– ಹೃದಯಸ್ತಂಭನದಿಂದ ನಿಧನ
ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಫುಟ್‌ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಅವರು ಹೃದಯ ಸ್ತಂಭನದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಎರಡು ವಾರಗಳ ಹಿಂದೆಯಷ್ಟೇ ಮನೆಗೆ ಮರಳಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಇವರಿಗೆ ವಿಥ್‌ಡ್ರಾವಲ್ ಸಿಂಡ್ರೋಮ್ ಕಾಣಿಸಿಕೊಂಡಿತ್ತು.
ಬ್ಯೂನಸ್ ಐರಿಸ್ ಗಲ್ಲಿಗಳಿಂದ ಫುಟ್‌ಬಾಲ್ ಜಗತ್ತಿನ ‘ಕಿರೀಟವಿಲ್ಲದ ಮಹಾರಾಜ’ ಎಂಬ ಗರಿಮೆಯ ಡಿಯಾಗೊ ಮರಡೋನಾ ಅವರ ಪ್ರತಿಭೆಯಿಂದಲೇ 1986ರಲ್ಲಿ ಅರ್ಜೆಂಟೀನಾ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು. 1986ರ ವಿಶ್ವಕಪ್ ಟೂರ್ನಿಯಲ್ಲಿ ಮರಡೋನಾ ನಾಯಕತ್ವದ ತಂಡವು ಪಶ್ಚಿಮ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಮೆಕ್ಸಿಕೊದಲ್ಲಿ ಈ ಟೂರ್ನಿ ನಡೆದಿತ್ತು.
ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ‘ದೇವರ ಕೈ’ (The hand of God) ಎಂದೇ ಅರಿಯಲ್ಪಡುವ ವಿವಾದಿತ ಗೋಲು ಸೇರಿದಂತೆ 2 ಗೋಲುಗಳು ಜಗತ್ಪ್ರಸಿದ್ಧವಾದುದು. ವಿರುದ್ಧ ತಂಡದ 6 ಆಟಗಾರರನ್ನು ಹಿಂದೆ ತಳ್ಳಿ 60 ಮೀಟರ್ ದೂರದಿಂದ ಹೊಡೆದು ಆ ಗೋಲು ‘ಶತಮಾನದ ಗೋಲು’ ಎಂದೇ ಕರೆಯಲ್ಪಡುತ್ತದೆ. ಫುಟ್‌ಬಾಲ್ ಮಾತ್ರವಲ್ಲದೆ ವಿವಾದಗಳು, ಮಾದಕ ವಸ್ತು ಸೇವನೆಗಳಿಂದ ಮರಡೋನಾ ಸದಾ ಸುದ್ದಿಯಲ್ಲಿರುತ್ತಿದ್ದರು.
ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರದೇಶದ ಲಾನ್ಸ್ ಎಂಬಲ್ಲಿ 1960 ಅಕ್ಟೋಬರ್ 30ರಂದು ಮರಡೋನಾ ಜನಿಸಿದರು. ಬರಿಗಾಲಿನಲ್ಲೇ ಚೆಂಡುಗಳನ್ನು ಒದೆಯುತ್ತಾ ಬಡತನದಿಂದಲೇ ಬೆಳೆದು ಬಂದವರು ಅವರು. 1977 ಫೆಬ್ರುವರಿ 27ರಂದು ಹಂಗೇರಿ ವಿರುದ್ಧ ಪುಟ್‌ಬಾಲ್ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಆಗ ಅವರ ವಯಸ್ಸು 16. ಕುಳ್ಳಗಿದ್ದರೂ ಮಿಡ್‌ಫೀಲ್ಡ್‌ನಲ್ಲಿ ಪ್ರತಿಭಾವಂತ ಆಟಗಾರನಾಗಿ ಮರಡೋನಾ ಹೊರಹೊಮ್ಮಿದರು. 1978ರಲ್ಲಿ ಅರ್ಜೆಂಟೀನಾ ‘ಯೂತ್ ವರ್ಲ್ಡ್ ಕಪ್’ ಗೆದ್ದಾಗ ಮರಡೋನಾ ನಾಯಕನಾಗಿದ್ದರು.
1979 ಮತ್ತು 1980ರಲ್ಲಿ ‘ಸೌತ್ ಅಮೆರಿಕನ್ ಪ್ಲೇಯರ್ ಆಫ್ ದಿ ಇಯರ್’ ಪ್ರಶಸ್ತಿಗೂ ಭಾಜನರಾದರು. 1982ರಲ್ಲಿ ವಿಶ್ವಕಪ್ ಪಂದ್ಯ ಸೇರಿ ಅವರು ಒಟ್ಟು 4 ವಿಶ್ವಕಪ್ ಪಂದ್ಯಗಳನ್ನಾಡಿದ್ದಾರೆ.
1986ರಲ್ಲಿ ಅರ್ಜೆಂಟಿನಾವನ್ನು ವಿಶ್ವ ಚಾಂಪಿಯನ್ ಮಾಡಿದ್ದು ಇದೇ ಪ್ರತಿಭೆ. ಈ ಪಂದ್ಯದಲ್ಲಿ ಜಗತ್ತಿನ ಶ್ರೇಷ್ಠ ಆಟಗಾರನಿಗಿರುವ ಫಿಫಾ ಗೋಲ್ಡನ್ ಬೂಟ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
1994ರಲ್ಲಿ ಮಾದಕ ವಸ್ತುಸೇವನೆಯಿಂದಾಗಿ ಪಂದ್ಯದಿಂದ ಹೊರನಡೆಯಬೇಕಾಗಿ ಬಂತು. ಅರ್ಜೆಂಟೀನಾ ಪರವಾಗಿ ವಿಶ್ವಕಪ್ ಟೂರ್ನಿಯ 21 ಪಂದ್ಯಗಳಲ್ಲಿ 8 ಗೋಲು ದಾಖಲಿಸಿದ್ದಾರೆ ಮರಡೋನಾ. ನಾಲ್ಕು ವಿಶ್ವಕಪ್ ಪಂದ್ಯಗಳನ್ನಾಡಿದ್ದ ಇವರು 91 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 34 ಗೋಲು ಬಾರಿಸಿದ್ದಾರೆ. 2010ರ ವಿಶ್ವಕಪ್‌ನಲ್ಲಿ ಅರ್ಜೆಂಟಿನಾದ ಪ್ರಮುಖ ಕೋಚ್ ಆಗಿದ್ದರು.