- ಅಸನಿ ಚಂಡಮಾರುತದ ಎಫೆಕ್ಟ್
- ಉದ್ಘಾಟನೆಗೊಂಡ ಮೂರೇದಿನಕ್ಕೆ ಸಮುದ್ರಪಾಲಾದ ತೇಲುವ ಸೇತುವೆ
- ಮಲ್ಪೆಯ ತೇಲುವ ಸೇತುವೆ ಅಲೆಯ ಅಬ್ಬರಕ್ಕೆ ಛಿದ್ರ ಚಿದ್ರ
ಉಡುಪಿ: ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಮಲ್ಫೆ ಬೀಚ್‌ನ ತೇಲುವ ಸೇತುವೆ ಉದ್ಘಾಟನೆಯಾದ ಮೂರೇ ದಿನಕ್ಕೆ ಕುಸಿದು ಬಿದ್ದಿದೆ. ಈ ಸೇತುವೆ ರಾಷ್ಟ್ರಾದ್ಯಂತ ಭಾರೀ ಸುದ್ದಿಮಾಡಿತ್ತು. ಈಗ ಚೆಲ್ಲಾಪಿಲ್ಲಿಯಾಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.
ಉಡುಪಿಯ ಮಲ್ಪೆ ಬೀಚ್‌ನಲ್ಲಿ ಕಳೆದ ಶುಕ್ರವಾರ (ಮೇ 6) ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು. ಆದರೆ ಇದೀಗ ಉದ್ಘಾಟನೆಗೊಂಡ ಕೇವಲ ಮೂರೇ ದಿನದಲ್ಲಿ ಅತ್ಯಂತ ಜನಾಕರ್ಷಣೆ ಹೊಂದಿದ್ದ ಈ ಸೇತುವೆ ಛಿದ್ರ ಛಿದ್ರವಾಗಿದೆ. ಭಾನುವಾರ ರಾತ್ರಿ ಕಡಲ ಅಬ್ಬರ ಹೆಚ್ಚಾಗಿದ್ದರಿಂದ ಅಲೆಯ ಆರ್ಭಟಕ್ಕೆ ಸಿಲುಕಿ ಸೇತುವೆ ಮುರಿದು ಬಿದ್ದಿದೆ.
ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಈ ಬ್ರಿಡ್ಜ್‌ನ್ನು ನೋಡಲು ವೀಕೆಂಡ್ ಆಗಿದ್ದರಿಂದ ಶನಿವಾರ ಮತ್ತು ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ಬಂದಿದ್ದರು. ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಗಳಿಂದಲೇ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದರು. ನಿನ್ನೆ ಭಾನುವಾರ ಒಂದೇ ದಿನ ಮಲ್ಪೆ ಬೀಚ್‌ಗೆ 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.
ಕೇರಳದ ಬೇಪೋರ್ ಬೀಚ್ (kerala beypore beach) ಬಿಟ್ಟರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇರಲಿಲ್ಲ. ಕೆಲವೊಂದು ಹಿನ್ನೀರಿನ ಪ್ರದೇಶಗಳಲ್ಲಿ ಈ ಥರದ ಸೇತುವೆ ಅಳವಡಿಸಿದ್ದರೂ ಸಮುದ್ರದ ಅಲೆಗಳ ಮೇಲೆ ನಡೆದ ರೋಚಕ ಅನುಭವ ಅಲ್ಲಿ ಸಿಗುವುದಿಲ್ಲ. ಇನ್ನು ಮಲ್ಪೆಯಲ್ಲಿ ನಿರ್ಮಾಣವಾದ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿತ್ತು. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದಿತ್ತು. ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದ್ದು, ಒಬ್ಬರು ನೂರು ರೂಪಾಯಿ ಪಾವತಿಸಿ, 15 ನಿಮಿಷ ಕಾಲ ಸೇತುವೆ ಮೇಲೆ ಕಳೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ತೇಲುವ ಸೇತುವೆಯನ್ನು ಸ್ಥಳೀಯ ಮೂವರು ಉದ್ಯಮಿಗಳು ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದರು.
ಸೇತುವೆ ಮುರಿಯಲು ‘ಅಸನಿ ಚಂಡಮಾರುತ’ ಕಾರಣ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಅಸನಿ ಸೈಕ್ಲೋನ್ ಉಂಟಾದ ಹಿನ್ನೆಲೆ ನಿನ್ನೆ ಮಧ್ಯಾಹ್ನದಿಂದಲೇ ಕಡಲು ಪ್ರಕ್ಷುಬ್ದಗೊಂಡಿತ್ತು. ಬೃಹತ್ ಗಾತ್ರದ ಅಲೆಗಳು ಬಂದು ಅಪಾಯದ ಮುನ್ಸೂಚನೆ ಸಿಕ್ಕಿದ್ದವು. ಈ ಹಿನ್ನೆಲೆ ಭಾನುವಾರ (ನಿನ್ನೆ) ಸಂಜೆ ನಾಲ್ಕು ಗಂಟೆಯಿಂದಲೇ ವಾಟರ್ ಸ್ಪೋರ್ಟ್ಸ್ ಮತ್ತು ತೇಲುವ ಸೇತುವೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ವೇಳೆಗೆ ಕಡಲು ಇನ್ನಷ್ಟು ಪ್ರಕ್ಷುಬ್ದಗೊಂಡು ರಕ್ಕಸ ಗಾತ್ರದ ಅಲೆಗಳು ಕಡಲತೀರಕ್ಕೆ ಅಪ್ಪಳಿಸಿದ ಪರಿಣಾಮ ತೇಲುವ ಸೇತುವೆಯು ಛಿದ್ರಗೊಂಡು ಅದರ ಬಿಡಿ ಭಾಗಗಳು ಸಮುದ್ರ ಪಾಲಾಗಿವೆ. ಮತ್ತೊಂದೆಡೆ ಸೇತುವೆಯನ್ನು ಮರುಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ.