ಬೆಳಗಾವಿ: ರೈತ ಮುಖಂಡರು ಹಾಗೂ ಕೇಂದ್ರದ ಮಾಜಿ ಸಚಿವರು ಆಗಿದ್ದ ಬಾಬಾಗೌಡ ರುದ್ರಗೌಡ ಪಾಟೀಲ್ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ತೀವ್ರ ರಕ್ತದ ಒತ್ತಡದಿಂದ ಕಳೆದ ವಾರದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆವರ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇದ್ದಿದ್ದರಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರಾದ ಅವರು ರೈತ ಸಂಘದ ಮೂಲಕ ಹೋರಾಟ ಆರಂಭಿಸಿದ್ದರು. ಬೆಳಗಾವಿಯ ಆರ್‌ಎಲ್ ವಿಜ್ಞಾನ ಸಂಸ್ಥೆಯ ಬಿಎಸ್ಸಿ ಪದವಿಧರರಾಗಿದ್ದರು.
ಇದನ್ನು ಓದಿ: ಕೋವಿಡ್‌ನಿಂದ 600 ಶಿಕ್ಷಕರು, 175 ಜನ ವಕೀಲರ ಸಾವು
1989ರಲ್ಲಿ ಬೆಳಗಾವಿ ಮತ್ತು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಎರಡು ಕಡೆ ಜಯಗಳಿಸಿದ ಬಾಬಾಗೌಡ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘದ ಮೊದಲ ನಾಯಕರಾಗಿ ದುಡಿದವರು. ಗೆಲುವಿನ ನಂತರ ಧಾರವಾಡ ಗ್ರಾಮೀಣ ಸ್ಥಾನವನ್ನು ಬಿಟ್ಟುಕೊಟ್ಟರು. ನಂತರ ಆ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಎಂ ಡಿ ನಂಜುಂಡಸ್ವಾಮಿ ಸ್ಪರ್ಧಿಸಿದ್ದರು.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಎನ್ ಡಿಎ ಸರ್ಕಾರದಲ್ಲಿ ಬಾಬಾಗೌಡ ಪಾಟೀಲ್ ಸಂಪುಟ ದರ್ಜೆ ಸಚಿವರಾಗಿದ್ದರು. 1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಗೆದ್ದ ಅವರು ಎನ್‌ಡಿಎ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು.
ಇದನ್ನು ಓದಿ: ಜನತೆಗೆ ಬೇಕಿರುವುದು ತೋರಿಕೆಯ ಪರಿಹಾರವಲ್ಲಾ, ನಿಜ ಪರಿಹಾರ!: ಸಿಪಿಐ(ಎಂ) ಒತ್ತಾಯ
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 2000ದ ನಂತರದ ಬಿಜೆಪಿ ಪಕ್ಷವನ್ನು ತೊರೆದರು. ನಂತರ ಜೆಡಿಎಸ್ ಸೇರ್ಪಡೆಯಾಗಿದ್ದರು. 2013ರಲ್ಲಿ ಜೆಡಿಎಸ್ ತೊರೆದು ರೈತರನ್ನು ಸಂಘಟಿಸುವಲ್ಲಿ, ರೈತರ ಪರವಾಗಿ ಕೆಲಸ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಬಾರಿ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದರು.
ರೈತ ಮುಖಂಡರಾಗಿ ಕೆಲಸ
ಕೇಂದ್ರದ ಬಿಜೆಪಿ ಸರಕಾರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಮುಂಚೂಣಿ ನಾಯಕರಾಗಿ ಕೆಲಸ ಮಾಡುತ್ತಿದ್ದರು. ಬೆಳಗಾವಿಯ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ ತಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ರೈತ ವಿರೋಧಿ ಕಾನೂನು ತಂದ ಬಿಜೆಪಿಯನ್ನು ಸೋಲಿಸಬೇಕು ಎಂದು ರೈತರಿಗೆ ಕರೆ ನೀಡಿದ್ದರು.