ಬೆಂಗಳೂರು: ಚೀಟಿ ವ್ಯವಹಾರ ನಡೆಸಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಬಾಣವರದ ಕೆರೆಗುಡ್ಡದಹಳ್ಳಿಯಲ್ಲಿ ನಡೆದಿದೆ.
ಚೀಟಿ ಹಾಕಿದ್ದ ಕೋಟ್ಯಾಂತರ ರೂಪಾಯಿಯನ್ನು ತೆಗೆದುಕೊಂಡು ಇಡೀ ಕುಟುಂಬವೇ ಪರಾರಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಿಶ್ವನಾಥ್ ಹಾಗೂ ಈತನ ಸಹೋದರ ಮಂಜುನಾಥ್ ಸೇರಿ ಪತ್ನಿ ವನಿತಾ, ಮುನಿಸ್ವಾಮಿ, ಲಕ್ಷ್ಮಿ ನಾರಾಯಣ್ ಸೇರಿ ಒಂದೇ ಕುಟುಂಬದ 8 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಉದ್ಯಮಿಗಳು, ವೈದ್ಯರು ಮತ್ತು ವಕೀಲರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಕುಟುಂಬ, ಸ್ವಂತ ಐಶಾರಾಮಿ ಮನೆ, ವಾಣಿಜ್ಯ ಮಳಿಗೆಯನ್ನು ತೋರಿಸಿ ಚೀಟಿ ಹಾಕಿಸಿಕೊಂಡು ಬರೋಬ್ಬರಿ 6 ಕೋಟಿಗೂ ಹೆಚ್ಚಿನ ಹಣ ವಂಚನೆ ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ಲೈಸನ್ಸ್ ಪಡೆದು ಕಮಿಷನ್ ಆಧಾರದ ಮೇಲೆ ಚೀಟಿ ನಡೆಸುತ್ತಿರುವುದಾಗಿ ವಿಶ್ವನಾಥ್ ಎಲ್ಲರನ್ನೂ ನಂಬಿಸಿದ್ದನು.
ಬರೋಬ್ಬರಿ 19 ಮಂದಿಯಿಂದ ಚೀಟಿ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಕಿಲಾಡಿ ಫ್ಯಾಮಿಲಿ ಚೀಟಿ ಮುಗಿದ ನಂತರ ಚೀಟಿ ಹಣ ನೀಡದೆ ಸತಾಯಿಸಿದ್ದಾರೆ. ಎಲ್ಲರಿಂದಲೂ ಸೇರಿ ಸುಮಾರು 6 ಕೋಟಿ ರೂ. ಚೀಟಿ ಹಣವನ್ನು ಕಟ್ಟಿಸಿಕೊಂಡು ವಂಚನೆ ಮಾಡಿದ್ದಾರೆ. ಹಣ ಕೊಡುವಂತೆ ಕೇಳಿದರೆ ಅವಾಚ್ಯ ಶಬ್ಧಗಳಿಂದ ಬೈಯುವುದು ಹಾಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ 19 ಜನರಿಂದ 6 ಕೋಟಿ ವಂಚನೆ ಮಾಡಿದ್ದಾರೆಂದು ದಾಖಲೆ ಸಮೇತ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಆ ಕುಟುಂಬ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.