ಕಲಬುರ್ಗಿ : ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೊಂದು ಆಕ್ಸಿಜನ್ ದುರ್ಘಟನೆ ಸಂಭವಿಸಿದೆ. ಆಕ್ಸೀಜನ್ ಕೊರತೆಯಿಂದ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೋವಿಡ್ ಸೋಂಕಿತರು ಅಸುನೀಗಿದ ಘಟನೆ ನಡೆದಿದೆ.
ಅಫಜಲಪುರ ತಾಲೂಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ. ಅಫಜಲಪುರ ತಾಲೂಕ ಆಸ್ಪತ್ರೆಯಲ್ಲಿ ಒಟ್ಟು 32 ಸೋಂಕುತರನ್ನು ತೀವ್ರ ನಿಗಾದಲ್ಲಿಟ್ಟು, ಆಕ್ಸಿಜನ್ ನೀಡಲಾಗುತ್ತಿತ್ತು. ಆದರೆ, ಮಧ್ಯರಾತ್ರಿಯ ನಂತರ ಆಸ್ಪತ್ರೆಯಲ್ಲಿನ ಆಕ್ಸಿಜನ್ ಖಾಲಿಯಾಗಿದೆ ಎನ್ನಲಾಗಿದೆ. ಪರಿಣಾಮ ನಿನ್ನೆ ರಾತ್ರಿಯಿಂದ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರು ಅಸುನೀಗಿದ್ದಾರೆ.
ಆಕ್ಸಿಜನ್ ಮೇಲೆ ಅವಲಂಬಿತರಾದವರಿಗೂ 7 ಗಂಟೆಯಿಂದ ಆಕ್ಸಿಜನ್ ಸರಬರಾಜಿನಲ್ಲಿ ಏರುಪೇರಾಗಿದೆ. ಕ್ಷಣ ಕ್ಷಣಕ್ಕೆ ಕೋವಿಡ್ ಸೋಂಕಿತರ ಸ್ಥಿತಿ ಗಂಭೀವಾಗಲಾರಂಭಿಸಿದೆ. ಡಿಸ್ಚಾರ್ಜ್ ಮಾಡಿಕೊಂಡು ಬೇರೆ ಕಡೆ ಹೋಗೋಣ ಅಂದ್ರೆ ಬೇರೆ ಕಡೆಯೂ ಆಕ್ಸಿಜನ್ ಬೆಡ್ ಖಾಲಿ ಇಲ್ಲದಿರೋಡು ರೋಗಿಗಳ ಸಂಬಂಧಿಕರನ್ನು ಕಂಗಾಲಾಗುವಂತೆ ಮಾಡಿದೆ.
ಇದನ್ನೂ ಓದಿ : ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ: ಸುರೇಶ್ ಕುಮಾರ್
ನಿತ್ಯ ಮೂರು – ನಾಲ್ಕು ತಾಸು ಮಾತ್ರ ಆಕ್ಸೀಜನ್ ಲಭ್ಯತೆ ಇದೆ. ಉಳಿದ ಸಮಯದಲ್ಲಿ ಸಮರ್ಪಕವಾಗಿ ಆಕ್ಸೀಜನ್ ಪೂರೈಸುತ್ತಿಲ್ಲ. ಆಕ್ಸೀಜನ್ ಕೊರತೆ ಇದ್ದರೂ ತರಿಸಿಕೊಂಡು ಸರಿಪಡಿಸೋ ಕೆಲಸ ನಡೆದಿಲ್ಲ. ಇದರ ಪರಿಣಾಮ ಕೋವಿಡ್ ಸೋಂಕಿತರು ಆಕ್ಸೀಜನ್ ಕೊರತೆಯಿಂದ ಸಾವನ್ನಪ್ಪಿದ್ದು, ಈಗಲಾದ್ರೂ ಎಚ್ಚೆತ್ತುಕೊಂಡು, ಸಮರ್ಪಕ ಆಕ್ಸೀಜನ್ ವ್ಯವಸ್ಥೆ ಮಾಡಬೇಕು. ರೋಗಿಗಳ ಜೊತೆ ಚೆಲ್ಲವಾಟ ಆಡೋದನ್ನು ಕೈಬಿಡಬೇಕೆಂದು ರೋಗಿಗಳ ಸಂಬಂದಿಕರು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಟ್ಟಿದ್ದೇವೆ. ಪ್ರಾಥಮಿಕ ವರದಿಗಳ ಪ್ರಕಾರ ಮೂವರು ಮೃತಪಟ್ಟಿದ್ದಾರೆ. ಆದರೆ, ಆಕ್ಸಿಜನ್ ಸಮಸ್ಯೆ ಇರಲಿಲ್ಲ ಎಂದು ಕೆಬಿಎನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ಆಕ್ಸಿಜನ್ ಅಗತ್ಯವಿದ್ದರೆ ಅವರು ಕರೆ ಮಾಡುತ್ತಿದ್ದರು. ಶುಕ್ರವಾರವೇ ಬೀದರ್‌ನಿಂದ ನಾವು ಆಕ್ಸಿಜನ್ ಟ್ಯಾಂಕರ್ ತರಿಸಿಕೊಂಡಿದ್ದೆವು. ಶನಿವಾರವೂ ಆಕ್ಸಿಜನ್ ಸಮಸ್ಯೆ ಇರಲಿಲ್ಲ. ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ’ ಎಂದರು.
ಇದನ್ನು ಓದಿ: ಆಕ್ಸಿಜನ್ ಕೊರತೆ ಚಾಮರಾಜನಗರದಲ್ಲಿ 24 ಮಂದಿ ಸಾವು
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ: ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಘಟನೆ ಆಗಿತ್ತು. ಇದೀಗ ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ಮರುಕಳಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಎಲ್ಲಿಯೂ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಚಿಕಿತ್ಸೆಗಾಗಿ ಬಡವರು ನೆಚ್ಚಿಕೊಂಡ ಸರ್ಕಾರಿ ಆಸ್ಪತ್ರೆಯಲ್ಲಿಯೇ ಈ ರೀತಿಯ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯಲ್ಲಿಯೇ ಬೇರೆ ಬೇರೆ ಕಡೆ ಆಕ್ಸೀಜನ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಇಲ್ಲಿನ ಆಕ್ಸೀಜನ್ ನ್ನು ಮಹಾರಾಷ್ಟ್ರ ಮತ್ತಿತರ ಕಡೆ ಸಾಗಿಸಲಾಗುತ್ತಿದೆ. ಜಿಲ್ಲೆಗೆ ಸಾಕಷ್ಟು ಅವಶ್ಯಕತೆ ಇದ್ದರೂ ಇಲ್ಲಿನ ಆಕ್ಸೀಜನ್ ಬೇರೆ ಕಡೆ ಮಾರಿಕೊಳ್ತಿರೋದ್ರಿಂದಾಗಿ ಈ ರೀತಿಯ ಸಮಸ್ಯೆಗಳಾಗುತ್ತಿವೆ. ಕೋವಿಡ್ ನಿರ್ವಹಣೆಯ ಸಂಬಂಧ ಶಾಸಕರ ಸಭೆ ಕರೆಯುವಂತೆ ಪದೇ ಪದೇ ಕೋರಿಕೊಂಡರು ಯಾರೂ ಅದಕ್ಕೆ ಸ್ಪಂದಿಸ್ತಿಲ್ಲ. ರಾಜ್ಯ ಸರ್ಕಾರ ಬೇಕಾಬಿಟ್ಟಿ ನಿರ್ವಹಣೆ ಮಾಡುತ್ತಿರೋದರಿಂದಾಗಿ ಸಾಮಾನ್ಯ ರೋಗಿಗಳು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.