ಮನುಸ್ಮೃತಿ ಸುಟ್ಟು ಕರಿಕಲಾದ ಬೂದಿಯ ಹಾರಾಟ ಹಾಗೂ ಪರಂಜ್ಯೋತಿಯಂತೆ ಉರಿಯಬೇಕಾದಯ ನರಳಾಟ: ವಸ್ತುನಿಷ್ಠ ಚರ್ಚೆ

ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಡಿಸೆಂಬರ್ 25 – 1927 ರಂದು ಎರಡುವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಭಾರತವನ್ನು ಅಜ್ಞಾನದ ರಾಷ್ಟ್ರವನ್ನಾಗಿಸಿದ್ದ ಮನುಸ್ಮೃತಿಯನ್ನು ಬಹಿರಂಗವಾಗಿ ಮಹಾರಾಷ್ಟ್ರದ ಮಹದ್ ನಗರದಲ್ಲಿ ಸುಟ್ಟರು.

-ಎನ್ ಚಿನ್ನಸ್ವಾಮಿ ಸೋಸಲೆ

ಎರಡುವರೆ ಸಾವಿರ ವರ್ಷಗಳಿಂದ ಭಾರತವನ್ನು ಶಾಶ್ವತವಾಗಿ ಯಾವುದೇ ಪ್ರಶ್ನೆ ಮಾಡದೆ- ಪ್ರಶ್ನೆ ಮಾಡಿಸದೆ ಸಾಂಸ್ಕೃತಿಕ ಕ್ಷೇತ್ರದ ಪ್ರತಿಯೊಂದು ಅಂಗದಲ್ಲಿಯೂ ಆಳ್ವಿಕೆ ಮಾಡುತ್ತಿದ್ದ ಈ ಅಜ್ಞಾನದ ಸ್ಮೃತಿಯನ್ನು ಜ್ಞಾನದ ಭೀಮರು ಸುಟ್ಟಿದ್ದು ಮಹತ್ವದ ಬೌದ್ಧಿಕ ಸಾಧನೆಯೇ ಸರಿ. ಅಂಬೇಡ್ಕರ್ ಅವರಿಗೆ ಮನುಸ್ಮೃತಿಯನ್ನು ಏಕೆ ಸುಡುತ್ತಿದ್ದೇನೆ ಎಂಬ ಪರಿಜ್ಞಾನ ಹಾಗೂ ಅದರ ಅರಿವು ಸ್ಪಷ್ಟವಾಗಿತ್ತು. ಆದರೆ ಇಂದು ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಯಾರ ಪರವಾಗಿ ಸುಟ್ಟರೂ ಅವರಿಗೆ ಇದರ ಕಿಂಚಿತ್ತಾದರೂ ಪರಿಜ್ಞಾನ ಇಲ್ಲ. ಆದರೆ ಮನುಸ್ಮೃತಿ ಪ್ರತಿಪಾದಕರಿಗೆ ಇದರ ಸ್ಪಷ್ಟ ಅರಿವಿದೆ. ಅದಕ್ಕಾಗಿ ಅದರ ರಕ್ಷಣೆಗೆ ಅವರು ಸಂಭವಾಮಿ ಯುಗೇ ಯುಗೇ ಎನ್ನುವ ರೀತಿಯಲ್ಲಿ ವಿವಿಧ ರೂಪಗಳನ್ನು ತಾಳಿ ದೇವರಾಗಿ ಹುಟ್ಟುತ್ತಿದ್ದಾರೆ ಹಾಗೂ ಭೀಮಸ್ಮೃತಿ ಪ್ರತಿಪಾದಕರನ್ನು ಸಹ ತಮ್ಮತ್ತ ಶಾಶ್ವತವಾಗಿ ತಿಳಿದುಕೊಳ್ಳುತ್ತಿದ್ದಾರೆ. ಇದಕ್ಕೆ ಭೀಮಸ್ಮೃತಿ ಪ್ರತಿಪಾದಕರಲ್ಲಿ ಕಂಡು ಬರುತ್ತಿರುವ ದ್ವಂದ್ವ ನೀತಿಗಳೇ ಕಾರಣ.

ಬಸವಣ್ಣ, ಈ ನೆಲಮೂಲ ಸಂಸ್ಕೃತಿಯ ಪ್ರತಿಪಾದಕ ಅಲ್ಲಮಪ್ರಭು ಹಾಗೂ ನೂರಾರು ಶರಣ – ಶರಣೀಯರು ಹುಟ್ಟಾಕಿದ ವಾದದಲ್ಲಿ ಸ್ಪಷ್ಟತೆ ಇತ್ತು. ಅವರ ವಾದಕ್ಕೆ ಯಾರು ವಿರೋಧಿಗಳು ಎಂಬ ಸ್ಪಷ್ಟ ನಿಲುವಿತ್ತು. ಇದೇ ಮಾದರಿಯಲ್ಲಿ ಅಂಬೇಡ್ಕರ್ ಅವರ ಬದುಕು ಹೋರಾಟ ಚಿಂತನೆ ಹಾಗೂ ಸಂವಿಧಾನ ಈ ಎಲ್ಲಾ ಕಾರ್ಯಗಳಲ್ಲಿಯೂ ಅವರ ಮಿತ್ರರು ಯಾರು ಹಾಗೂ ಶತ್ರುಗಳು ಯಾರು ಎಂಬ ಸ್ಪಷ್ಟ ನಿಲುವಿತ್ತು. ಈ ಸ್ಪಷ್ಟ ನಿಲುವು ತಿಳಿದಿದ್ದ ಕಾರಣಕ್ಕಾಗಿಯೇ ಅವರ ಹೋರಾಟ ಯಶಸ್ವಿಯಾಯಿತು. ಆದರೆ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರಲ್ಲಿ ಅವರ ನಿಲುವಿನಲ್ಲಿ ಕಂಡುಕೊಂಡ ಸ್ಪಷ್ಟತೆಯನ್ನು ಕಂಡುಕೊಳ್ಳುವಲ್ಲಿ ಸೋಲುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಹೊಸ ರೀತಿಯ ವೈರಸ್| 2 ದಿನದಲ್ಲೇ 50ಕ್ಕೂ ಹೆಚ್ಚು ಮಂದಿ ಬಲಿ!

ಏಕೆಂದರೆ…, ಪುರಾಣದ ಹಿನ್ನೆಲೆಯಲ್ಲಿ ಅಮಾನವೀಯತೆಯನ್ನೇ ಪ್ರತಿಪಾದನೆ ಮಾಡಿದ ಮನುಸ್ಮೃತಿಯ ಸುಟ್ಟುಕರಕಲಾದ ಬೂದಿ ದೇಶವನ್ನೆಲ್ಲ ಆಕ್ರಮಿಸಿಕೊಳ್ಳುತ್ತಿದೆ – ಇಂತಹ ಅಜ್ಞಾನದ ಮನುಸ್ಮೃತಿಯನ್ನು ಸುಟ್ಟ ಭೀಮಸ್ಮೃತಿ ಮಾತ್ರ ವಾಸ್ತವದ ಹಿನ್ನೆಲೆಯಿಂದ ಸೊರಗುತ್ತಿದೆ. ಏಕೆಂದರೆ ಈ ಜ್ಞಾನವಂತ ಭೀಮಸ್ಮೃತಿಗೆ ಹಣೆಗೆ- ಮೈಯಿಗೆ ಬಳಿದುಕೊಳ್ಳುವ ಬೂದಿಯ ಸ್ವರೂಪ ಇಲ್ಲ . ಇದಕ್ಕೆ ಇರುವುದು ಮೆದುಳಿಗೆ ಶಾಶ್ವತವಾಗಿ ಉಳಿಸುವ ಜ್ಞಾನದ ಸ್ವರೂಪ ಮಾತ್ರ ಇರುವುದು. ಪ್ರತಿಯೊಬ್ಬರ ಶಾಶ್ವತವಾದ ಬೌದ್ಧಿಕ ” ಮನ ಹಾಗು ಮನೆ ” ಯಲ್ಲಿ ಅಂಧಕಾರವನ್ನು ತೊಡೆದು – ಸುಜ್ಞಾನವು ನೆಲೆಸುವಂತೆ ಮಾಡುವುದು ಇದರ ಪರಮ ಉದ್ದೇಶ .

ಈ ದೇಶದ ಜನ ಪುರಾಣದಿಂದ ವಾಸ್ತವವನ್ನು ಧಿಕ್ಕರಿಸಿ, ಅಜ್ಞಾನವನ್ನೇ ತಮ್ಮ ಶಾಶ್ವತ ಪರಮೋಚ್ಚ ಜ್ಞಾನ ಎಂದು ಹೇಳಿಕೊಂಡು ತಮ್ಮ ಮನ ಹಾಗೂ ಮನೆಯ ಸ್ವತ್ತಾಗಿಸಿಕೊಂಡ ಕಾರಣಕ್ಕಾಗಿ ಮನುಸ್ಪೃತಿಯ ಬೂದಿಯ ಹಾರಾಟ ಎಗ್ಗಿಲದೆ ಮೆರೆಯುತ್ತಿದೆ. ಈ ಮನುಸ್ಮೃತಿಯ ಅನೀತಿಗಳನ್ನು ಖಂಡಿಸಿ ಬಹಿರಂಗವಾಗಿ ಸುಟ್ಟು ಕರಕಲು ಮಾಡಿದ ಜ್ಞಾನದ ಭೀಮಸ್ಮೃತಿ ಇಲ್ಲಿ ನೆಲೆ ನಿಲ್ಲಲು ಹೆಣಗಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಮನುಸ್ಮೃತಿಯ ಬೂದಿಯನ್ನು ಮೈ ಮನಕೆಲ್ಲಾ ಬಳಿದುಕೊಳ್ಳುವವರಿಗೆ ಅಜ್ಞಾನದ ಧಾರ್ಮಿಕ ಹಾಗೂ ಸಾಮಾಜಿಕ ಅಂಧಕಾರದ ಅಬೌೌದ್ಧಿಕ ತಾಕತ್ತಿದೆ.

ಆದರೆ, ಭೀಮಸ್ಮೃತಿಯನ್ನು ತಮ್ಮ ಶಾಶ್ವತ ಮನ ಹಾಗೂ ಮನೆಯಲ್ಲಿ ಉಳಿಸಿಕೊಳ್ಳಬೇಕಾದವರಿಗೆ ಜ್ಞಾನದ ಭೀಮಸ್ಮೃತಿ ಒಪ್ಪಿ ಕೊಂಡಿದ್ದೇನೆ ಎಂದು ಹೇಳಿಕೊಳ್ಳುವುದರ ಜೊತೆಗೆ – ಇದು ಸುಟ್ಟು ಕರುಕಲು ಮಾಡಿದ ಅಜ್ಞಾನದ ಮನುಸ್ಮೃತಿಯ ಬೂದಿಯನ್ನು ಒಂದಷ್ಟು ಮೈ ಮನಗಳಿಗೆ ಶಾಶ್ವತವಾಗಿ ಬಳಿದುಕೊಳ್ಳುವ ಪಾರಂಪರಿಕ ಆಸೆ ಶಾಶ್ವತವಾಗಿ ಇದೆ . ಇವರ (ವಿಶೇಷವಾಗಿ ದಲಿತರ) ಇಂತಹ ಅಜ್ಞಾನದ ಎರಡು ದೋಣಿ ಪ್ರಯಾಣದ ಇಬ್ಬಗೆ ನೀತಿಗಳಿಂದಲೇ ಭೀಮಸ್ಮೃತಿ ಸೊರಗಲು ಕಾರಣವಾಗುತ್ತಿದೆ.

ಮನುಸ್ಮೃತಿ ಆರಾಧಕರ ಅರ್ಧದಷ್ಟು ಜನ ಹಾಗೂ ಮನುಸ್ಮೃತಿ ಹಾಗೂ ಭೀಮಸ್ಮೃತಿ ಗಳೆರಡನ್ನು ಆಚರಿಸಲು ಮುಂದಾಗಿ ನಡುನೀರಲ್ಲಿ ನಿಂತಿರುವವರ ಅತಂತ್ರ ನೀತಿಯನ್ನು ಮನುಸ್ಮೃತಿವಂತರು ಬಳಿಸಿಕೊಂಡು ಇಂದು ಸಂಪೂರ್ಣವಾಗಿ ಭೀಮಸ್ಮೃತಿಯನ್ನು ಮೂಲೆಗುಂಪು ಮಾಡಲು ಮುಂದಾಗುತ್ತಿದ್ದಾರೆ.

ಈ ನೆಲ ಸಂಪೂರ್ಣವಾಗಿ ಭೀಮಸ್ಮೃತಿ ಪ್ರತಿಪಾದನೆ ಮಾಡಿದ ಬುದ್ಧ- ಬಸವ- ಕನಕ- ಶಾಹು ಮಹಾರಾಜ್- ನಾಲ್ವಡಿ ಕೃಷ್ಣರಾಜ ಒಡೆಯರ್- ಪುಲೆ ದಂಪತಿಗಳ ನೆಲ ಹಾಗೂ ನೆಲೆ ಎಂಬುವುದನ್ನು ಮರೆಯಬಾರದು.

ಆದರೆ, ನಾವು ಏನನ್ನು ಜ್ಞಾಪಕ ಇಟ್ಟುಕೊಳ್ಳಬೇಕು ಅದನ್ನು ಮಾತ್ರ ಶಾಶ್ವತವಾಗಿ ಜ್ಞಾಪಕ ಶಕ್ತಿಯಿಂದ ದೂರ ಸರಿಸಿ – ಯಾವುದನ್ನು ನಮ್ಮ ಶಾಶ್ವತ ಜ್ಞಾಪಕ ಸ್ಮೃತಿಯಲ್ಲಿ ಶಾಶ್ವತವಾಗಿ ಹೊರಗಿಡಬೇಕೋ ಅದನ್ನು ಚಿರನೂತನದಂತೆ ಶಾಶ್ವತ ಜೀವಂತಿಕೆಯಿಂದ ಸಂರಕ್ಷಣೆ ಮಾಡಿಕೊಳ್ಳುತ್ತಿರುವುದು ಬಹುದೊಡ್ಡ ದುರಂತವಾಗಿದೆ.

ಭೀಮ ಹಾಗೂ ಭೀಮಸ್ಮೃತಿಯನ್ನು ಪ್ರತಿಕ್ಷಣ ಮನ ಹಾಗೂ ಮನದಲ್ಲಿ ಪ್ರತಿಪಾದನೆ ಮಾಡುವವರಿಗೆ ಈ ನೆಲದ ಸ್ವಾತಂತ್ರ್ಯ ಸಮಾನತೆ ಹಾಗೂ ಭಾತೃತ್ವ ಹಿನ್ನೆಲೆಯ ಅರ್ಥ ತಿಳಿಯುತ್ತದೆ. ಈ ಹಿನ್ನೆಲೆಯಿಂದ ಭಾರತ ಹಾಗೂ ಭಾರತೀಯರಲ್ಲಿ ಸಹೋದರತ್ವ – ಭಾತೃತ್ವ ಗಟ್ಟಿತನದ ಹಿನ್ನೆಲೆಯಿಂದ ಬೌದ್ಧಿಕವಾಗಿ ಬೆಸೆಯುತ್ತದೆ. ಇದೆ ಇವತ್ತಿನ ಭೀಮಸ್ಮೃತಿಯ ಅಂದರೆ ನಮ್ಮ ಸಂವಿಧಾನದ ಮುಖ್ಯ ಆಶಯವೂ ಆಗಿದೆ.

ಹಿಂದೂ ರಾಷ್ಟ್ರ ಸಂವಿಧಾನವನ್ನು ಬಯಸುವವರ ಚಿಂತನೆ ಪಾರಂಪರಿಕ ಹಿನ್ನೆಲೆಯ ವರ್ಣಾಶ್ರಮ ಹಾಗೂ ಸಾಮಾಜಿಕ ಅಸಮಾನತೆಯ ಬಯಸುವ ಮೇಲು- ಕೀಳು, ಸ್ಪೃಶ್ಯ -ಅಸ್ಪೃಶ್ಯ, ಊರಿನವ – ಕೇರಿಯವ ಎಂಬ ಬಹುದೊಡ್ಡ ಮಾನವ ವಿರೋಧಿ ವ್ಯವಸ್ಥೆಯನ್ನು ಬಯಸುವ ಸಂವಿಧಾನವನ್ನೇ ಎಂಬುದು ಸ್ಪಷ್ಟ. ಇದೆಲ್ಲವನ್ನು ಇಂದಿನ ಅಂಬೇಡ್ಕರ್ ಅವರು ರಚಿಸಿ ಜಾರಿಯಲ್ಲಿರುವ ಸಂವಿಧಾನದ ಮೂಲಕ ಅಪೇಕ್ಷಿಸಲು ಸಾಧ್ಯವಿಲ್ಲ.

ಈ ಕಾರಣಕ್ಕಾಗಿ ಇದನ್ನು ವಿರೋಧಿಸುತ್ತಾರೆ. ಕೇವಲ ಕೆಲವು ಸಂಪ್ರದಾಯ ಆಚರಣೆಗಳ ಮೂಲಕ ಮಾತ್ರ (ಧಾರ್ಮಿಕ ಉತ್ಸವಗಳು) ಪುರಾಣ ಹಿನ್ನೆಲೆಯ ವಿತಂಡವಾದದ ಮೂಲಕ ಹೇಳಬಹುದು ಹಾಗೂ ಪಡೆಯಬಹುದು ಎಂಬುವುದು ಇವರ ವಾದ. ಹಾಗೂ ಧಾರ್ಮಿಕ ಹಿನ್ನೆಲೆಯ ಸಂದರ್ಭದಲ್ಲಿ ಭಕ್ತಿ ಭಾವದಿಂದ ಹೇಳಿದಾಗ ಜನರು ಇದನ್ನು ಭಾವನಾತ್ಮಕವಾಗಿ ಸ್ವೀಕರಿಸುತ್ತಾರೆ ಎಂಬ ಅರಿವು ಅವರಿಗೆ ಚೆನ್ನಾಗಿ ತಿಳಿದಿದೆ. ಈ ಹಿನ್ನೆಲೆಯಿಂದ ಬಹುಜನರಲ್ಲಿ ಧಾರ್ಮಿಕ ಅಂಧಕಾರವನ್ನು ಬಿತ್ತಿ ಜಯಗಳಿಸಬಹುದು ಎಂಬುವುದು ಅವರ ಆಕಾಂಕ್ಷೆ. ಈ ಹಿನ್ನೆಲೆಯಿಂದಲೇ ಸ್ವಾತಂತ್ರ ಭಾರತದಲ್ಲಿಯೂ ಜನ ಇನ್ನೂ ಸಹ ಸ್ವಾತಂತ್ರ್ಯ ಭಾರತ ಹಾಗೂ ಲಿಖಿತ ಸಂವಿಧಾನಕ್ಕೆ ತೆರೆದುಕೊಳ್ಳದೆ ಇನ್ನೂ ಸಹ ಅಲಿಖಿತ ಸಂವಿಧಾನದ ನೀತಿಗಳಿಗೆ ಬದ್ಧರಾಗಿ ಜೀವಿಸುತ್ತಿರುವುದು ದುರಂತವಾಗಿದೆ.

ಇಂದು ಈ ಸಂವಿಧಾನವನ್ನು ಬದಲಾಯಿಸಬೇಕು- ಹಿಂದೂ ರಾಷ್ಟ್ರಕ್ಕೆ ಹೊಸ ಸಂವಿಧಾನವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವವರು ಮುನ್ನೂರು ವರ್ಷ ಆಳ್ವಿಕೆ ಮಾಡಿದ ಮುಸ್ಲಿಂ ಅರಸರಾದ ಖಿಲ್ಜಿ – ಮೊಘಲರ ಆಳ್ವಿಕೆಯಲ್ಲಿಯೂ ಸುಖವಾಗಿದ್ದರು. ಮುಂದುವರೆದು ಮುನ್ನೂರು ವರ್ಷಗಳ ಕಾಲ ಏಕಮುಷ್ಟಿಯಿಂದ ಭರತ ಖಂಡವನ್ನೇ ಆಳ್ವಿಕೆ ಮಾಡಿದ ಬ್ರಿಟಿಷರ ಆಳ್ವಿಕೆಯಲ್ಲಿಯೂ ಸುಖವಾಗಿದ್ದರು. ಇಂದು ಇವರೇ ವಿರೋಧಿಸುತ್ತಿರುವ ಹೈದರ್ ಹಾಗೂ ಟಿಪ್ಪುಸುಲ್ತಾನರ ಆಳ್ವಿಕೆಯ ಕಾಲದಲ್ಲಿಯೂ ಅತ್ಯಂತ ಹೆಚ್ಚು ಸುಖವಾಗಿದ್ದರು. ಇಷ್ಟೇ ಅಲ್ಲದೆ ಇಂದಿನ ಲಿಖಿತ ಸಂವಿಧಾನದ ಸಂತೃಪ್ತಿಯಲ್ಲಿಯೂ ಸರ್ವ ಅಂಗಗಳಲ್ಲಿಯೂ ಸರ್ವಸ್ವವನ್ನು ಪಡೆದುಕೊಂಡು ಇಂದಿಗೂ ಸುಖವಾಗಿಯೇ ಇದ್ದಾರೆ.

ಆದರೆ ಇವರೇ ಕರೆದ ಅಸ್ಪೃಶ್ಯರು – ಸಂವಿಧಾನದ ಈ ಭಾರತದ ಪ್ರಜೆಗಳಿಗೆ ನೀಡಿರುವ ಕಾನೂನಾತ್ಮಕವಾದ ಒಂದಷ್ಟು ಮೂಲಭೂತ ಹಕ್ಕುಗಳ ಆದರದ ಮೇಲೆ ಮೂಲಭೂತ ಸೌಲಭ್ಯಗಳನ್ನು ಪಡೆದು ” ಸ್ಪೃಶ್ಯತೆಯ ” ಯ ಸ್ಥಾನವನ್ನು ಪಡೆಯಲು ಮುಂದಾಗುತ್ತಿರುವುದನ್ನು ಮಾತ್ರ ಸಹಿಸದ ಕಾರಣಕ್ಕಾಗಿ ಇವರಿಗೆ ದೊರಕಬೇಕಾದ ಭೀಮಸ್ಮೃತಿಯನ್ನು ಅಲ್ಲಗಳಲು, ಇವರಲ್ಲಿ ಶಾಶ್ವತವಾಗಿ ಅಂಧಕಾರದ ಮನುಸ್ಮೃತಿಯನ್ನ ಉಳಿಸಲಿ ಬುದ್ಧ ಬಸವನನ್ನು ದೇವರನ್ನಾಗಿಸಿದಂತೆ ಅಂಬೇಡ್ಕರ್ ಅವರನ್ನು ಸಹ ದೇವರು ರೂಪವನ್ನು ನೀಡುವ ಮಾತುಗಳನ್ನಾಡಲು ಮುಂದಾಗುತ್ತಲೇ ಇರುತ್ತಾರೆ. ದಲಿತರನ್ನು ಹಾಗೂ ಅವರನ್ನು ಅಸ್ಪೃಶ್ಯತೆಯಲ್ಲಿ ಸಿಲುಕಿಸುವ ಮನಸ್ಥಿತಿಯಲ್ಲಿ ಮಾತ್ರ ಇವರ ಮನಸ್ಸುಗಳು ಪಾರಂಪರಿಕವಾಗಿ ಶಾಶ್ವತ “ಅಸ್ಪೃಶ್ಯತೆ” ಗೆ ಒಳಗಾಗಿವೆ. ಈ ಹಿನ್ನೆಲೆಯಿಂದ ಭಾರತದ ನಿಜವಾದ ಅಸ್ಪೃಶ್ಯರು ದಲಿತೇತರರೆ.

“ಹಿಂದೂ” ಎಂಬ ಹೆಸರಿನ ಧಾರ್ಮಿಕ ರಾಷ್ಟ್ರ ಸಂವಿಧಾನದಲ್ಲಿ ಶತಶತಮಾನಗಳಿಂದಲೂ ಬದುಕಿದ ಇವರು ದೇಶಿಯ ಸಾಮ್ರಾಟರು – ಮಹಾರಾಜರು – ರಾಜರು- ಪಾಳ್ಳೇಗಾರರ ಸುವರ್ಣಯುಗ ಆಳ್ವಿಕೆಗಳ ಕಾಲದಲ್ಲಿಯೂ ಸುಖವಾಗಿಯೇ ಇದ್ದರು ಎಂಬುದಕ್ಕೆ ಅವರೇ ಬರೆದುಕೊಂಡಿರುವ ಚರಿತ್ರೆ ಸಾಕ್ಷಿಯಾಗಿದೆ . ಏಕೆಂದರೆ, ಅವರೇ ಪುರಾಣದ ಹಿನ್ನೆಲೆಯಿಂದ ಬರೆದುಕೊಂಡಿರುವ ಹಾಗೆ ಭಾರತದ ಪ್ರತಿಯೊಂದು ಸಾಮ್ರಾಜ್ಯಗಳ ಸ್ಥಾಪನೆ ಮಾಡಿದವರು ಹಿಂದೂ (ವೈದಿಕ) ರಾಷ್ಟ್ರದ ಸಂವಿಧಾನವನ್ನು ಬಯಸುವವರೇ ಎಂಬ ವಾದ. ಚರಿತ್ರೆಯಲ್ಲಿ ಹೀಗೆ ಹೇಳಿಕೊಂಡು ಹಾಗೂ ಬರೆದುಕೊಂಡು ಮೆರೆದ ಕಾರಣಕ್ಕಾಗಿ ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಇವರು ಮೇಲ್ಪಂತಿಯಲ್ಲಿ ನಿಂತುಕೊಂಡರು.

ತಮ್ಮ ಸ್ವಾರ್ಥ ಸಾಧನೆಗಾಗಿ ಹಾಗೂ ದೇವಾಲಯ- ಅಗ್ರಹಾರ- ಗುರುಕುಲ, ಘಟ್ಟಿಕಾಲಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇವರ ಅನುಕೂಲಕ್ಕಾಗಿ “ಕ್ಷತ್ರಿಯ” ಎಂಬ ಒಂದು ವೃತ್ತಿ ಪ್ರಧಾನ ಜನವರ್ಗವನ್ನೇ ಸೃಷ್ಟಿಸಿ ಅವರನ್ನು ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡರು. ಈ ಹಿನ್ನೆಲೆಯಿಂದಲೇ ಯಾವ ಪ್ರಭುತ್ವದ ಕಾಲದಲ್ಲಿಯೂ ಇವರಿಗೆ ರಾಜಾಜ್ಞೆ ಮೂಲಕ ಶಿಕ್ಷೆ ಆಗಿರುವುದಕ್ಕೆ ದಾಖಲೆಗಳು ಇಲ್ಲ. ಮೊಘಲರು ಹಾಗೂ ಬ್ರಿಟಿಷರ ಆಳ್ವಿಕೆ ಕಾಲಘಟ್ಟದಲ್ಲಿಯೂ ಇವರ ತಪ್ಪಿಗೆ ಕಠಿಣ ಶಿಕ್ಷೆ ವಿಧಿಸಿದ ಮಾಹಿತಿ ನೀಡುವ ಯಾವುದೇ ದಾಖಲೆಗಳು ದೊರಕುವುದೆ ಇಲ್ಲ.

ಏಕೆಂದರೆ, ಇವರು ಪಾರಂಪರಿಕವಾಗಿ ಮನುಸ್ಮೃತಿಯನ್ನು ಸಂರಕ್ಷಣೆ ಮಾಡಿಕೊಳ್ಳುವವರು ಹಾಗೂ ನಾಯಿ ತನ್ನ ಮಗುವನ್ನೇ ತಿನ್ನುತ್ತದೆ ಎನ್ನುವ ಆಧಾರದಲ್ಲಿ ಮನುಸ್ಮೃತಿಯನ್ನೇ ಕಾಲಕಾಲಕ್ಕೆ ಅವರೇ ಸುಟ್ಟಿ ಅದರ ಬೂದಿಯನ್ನು ತೇಲಲು ಬಿಟ್ಟು ಸಮಸ್ತ ಜನರ ಮೈ ಮನಗಳಲ್ಲಿ ಮೆತ್ತಿಕೊಳ್ಳುವಂತೆ ಮಾಡುವುದು ಹಾಗೂ ಅದರ ಮೂಲಕ ಮತ್ತೆ ಮನುಸ್ಮೃತಿಯನ್ನು ಜೀವಂತಿಗೆ ಗೊಳಿಸುವುದು ಇವರ ಪರಮ ಉದ್ದೇಶ. ಸುಟ್ಟು ಬೂದಿಯಾದ ಸ್ಥಳದಲ್ಲಿಯೇ ಬೂದಿಗೆ ಪುರಾಣದ ಬಣ್ಣವನ್ನು ಕಟ್ಟಿ ಮತ್ತೆ ಉದಯಿಸುವಂತೆ ಮಾಡಲಾಗುತ್ತಿದೆ. ಇದಕ್ಕೆ ಇಂದಿನ ಧಾರ್ಮಿಕ ಅಂಧಕಾರದ ಆಚರಣೆಗಳೆ ಜ್ವಲಂತ ನಿದರ್ಶನಗಳಾಗಿವೆ. ಇದರಲ್ಲಿ ಕುಂಭಮೇಳ ಹೊರತಾದುದಲ್ಲ .

ಈ ಅಜ್ಞಾನದ- ಅಂಧಕಾರದ- ಅಮಾನವೀಯ ಪದ್ಧತಿ ಪ್ರತಿಪಾದನೆ ಮಾಡುವ- ಸಮ ಸಮಾಜ ನಿರ್ಮಾಣ ವಿರೋಧಿ ಮನುಸ್ಮೃತಿಯನ್ನು ಸುಟ್ಟು ಬೂದಿ ಮಾಡಿದ ಈ ನೆಲದ ಬೌದ್ಧಿಕತೆಯ ವಾರಸುದಾರ ಬಾಬಾಸಾಹೇಬ್ ಅಂಬೇಡ್ಕರ್ ಅವರು. ಭಾರತದಲ್ಲಿ ಸಮಸಮಾಜ ನಿರ್ಮಾಣ ಬಯಸಿದ ಮಹಾಮಾನವತವಾದಿ, ಸುಜ್ಞಾನ ಹಿನ್ನೆಲೆಯ ಬಾಬಾಸಾಹೇಬ್ ಅವರು ಪ್ರತಿಪಾದನೆ ಮಾಡಿದ ವಾಸ್ತವದ ಭೀಮಸ್ಮೃತಿಗೆ ಮಾತ್ರ ಅದರ ಹುಟ್ಟಿನ ನೆಲದಲ್ಲಿಯೇ ಹಿನ್ನೆಲೆಯಾಗುತ್ತಿದೆ. ಇದಕ್ಕೆ ಕಾರಣ ಭೀಮಸ್ಮೃತಿ ಪಾಲಕದಲ್ಲಿ – ಪಾಲನೆ ಪೋಷಣೆ ಮಾಡಬೇಕಾದವರಲ್ಲಿ ಇರುವ ದ್ವಂದ್ವ ಅಜ್ಞಾನದ ನೀತಿಗಳು.

ಈ ನೀತಿಗೆ ಪ್ರಮುಖ ಕಾರಣ ಮನುಸ್ಮೃತಿ ಪ್ರತಿಪಾದನೆ ಮಾಡಿಕೊಂಡು ಬಂದವರಲ್ಲಿ ಇರುವ ಶಾಶ್ವತವಾದ ಮಾನಸಿಕ ಅಸ್ಪೃಶ್ಯತೆ ಕಾರಣವಾಗಿದೆ. ದೈಹಿಕ ಅಸ್ಪೃಶ್ಯತೆ ಗಿಂತಲೂ ಮಾನಸಿಕ ಅಸ್ಪೃಶ್ಯತೆ ಬಹು ಅಪಾಯಕಾರಿ ಎಂಬುದಕ್ಕೆ ಇದು ಶಾಶ್ವತ ನಿದರ್ಶನ. ವಾಸ್ತವ ಹಿನ್ನೆಲೆಯ “ಸ್ಪೃಶ್ಯತೆ” ಹಿನ್ನೆಲೆಯ ಸತ್ಯ ಸಂಗತಿಗಳು ಈ ನೆಲದಲ್ಲಿ “ಅಸ್ಪೃಶ್ಯತೆ” ಯ ಸೋಂಕಿಗೆ ಶಾಶ್ವತವಾಗಿ ಗುರಿಯಾದರೆ – ಪುರಾಣದ ವಿಷಯಗಳು ಇಲ್ಲಿ ಅತಿಹೆಚ್ಚು – ಅತಿಹೆಚ್ಚು “ಸ್ಪೃಶ್ಯತೆ” ಯ ಮಾನ್ಯತೆ ಪಡೆದು ಮನ ಹಾಗು ಮನೆ ಒಳಗೆ ದೇವರ ರೂಪವನ್ನು ಪಡೆದು ಕಂಗೊಳಿಸುತ್ತಿವೆ. ಭೀಮಸ್ಮೃತಿ ಅಂದರೆ ಅಂಬೇಡ್ಕರ್ ತತ್ವ ಸಿದ್ಧಾಂತಗಳು ಹಾಗೂ ಹೋರಾಟ, ಈ ಹಿನ್ನೆಲೆಯಿಂದ ರಚಿಸಿದ ಭಾರತವನ್ನು ಆಳ್ವಿಕೆ ಮಾಡುತ್ತಿರುವ ಭಾರತದ ಧರ್ಮ ಗ್ರಂಥ ಎಂದೆನಿಸಿಕೊಂಡಿರುವ ಸಂವಿಧಾನ ಇಂದು ಇಲ್ಲಿ ನೆಲೆ ನಿಲ್ಲಲು ಹೆಣಗಾಡುತ್ತಿದೆ.

ಅಂದರೆ, ಮನುಸ್ಮೃತಿಗೆ ದೇವರ ರೂಪವನ್ನು ನೀಡಿ ಅದನ್ನು ಅಜ್ಞಾನದಿಂದ ಉಳಿಸಿಕೊಳ್ಳಲು ಮುಂದಾಗುತ್ತಿದ್ದಾರೆ – ಆದರೆ ಈ ನೆಲದ ವಾರಸುದಾರಿಕೆ ಭೀಮಸ್ಮೃತಿಗೆ ಅಂತರಾಳದ ಮನಸಾಕ್ಷಿಯ ಮಾನವ ಧರ್ಮ ಪ್ರತಿಪಾದನೆಯ ಅಂಶವನ್ನು ನೀಡದೆ ಶಾಶ್ವತವಾಗಿ ಸೊರಗಿಸಲು ಮುಂದಾಗುತ್ತಿದ್ದಾರೆ.

ಮನುಸ್ಮೃತಿಯ ಪ್ರತಿಪಾದಕರು ನಾನು ಮೇಲೆ ಉಲ್ಲೇಖಿಸಿದಂತೆ ಯುಗಯುಗಗಳಲ್ಲಿಯೂ ಸುಖವಾಗಿಯೇ ಇರುತ್ತಾರೆ, ಆದರೆ ಬುದ್ಧಸ್ಮೃತಿಯ – ಬಸವಸ್ಮೃತಿಯ – ಭೀಮಸ್ಮೃತಿಯ ಪ್ರತಿಪಾದಕರು ಯುಗ ಯುಗಗಳಲ್ಲಿಯೂ ತೊಂದರೆಗೆ ಸಿಲುಕುತ್ತಾರೆ ಎಂಬುದಕ್ಕೆ ಭಾರತದ ಚರಿತ್ರೆ ಸಾಕ್ಷಿಯಾಗಿದೆ.

ಇಂತಹ ತೊಂದರೆಗಳಿಗೆ ಶಾಶ್ವತವಾಗಿ ಸಿಲುಕಿಸಲು ಮುಂದಾಗುವವರು ಹಾಗೂ ಸಿಲುಕುವುದು, ಅದರಿಂದ ಹೊರಬಂದು ಸಮ ಸಮಾಜದ ಭಾರತವನ್ನು ನಿರ್ಮಾಣ ಮಾಡುವ ಅಂಶವನ್ನು ಈ ನೆಲದ ವಾರಸುದಾರರಾದ ಭೀಮರು ತಮ್ಮ ಭೀಮಸ್ಮೃತಿಯಲ್ಲಿ ಪ್ರತಿಯೊಬ್ಬರಿಗೂ ಮನ ಮುಟ್ಟುವ ಹಾಗೆ ವಿವರಿಸಿದ್ದಾರೆ. ಅದನ್ನು ಓದಿ ಅರ್ಥ ಮಾಡಿಕೊಂಡು ಭಾರತವನ್ನು ಗಟ್ಟಿತನದಿಂದ ಕಟ್ಟಬೇಕಾಗಿದೆ. ಸಮಸ್ತ ದೇಶವನ್ನು ಇದರ ಇತಿಹಾಸವನ್ನು ಮರೆಯದೇ, ಮರೆತಿರುವ ಇತಿಹಾಸವನ್ನು ನಿರ್ಮಿಸುವ ರೂಪದಲ್ಲಿ ಜ್ಞಾನದ ಬೌದ್ಧ ಧರ್ಮದ ನಮ್ಮ ಪೂರ್ವಿಕರ ಮನೆಗೆ ಶಾಶ್ವತವಾಗಿ ಮರಳಿ ಹೋಗಬೇಕಾಗಿದೆ.
ಇಂತಹ ಸೂಕ್ಷ್ಮತೆಯ ವಿಷಯಗಳನ್ನು ವಿವಿಧ ಅರ್ಥಗಳಲ್ಲಿ ಪ್ರಶ್ನೆಗಳನ್ನು ಮುಟ್ಟ ಹಾಕಿಕೊಂಡು ಅದಕ್ಕೆ ಸೂಕ್ತ ಉತ್ತರಗಳನ್ನು ಕಂಡುಕೊಂಡಾಗ ಮಾತ್ರ ಭಾರತ ಮಾತನಾಡುವ ಭೀಮಸ್ಮೃತಿಯ ಬೌದ್ಧಿಕ ಹಿನ್ನೆಲೆ ಭಾರತವನ್ನು ಗಟ್ಟಿ ಹಾಗೂ ಸದೃಢವಾಗಿ ಕಟ್ಟಬಹುದಾಗಿದೆ.

ಇಂದಿನ ಸಂದರ್ಭದಲ್ಲಿ ಸಮಸಂಸ್ಕೃತಿಯ ಚಿಂತಕರು- ಭೀಮಸ್ಮೃತಿಯ ಆಶಯಗಳನ್ನು ಶಾಶ್ವತವಾಗಿ ಬಯಸುವವರು – ಬುದ್ಧ ಬಸವ ಸ್ಮೃತಿಗಳ ಚಿಂತಕರು ಹಾಗೂ ಆರಾಧಕರು ಬಹುಮುಖ್ಯವಾಗಿ ಮನುಸ್ಮೃತಿಯ ಶಾಶ್ವತ ವಿರೋಧಕರು ಈ ಅಂಶಗಳನ್ನು ಮನಗಾಣಬೇಕಾಗಿದೆ.

ಇದನ್ನೂ ನೋಡಿ: ಜನಪರ ನೀತಿ, ಕಾರ್ಮಿಕ ವರ್ಗದ ಬೇಡಿಕೆಗಳ ಜಾರಿಗಾಗಿ ಸಿಐಟಿಯುನಿಂದ ಅಹೋರಾತ್ರಿ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *