ಹಾವೇರಿ: ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ಮಾಡುವ, ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರಿಗೆ ಪಿಂಚಣಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್, ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು ಭವಿಷ್ಯ
ಸೋಮವಾರ ನಗರದ ತಹಶೀಲ್ದಾರ ಕಛೇರಿ ಎದುರು ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರವರ ಮೂಲಕ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರು. ಬದುಕಿನ ಕೊನೆಗಾಲದಲ್ಲಿ ಆರ್ಥಿಕವಾಗಿ ಹಾಗೂ ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಯೋಜನೆಯನ್ನು ಜಾರಿ ಮಾಡಬೇಕು ಹಾಗೂ ಸೂಕ್ತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಈ ಹಿಂದೆ ಪ್ರಾರಂಭಿಸಲಾದ ಕಾಯಕ ನಿಧಿ ಯೋಜನೆಯಡಿ ವೈದ್ಯಕೀಯ ಮರುಪಾವತಿ ಪದ್ಧತಿ ಮುಂದುವರೆಸಬೇಕು. 60 ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ ಒಂದು ಲಕ್ಷ ರೂಪಾಯಿ ನಿವೃತ್ತಿ ಪರಿಹಾರ (ಗ್ರ್ಯಾಚೂಟಿ) ನೀಡಬೇಕು. ಮರಣ ಪರಿಹಾರವನ್ನು ಕನಿಷ್ಠ ಎರಡು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದರು.
ಇದನ್ನೂ ಓದಿ: ‘ಲಾಪತಾ ಲೆಡೀಸ್’ ಸಿನಿಮಾ 2025ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ
ಮಿಲ್-ಗೋಡೌನ್-ವೇರಹೌಸ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಭವಿಷ್ಯನಿಧಿ, ವಿಮಾ ಸೌಲಭ್ಯ, ಬೋನಸ್ ಸೇರಿದಂತೆ ಅಗತ್ಯ ಕಾರ್ಮಿಕ ಕಾಯಿದೆಗಳ ಜಾರಿಯಿಂದ ವಂಚಿತರಾಗಿದ್ದಾರೆ. ಈ ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ ಕಾನೂನುಗಳನ್ನು ಅನ್ವಯಿಸಬೇಕು. ಎಲ್ಲ ವಿಭಾಗದ ಹಮಾಲರಿಗೆ ಕನಿಷ್ಠ ವೇತನ ಜಾರಿ ಮಾಡಲು ಮುತುವರ್ಜಿವಹಿಸಬೇಕು.
ಎಲ್ಲ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ರಾಜ್ಯ, ಕೇಂದ್ರ ಸರಕಾರಗಳ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ಯೋಗ್ಯವಾದ ವಸತಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಮಾಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಬಸವರಾಜ ಪೂಜಾರ, ಮಲ್ಲೇಶಪ್ಪ ಮದ್ಲೇರ, ಹನುಮಂತಪ್ಪ ಕನಕಾಪೂರ, ಹುಸೇನಸಾಬ ಏರಿಮನಿ, ಬಸವಣ್ಣೆಪ್ಪ ಕರೆಬಸಪ್ಪನವರ, ಭೀಮಣ್ಣ ಕನವಳ್ಳಿ, ಈರಪ್ಪ ವಡ್ಡರ, ರಾಜು ಮಾಳಮ್ಮನವರ, ಮೆಹಬೂಬ್ ಅಲಿ ಬಡಿಗೇರ, ಬಸವರಾಜ ಬೂದಿಹಾಳ, ರುದ್ರಪ್ಪ ಹುಬ್ಬಳ್ಳಿ, ಬೀರಪ್ಪ ಡಿಳ್ಳೆಪ್ಪನವರ, ಶಿವಪ್ಪ ಕೋಡಿಹಳ್ಳಿ, ನಿಸಾರ್ ಅಹಮದ್ ಮುಳಗುಂದ, ನಾಗಪ್ಪ ಧಾರವಾಡ, ಕುಮಾರ ದಿಂಡಿಮನಿ, ರೇವಣೆಪ್ಪ ಬರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಬಿಜೆಪಿ ಶಾಸಕರೆಲ್ಲರೂ ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳಿ: ಕಾಂಗ್ರೆಸ್ ಶಾಸಕ ರಂಗನಾಥJanashakthi Media