ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ನಾಗೇಂದ್ರ (Nagendra) ಅವರನ್ನು ಹೆಚ್ಚಿನ ವಿಚಾರಣೆಗೆ 6 ದಿನಗಳ ಕಾಲ ಇ.ಡಿ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೆಚ್ಚಿನ ವಿಚಾರಣೆ, ಮಹಜರು ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಾಗೇಂದ್ರ ಅವರನ್ನು ಯಲಹಂಕದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಜು.18 ರ ವರೆಗೆ ಇ.ಡಿ ಕಸ್ಟಡಿಗೆ ನೀಡಿ ನ್ಯಾಯಾದೀಶರು ಆದೇಶಿಸಿದ್ದಾರೆ. ಬಳಿಕ ನ್ಯಾಯಾಧೀಶರ ಮನೆಯಿಂದ ಶಾಂತಿನಗರದಿಂದ ಇ.ಡಿ ಕಚೇರಿಗೆ ಆರೋಪಿಯನ್ನು ಇ.ಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ವಿಚಾರಣೆ ವೇಳೆ ವಾಲ್ಮೀಕಿ ಬೋರ್ಡ್‌ನ 94 ಕೋಟಿಗೂ ಅಧಿಕ ಹಣದ ಅವ್ಯವಹಾರದ ಬಗ್ಗೆ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ ಎನ್ನಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳನ್ನು ಮುಂದಿಟ್ಟು ಇ.ಡಿ ವಿಚಾರಣೆ ಮಾಡಿದೆ. ಹೈದರಾಬಾದ್ ನಲ್ಲಿ ಬೇನಾಮಿ ಖಾತೆಗಳೂ ಇವೆ ಎನ್ನಲಾಗಿದೆ.
ಯೂನಿಯನ್ ಬ್ಯಾಂಕ್ ಖಾತೆ ಎಂಜಿ ರೋಡ್‌ಗೆ ವರ್ಗಾಯಿಸಿದ್ದು ಯಾಕೆ? ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದ್ದು ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ. ಅಕ್ರಮದಲ್ಲಿ ನಾಗೇಂದ್ರ ಕೈವಾಡ, ಕುಮ್ಮಕ್ಕು ಇದೆ ಎನ್ನಲಾಗಿದ್ದು, ಇದಕ್ಕೆ ಇ.ಡಿ ಅಧಿಕಾರಿಗಳಿಗೆ ಸಾಕ್ಷ್ಯಾಧಾರ ಸಿಕ್ಕಿದ್ದು, ಇದೇ ಆಧಾರದಲ್ಲೇ ಅವರ ಬಂಧನವಾಗಿದೆ ಎನ್ನಲಾಗುತ್ತಿದೆ.
ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ಗೂ ಬಂಧನ ಭೀತಿ ಉಂಟಾಗಿದೆ. ಶಾಸಕ ದದ್ದಲ್ರನ್ನೂ ಸಹ ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಈ ಮಧ್ಯೆ ನಿನ್ನೆ ಎಸ್ಐಟಿ ಕಚೇರಿಗೆ ತೆರಳಿದ್ದ ಶಾಸಕ ಬಸನಗೌಡ ದದ್ದಲ್, ವಿಚಾರಣೆ ಬಿಸಿ ಎದುರಿಸಿದರು.