ವಸಂತರಾಜ ಎನ್.ಕೆ.
ಫ್ರೆಂಚ್ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳ ಹಲವು ವಿಶ್ಲೇಷಣೆಗಳು ಬಂದಿವೆ . ಇವುಗಳಲ್ಲಿ ಪ್ರಧಾನವಾಗಿ ಕೇಳಿ ಬಂದಿದ್ದು – ಪ್ರೆಂಚ್ ರಾಜಕಾರಣ ನಡುಪಂಥೀಯತೆ ಮತ್ತು ಉಗ್ರಬಲಪಂಥೀಯತೆ ನಡುವೆ ಧ್ರುವೀಕರಣಗೊಂಡಿದೆ. ಉಗ್ರಬಲಪಂಥೀಯತೆಗೆ ಬೆಂಬಲ ಹೆಚ್ಚಾಗಿದೆ. ಆದರೂ ರಾಜಕಾರಣದಲ್ಲಿ ನಡುಪಂಥೀಯತೆಯ ಮುಖ್ಯಧಾರೆಯನ್ನು ಮ್ಯಾಕ್ರಾನ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮತದಾನದ ಸೂಕ್ಷ್ಮ ವಿಶ್ಲೇಷಣೆ ಮಾಡಿದರೆ ಒಟ್ಟಾರೆಯಾಗಿ ಹೀಗೆ ಹೇಳಬಹುದು – ನಡುಪಂಥೀಯರ ದುರಾಡಳಿತ ಮತ್ತು ಜನವಿರೋಧಿ ನೀತಿಗಳಿಂದ ಫ್ರೆಂಚ್ ರಾಜಕಾರಣ ಬಲಪಂಥೀಯತೆಯತ್ತ ಹೊರಳಿರುವುದು ನಿಜ.. ಮ್ಯಾಕ್ರಾನ್ ಮತ್ತು ನಡುಪಂಥೀಯತೆ ಗೆದ್ದರೂ ಸೋತು ಕುಸಿಯುತ್ತಿದೆ. ಎಡಪಂಥೀಯತೆ ಗಮನಾರ್ಹ ಮುನ್ನಡೆ ಸಾಧಿಸಿದೆ. ರಾಜಕಾರಣದಲ್ಲಿ ಮೊದಲ ಎರಡು ಸ್ಥಾನಗಳಿಗೆ ಎಡ ಮತ್ತು ಉಗ್ರಬಲಪಂಥೀಯತೆ ನಡುವೆ ಹಣಾಹಣಿ ನಡೆದಿದೆ. ಜೂನ್ ಪಾರ್ಲಿಮೆಂಟರಿ ಚುನಾವಣೆಗಳು ಇದನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಲಿವೆ.
ಫ್ರಾನ್ಸಿನಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರಾನ್ ಪುನರಾಯ್ಕೆಯಾಗಿದ್ದಾರೆ. ಅವರು ಎರಡನೆಯ ಸುತ್ತಿನಲ್ಲಿ ಶೇ. 58.5 ಮತ ಗಳಿಸಿ, ಶೇ. 41.5 ಮತ ಗಳಿಸಿದ ತಮ್ಮ ನವ-ಫ್ಯಾಸಿಸ್ಟ್ ಉಗ್ರ ಬಲಪಂಥೀಯ ಪ್ರತಿಸ್ಪರ್ಧಿ ಮರೀನ್ ಲಿ ಪೆನ್ ಅವರನ್ನು ಸುಲಭವಾಗಿ ಸೋಲಿಸಿದ್ದಾರೆ. ಎರಡನೆಯ ಸುತ್ತಿನಲ್ಲಿ ಸಮೀಕ್ಷೆಗಳ ಪ್ರಕಾರ ಇಬ್ಬರ ಮತಗಳಿಕೆ ಬಹಳ ಹತ್ತಿರವಿತ್ತು. 2017ರ ಎರಡನೆಯ ಸುತ್ತಿನಲ್ಲಿ ಇವೇ ಎರಡು ಅಭ್ಯರ್ಥಿಗಳಿದ್ದು ಮ್ಯಾಕ್ರಾನ್ ಮತಗಳಿಕೆ ಶೇ. 66ರಿಂದ ಶೇ. 7.5ರಷ್ಟು ಕುಸಿದಿದೆ. ಲಿ ಪೆನ್ ಅವರ ಮತಗಳಿಕೆ ಕಳೆದ ಬಾರಿಯ ಶೇ. 34ರಿಂದ ಶೇ.7.5ರಷ್ಟು ಏರಿಕೆಯಾಗಿದೆ. ಲಿ ಪೆನ್ ತಮ್ಮ ಪಕ್ಷ ಗೆದ್ದಿದೆ. ನಾವೇ ಫ್ರಾನ್ಸ್ ನ ಭವಿಷ್ಯವೆಂದು ಹೇಳಿಕೊಂಡಿದ್ದಾರೆ. ನಾವು ಸೋತೂ ಗೆದ್ದಿದ್ದೇವೆ ಎಂದಿದ್ದಾರೆ. ಮ್ಯಾಕ್ರಾನ್, ಹಾಗೆ ಯಾರೂ ಹೇಳದಿದ್ದರೂ, ಗೆದ್ದೂ ಸೋತಿದ್ದಾರೆ. ಮತಗಳಿಕೆ ಕುಸಿದದ್ದು ಮಾತ್ರವಲ್ಲದೆ ಇನ್ನೂ ಹಲವು ಅಂಶಗಳು ಈ ವಾಸ್ತವದತ್ತ ಬೊಟ್ಟು ಮಾಡುತ್ತಿವೆ.
ಇದನ್ನು ಓದಿ: ನವ-ಉದಾರವಾದವೂ ಮತ್ತು ಉಗ್ರ ಬಲ ಪಂಥವೂ ಹಾಗೂ ಕಾರ್ಪೊರೇಟ್-ಹಿಂದುತ್ವ ಮೈತ್ರಿಯೂ
ಎರಡನೆಯ ಸುತ್ತಿನ ಪ್ರಚಾರ ತೀವ್ರವಾಗುತ್ತಿದ್ದಂತೆ, ಫ್ರಾನ್ಸ್ ಮೊದಲ ನವ-ಫ್ಯಾಸಿಸ್ಟ್ ಉಗ್ರ ಬಲಪಂಥೀಯ ಅಧ್ಯಕ್ಷರನ್ನು ಆರಿಸಿದರೂ ಆಶ್ವರ್ಯ ಪಡಬೇಕಾಗಿಲ್ಲ ಎಂಬುದು ಫ್ರಾನ್ಸ್ ನೊಳಗೂ, ಯುರೋ ಕೂಟದಲ್ಲೂ, ಪಾಶ್ಚಿಮಾತ್ಯ ಕೂಟದಲ್ಲೂ ತೀವ್ರ ಕುತೂಹಲ ಆತಂಕ ಮೂಡಿಸಿತ್ತು. ಲಿ ಪೆನ್ ಉಕ್ರೇನ್ ಯುದ್ಧದಲ್ಲಿ ಯುರೋ ಕೂಟದ ಕೆಲವು ಧೋರಣೆಗಳನ್ನು ವಿರೋಧಿಸಿದ್ದು, ಆಕೆ ಅಧ್ಯಕ್ಷರಾದರೆ ಯುರೋ ಮತ್ತು ನಾಟೋ ಕೂಟದ ಉಕ್ರೇನ್ ಯುದ್ಧದ ಕುರಿತಾದ ಐಕ್ಯತೆಗೆ ಧಕ್ಕೆ ತರಬಹುದು ಎಂಬ ಆತಂಕ ಆಳುವವರನ್ನು ಆವರಿಸಿತ್ತು. ಅವರ ಆತಂಕ ಎಷ್ಟು ತೀವ್ರವಾಗಿತ್ತು ಎಂದರೆ ಜರ್ಮನ್, ಸ್ಪಾನಿಷ್ ಮತ್ತು ಪೋರ್ಚುಗೀಸ್ ಪ್ರಧಾನಿಗಳು ಅತ್ಯಧಿಕ ಪ್ರಸಾರದ ಪ್ರೆಂಚ್ ದೈನಿಕದಲ್ಲಿ ಜಂಟಿ ಲೇಖನ ಬರೆದು ಮ್ಯಾಕ್ರಾನ್ ಅವರನ್ನು ಆರಿಸಬೇಕು ಎಂದು ಫ್ರೆಂಚ್ ಮತದಾರರಿಗೆ ಮನವಿ ಮಾಡಿದರು! ಬೇರೆ ಯಾವ ದೇಶದಲ್ಲಾದರೂ ನಡೆದಿದ್ದರೆ, ಇದನ್ನು ದೇಶದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದು, ಸಾರ್ವಭೌಮತೆಯ ಉಲ್ಲಂಘನೆ ಎಂದು ಜಾಗತಿಕ ಮಾಧ್ಯಮಗಳು ಹುಯಿಲೆಬ್ಬಿಸುತ್ತಿದ್ದವು!
