ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಹೆಚ್ಚಾದ ಹಕ್ಕಿ ಜ್ವರ ಇದೀಗ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ರಾಜ್ಯದ ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಹೀಗಾಗಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ರಾಜ್ಯಾದ್ಯಂತ ತನ್ನ ಕಣ್ಗಾವಲು ಹೆಚ್ಚಿಸಿದೆ. ಜೊತೆಗೆ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.
ರಾಯಚೂರಿನ ಮಾನ್ವಿ ತಾಲ್ಲೂಕು, ಚಿಕ್ಕಬಳ್ಳಾಪುರದ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ (H5N1 ಏವಿಯನ್ ಇನ್ಫ್ಲುಯೆನ್ಸ) ಕಾಣಿಸಿಕೊಂಡ ವರದಿಯಾಗಿದೆ. ರಾಜ್ಯದಲ್ಲಿ ಇದುವರೆಗೆ ಮಾನವರಲ್ಲಿ ಹಕ್ಕಿ ಜ್ವರದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಹಕ್ಕಿಗಳಲ್ಲಿ ಈ ಜ್ವರ ವೇಗವಾಗಿ ಹರಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ಬೆಂಗಳೂರು| ಮಾರ್ಚ್ 22 ರಂದು ಕರ್ನಾಟಕ ಬಂದ್
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯು ಈ ಮೂರು ಜಿಲ್ಲೆಗಳ ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಅಲ್ಲಿ ಆ ಪಕ್ಷಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ ಎಂದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾದ ಸ್ಥಳದಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆಯು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. “ಪಕ್ಷಿ ಜ್ವರ ಪ್ರಕರಣಗಳು ಪತ್ತೆಯಾದ ಹತ್ತಿರದ ಆಸ್ಪತ್ರೆಗಳಲ್ಲಿ ನಾವು ಕಣ್ಗಾವಲು ಹೆಚ್ಚಿಸಿದ್ದೇವೆ ಮತ್ತು ಪ್ರತ್ಯೇಕ ಹಾಸಿಗೆಗಳ ಸೌಲಭ್ಯಗಳನ್ನು ಮಾಡಿದ್ದೇವೆ” ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಭಯಭೀತರಾಗದಂತೆ ಎಚ್ಚರಿಕೆಯಿಂದರಲು ಸೂಚನೆ ನೀಡಲಾಗಿದೆ. ರಾಜ್ಯದ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಆಯಾ ಜಿಲ್ಲಾ ಅಧಿಕಾರಿಗಳು ಎಲ್ಲಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವರದಹಳ್ಳಿಯಲ್ಲಿ 36 ಕೋಳಿಗಳು ಜ್ವರದಿಂದ ಸಾವು
ಚಿಕ್ಕಬಳ್ಳಾಪುರದ ತಾಲೂಕಿನ ವರದಹಳ್ಳಿಯಲ್ಲಿ ಮೊದಲ ಬಾರಿಗೆ ಹಕ್ಕಿ ಜ್ವರ ಪತ್ತೆಯಾಗಿತ್ತು. 36 ಕೋಳಿಗಳು ಜ್ವರಕ್ಕೆ ಮೃತಪಟ್ಟಿವೆ. ಹಕ್ಕಿಜ್ವರದಿಂದ ಕೋಳಿಗಳು ಮೃತಪಟ್ಟಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಹೀಗಾಗಿ ಗ್ರಾಮದ ತುಂಬಾ ಔಷಧಿಯನ್ನು ಸಿಂಪಡಿಸಲಾಗಿದೆ. ಅಲ್ಲದೆ ಗ್ರಾಮದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ.
ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ವೇಗವಾಗಿ ಹರಡುತ್ತಿದೆ. ಇಲ್ಲಿಂದಲೇ ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಹರಡಿರುವ ಶಂಕೆ ಇದ್ದು ಈ ರಾಜ್ಯಗಳಿಂದ ಬರುವ ಕೋಳಿಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಅಲ್ಲದೆ ಎರಡೂ ರಾಜ್ಯಗಳಿಂದ ಬರುವ ವಾಹನಗಳ ಪ್ರವೇಶಕ್ಕೆ ನಿರ್ಬಂಧಕ್ಕೂ ಸಲಹೆಯನ್ನು ನೀಡಲಾಗಿದೆ.
ಮಾನ್ವಿಯಲ್ಲಿ 30ಕ್ಕೂ ಹೆಚ್ಚು ಕೋಳಿಗಳು ಸಾವು
ಇನ್ನೂ ರಾಯಚೂರಿನ ಮಾನ್ವಿಯಲ್ಲಿ 30ಕ್ಕೂ ಹೆಚ್ಚು ಕೋಳಿಗಳು ನಿಗೂಢವಾಗಿ ಸಾವನ್ನಪ್ಪಿವೆ. ಕೋಳಿಗಳೊಂದಿಗೆ ಕಾಗೆಗಳು ಸಾವನ್ನಪ್ಪಿದ್ದು ಕಂಡು ಬಂದಿದೆ. ಹೀಗಾಗಿ ಅನುಮಾನ ಬಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತಮಡ ಗ್ರಾಮಕ್ಕೆ ಭೇಟಿ ನೀಡಿ ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ಇದೀಗ ಈ ಪರೀಕ್ಷಾ ವರದಿಯಲ್ಲಿ ಕೋಳಿಗೆ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ.
ಇದನ್ನೂ ನೋಡಿ: ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗುತ್ತಿದ್ದಾರೆJanashakthi Media