ಪಾಟ್ನಾ: ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಆಸ್ಪತ್ರೆಗೆ ಭೇಟಿ ನೀಡುತ್ತಾರೆಂದು ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವ್ಯವಸ್ಥಿತಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಆದರೆ, ಕೋವಿಡ್ ನಿಂದ ಬಳಲುತ್ತಿದ್ದವರ ಆರೈಕೆಯಲ್ಲಿ ಉದಾಸೀನತೆ ತೋರಿಸಿದರ ಪರಿಣಾಮವಾಗಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮಾಜಿ ಯೋಧ ಮೃತಪಟ್ಟ ಘಟನೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆದಿದೆ.
ವಾಹನದಲ್ಲೇ ಮೃತಪಟ್ಟ ಮಾಜಿ ಯೋಧ ವಿನೋದ್ ಸಿಂಗ್ ಎಂದು ತಿಳಿದು ಬಂದಿದೆ. ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವಿನಂತಿಸಿದರೂ, ಅಧಿಕಾರಿಗಳು ದಾಖಲಿಸಿಕೊಳ್ಳಲು ನಿರಾಕರಿಸಿದರು ಎಂದು ವರದಿಯಾಗಿದೆ.
ಇದನ್ನು ಓದಿ: ಕೋವಿಡ್ ಎರಡನೇ ಅಲೆ : ಅತ್ತ ಅಂತ್ಯ ಸಂಸ್ಕಾರಕ್ಕೆ ಕ್ಯೂ, ಇತ್ತ ಬೆಡ್ಗಳ ಕೊರತೆ
“ನನ್ನ ತಂದೆಗೆ ಕೋವಿಡ್ ಪಾಸಿಟಿವ್ ಆಗಿತ್ತು. ಬೇರೆಬೇರೆ ಆಸ್ಪತ್ರೆಗಳೂ ಅವರನ್ನು ದಾಖಲಿಸಿಕೊಳ್ಳಲಿಲ್ಲ. ಎನ್ಎಂಸಿಎಚ್ ಆಸ್ಪತ್ರೆ ದಾಖಲಿಸಿಕೊಳ್ಳಲು ಮುಂದಾಯಿತು ಹಾಗೂ ಆಸ್ಪತ್ರೆಯ ಹೊರಗಡೆಯೇ ನಮ್ಮನ್ನು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ಕಾಯಿಸಿದರು ಎಂದು ವಿನೋದ್ ಸಿಂಗ್ ರ ಪುತ್ರ ಹೇಳಿಕೆ ನೀಡಿದ್ದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸೋಮವಾರ ಸಂಜೆ ಅವರನ್ನು ಪಾಟ್ನಾಗೆ ಕರೆ ತರಲಾಗಿತ್ತು. ಈ ವೇಳೆ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಕರೆದೊಯ್ದಾಗ ಆಸ್ಪತ್ರೆಯಲ್ಲಿ ಬೆಡ್ ಗಳಿಲ್ಲ ಎಂದು ವೈದ್ಯರು ನಿರಾಕರಿಸಿದರು. ಅಲ್ಲಿಂದ ನಾವು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಅವರನ್ನು ನಲಂದ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದಾಗ ಎಲ್ಲರೂ ಆರೋಗ್ಯ ಸಚಿವರನ್ನು ಸ್ವಾಗತಿಸುವಲ್ಲಿ ನಿರತರಾಗಿದ್ದರು” ಎಂದು ವಿನೋದ್ ಸಿಂಗ್ ಪುತ್ರ ಅಭಿಮನ್ಯು ಕುಮಾರ್ ಹೇಳಿಕೆ ನೀಡಿದ್ದಾರೆ.