ನವದೆಹಲಿ: ದಿವಂಗತ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ದಿಗ್ಗಜ ಡಿಯಾಗೋ ಮರಡೋನಾ ಅವರ ಗಡಿಯಾರವನ್ನು ಅಸ್ಸಾಂನಲ್ಲಿ ವಶಪಡಿಸಿಕೊಳ್ಳಲಾಗಿದೆ. ಕೆಲವು ತಿಂಗಳ ಹಿಂದೆ ದುಬೈನ ಅಂಗಡಿಯಿಂದ ಕಳವಾಗಿದ್ದ ಹೆರಿಟೇಜ್ ವಾಚನ್ನು ಪತ್ತೆಯಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ಮರಡೋನಾ ಅವರು, ನವೆಂಬರ್ 2020ರಲ್ಲಿ ನಿಧನರಾಗಿದ್ದರು. ಆದರೆ, ಅವರ ವಾಚ್ ಕಳೆದುಹೋಗಿತ್ತು. ಅಸ್ಸಾಂ ಹಾಗೂ ದುಬೈ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ಅಸ್ಸಾಂನ ಚರೈಡಿಯೊ ಜಿಲ್ಲೆಯಿಂದ ಮರಡೋನಾ ಕದ್ದ ಗಡಿಯಾರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ವಾಜಿದ್ ಹುಸೇನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪೂರ್ವ ಅಸ್ಸಾಂನ ಶಿವಸಾಗರ್ ಮೂಲದ ಭದ್ರತಾ ಸಿಬ್ಬಂದಿ ವಾಜಿದ್ ಹುಸೇನ್ ದುಬೈ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದುಬೈ ಪೊಲೀಸರ ಮಾಹಿತಿ ಮೇರೆಗೆ ಮುಂಜಾನೆ 4 ಗಂಟೆಗೆ ಹುಸೇನ್ ನನ್ನು ಬಂಧಿಸಲಾಗಿದೆ.
ಅಸ್ಸಾಂ ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆ ನೀಡಿದ್ದು, ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ಅವರ ಹ್ಯೂಬ್ಲೋಟ್ ಕಂಪನಿಯ ವಾಚ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದುಬೈ ಪೊಲೀಸರು ಫೆಡರಲ್ ಕಾನೂನು ಜಾರಿ ಸಂಸ್ಥೆಗಳ ಮೂಲಕ ಸಂಪರ್ಕ ಸಾಧಿಸಿದ್ದರು. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಶಿವಸಾಗರ ಜಿಲ್ಲೆಯ ವ್ಯಕ್ತಿ, ಆಗಸ್ಟ್ 2021ರಲ್ಲಿ ಭಾರತಕ್ಕೆ ಹಿಂದಿರುಗಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಬಳಿಕ, ಗುಪ್ತಚರ ಮಾಹಿತಿಯ ಮೇರೆಗೆ ಅಸ್ಸಾಂ ಪೊಲೀಸರು ಕಾರ್ಯಾಚರಣೆ ಕೈಗೊಂಡು ವಾಜಿದ್ ಹುಸೇನ್ ನನ್ನು ಬಂಧಿಸಿ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಫುಟ್ ಬಾಲ್ ತಾರೆ ಮರಡೋನಾ ಅವರ ಹಸ್ತಾಕ್ಷರಗಳು, ವಿಶೇಷ ವಸ್ತುಗಳನ್ನು ಜತನವಾಗಿ ಕಾಯುತ್ತಿದ್ದ ಕಂಪನಿಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವಾಜಿದ್ ಹುಸೇನ್, ಸ್ವತಃ ಮರಡೋನಾ ಅವರ ಹಸ್ತಾಕ್ಷರವಿದ್ದ ಲಿಮಿಟೆಡ್ ಎಡಿಷನ್ ಹೆರಿಟೇಜ್ ಲಕ್ಷುರಿ ವಾಚ್ ಅನ್ನು ಕಳ್ಳತನ ಮಾಡಿದ್ದ. ಆ ಬಳಿಕ ಈ ವರ್ಷದ ಆಗಸ್ಟ್ ನಲ್ಲಿ ತಂದೆಗೆ ಅನಾರೋಗ್ಯವಾದ ಕಾರಣ ನೀಡಿ ದುಬೈನಿಂದ ಅಸ್ಸಾಂಗೆ ವಾಪಸಾಗಿದ್ದ ಎಂದು ತಿಳಿದು ಬಂದಿದೆ.
ಹುಬೋಲ್ಟ್ ಹೆರಿಟೇಜ್ ಲಕ್ಷುರಿ ವಾಚ್ ನ ಮೌಲ್ಯ 20 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.