ಬೆಂಗಳೂರು: ಕಳೆದ ಬಾರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ಗೆ ಕಾಂಗ್ರೆಸ್ ನವರು ಕಿವಿಯಲ್ಲಿ ಚೆಂಡು ಹೂ ಇಟ್ಕೊಂಡು ಬಂದಿದ್ದರು.ಈಗ ಆರು ಕೋಟಿ ಜನಗಳ ಕಿವಿಗೆ ಇವರೇ ಹೂ ಇಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ಅನ್ನು ಟೀಕಿಸಿದ್ದಾರೆ.
ಇದನ್ನೂ ಓದಿ:Karnataka Budget 2023-24 | ರಾಜ್ಯವನ್ನು ಹಿಂದಕ್ಕೆ ತಳ್ಳುವ ರಿವರ್ಸ್ ಗೇರ್ ಬಜೆಟ್: ಮಾಜಿ ಸಿಎಂ ಬೊಮ್ಮಾಯಿ
ಜುಲೈ-07 ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿಕೆ, ಇವತ್ತಿನ ಬಜೆಟ್ ಟೀಕೆ ಮಾಡುವ ಆಗಿದೆ. ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್ ಎಂದಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ಹಿಂದಿನ ರಾಜ್ಯ ಬಿಜೆಪಿ ಸರಕಾರವನ್ನು ನಿಂದಿಸಲು ಮೀಸಲಾದ ಬಜೆಟ್ ಹಾಗೂ ಅನೇಖ ಎಟಿಎಂ ಗಳನ್ನು ತುಂಬಿಸಿಕೊಳ್ಳಲು ಮಾಡಲಾದ ಬಜೆಟ್ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು. ಹಿಂದೆ ಬಸವರಾಜ್ ಬೊಮ್ಮಾಯಿ ಅವರ ಲೇಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಇದು ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
ಆರೋಗ್ಯ ಕ್ಷೇತ್ರ,ಶಿಕ್ಷಣ ಕ್ಷೇತ್ರ ಅತ್ಯಂತ ಪ್ರಮುಖವಾದದ್ದು. ಹೀಗಾಗಿ ಈ ಬಜೆಟ್ನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.