ಇನ್ನೊಂದು ಕಡೆ ಲಿ ಪೆನ್ ರ ವಲಸೆಗಾರ-ವಿರೋಧಿ, ಮುಸ್ಲಿಂ-ವಿರೋಧಿ, ಸಾಮಾಜಿಕ ಪ್ರತಿಗಾಮಿ ನೀತಿಗಳ ಕುರಿತು ಫ್ರಾನ್ಸ್ ನ ಬಹುಸಂಖ್ಯಾತ ದುಡಿಯುವ ಜನರಿಗೆ ಆತಂಕವಿತ್ತು. ಮ್ಯಾಕ್ರಾನ್ ಅವರ ದುಡಿಯುವ ಜನರಿಗೆ ವಿರೋಧಿಯಾದ ನವ-ಉದಾರವಾದಿ ನೀತಿಗಳು, ದುಡಿಯುವ ಜನರ ಚಳುವಳಿಯನ್ನು ನಿರ್ದಯವಾಗಿ ಹತ್ತಿಕ್ಕಿದ್ದು, ಯಾವುದೇ ಜನಪರ ಕಾರ್ಯಕ್ರಮವನ್ನು ಜಾರಿ ಮಾಡದೆ ಇದ್ದದ್ದು, ಮುಸ್ಲಿಂ-ವಿರೋಧಿ ವಲಸೆಗಾರ-ವಿರೋಧಿ ಬಲಪಂಥೀಯ ‘ಐಡೆಂಟಿಟಿ ರಾಜಕಾರಣ’ದತ್ತ ಒಯ್ದದ್ದು – ಇವುಗಳ ಬಗ್ಗೆ ತೀವ್ರ ಆಕ್ರೋಶವಿತ್ತು. ಈ ಹಿನ್ನೆಲೆಯಲ್ಲಿ ಈ ಫಲಿತಾಂಶಗಳನ್ನು ವಿಶ್ಲೇಷಿಸಬೇಕಾಗಿದೆ.
ಮ್ಯಾಕ್ರಾನ್ ಗೆ ಬಹುಜನರ ಬೆಂಬಲವಿದೆಯೇ?
