ಕಾರವಾರ: ರಾಜ್ಯದ 300 ಕಿ.ಮೀ ಉದ್ದದ ಕರಾವಳಿ ತೀರ ಹಾಗೂ ಮಂಗಳೂರು, ಉಡುಪಿ ಮತ್ತು ಕಾರವಾರ ಒಳಗೊಂಡು ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ತೀರ್ಮಾನಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
ಕಾರವಾರದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ’ದಲ್ಲಿ ಭಾನುವಾರ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಹಾಗೂ ಕರಾವಳಿ ಭಾಗದ ಯುವಜನತೆಯ ಉದ್ಯೋಗಾವಕಾಶಗಳ ಬಗ್ಗೆ ಸರ್ಕಾರದ ದೂರದೃಷ್ಟಿಯನ್ನು ಹಂಚಿಕೊಂಡರು.
ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಜ.10ರಂದು ಮಂಗಳೂರಿನಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಶಾಸಕರು, ಸಚಿವರು, ಸಂಸದರು ಮತ್ತು ಸ್ಥಳೀಯ ಕೌನ್ಸಿಲ್ ಸದಸ್ಯರ ಮಹತ್ವದ ಸಭೆ ಕರೆಯಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ : ಕೋಗಿಲು ಲೇಔಟ್ ಸ್ಲಂ ಮನೆಗಳ ಧ್ವಂಸ – ಸಿಪಿಐ(ಎಂ) ಖಂಡನೆ; ಬಡವರ ಮನೆಗಳ ಮರು ನಿರ್ಮಾಣಕ್ಕೆ ಆಗ್ರಹ
ನಮ್ಮ ಭಾಗದ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು ಅಥವಾ ಸೌದಿ ಅರೇಬಿಯಾದಂತಹ ಹೊರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಇಲ್ಲಿಯೇ ಉದ್ಯೋಗ ಸೃಷ್ಟಿಸಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ (PPP Model) ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದರು.
“ಈ ಸಭೆಗೆ ದೇಶ-ವಿದೇಶಗಳ ಪ್ರಮುಖ ಹೂಡಿಕೆದಾರರನ್ನು ಆಹ್ವಾನಿಸಲಾಗುತ್ತಿದ್ದು, ಕರಾವಳಿಯ ಭೂಮಿ ಮತ್ತು ಪರಿಹಾರದ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೂ ಚರ್ಚಿಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು” ಎಂದರು.
ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಎಂ, “ಸ್ಥಳೀಯ ಶಾಸಕರು ಮತ್ತು ಮಂತ್ರಿಗಳು ಸೇರಿ 210 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿರುವ ಹಳೆಯ ಮತ್ತು ಅನರ್ಹ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ” ಎಂದು ಹೇಳಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ತಲೆಮಾರಿನ ದಾಖಲೆಗಳನ್ನು ನೀಡಿದಲ್ಲಿ, ಮೂರು ಎಕರೆವರೆಗಿನ ಭೂಮಿ ಹೊಂದಿರುವ ಬಡವರು ಮತ್ತು ರೈತರ ರಕ್ಷಣೆಗೆ ಸರ್ಕಾರ ಸದಾ ಸಿದ್ಧವಿದೆ” ಎಂದು ಸ್ಪಷ್ಟಪಡಿಸಿದರು. ರೈತರ ಹಿತರಕ್ಷಣೆ ಬಗ್ಗೆ ಭರವಸೆ ನೀಡಿದ ಡಿಸಿಎಂ, “ಅತಿಕ್ರಮಣ ಮಾಡಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬೇಡಿ ಎಂದು ಸೂಚನೆ ನೀಡಲಾಗಿದೆ.
ಸಿಆರ್‌ಜೆಡ್ ನೆರೆ ರಾಜ್ಯಗಳಲ್ಲಿ ಇರುವಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಿಆರ್‌ಜೆಡ್ ನಿಯಮಗಳನ್ನು ಕಾನೂನು ಚೌಕಟ್ಟಿನಲ್ಲಿ ಸಡಿಲಿಕೆ ಮಾಡುವ ಕುರಿತು ಕ್ರಮ ವಹಿಸಲಾಗುವುದು. ನದಿ ಜೋಡಣೆ ರಾಜ್ಯದ ನೀರಿನ ಸದ್ಬಳಕೆಗಾಗಿ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ (DPR) ಸಿದ್ಧಪಡಿಸಲು ಮುಖ್ಯ ಇಂಜಿನಿಯರ್‌ಗೆ ಅನುಮತಿ ನೀಡಲಾಗಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರಿಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, “ಗ್ಯಾರಂಟಿಗಳನ್ನು ವಿರೋಧಿಸುವವರು ಈಗ ಅದನ್ನು ಪಡೆದುಕೊಳ್ಳುತ್ತಿಲ್ಲವೇ? ವಿರೋಧಿಸುವವರು ಮೊದಲು ಸೌಲಭ್ಯಗಳನ್ನು ವಾಪಸ್ ನೀಡಲಿ. ನಮ್ಮ ಉದ್ದೇಶ ಜನಕಲ್ಯಾಣ ಮತ್ತು ರೈತರ ಅಭಿವೃದ್ಧಿ ಮಾತ್ರ” ಎಂದರು.
ಜಿಲ್ಲೆಯ ಐವರು ಶಾಸಕರು ಹಾಗೂ ಹೆಬ್ಬಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಶ್ಲಾಘಿಸಿದರು.
ಇದನ್ನೂ ನೋಡಿ : ಬಿಕ್ಲು ಶಿವ ಕೊಲೆ ಪ್ರಕರಣ | ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ Janashakthi Media
