ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ, ಮಾಜಿ ಸಚಿವ ಡಾ.ಜೆ. ಅಲೆಗ್ಸಾಂಡರ್ (83) ಅವರು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಅವರು ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೂಲತಃ ಕೇರಳದವರಾದ ಅಲೆಗ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ರಾಜ್ಯ ಪ್ರವೇಶ ಮಾಡಿದ್ದರು. ನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಆನಂತರ ರಾಜ್ಯ ರಾಜಕಾರಣ ಪ್ರವೇಶ ಮಾಡಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಅಲೆಕ್ಸಾಂಡರ್ ಕೆಲಸ ಮಾಡಿದ್ದರು.
ಬೆಂಗಳೂರಿನ ಅಂದಿನ ಭಾರತೀನಗರ ಕ್ಷೇತ್ರದ ಶಾಸಕರಾಗಿದ್ದ ಅಲೆಕ್ಸಾಂಡರ್ ಅವರು 33 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಲೆಕ್ಸಾಂಡರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗುವ ಮೊದಲು ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಏಕೈಕ ಅಧಿಕಾರಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಅಲೆಕ್ಸಾಂಡರ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.