ಈ ಚುನಾವಣಾ ಫಲಿತಾಂಶಗಳ ಹಲವು ವಿಶ್ಲೇಷಣೆಗಳು ಬಂದಿವೆ – ‘ಅವರವರ ಭಾವ’ಕ್ಕೆ ತಕ್ಕನಾಗಿ. ಇವುಗಳಲ್ಲಿ ಪ್ರಧಾನವಾಗಿ ಕೇಳಿ ಬಂದಿದ್ದು – ಪ್ರೆಂಚ್ ರಾಜಕಾರಣ ನಡುಪಂಥೀಯತೆ ಮತ್ತು ಉಗ್ರಬಲಪಂಥೀಯತೆ ನಡುವೆ ಧ್ರುವೀಕರಣಗೊಂಡಿದೆ. ಉಗ್ರಬಲಪಂಥೀಯತೆಗೆ ಬೆಂಬಲ ಹೆಚ್ಚಾಗಿದೆ. ಆದರೂ ರಾಜಕಾರಣದಲ್ಲಿ ನಡುಪಂಥೀಯತೆಯ ಮುಖ್ಯಧಾರೆಯನ್ನು ಮ್ಯಾಕ್ರಾನ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಫ್ರಾನ್ಸ್ ನಂತಹ ಆಯಕಟ್ಟಿನ ದೇಶದಲ್ಲಿ ನವ-ಫ್ಯಾಸಿಸ್ಟ್ ಉಗ್ರ ಬಲಪಂಥೀಯ ಅಧ್ಯಕ್ಷರ ಆಯ್ಕೆಯ ಅನಾಹುತ ತಪ್ಪಿದೆ ಎಂದು ನಿಟ್ಟುಸಿರು ಬಿಡಬಹುದು – ಎಂಬುದು. ಚುನಾವಣೆಯ ಕೆಲವು ಅಂಕೆಸಂಖ್ಯೆಗಳನ್ನು ಸೂಕ್ಷ್ಮವಾಗಿ ನೋಡಿದರೆ ಇವು ಬಹಳ ಆಂಶಿಕವಾಗಿಯಷ್ಟೇ ಸರಿಯಾಗಿವೆ. ಈ ಚುನಾವಣೆಗಳು ಅನಾವರಣಗೊಳಿಸಿದ ನಿಜವಾದ ಅಂಶಗಳು ಬೇರೆಯೇ ಇವೆ.
ಮೊದಲ ಸುತ್ತಿನ ವಿವಿಧ ರಾಜಕೀಯ ಧೋರಣೆಗಳ ಅಧ್ಯಕ್ಷೀಯ ಅಭ್ಯರ್ಥಿಗಳ ಮತಗಳಿಕೆ ನೋಡಿದರೆ ಬೇರೆಯೇ ಚಿತ್ರ ಮೂಡುತ್ತದೆ. ಮೊದಲ ಸುತ್ತಿನಲ್ಲಿ ಸಹ ಮ್ಯಾಕ್ರಾನ್ ಮೊದಲ ಸ್ಥಾನದಲ್ಲಿದ್ದರೂ ಅವರ ಮತಗಳಿಕೆ ಕೇವಲ ಶೇ. 27.85 ಆಗಿತ್ತು. ಲಿ ಪೆನ್ ಶೇ. 23.15 ಮತ ಪಡೆದು ಎರಡನೆಯ ಸ್ಥಾನದಲ್ಲಿದ್ದರು. ಲಾ ಫ್ರಾನ್ಸ್ ಇನ್ಸೊಮಿಸ್ (LFI) ಎಡ ಪಂಥೀಯ ಪಕ್ಷದ ಜೀನ್ ಲುಕ್ ಮೆಲೆಂಕೊನ್ ಶೇ. 21.96 ಮತ ಪಡೆದಿದ್ದರು. ಕಮ್ಯುನಿಸ್ಟ್ ಪಕ್ಷ, ಗ್ರೀನ್ ಪಾರ್ಟಿ ಮತ್ತು ಎರಡು ಸಣ್ಣ ಎಡಪಕ್ಷಗಳ ಮತ ಸೇರಿಸಿದರೆ ಎಡಪಂಥೀಯ ಮತಗಳಿಕೆ ಶೇ. 31.38 ಆಗುತ್ತವೆ. ಹೀಗೆ ಮೊದಲ ಸುತ್ತಿನಲ್ಲಿ ಎಡಪಂಥೀಯರು ಐಕ್ಯತೆಯಿಂದ ಸ್ಪರ್ಧಿಸಿದ್ದರೆ ಮೊದಲ ಸ್ಥಾನದಲ್ಲಿರುತ್ತಿದ್ದರು. ಹಾಗೆನೇ ಇನ್ನೆರಡು ಉಗ್ರ ಬಲಪಂಥೀಯ ಪಕ್ಷಗಳು ಲಿ ಪೆನ್ ರನ್ನು ಬೆಂಬಲಿಸಿದ್ದರೆ ಉಗ್ರ ಬಲಪಂಥದ ಒಟ್ಟು ಮತಗಳಿಕೆ ಶೇ. 32.28 ಆಗುತ್ತಿದ್ದು, ಅವರು ಮೊದಲ ಸ‍್ಥಾನದಲ್ಲಿರುತ್ತಿದ್ದರು. ಇವೆರಡೂ ಆಗಿದ್ದರೆ ಉಗ್ರಬಲಪಂಥೀಯರು ಮೊದಲ ಸ್ಥಾನ ಮತ್ತು ಎಡ ಪಂಥೀಯರು ಎರಡನೆಯ ಸ್ಥಾನದಲಿದ್ದು, ಮ್ಯಾಕ್ರಾನ್ ಎರಡನೆಯ ಸುತ್ತಿಗೆನೇ ಬರುತ್ತಿರಲಿಲ್ಲ!
ಎರಡನೆಯ ಸುತ್ತಿನಲ್ಲಿ ಎಡ ಅಭ್ಯರ್ಥಿ ಇಲ್ಲದಿರುವುದರ ಪರಿಣಾಮವಾಗಿ ಇನ್ನೂ ಕೆಲವು ಅಂಶಗಳು ಮತಗಳಿಕೆಯ ರಾಜಕೀಯ ವಿಶ್ಲೇಷಣೆಯನ್ನು ವಿರೂಪಗೊಳಿಸುತ್ತವೆ. ಎರಡನೆಯ ಸುತ್ತಿನಲ್ಲಿ ನಡೆದ ಶೇ.72 ಮತದಾನ (ಮೊದಲ ಸುತ್ತಿನಲ್ಲಿ ಶೇ. 73.7 ಇತ್ತು), 1969ರ ನಂತರ ನಡೆದ ಅತಿ ಕಡಿಮೆ ಮತದಾನ ಪ್ರಮಾಣವೆಂದು ದಾಖಲಾಗಿದೆ. ಅದೇ ರೀತಿ ಕುಲಗೆಟ್ಟ ಮತಗಳ (ಶೇ. 2.25) ಮತ್ತು ಶೂನ್ಯ ಮತಪತ್ರ (ಶೇ.6.35) ಗಳ ಪ್ರಮಾಣ ಈ ಬಾರಿ ಅತ್ಯಧಿಕ ಮಟ್ಟವನ್ನು (ಶೇ. 8.6) ಮುಟ್ಟಿವೆ. ಮೊದಲ ಸುತ್ತಿನಲ್ಲಿ ಇದು ಕೇವಲ ಶೇ.2.2 ಇತ್ತು. ಪ್ರಧಾನವಾಗಿ ಎಡಪಂಥಿಯ ಮತದಾರರ ವಿಭಾಗವೊಂದು ಲಿ ಪೆನ್ ಮತ್ತು ಮ್ಯಾಕ್ರಾನ್ ರಿಂದ ರೋಸಿ ಹೋಗಿದ್ದು ಇಬ್ಬರಿಗೂ ಮತದಾನ ಮಾಡಲು