ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ

ನವದೆಹಲಿ: ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಹಿರಿಯ ರಾಜಕೀಯ ನೇತಾರ ಯಶವಂತ್‌ ಸಿನ್ಹಾ ಅವರು ರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಯಶವಂತ್‌ ಸಿನ್ಹಾ ಅವರು ನವದೆಹಲಿಯ ಸಂಸತ್ತಿನಲ್ಲಿ ಇಂದು(ಜೂನ್‌ 27) ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎನ್‍ಸಿಪಿಯ ಶರದ್ ಪವಾರ್, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಆರ್‌ಎಲ್‍ಡಿ ಮುಖ್ಯಸ್ಥ ಜಯಂತ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

ಜುಲೈ 18, 2022 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಯಶವಂತ್​ ಸಿನ್ಹಾ ಅವರನ್ನು ಕಣಕ್ಕೆ ಇಳಿಸಿದೆ. ಇವರ ವಿರುದ್ಧ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಪ್ರತಿಸ್ಪರ್ಧಿಯಾಗಿದ್ದಾರೆ.

ಯಶವಂತ್ ಸಿನ್ಹಾ ಅವರನ್ನು ಟಿಎಂಸಿ, ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಶಿವಸೇನೆ, ಎನ್‍ಸಿಪಿ, ಎಸ್‍ಪಿ, ಡಿಎಂಕೆ, ಆರ್‌ಜೆಡಿ, ಎನ್‍ಸಿ, ಎಐಯುಡಿಎಫ್, ಎನ್‍ಸಿಪಿ, ಆರ್‌ಎಲ್‍ಡಿ, ಪಿಡಿಪಿ, ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳು ಬೆಂಬಲಿಸಿವೆ.

ಬಿಜೆಪಿ ಪಕ್ಷ ತೊರೆದು ಟಿಎಂಸಿ ಪಕ್ಷ ಸೇರಿದ್ದ ಯಶವಂತ್​ ಸಿನ್ಹಾ, ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದರಿಂದ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪ್ರತಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ವಿಶಾಲ ತಳಹದಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸಿನ್ಹಾ ತಿಳಿಸಿದ್ದರು.

6 ನವೆಂಬರ್ 1937 ರಂದು ಜನಿಸಿದ ಯಶವಂತ್ ಸಿನ್ಹಾ ಮಾಜಿ ಹಣಕಾಸು ಮಂತ್ರಿಯಾಗಿ 1990-1991 ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಮತ್ತು ಮಾರ್ಚ್ 1998-ಜುಲೈ 2002 ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜುಲೈ 2002ರಿಂದ ಮೇ 2004ರವರೆಗೆ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *