ಬಳ್ಳಾರಿ: ರಾಜ್ಯ ಸರ್ಕಾರವು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಔಷಧಗಳ ಖರೀದಿ ಹಾಗೂ ನಿಗದಿತ ಪ್ರಯೋಗಾಲಯಗಳಲ್ಲಿ ಔಷಧದ ಮಾದರಿ ಪರೀಕ್ಷೆಯಲ್ಲಿ ಆಗಿರುವ ನಿಯಮಗಳ ಉಲ್ಲಂಘನೆ, ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳ ಪಾತ್ರ ಹಾಗೂ ಲೋಪದ ಕುರಿತು ಪರಿಶೀಲಿಸಲು ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ. ಕನಗವಲ್ಲಿ ನೇತೃತ್ವದಲ್ಲಿ ನಾಲ್ವರು ಸದಸ್ಯರ ಪರಿಶೀಲನಾ ತಂಡ ರಚಿಸಿ ಆದೇಶಿಸಿದೆ.
ಐದು ದಿನಗಳೊಳಗೆ ಈ ಸಮಿತಿಯು ವಿವರವಾದ ವರದಿಯನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಪರಿಶೀಲನಾ ತಂಡದಲ್ಲಿ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ್, ಬೆಂಗಳೂರಿನ ಬಿಎಂಎಸ್ ಕಾಲೇಜಿನ ಮೈಕ್ರೋಬಯೋಲಜಿಸ್ಟ್ ಡಾ. ಅಸೀಮಾ ಬಾನು, ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಯಿಂದ ನಾಮನಿರ್ದೇಶಿತರಾಗಿರುವ ಹಿರಿಯ ಫಾರ್ಮಾಕಾಲಜಿ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ.
ಇದನ್ನೂ ಓದಿ: ಜನರ ನೈಜ ಸಮಸ್ಯೆ ಮುಚ್ಚಿಡಲು ಕೋಮುವಾದ ಮುನ್ನಲೆಗೆ: ಯಾದವ ಶೆಟ್ಟಿ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸರಣಿ ಸಾವು ಹಾಗೂ ಈ ರೀತಿಯ ಪಕರಣಗಳು ಮರುಕಳುಹಿಸದಂತೆ ಮೂಲ ಆರೋಗ್ಯ ವ್ಯವಸ್ಥೆಗೆ ಸೂಕ್ತ ಶಿಫಾರಸುಗಳೊಂದಿಗೆ ಸುಧಾರಣೆ ತರಲು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯ ತನಿಖೆಗೆ ನೆರವಾಗುವಂತೆ ಐಎಎಸ್ ಅಧಿಕಾರಿ ಎಂ.ಕನಗವಲ್ಲಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚಿಸಲಾಗಿದೆ.
ಪರಿಶೀಲನಾ ತಂಡದ ಕೆಲಸಬೇಕು?
ಪಶ್ಚಿಮ ಬಂಗಾ ಫಾರ್ಮಾಸೂಟಿಕಲ್ ಕಂಪನಿಯಿಂದ 192 ಬ್ಯಾಚ್‌ಗಳ ಐವಿ ರಿಂಗರ್ ಲಾಟ್ ಖರೀದಿಗೆ ಆದೇಶ ಹೊರಡಿಸಿದ ದಿನದಿಂದ ನ.30 ರವರೆಗಿನ ಎಲ್ಲಾ ಕ್ರಮಗಳನ್ನು ವಿಶ್ಲೇಷಿಸಬೇಕು. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳ ಪಾತ್ರ ಹಾಗೂ ಲೋಪಗಳನ್ನು ಪರಿಶೀಲಿಸಿ, ತಪ್ಪಿತಸ್ಥರಿಗೆ ಜವಾಬ್ದಾರಿ ನಿಗದಿ ಮಾಡಬೇಕು.
ಗುಣಮಟ್ಟ ಪರೀಕ್ಷೆ, ಸುರಕ್ಷತೆಗೆ ಸಂಬಂಧಿಸಿ ವೈದ್ಯಕೀಯ ಸರಬರಾಜು ನಿಗಮ ಪಾಲಿಸುತ್ತಿರುವ ನಿಯಮಗಳನ್ನು ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಮಾರ್ಪಾಡಿಗೆ ಸೂಚಿಸಬೇಕು. ತಮಿಳುನಾಡು ಹಾಗೂ ರಾಜಸ್ಥಾನ ಮಾದರಿಯಂತೆ ಔಷಧ ಖರೀದಿ, ಗುಣಮಟ್ಟ ಪರೀಕ್ಷೆ, ಅಡ್ಡಪರಿಣಾಮಗಳ ವರದಿ ಇತ್ಯಾದಿಗಳನ್ನು ನಿಗಮದ
ನಿಯಮಗಳೊಂದಿಗೆ ಹೋಲಿಕೆ ಮಾಡಿ, ಸೂಕ್ತ ಶಿಫಾರಸು ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇದನ್ನೂ ನೋಡಿ: ಪರಿಸರ ಅರಿವು ಅಭಿಯಾನ ಉಪನ್ಯಾಸ|ಹವಾಮಾನ ಬದಲಾವಣೆ : ಕೃಷಿ ಮತ್ತು ಆಹಾರ ಭದ್ರತೆ Janashakthi Media