ಮನಸ್ಸಾಗದೆ ದೂರವುಳಿದರು. ಮ್ಯಾಕ್ರಾನ್ ಗೆ ದೊಡ್ಡ ಜನವಿಭಾಗ ಮನಸ್ಸಿಲ್ಲದ ಮನಸ್ಸಿನಿಂದ ಲಿ ಪೆನ್ ಗೆಲ್ಲಬಾರದೆಂದಷ್ಟೇ ಮತಹಾಕಿದೆ. ಲಿ ಪೆನ್ ಗೆ ಸಹ ಬಂದ ಮತಗಳಲ್ಲಿ ಮ್ಯಾಕ್ರಾನ್ ವಿರುದ್ಧ ಆಕ್ರೋಶ ಹೊಂದಿರುವ ಮತದಾರರ ‘ಪ್ರತಿಭಟನಾ ಮತ’ಗಳ ದೊಡ್ಡ ಪ್ರಮಾಣವಿದೆ. ಇದೇ ಜೂನ್ ನಲ್ಲಿ ನಡೆಯಲಿರುವ ಪಾರ್ಲಿಮೆಂಟರಿ ಚುನಾವಣಾ ಫಲಿತಾಂಶದ ಮೇಲೆ ಇವೆಲ್ಲ ತೀವ್ರ ಪ್ರಭಾವ ಬೀರಲಿದೆ. ಮ್ಯಾಕ್ರಾನ್ ಅವರ ಪಕ್ಷ ಬಹುಮತ ಉಳಿಸಿಕೊಳ್ಳಲು ಹೆಣಗಾಡಬೇಕಾದೀತು. ಸೋತರೂ ಆಶ್ಚರ್ಯ ಪಡಬೇಕಾಗಿಲ್ಲ. ಇದಕ್ಕಾಗಿಯೇ ಮ್ಯಾಕ್ರಾನ್ ಗೆದ್ದರೂ ಸೋತಿದ್ದಾರೆ ಎನ್ನುವುದು ಹೆಚ್ಚು ಸರಿಯಾದ ವಿಶ್ಲೇಷಣೆ.
ನಡುಪಂಥ ಕುಸಿದಿದೆ
ಫ್ರಾನ್ಸ್ ನಲ್ಲಿ 1960ರ ದಶಕದಿಂದ ಮೊದಲ ಎರಡು ಸ್ಥಾನಗಳಲ್ಲಿದ್ದು ರಾಜಕಾರಣದಲ್ಲಿ ಅಧಿಪತ್ಯ ಸಾಧಿಸಿದ್ದ ನಡುಪಂಥೀಯ ಪಕ್ಷಗಳ ಬಲ ಕಡಿಮೆಯಾಗುತ್ತಾ ಬಂದಿದ್ದು, ಈ ಬಾರಿ ಅಪಾರವಾಗಿ ಕುಸಿದಿದೆ. ಮ್ಯಾಕ್ರಾನ್ ನೀತಿಗಳು ಕಳೆದ 5 ವರ್ಷಗಳಲ್ಲಿ ಸ್ಪಷ್ಟವಾಗಿ ಬಲಪಂಥೀಯವಾಗಿದ್ದರೂ, ಅವರನ್ನು ನಡುಪಂಥೀಯರೆಂದು ಪರಿಗಣಿಸಲಾಗುತ್ತದೆ. ಇವರು 2012-17 ಅವಧಿಯಲ್ಲಿ ಸೋಶಲಿಸ್ಟ್ ಸರಕಾರದ ಪ್ರಧಾನಿಯಾಗಿದ್ದರು ಎಂದು ನೆನಪಿನಲ್ಲಿಡಬೇಕು. 2017ರಲ್ಲಿ ಎಡ-ಬಲ-ನಡುಪಂಥೀಯತೆ ಇಲ್ಲದ ರಾಜಕೀಯ-ರಹಿತ ‘ಟೆಕ್ನೊಕ್ರಾಟ್’ ಅಧಿಕಾರ ನಡೆಸಬೇಕು ಎಂಬ ಐ.ಎಂ.