ಉತ್ತಮ ಆಡಳಿತ ವ್ಯವಸ್ಥೆಗಾಗಿ, ಪಾರದರ್ಶಕ ವರ್ಗಾವಣೆ ಮತ್ತು ನೇಮಕಾತಿ ನೀತಿಗಾಗಿ:ಸಿಪಿಐಎಂ ಒತ್ತಾಯ 

ಬೆಂಗಳೂರು: ರಾಜ್ಯ ವಿಧಾನ ಸಭೆಯಲ್ಲಿ ಕಳೆದ ಮೂರು ದಿನಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ವರ್ಗಾವಣೆಯಲ್ಲಿ ಭ್ರಷ್ಠಾಚಾರ ನಡೆಯುತ್ತದೆಯೆಂದು ವಿರೋಧ ಹಾಗೂ ಆಡಳಿತ ಪಕ್ಷಗಳ ನಡುವೆ ಪರ – ವಿರೋಧವಾದ ಬಿರುಸಿನ ಚರ್ಚೆಗಳು ನಡೆಯುತ್ತಿವೆ ಮತ್ತು ಅವುಗಳು ಪರಸ್ಪರರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಕೆಸರೆರಚುತ್ತಿವೆ ಎಂದು ಸಿಪಿಐಎಂ ಆರೋಪಿಸಿದೆ.

ಈ ಕುರಿತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು, ವರ್ಗಾವಣೆ ಹಾಗೂ ನೇಮಕಾತಿಯಲ್ಲಿ ನಡೆಯುತ್ತಿರುವ ಭ್ರಷ್ಠಾಚಾರಗಳು ಹೊಸವೇನಲ್ಲ. ಇದುವರೆಗಿನ ಬಹುತೇಕ ಎಲ್ಲ ಸರಕಾರಗಳಲ್ಲು ಈ ದಂಧೆಗಳು ನಡೆಯುತ್ತಲೆ ಬರುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯವಾಗಿದೆ. ಈ ಭ್ರಷ್ಠಾಚಾರವನ್ನು ಪರಿಣಾಮಕಾರಿಯಾಗಿ ತಡೆಯುವ ನೀತಿಯ ಕುರಿತು ವಿಧಾನ ಸಭೆಯಲ್ಲಿ ಚರ್ಚೆಯಾಗದಿರುವುದು ವಿಷಾಧಕರವಾಗಿದೆ. ಖಂಡಿತಾ, ಇದನ್ನು ಪರಿಣಾಮಕಾರಿಯಾಗಿ ತಡೆಯುವ ಅಗತ್ಯವಿದೆ. ವರ್ಗಾವಣೆ ಹಾಗೂ ನೇಮಕಾತಿಗಳಲ್ಲಿ ರಾಜಕೀಯ ಪ್ರಭಾವ ಹಾಗೂ ಉನ್ನತ ಅಧಿಕಾರಿಗಳ ಹಸ್ತಕ್ಷೇಪವಿಲ್ಲದ ಪಾರದರ್ಶಕ ವರ್ಗಾವಣೆ ಹಾಗೂ ನೇಮಕಾತಿ ನೀತಿಯನ್ನು ಜಾರಿಗೆ ತರುವುದು ಅವಶ್ಯವಿದೆಯೆಂದು  ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಸರ್ವಪಕ್ಷಗಳ ಸಭೆಗೆ ಆಹ್ವಾನ ನೀಡದ ಮುಖ್ಯಮಂತ್ರಿಗಳಿಗೆ ಸಿಪಿಐಎಂ ನಿಂದ ಬಹಿರಂಗ ಪತ್ರ

ಈ ರೀತಿಯ ಭ್ರಷ್ಠತೆಯು ಮತ್ತು ಆ ಮೂಲಕ ನೇಮಕಗೊಳ್ಳುವ ಹಾಗೂ ವರ್ಗಾವಣೆಗೊಳ್ಳುವ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು, ಅವರವರ ವಲಯಗಳ ಫಲಾನುಭವಿಗಳ ನಡುವೆ ಭ್ರಷ್ಠಾಚಾರವನ್ನು ಮುನ್ನಡೆಸಲು ಪರವಾನಿಗೆ ನೀಡುತ್ತದೆ ಮತ್ತು ಆ ಮೂಲಕ ಒಟ್ಟು ಆಡಳಿತವನ್ನೇ ಭ್ರಷ್ಟಮಯಗೊಳಿಸುತ್ತದೆ.
ಆದ್ದರಿಂದ ಇದರ ನಿಗ್ರಹ ಜರೂರಾಗಿದೆ. ಆದ್ದರಿಂದ, ಭ್ರಷ್ಢ ಮುಕ್ತ ವಾತಾವರಣ ನಿರ್ಮಿಸಲು ಸರಕಾರದ ಎ ಗುಂಪಿನ ಅಧಿಕಾರಿಗಳಿಂದ ಹಿಡಿದು ಡಿ ಗುಂಪಿನ ನೌಕರರವರೆಗಿನ ವರ್ಗಾವಣೆಯ ಅವಧಿಯನ್ನು ಕನಿಷ್ಟ ಇಂತಿಷ್ಟು ವರ್ಷಗಳೆಂದು ನಿಗದಿಸಿ, ಯಾವುದೇ ಸಚಿವರ, ಶಾಸಕರ / ಉನ್ನತ ಅಧಿಕಾರಿಗಳ ಶಿಫಾರಸುಗಳಿಗೆ ಮತ್ತು ಮಧ್ಯಸ್ಥಿಕೆಗೆ ಅವಕಾಶಗಳಿಲ್ಲದಂತೆ, ಆನ್ ಲೈನ್ ಕೌನ್ಸಿಲಿಂಗ್ ವ್ಯವಸ್ಥೆಯ ಮೂಲಕ ಪಾರದರ್ಶಕ ವಾಗಿ ಮತ್ತು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಸಿಪಿಐಎಂ ಮನವಿ ಮಾಡುತ್ತದೆ. ಇಂತಹ ವ್ಯವಸ್ಥೆಯಲ್ಲಿ ವಿಕಲ ಚೇತನ ಹಾಗೂ ಮಹಿಳಾ ನೌಕರರಿಗೂ ರಿಯಾಯಿತಿಗೆ ಕ್ರಮವಹಿಸಬಹುದಾಗಿದೆ. ಈ ವ್ಯವಸ್ಥೆಗನುಗುಣವಾಗಿ ಎಲ್ಲ ಇಲಾಖೆಗಳ ವರ್ಗಾವಣೆಗೂ ಸಾಮಾನ್ಯ ನಿಯಮಗಳಿರುವಂತೆ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

ಇಂತಹದೊಂದು ವ್ಯವಸ್ಥೆಯನ್ನು ಪಕ್ಕದ ಕೇರಳ ರಾಜ್ಯ ಹೊಂದಿರುವುದನ್ನು ಗಮನಿಸಬಹುದಾಗಿದೆ. ಅದು ಮಾತ್ರವಲ್ಲಾ, ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಅದಾಗಲೇ ಜಾರಿಯಲ್ಲಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ, ಸಾರ್ವಜನಿಕ ಉದ್ದಿಮೆಗಳು ಮತ್ತು ನಿಗಮ, ಮಂಡಳಿಗಳಲ್ಲೂ ಅವುಗಳ ಮುಖ್ಯಸ್ಥರ ಹುದ್ದೆಗಳಿಗೆ ನೇಮಕಾತಿ ಮತ್ತು ವರ್ಗಾವಣೆಗಳಲ್ಲಿ ಪರಿಣಿತರ ಮಂಡಳಿಯೊಂದನ್ನು ರಚಿಸಿ, ಅರ್ಹರನ್ನು ಮಾತ್ರವೇ ನೇಮಿಸುವ ಮಾನದಂಡಗಳನ್ನು ರೂಪಿಸಿ ಅವು ಲಾಭದಾಯಕವಾಗಿರುವಂತೆ ಕ್ರಮವಹಿಸಬೇಕಾಗಿದೆ ಎಂದು ಹೇಳಿದರು.

ಇವುಗಳ ಜೊತೆಗೆ ರಾಜ್ಯ ಸರಕಾರದ ಮಂತ್ರಿ ಮಂಡಲದ ಸದಸ್ಯರು ತಾವು ಭ್ರಷ್ಠತೆಗೆ ಅವಕಾಶ ನೀಡುವುದಿಲ್ಲವೆಂದು ಘೋಷಿಸಿ, ಅದರಂತೆ ಕಾರ್ಯ ಪ್ರವೃತ್ತರಾದರೇ ಮತ್ತು ಅಂತಹ ಭ್ರಷ್ಠತೆಯ ಮೇಲೆ ಕಠಿಣ ಕ್ರಮವಹಿಸುವ ಸಂದೇಶ ನೀಡಲು ಸಾಧ್ಯವಾದರೆ, ರಾಜ್ಯದಲ್ಲಿನ ಭ್ರಷ್ಠತೆಯ ನಿಗ್ರಹಕ್ಕೆ ಭದ್ರ ಬುನಾದಿ ಬೀಳಲಿದೆ ಎಂದು ಸಿಪಿಐಎಂ ವಿವರಿಸಿದೆ. ಇದೆಲ್ಲವೂ ಸರಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಭ್ರಷ್ಠಮುಕ್ತವಾಗಿ ಒದಗಿಸಲು ಅವಶ್ಯಕವಾಗಿವೆ ಎಂದು ಯು.ಬಸವರಾಜ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *