ಬೆಂಗಳೂರು : ಬ್ಯಾಂಕ್ ಖಾತೆಯ ಪ್ಯಾನ್ ನಂಬರ್ ನವೀಕರಣ ಮಾಡಬೇಕು’ ಎಂದ ಸೈಬರ್ ವಂಚಕರ ಮಾತು ನಂಬಿ ಒಟಿಪಿ (ಒನ್ ಟೈಂ ಪಾಸ್‌ವರ್ಡ್) ನೀಡಿದ್ದ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಶಂಕರ್ ಬಿದರಿ ಅವರು ₹ 89 ಸಾವಿರ ಕಳೆದುಕೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಾಯವಾಣಿ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು ಈ ಕೃತ್ಯ ಎಗಿದ್ದಾರೆ. ವಂಚನೆ ಸಂಬಂಧ ಶಂಕರ್ ಬಿದರಿ ದೂರು ನೀಡಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಶಂಕರ್ ಬಿದರಿ ಮೊಬೈಲ್‌ಗೆ ಅ. 11ರಂದು ಸಂದೇಶ ಕಳುಹಿಸಿದ್ದ ವಂಚಕರು, ‘ನಿಮ್ಮ ಪ್ಯಾನ್ ನಂಬರ್ ನವೀಕರಣ ಮಾಡಬೇಕು. ಮಾಡದಿದ್ದರೆ, ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ’ ಎಂಬುದಾಗಿ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸಂದೇಶ ಬಂದ ಕೆಲ ಹೊತ್ತಿನ ನಂತರ ಬಿದರಿ ಅವರಿಗೆ ಕರೆ ಮಾಡಿದ್ದ ವಂಚಕರು, ಎಸ್‌ಬಿಐ ಸಹಾಯವಾಣಿ ಪ್ರತಿನಿಧಿ ಎಂಬುದಾಗಿ ಪರಿಚಯಿಸಿಕೊಂಡಿದ್ದರು. ‘ಪ್ಯಾನ್ ನಂಬರ್ ನವೀಕರಣ ಮಾಡುತ್ತಿದ್ದೇವೆ. ನಿಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ ತಿಳಿಸಿ’ ಎಂದಿದ್ದರು. ಅವರ ಮಾತು ನಂಬಿದ್ದ ಶಂಕರ್ ಬಿದರಿ, ಒಟಿಪಿ ಹಂಚಿಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಯಿಂದ ₹ 89 ಸಾವಿರ ಕಡಿತವಾಗಿದೆ’ ಎಂದೂ ಮೂಲಗಳು ಹೇಳಿವೆ.
ವಂಚನೆ ಹಿನ್ನಲೆ ಆಗ್ನೇಯ ವಿಭಾಗ ಸಿಇಎನ್ ಠಾಣೆಗೆ ಬಿದರಿ ದೂರು ನೀಡಿದ್ದಾರೆ. ದೂರಿನ ಹಿನ್ನಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಇನ್ನೂ ಎಚ್ಚರಗೊಳ್ಳದ ಜನ : ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಜನರು, ಇಂಟರ್ನೆಟ್ ಬಳಕೆದಾರರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಯಾರೂ ಕೂಡ ಅನಗತ್ಯವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅಥವಾ ಯಾವುದೇ ಮಾಹಿತಿ ನೀಡಬಾರದು. ಏನೇ ವಿವರ ಪಡೆಯುವುದಿದ್ದರೂ ಅಥವಾ ಕೊಡುವುದು ಇದ್ದರೂ ಅದು ಅಧಿಕೃತ ಸಿಬ್ಬಂದಿ ಎಂದು ತಿಳಿದ ಬಳಿಕವೇ ಕಾರ್ಯೋನ್ಮುಖರಾಗಬೇಕು.
ಸೈಬರ್ ಅಪರಾಧದ ಬಗ್ಗೆ ಪೊಲೀಸ್ ಇಲಾಖೆ ಆಗಾಗ ಎಚ್ಚರಿಸುವ ಕೆಲಸ ಮಾಡಿಕೊಂಡೆ ಬಂದಿದೆ. ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ.. ಆಧಾರ್ ಅಪ್ ಡೇಟ್ ಮಾಡಬೇಕಿದೆ.. ಬಹುಮಾನ ಬಂದಿದೆ.. ಸ್ಕ್ರಾಚ್ ಕಾರ್ಡ್ ಕಳಿಸಿದ್ದೇವೆ ಸ್ಕ್ರಾಚ್ ಮಾಡಿ.. ಕೋಡ್ ಸ್ಕಾನ್ ಮಾಡಿ.. ನಿಮಗೆ ಲಾಟರಿ ತಾಗಿದೆ ಹೀಗೆ ಹಲವಾರು ನೆಪದಲ್ಲಿ ಸೈಬರ್ ವಂಚಕರು ಕರೆ ಮಾಡುತ್ತಾರೆ.. ಇಲ್ಲ ಮೊಬೈಲ್ ಗೆ ಮೆಸೇಜ್ ಕಳಿಸುತ್ತಾರೆ. ಇದನ್ನು ನಿಜ ಎಂದು ನಾವು ಅವರು ಹೇಳಿದಂತೆ ಕೇಳುತ್ತೇವೆ. ಒಂದು ಚೂರು ಜಾಗೃತೆ ತಪ್ಪಿದರೂ ಅವರ ಬಲೆಗೆ ನಾವು ಬೀಳಬೇಕಾಗುತ್ತದೆ.
ಎಟಿಎಂ ಕಾರ್ಟ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಶಾಪಿಂಗ್ ಕಾರ್ಡ್ಗಳು ಅಥವಾ ಯುಪಿಐ ಐಡಿ, ಫೋನ್ ಪೇ, ಗೂಗಲ್ ಪೇ ಇತ್ಯಾದಿಗಳು ಮತ್ತು ಆನ್ಲೈನ್ ಬ್ಯಾಂಕಿಂಗ್ ನಡೆಸುವಾಗಲೂ ಎಚ್ಚರದಿಂದಿರಿ. ನಿಮ್ಮ ಖಾತೆಯ ವಿವರಗಳು, ಪಾಸ್‌ವರ್ಡ್ ನಿಮ್ಮ ಬಳಿ ಮಾತ್ರ ಇರಲಿ. ಯಾವುದೇ ಕಾರಣಕ್ಕೂ ಯಾರೋ ಕೇಳಿದರು ಎಂದು ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಸುಮ್ಮನೆ ಹಂಚಿಕೊಳ್ಳಬೇಡಿ. ಜಾಗ್ರತೆ ತಪ್ಪಿದರೆ ನಿಮ್ಮ ಹಣ ವಂಚಕರ ಕೈ ಸೇರುವುದು ಗ್ಯಾರಂಟಿ.