ಕಾರವಾರ :- ಕೇಣಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಮೊದಲ ಬಾರಿಗೆ ದೋಣಿ, ಬೋಟುಗಳೊಂದಿಗೆ ಅರಬ್ಬಿ ಸಮುದ್ರದಲ್ಲಿ ಸೇರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ಮೂಲಕ ಯಾವುದೇ ಕಾರಣಕ್ಕೂ ಮೀನುಗಾರಿಕೆ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಇದನ್ನು ಓದಿ :-ಬೆಂಗಳೂರು| ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರ ಡಿನ್ನರ್ ಮೀಟಿಂಗ್
ಇದೇ ಮೊದಲಬಾರಿಗೆ ಅಂಕೋಲಾದ ಕೇಣಿ ಬಂದರು ನಿರ್ಮಿಸಲು ಸರ್ವೆ ನಡೆಸುವುದಕ್ಕಾಗಿ ಜಿಲ್ಲಾಡಳಿತ ಕೂಡ ಮೊದಲ ಸಲ ಅರಬ್ಬಿ ಸಮುದ್ರದಲ್ಲಿ ನಿಷೇಧಾಜ್ಞೆ ಹೇರಿದೆ. ಹಾಗಾಗಿ ಪ್ರತಿಭಟನಾಕಾರರು ಪಕ್ಕದ ಬೇಲೇಕೇರಿ ಕಡಲತೀರ ಮತ್ತು ಸಮುದ್ರ ವ್ಯಾಪ್ತಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮೀನುಗಾರರು, ಕೃಷಿಕರು ಮತ್ತು ಇತರ ಸಮುದಾಯದವರೆಲ್ಲ ಸೇರಿ ಕಡಲ ತೀರದಲ್ಲಿ ಮಾನವ ಸರಪಳಿ ನಡೆಸಿದರು. ಮೀನುಗಾರರು ದೋಣಿ, ಬೋಟುಗಳ ಮೂಲಕ ಅರಬ್ಬಿ ಸಮುದ್ರದಲ್ಲಿ ಜಮಾಯಿಸಿ ವಾಣಿಜ್ಯ ಬಂದರಿಗೆ ವಿರೋಧ ವ್ಯಕ್ತಪಡಿಸಿದರು.
ಇನ್ನು ಕೇಣಿ ಭಾಗದ ಸಮುದ್ರ ಭಾಗಕ್ಕೂ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಬೇಲಿಕೇರಿ ಬಂದರು ಭಾಗದಿಂದ ಸಮುದ್ರಕ್ಕಿಳಿದ ಪ್ರತಿಭಟನಾಗಾರರಿಂದ ಬಂದರು ಯೋಜನೆ ಕೈ ಬಿಡುವಂತೆ ಕುಮಟಾ ಉಪವಿಭಾಗಾಧಿಕಾರಿಗೆ ಸಮುದ್ರದಲ್ಲಿಯೇ ಮನವಿ ಪತ್ರ ಸಲ್ಲಿಸಿದರು. ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ, ತಹಸೀಲ್ದಾರ ನರೊನಾ ಮತ್ತಿತರರು ದೋಣಿ ಮೂಲಕ ಸಮುದ್ರದಲ್ಲಿ ಹಾಜರಾಗಿದ್ದರು.
ಜಿಲ್ಲಾಡಳಿತದ ಅನುಮತಿ ಪಡೆದ ಹೋರಾಟಗಾರರು ಹಿರಿಯ ಅಧಿಕಾರಿಗಳ ಸೂಚನೆಯಿಂತೆ ಶಾಂತವಾಗಿ ಪ್ರತಿಭಟನೆ ಕೈಗೊಂಡಿದ್ದರು. ಸಮುದ್ರದಲ್ಲಿ ವೇಗವಾಗಿ ಗಾಳಿ ಬೀಸುತ್ತಿದ್ದರಿಂದ ಸಾಹಸ ಮಾಡಿ ಬೋಟುಗಳು ನಿಲ್ಲಿಸುತ್ತಿದ್ದರು. ಇನ್ನೇನು ಪ್ರತಿಭಟನೆ ಮುಕ್ತಾಯವಾಗುತ್ತದೆ ಎನ್ನುವಾಗ ಕರಾವಳಿ ಕಾವಲು ಪಡೆ ಬೋಟಿನಲ್ಲಿದ್ದ ಪೊಲೀಸರು ಏಕಾಏಕಿ ಸಣ್ಣ ಬೋಟಿನ ಮೇಲೆ ದಾಳಿ ಮಾಡಿ ಬೋಟಿನ ದಾಖಲೆಗಳನ್ನು ಕಸಿದುಕೊಂಡರು. ಅಲ್ಲದೆ, ಬೋಟನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡಿದರು.
ವಿಷಯ ತಿಳಿದ ಇತರ ಮೀನುಗಾರರು ಪೊಲೀಸ್ ಬೋಟನ್ನು ಸುತ್ತುವರಿದು ಪೊಲೀಸರ ಕ್ರಮವನ್ನು ಖಂಡಿಸಿದರು. ‘ಯಾವ ತಪ್ಪಿಗೆ ಬೋಟನ್ನು ವಶಕ್ಕೆ ಪಡೆದುಕೊಂಡಿದ್ದೀರಿ. ದಾಖಲೆ ಪಡೆಯುವಂತ ಅಪರಾಧ ಏನಾಗಿದೆ. ಕಾರಣ ಇಲ್ಲದೆ ವಿವಾಧ ಸೃಷ್ಟಿ ಮಾಡುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಿರುದ್ಧ ಘೋಷಣೆ ಕೂಗಲು ಶುರು ಮಾಡಿದರು. ಪರಿಸ್ಥಿತಿ ಸುಧಾರಿಸುವ ಬದಲು ಅಂಕೋಲಾ ಪಿಎಸ್‌ಐ, ಎಲ್ಲರ ಮೇಲೆ ಕೇಸು ದಾಖಲಿಸುವ ಬೆದರಿಕೆ ಹಾಕಿದರು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿತು.
ಮತ್ತಷ್ಟು ದೋಣಿ, ಬೋಟುಗಳು ಜಮಾಯಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಗಂಭೀವಾಗುತ್ತಿರುವುದನ್ನು ಅರಿತ ಡಿವೈಎಸ್‌ಪಿ ಗಿರೀಶ ಅವರು ಪಿಎಸ್‌ಐ ಅನ್ನು ತರಾಟೆಗೆ ತೆಗೆದುಕೊಂಡರು. ವಶಪಡಿಸಿಕೊಂಡಿದ್ದ ದಾಖಲೆ ಮತ್ತು ಬೋಟು ಬಿಟ್ಟು ಕಳುಹಿಸುವಂತೆ ಸೂಚಿಸಿದರು. ಬಳಿಕ ಪರಿಸ್ಥಿತಿ ಸುಧಾರಿಸಿತು.
ಇದೇ ಮೊದಲ ಬಾರಿ ಸಮುದ್ರದಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ತಾವಿದ್ದ ಸ್ಥಳಕ್ಕೆ ಕರೆಯಿಸಿ ಮನವಿ ನೀಡಿದ್ದಾರೆ. ಆದರೇ ನಿಷೇಧಾಜ್ಞೆ ಮಾ.15 ರ ವರೆಗೂ ಇದ್ದು ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.