ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಣೆ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟರೆ ಮತ್ತೊಂದು ಕಡೆಯಲ್ಲಿ ಹತ್ತು ಕೆಜಿ ಅಕ್ಕಿ ಕೊಡಲೇ ಬೇಕು ಎಂದು ಬಿಜೆಪಿ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಪರಿಣಾಮ ಇದೀಗ ಎರಡು ರಾಷ್ಟ್ರೀಯ ಪಕ್ಷಗಳ ಅಕ್ಕಿ ರಾಜಕೀಯ ತೀವ್ರಗೊಂಡಿದೆ.
ಇದನ್ನೂ ಓದಿ:ಕೇಂದ್ರ ಸರ್ಕಾರ ಅಂದ್ರೆ ಅತ್ತೆ ಮನೆ ಅನ್ಕೊಂಡಿದ್ದೀರಾ? ಮಾಜಿ ಸಚಿವ ಆರ್ ಅಶೋಕ್ ಕಿಡಿ
ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಅಕ್ಕಿ ಪೂರೈಕೆ ಬಗ್ಗೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾಜಿ ಸಚಿವ ಆರ್. ಅಶೋಕ್, ಎಂಎಲ್ ಸಿ ರವಿಕುಮಾರ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು ಇದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಈ ಕುರಿತು ಆರ್ ಅಶೋಕ್, ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಕಿ ವಿತರಣೆ ಮುಂದೂಡಲು ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಗುಡುಗಿದ್ದಾರೆ. ಅಲ್ಲದೆ ಮಾತನಾಡಲೂ ಅವಕಾಶ ಕೊಡದೇ ಪೋಲಿಸರು ನಮ್ಮ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೋಲಿಸರ ವಿರುದ್ಧ ಗರಂ ಆಗಿದ್ದಾರೆ. ಗೂಂಡಾಗಿರಿ ಪ್ರಾರಂಭವಾಗಿದೆ ಎಂಬುವುದಕ್ಕೆ ಇದೇ ಉದಾಹರಣೆ ಎಂದಿರುವ ಅವರು, “ಪೊಲೀಸರು ನಮ್ಮ ನ್ಯಾಯಯುತ ಪ್ರತಿಭಟನೆಗೆ ಅವಕಾಶ ಕೊಡದೇ ಕಾಂಗ್ರೆಸ್ ಚಿತಾವಣೆಗೆ ಬಿಜೆಪಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದೆ. ಕಾಂಗ್ರೆಸ್ ಯಾವ ಕಾರಣಕ್ಕೆ ಪ್ರತಿಭಟನೆ ಮಾಡ್ತಿದೆ ಅಂತ ಹೇಳುವ ಕೆಲಸ ಮಾಡಬೇಕಿತ್ತು. ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ. ಅಧಿಕಾರಕ್ಕೆ ಬಂದ ದಿನದಿಂದಲೇ ಗೂಂಡಾಗಿರಿ ಆರಂಭಿಸಿದ್ದಾರೆ. ಕಾಂಗ್ರೆಸ್ ಉಚಿತವಾಗಿ 10 ಕೆಜಿ ಅಕ್ಕಿ ಕೊಡ್ತೇವೆ ಅನ್ನೋದು ಸುಳ್ಳು ಎಂದಿದ್ದಾರೆ. ಸುಳ್ಳು ಹೇಳ್ತಿರೋ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.