಕರನ್, ಪ್ರಖ್ಯಾತ ಮನೋ ವೈದ್ಯರಾದ ಡಾ.ಸಿ.ಆರ್.ಚಂದ್ರಶೇಖರ್ ಇವರಿಂದ ಉಪನ್ಯಾಸಗಳು ನಡೆದಿವೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಸಿಐಟಿಯು ಅಧ್ಯಕ್ಷ ಎನ್ ಪ್ರತಾಪ್ ಸಿಂಹ ತಿಳಿಸಿದರು.
ಇದೇ ವೇಳೆ ಸನ್ ಸೆರಾ ಫೌಂಡೇಶನ್ ಟ್ರಸ್ಟಿ ಎಫ್. ಎ.ಸಿಂಗ್ವಿ , ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ , ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಮುಖಂಡರಾದ ಡಾ. ಕೆ ಪ್ರಕಾಶ್, ಟಿ.ಲೀಲಾವತಿ ಸೇರಿದಂತೆ ಅನೇಕರಿದ್ದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಆಕ್ಸಿಜನ್ ಯಾರಿಗಾಗಿ? ಈ ಸೇವೆ ಪಡೆಯುವುದು ಹೇಗೆ? : ಆಕ್ಸಿಜನ್ ಸೇವಾ ಕೇಂದ್ರವು ತುರ್ತು ಅವಶ್ಯಕತೆ ಇದ್ದವರಿಗೆ ಹಾಗು ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರದಲ್ಲಿ ಕೆಲವರಿಗೆ ಉಸಿರಾಟದ ತೊಂದರೆ, ಆಕ್ಸಿಜನ್ ಪ್ರಮಾಣದಲ್ಲಿ ಏರಿಳಿತ ಕಂಡು ಬಂದಿದ್ದು ಇಂತಹವರಿಗೆ ಇದರ ಪ್ರಯೋಜನ ಸಿಗಲಿದೆ. ತಜ್ಞ ವೈದ್ಯರ ತಂಡ ರೋಗಿಯನ್ನು ತಪಾಸಣೆ ನಡೆಸಿ, ಶಿಫಾರಸ್ಸು ಮಾಡಿದವರಿಗೆ ಆಮ್ಲಜನಕ ನೀಡಲಾಗುವುದು. ವೈದ್ಯರ ಶಿಫಾರಸ್ಸು ಇಲ್ಲದವರಿಗೆ ಇದನ್ನು ನೀಡಲಾಗುವುದಿಲ್ಲ. ನುರಿತ ನರ್ಸ್ ಗಳು ಹಾಗು ತರಬೇತಿ ಪಡೆದ ಸ್ವಯಂಸೇವಕರು ರೋಗಿಗಳಿಗೆ ನೆರವಾಗಲಿದ್ದಾರೆ.
ಈ ಸೌಲಭ್ಯ ಪಡೆಯಲು ಈ ಕೆಳಕಂಡವರನ್ನು ಸಂಪರ್ಕಿಸಬಹುದಾಗಿದೆ.
ಅನು – 944836 51947
ದಿಲೀಪ್ ಶೆಟ್ಟಿ – 81472 22507
ಪ್ರಜ್ವಲ್ ಪಿ.ಎಸ್. – 86186 72742