ಎಫ್-ವಿಶ್ವಬ್ಯಾಂಕ್ ಪ್ರಣೀಥ ರಾಜಕಾರಣದ ಪ್ರತಿನಿಧಿಯಾಗಿ ಹಿಂದಿನ ನಡುಪಂಥಿಯರನ್ನು ಮೂಲೆಗುಂಪು ಮಾಡಿದ್ದಾರೆ. ನಡು-ಬಲಪಂಥೀಯ ರಿಪಬ್ಲಿಕನ್ ಪಕ್ಷ (ಶೇ.4.78) ಮತ್ತು ನಡು-ಎಡ ಪಂಥೀಯ ಸೋಶಲಿಸ್ಟ್ ಪಕ್ಷ (ಶೇ. 1.7) ಮತಗಳಿಕೆಗಳನ್ನೂ ಸೇರಿಸಿದರೆ, ಒಟ್ಟಾಗಿ (ಇವು ಒಟ್ಟಾಗಿ ಸ್ಪರ್ಧಿಸುವ ಸಾಧ‍್ಯತೆಯಿರಲೇ ಇಲ್ಲವಾದರೂ) ನಡುಪಂಥೀಯ ಮತಗಳಿಕೆ ಶೇ. 34.33 ಆಗುತ್ತದೆ. 2012ರ ಮೊದಲ ಸುತ್ತಿನಲ್ಲಿ ನಡುಪಂಥೀಯ ಮತಗಳಿಕೆ ಶೇ.58ರಷ್ಟಿತ್ತು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಇದೇ ಮೊದಲ ಬಾರಿಗೆ ಎಡ ಮತ್ತು ಉಗ್ರಬಲಪಂಥೀಯ ಮತಗಳಿಕೆ ಶೇ. 50 ಮಟ್ಟವನ್ನು ದಾಟಿವೆ. ಮಾತ್ರವಲ್ಲ ಮೂರನೆಯ ಎರಡರಷ್ಟು ಪ್ರಮಾಣಕ್ಕೆ (ಶೇ. 63) ಹತ್ತಿರ ಬರುತ್ತವೆ. ಹಾಗಾಗಿ ರಾಜಕಾರಣದಲ್ಲಿ ನಡುಪಂಥೀಯತೆಯ ಮುಖ್ಯಧಾರೆಯನ್ನು ಮ್ಯಾಕ್ರಾನ್ ಕಾಪಾಡಿಕೊಳ್ಳುವ ಬದಲು ತಮ್ಮ 5 ವರುಷಗಳ ದುರಾಡಳಿತದಿಂದ ನಾಶಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಿಂದಾಗಿ ಉಗ್ರಬಲಪಂಥಿಯತೆ ಮುನ್ನೆಲೆಗೆ ಬಂದು ಇನ್ನಷ್ಟು ಅಪಾಯಕಾರಿಯಾಗಿದೆ. ನಡುಪಂಥೀಯತೆಯ ಹೆಸರಲ್ಲಿ ಜನವಿರೋಧಿ ಉಗ್ರ ಬಲಪಂಥಿಯ ಧೋರಣೆಗಳನ್ನು ಹೇರುವ ಶಕ್ತಿಗಳು ಉಗ್ರ ಬಲಪಂಥಿಯ ಶಕ್ತಿಗಳನ್ನು ಬಲಗೊಳಿಸುತ್ತವೆ. ಅದನ್ನು ಮಟ್ಟ ಹಾಕಲು ಎಡಪಂಥಿಯ ಶಕ್ತಿಗಳಿಂದ ಮಾತ್ರ ಸಾಧ್ಯ ಎಂದು ಫ್ರಾನ್ಸ್ ನ ಎರಡು ಸುತ್ತಿನ ಮತಗಳಿಕೆ ಅಂಕೆಸಂಖ್ಯೆಗಳು ತೋರಿಸುತ್ತವೆ.
