ಬೆಳಗಾವಿ : ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಬಿ ಇನಾಮದಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಡರಾತ್ರಿ ವಿಧಿವಶರಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಮಂಗಳವಾರ ನಸುಕಿನ ಜಾವ ನಿಧನರಾಗಿದ್ದಾರೆ.ಪತ್ನಿ, ಮಕ್ಕಳಾದ ಬಿನಿತಾ ವಿಜಯಕುಮಾರ ಸೋನವಾಲ್ಕರ್ ವಿಕ್ರಮ ಇನಾಮದಾರ್, ಬಸನಗೌಡ ಇನಾಮದಾರ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಡಿಬಿ ಇನಾಮದಾರ್ ನಿಧನಕ್ಕೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ, ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನಾಮದಾರ್ ಅವರು, ಇನ್ನೊಂದು ಬಾರಿ ವಿಧಾನಸಭೆ ಚುನಾವಣೆ ಸ್ಪರ್ಧಿಸುವ ತಯಾರಿಯಲ್ಲಿದ್ದರು. ಚುನಾವಣೆ ಘೋಷಣೆಗೂ ಮುಂಚೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡಿಕೊಂಡಿದ್ದರು. ಮಾ.3 ರಂದು ಕಿತ್ತೂರು ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದ ಡಿ.ಬಿ.ಇನಾಮದಾರ್ ಅವರಿಗೆ ಉಸಿರಾಟ ತೊಂದರೆ ಕಾಣಿಕೊಂಡಿದ್ದರಿಂದ ಮಾ.8 ರಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.
1983ರಲ್ಲಿ ಜನತಾ ಪಕ್ಷದಿಂದ ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದರು. ಒಟ್ಟು 9 ಚುನಾವಣೆಗಳನ್ನ ಎದುರಿಸಿ ಐದು ಚುನಾವಣೆಗಳಲ್ಲಿ ಗೆಲುವು ದಾಖಲಿಸಿದ್ದರು. ದೇವರಾಜ ಅರಸು, ಎಸ್.ಎಂ ಕೃಷ್ಣಾ, ಎಸ್. ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದರು. 1983, 1985 ರಲ್ಲಿ ಜನತಾ ಪಕ್ಷದಿಂದ, 1994, 1999, 2013ರ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. 1989, 2004, 2008 ಹಾಗೂ 2018 ರಲ್ಲಿ ಸೋಲು ಕಂಡಿದ್ದರು.
ಇದನ್ನೂ ಓದಿ : ಬಿಜೆಪಿಯಿಂದ ‘ಪ್ರಜಾಪ್ರಭುತ್ವವು ಆಕ್ರಮಣಕ್ಕೆ ಸಿಲುಕಿದೆ’ : ಕಾಂಗ್ರೆಸ್ ಆರೋಪ
ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳದ ಕಾರಣದಿಂದ ಕಾಂಗ್ರೆಸ್ ಟಿಕೆಟ್ ಡಿ.ಬಿ.ಇನಾಮದಾರ್ ಸೊಸೆ ಲಕ್ಷ್ಮಿಇನಾಮದಾರ್ ಅವರಿಗೆ ನೀಡಬೇಕು ಎಂದು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರಾದರೂ ಕಾಂಗ್ರೆಸ್ ಪಕ್ಷ, ಬಾಬಾಸಾಹೇಬ್ ಪಾಟೀಲ್ ರಿಗೆ ಟಿಕೆಟ್ ನೀಡಿತ್ತು.ಡಿ.ಬಿ.ಇನಾಮದಾರ್ ತಂದೆ ಬಿ.ಡಿ.ಇನಾಮದಾರ್ ಕೂಡ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾಗಿದ್ದರು.