ಬೆಂಗಳೂರು: ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಸರಿಯಾದ ಮಹಿತಿ ನೀಡಿ, ಇಲ್ಲದಿದ್ದರೆ ಕರ್ನಾಟಕ ಲೋಕ ಸೇವಾ ಆಯೋಗದ ಗೇಟ್ ಮುಂದೆ ಮಂಗಳವಾರ ಬೆಳಿಗ್ಗೆ ಆಯೋಗದ ಬಾಗಿಲು ತಟ್ಟುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಆಡಳಿತ ಯಂತ್ರದ ನಿರ್ವಹಣೆಗೆ ದಕ್ಷ ಮತ್ತು ಸಮರ್ಥ ಮಾನವ ಸಂಪನ್ಮೂಲವನ್ನು ಸಕಾಲದಲ್ಲಿ ಒದಗಿಸಬೇಕಾದ ಕೆಪಿಎಸ್‌ಸಿ ತನ್ನ ನಿಷ್ಕ್ರಿಯತೆಯ ಮೂಲಕ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಂಸ್ಥೆಯ ಸ್ವಾಯತ್ತತೆಯೇ ಅದರ ಜವಾಬ್ದಾರಿ ನಿರ್ವಹಣೆಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಕಾಲದಲ್ಲಿ ಪರೀಕ್ಷೆ ಫಲಿತಾಂಶ ನಡೆಸದೇ, ವಿವಿಧ ಇಲಾಖೆಗಳ ನೇಮಕಾತಿ ಪಟ್ಟಿ ಅಂತಿಮಗೊಳಿಸದೇ ಇರುವುದರಿಂದ ತೊಂದರೆಯಾಗುತ್ತಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಭರವಸೆ ಕಳೆದುಕೊಳ್ಳುವ ಮುನ್ನ ಮೌಲ್ಯಮಾಪನ ಕುರಿತು ಮಾಹಿತಿ ನೀಡಿ, ಇಲ್ಲವಾದರೆ ಮೇ 31 ರಂದು ಕರ್ನಾಟಕ ಲೋಕ ಸೇವಾ ಆಯೋಗದ ಮುಖ್ಯದ್ವಾರದ ಮುಂದೆ ಬೆಳಗ್ಗೆ ನಿಲ್ಲುವುದಾಗಿ ಮಾಜಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. 2021ರ ಫೆಬ್ರುವರಿಯಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ. ಅದೇ ರೀತಿ ಹತ್ತಾರು ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಸ್ಥೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಇಡೀ ಆಡಳಿತ ವ್ಯವಸ್ಥೆ ನಲುಗುತ್ತಿದೆ ಎಂದು ಆರೋಪಿಸಿದ್ದಾರೆ.
ಯು.ಪಿ.ಎಸ್.ಸಿ ಮಾದರಿಯಲ್ಲಿ ಸಂಸ್ಥೆ ವೃತ್ತಿಪರವಾಗಿ ಕಾರ್ಯ ನಿರ್ವಹಿಸಲು ಏಕೆ ಸಾಧ್ಯವಿಲ್ಲ? ಕೆ.ಪಿ.ಎಸ್.ಸಿ ಕಳೆದ ಹಲವು ವರ್ಷಗಳಲ್ಲಿ ನಡೆಸಿರುವ ಪರೀಕ್ಷೆಗಳೆಷ್ಟು? ಎಷ್ಟು ಫಲಿತಾಂಶ ನೀಡಲಾಗಿದೆ? ಎಷ್ಟು ಯುವಕರಿಗೆ ಉದ್ಯೋಗ ದೊರಕಿಸಲಾಗಿದೆ? ವಿಳಂಬ ಧೋರಣೆಗೆ ಕಾರಣ ಏನು? ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯ ಕ್ರಿಯಾಯೋಜನೆ ಏನು? ಎನ್ನುವ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಕೆ.ಪಿ.ಎಸ್.ಸಿ ಬಾಗಿಲ ಮುಂದೆ ನಿಲ್ಲಲಿದ್ದೇನೆ. ಸಂಸ್ಥೆಯ ಬಾಗಿಲು ತಟ್ಟುವ ಮೂಲಕ ಮಾಹಿತಿ ಒದಗಿಸಲು ಆಗ್ರಹಿಸುತ್ತೇನೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.