ಎಡಪಕ್ಷಗಳು ತಮ್ಮ ಅನೈಕ್ಯತೆಯ ಪರಿಣಾಮವಾಗಿ ಉಗ್ರಬಲಪಂಥ ಬಲಗೊಂಡಿದ್ದನ್ನು ಮನಗಂಡಿದ್ದು, ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಮೊದಲ ಸುತ್ತಿನಲ್ಲಿಯೇ ಉಗ್ರಬಲಪಂಥಕ್ಕೆ ಸವಾಲು ಒಡ್ಡಬೇಕು ಎಂದು ನಿರ್ಧರಿಸಿವೆ. ಎಡಪಕ್ಷಗಳು ಐಕ್ಯತೆಯಿಂದ ಆಕ್ರಾಮಕವಾಗಿ ಚುನಾವಣಾ ಕಣ ಪ್ರವೇಶಿಸಿದರೆ, ಉಗ್ರಬಲಪಂಥವನ್ನು ಪಾರ್ಲಿಮೆಂಟಲ್ಲಿ ಸಹ ಬಲಗೊಳ್ಳಲು ಬಿಡಬಾರದು ಎಂಬ ಛಲವಿರುವ ನಡುಪಂಥೀಯ (ಇದರ ದೊಡ್ಡ ವೀಭಾಗ ಸೋಶಲಿಸ್ಟ್ ಪಕ್ಷದ ಬೆಂಬಲಿಗರು) ಮತದಾರರ ಮತ್ತು ನಡುಪಂಥೀಯ ದುರಾಡಳಿತದಿಂದ ಬೇಸತ್ತು ಉಗ್ರಬಲಪಂಥಧ ಜಾಣಮಾತುಗಳಿಂದ ಮೋಸಹೋದ ದುಡಿಯುವ ಜನರ ವಿಭಾಗವನ್ನು ಆಕರ್ಷಿಸುವ ಸಾಧ್ಯತೆಯಿದೆ.
ಹಾಗಾಗಿ ಫ್ರೆಂಚ್ ಅಧ್ಯಕ್ಷೀಯ ಚುನಾವಣಾ ಮತದಾನದ ಸೂಕ್ಷ್ಮ ವಿಶ್ಲೇಷಣೆ ಮಾಡಿದರೆ ಒಟ್ಟಾರೆಯಾಗಿ ಹೀಗೆ ಹೇಳಬಹುದು – ನಡುಪಂಥೀಯರ ದುರಾಡಳಿತ ಮತ್ತು ಜನವಿರೋಧಿ ನೀತಿಗಳಿಂದ ಫ್ರೆಂಚ್ ರಾಜಕಾರಣ ಬಲಪಂಥೀಯತೆಯತ್ತ ಹೊರಳಿರುವುದು ನಿಜ. ಆದರೆ ಎಡಪಂಥೀಯರು ಗಮನಾರ್ಹ ಮುನ್ನಡೆ ಸಾಧಿಸಿದ್ದಾರೆ. ಮ್ಯಾಕ್ರಾನ್ ಮತ್ತು ನಡುಪಂಥೀಯತೆ ಗೆದ್ದೂ ಸೋತೂ ಕುಸಿಯುತ್ತಿದೆ. ರಾಜಕಾರಣದಲ್ಲಿ ಮೊದಲ ಎರಡು ಸ್ಥಾನಗಳಿಗೆ ಎಡ ಮತ್ತು ಉಗ್ರಬಲಪಂಥೀಯತೆ ನಡುವೆ ಹಣಾಹಣಿ ನಡೆದಿದೆ. ಬದಲಿ ನೀತಿಗಳ ಆಧಾರದ ಮೇಲೆ ಪ್ರಚಾರ ಪ್ರಕ್ಷೋಭೆ ನಡೆಸಿದರೆ ಮ್ಯಾಕ್ರಾನ್ ವಿರುದ್ಧ ತೀವರ್ ಅತೃಪ್ತಿಯನ್ನು ಎಡದಿಕ್ಕಿನಲ್ಲಿ ತಿರುಗಿಸಲು ಅವಕಾಶಗಳವೆ. ಈಗಾಗಲೇ ದುರ್ಬಲವಾಗಿರುವ ನಡುಪಂಥ ಮತ್ತಷ್ಟು ದುರ್ಬಲವಾಗುವ ಸಾಧ್ಯತೆಯಿದೆ. ಜೂನ್ ಪಾರ್ಲಿಮೆಂಟರಿ ಚುನಾವಣೆಗಳು ಇವೆಲ್ಲವನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಲಿವೆ.