ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಸಿಸಿಐ ಸಭೆಯಲ್ಲಿ ರೋಜರ್ ಬಿನ್ನಿ ಅವರ ಆಯ್ಕೆಯನ್ನು ಘೋಷಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಮೂಲಕ ಬಿಸಿಸಿಐನ 36 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೌರವ್ ಗಂಗೂಲಿ ಅವರ ನಂತರ ಈ ಸ್ಥಾನವನ್ನು ಅಲಂಕರಿಸಿರುವ 67 ವರ್ಷದ ಬಿನ್ನಿ ಅವರು ಮಾತ್ರ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಇವರನ್ನು ಬಿಟ್ಟು ಮತ್ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರೋಜರ್ ಬಿನ್ನಿ ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅನುಭವ ರೋಜರ್ ಬಿನ್ನಿ ಅವರಿಗಿದೆ. ಬಿಸಿಸಿಐ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಜಯ್ ಶಾ ಮುಂದುವರಿಯಲಿದ್ದಾರೆ.
1955 ಜುಲೈ 19ರಂದು ಜನಿಸಿರುವ ರೋಜರ್ ಬಿನ್ನಿ 1979ರಿಂದ 1987ರವರೆಗೆ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಬಲಗೈ ಬ್ಯಾಟಿಂಗ್ ಶೈಲಿ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದರು. 1979ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಜರ್ ಬಿನ್ನಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅವರು 46 ರನ್ ಗಳಿಸಿದ್ದರು.
ಭಾರತದ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಜರ್ ಬಿನ್ನಿ ಬ್ಯಾಟಿಂಗ್‌ನಲ್ಲಿ 23.06 ಸರಾಸರಿಯಲ್ಲಿ 830 ರನ್ ಗಳಿಸಿದ್ದಾರೆ ಮತ್ತು 5 ಅರ್ಧಶತಕ ಬಾರಿಸಿದ್ದಾರೆ. ಇನ್ನು 72 ಏಕದಿನ ಪಂದ್ಯಗಳನ್ನು ಆಡಿರುವ ಅವರು, 16.13 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 27 ಟೆಸ್ಟ್ ಪಂದ್ಯಗಳಿಂದ 47 ವಿಕೆಟ್ ಪಡೆದುಕೊಂಡಿದ್ದಾರೆ ಮತ್ತು 2 ಬಾರಿ 5 ವಿಕೆಟ್ ಗೊಂಚಲು ಗಳಿಸಿದ್ದಾರೆ. 72 ಏಕದಿನ ಪಂದ್ಯಗಳಿಂದ 77 ವಿಕೆಟ್ ಪಡೆದುಕೊಂಡ ಸಾಧನೆ ಮಾಡಿದ್ದಾರೆ.
ಬಿಸಿಸಿಐನ ಇತರೆ ಸ್ಥಾನದಲ್ಲಿ ಕೂಡ ಮಹತ್ತರ ಬದಲಾವಣೆ ಆಗಿದ್ದು, ಮುಂಬೈನ ಬಿಜೆಪಿಯ ಪ್ರಭಾವಿ ನಾಯಕ ಆಶಿಶ್ ಶೀಲರ್ ಖಜಾಂಚಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಖಜಾಂಚಿ ಸ್ಥಾನದಿಂದ ನಿರ್ಗಮಿಸಿರುವ ಅರುಣ್ ಸಿಂಗ್ ಧುಮಲ್ ಐಪಿಎಲ್ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ. ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್‌ನ ದೇವಜಿತ್ ಸೈಕೀಯಾ ನೂತನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಶೇಕ್ ದಾಲ್ಮಿಯಾ, ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿ ಇರಲಿದ್ದಾರೆ. ಕಳೆದ ಬಿಸಿಸಿಐನಲ್ಲಿ ಐಪಿಎಲ್ ಜಿಸಿಯಲ್ಲಿದ್ದ ಮಾಮನ್ ಮಜುಂದಾರ್ ಅಪೆಕ್ಸ್ ಕೌನ್ಸಿಲ್‌ಗೆ ವರ್ಗವಾಗಿದ್ದಾರೆ.
ಬಿಸಿಸಿಐ ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಬೇಕೆಂದ ಧ್ವನಿ ಹೆಚ್ಚಾಗುತ್ತಿದೆ.
ಇಂದಿನ ಬಿಸಿಸಿಐ ಸಭೆಯಲ್ಲಿ ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿಗೆ ಸ್ಪರ್ಧಿಸುವ ಕುರಿತಾಗಿ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಮುಂದೆ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ತಿಳಿಸಿದ್ದಾರೆ.