ಚನ್ನರಾಯಪಟ್ಟಣ: ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಬೇಕು ಮತ್ತು ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ತೆಂಗು ಬೆಳೆಗಾರರು, ಚನ್ನರಾಯಪಟ್ಟಣದಲ್ಲಿ ಸಮಾವೇಶ ಮತ್ತು ಪ್ರತಿಭಟನೆ ನಡೆಸಿ ತಹಸಿಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್.ನವೀನ್ ಕುಮಾರ್ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನ ಬಹುತೇಕ ರೈತರು ತೆಂಘು ಬೆಳೆಗಾರರಾಗಿದ್ದಾರೆ. ಒಂದೆಡೆ ಸರಿಯಾದ ಮಳೆ ಮತ್ತು ನೀರಾವರಿ ವ್ಯವಸ್ಥೆ ಇಲ್ಲದಿದ್ದರೂ ಕಷ್ಟಪಟ್ಟು, ಬೆವರು ಸುರಿಸಿ ತೆಂಗಿನ ತೋಟಗಳನ್ನು ಬೆಳೆಸಿದ್ದಾರೆ. ತೆಂಗಿನ ಗಿಡಗಳನ್ನು ನೆಟ್ಟು ಅದು ಸರಿಯಾಗಿ ಫಸಲು ಕೈಗೆ ಬರಬೇಕಾದರೆ 10ವರ್ಷಗಳಾದರೂ ಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ಹತ್ತು ವರ್ಷಗಳ ಕಾಲ ಲಕ್ಷಾಂತರ ರೂಪಾಯಿಗಳನ್ನು ತೋಟದ ಮೇಲೆ ತೊಡಗಿಸಿ ಫಸಲು ಕೈಗೆ ಬಂದ ಮೇಲೆ ಮಾರುಕಟ್ಟೆಯಲ್ಲಿ ತೆಂಗು ಮತ್ತು ಕೊಬ್ಬರಿಗೆ ಬೆಲೆಗಳು ಪಾತಾಳಕ್ಕೆ ಕುಸಿದಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಕಡೆ ಕೃಷಿ ಉತ್ಪನ್ನಗಳಿಗೆ ಬಳಸುವ ಎಲ್ಲಾ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಕೃಷಿ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ರೈತರ ಪರಿಸ್ಥಿತಿ ಅತ್ಯಂತ ದುಸ್ತರವಾಗುತ್ತದೆ.ಇದರಿಂದಾಗಿ ರೈತರು ಕೃಷಿಯನ್ನು ಬಿಟ್ಟು ನಗರಗಳಿಗೆ ವಸಲೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯನ್ನು ತಡೆಗಟ್ಟಬೇಕಿದ್ದರೆ ಎಂಗು ಮತ್ತು ಕೊಬ್ಬರಿಗೆ ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಲೆ ನಿಗದಿ ಮಾಡಬೇಕು. ಒಂದು ಅಂದಾಜಿನ ಪ್ರಕಾರ ಒಂದು ತೆಂಗಿನ ಕಾಯಿಗೆ ಕನಿಷ್ಠ 50 ರೂಪಾಯಿ ಮತ್ತು ಒಂದು ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 25 ಸಾವಿರ ರೂಪಾಯಿ ಬೆಲೆಯನ್ನು ಸರ್ಕಾರವೇ ನಿಗದಿ ಮಾಡಬೇಕು. ಜೊತೆಗೆ ಸ್ಥಳೀಯ ಎಪಿಎಂಸಿಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಿ ಎಪಿಎಂಸಿ ಮಾರುಕಟ್ಟೆಯನ್ನು ಬಲಪಡಿಸಬೇಕು, ರೈತರಿಗೆ ಸ್ಥಳೀಯ ಮಾರುಕಟ್ಟೆಯನ್ನು ಒದಗಿಸಬೇಕು ಇದರಿಂದ ಮಾತ್ರ ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಯಲ್ಲಿ ಮುಂದುವರೆಯಲು ಸಾಧ್ಯ ಎಂದರು.
ಇದನ್ನೂ ಓದಿ:ಹಾಲು ಉತ್ಪಾದಕ ರೈತರಿಗೆ ಖರೀದಿ ದರ ರೂ.50 ನೀಡುವಂತೆ ಕೆಪಿಆರ್‌ಎಸ್ ಪ್ರತಿಭಟನೆ
17.08.2022 ರಲ್ಲಿ ರಾಜ್ಯದ ತೋಟಗಾರಿಕಾ ಇಲಾಖೆಯು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ಸಲ್ಲಿಸಿರುವ ವರದಿಯಂತೆ ಕರ್ನಾಟಕ ಕೃಷಿ ಬೆಲೆ ಆಯೋಗದ ಶಿಫಾರಸ್ಸಿನಂತೆ ದುಂಡು ಕೊಬ್ಬರಿ ಒಂದು ಕ್ವಿಂಟಲ್ ಉತ್ಪಾದನಾ ವೆಚ್ಚ 9927 ರೂ ಅದಕ್ಕೆ ಕೊಬ್ಬರಿಯ ಬೆಲೆಯು 16730 ರೂ ನಿಗದಿಯಾಗಬೇಕು ಆದರೆ ಪ್ರಸುತ್ತ ಸರ್ಕಾರವೇ ಲೆಕ್ಕಹಾಕಿದ ಉತ್ಪಾದನಾ ವೆಚ್ಚವೂ ಮಾರುಕಟ್ಟೆಯಲ್ಲಿ ರೈತರಿಗೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇದರ ಜೊತೆಗೆ ಇಷ್ಟೊಂದು ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳದಂತೆರೈತರ ಪಂಪ್‌ಸೆಟ್‌ಗಳಿಗೆ ಆರ್‌ಆರ್ ನಂಬರನ್ನು ಆಧಾರ್ ಕಾರ್ಡ್‌ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕೆನ್ನುವ ಆದೇಶವನ್ನು ಹೊರಡಿಸುವ ಮೂಲಕ ಇದುವರೆಗೂ ರೈತರಿಗೆ ಸಿಗುತ್ತಿದ್ದ ಉಚಿತ ವಿದ್ಯುತ್ನ್ನು ರದ್ದುಗೊಳಿಸಿ ಪ್ರೀಪೆಡ್ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸುವ ಹುನ್ನಾರವೂ ನಡೆದಿದೆ. ಇದನ್ನು ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಬಿಡಬೇಕು ಎಂದು ಆಗ್ರಹಿಸಿದರು.
ಇವುಗಳ ಜೊತೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಮಾನ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು, ಉತ್ತಮ ಮಾರುಕಟ್ಟೆ ಒದಗಿಸಲು, ತೆಂಗಿನ ಉತ್ಪನ್ನ ಮತ್ತು ಉಪ ಉತ್ಪನ್ನಗಳಿಗೆ ಮೌಲ್ಯವರ್ಧನೆಯನ್ನು ಹೆಚ್ಚಿಸಲು ವಿಶೇಷ ಗಮನ ನೀಡಿ ಕೃಷಿ ಆದಾರಿತ ಕೈಗಾರಗಿಕೆಗಳ ಸ್ಥಾಪನೆಗೆ ಮುಂದಾಗಬೇಕು. ಇದಕ್ಕಾಗಿ ವಿಶೇಷ ಪ್ಯಾಕೇಜನ್ನು ಘೋಷಿಸಬೇಕು. ಹಾಗೆ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳನ್ನು ಬಲಪಡಿಸಿ ರೈತರಿಗೆ ಕೃಷಿಗೆ ಪೂರಕವಾಗಿ ಅನುಕೂಲಗಳನ್ನು ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈಥ ಸಂಘದ (ಕೆಪಿಆರ್‌ಎಸ್) ನೇತೃತ್ವದಲ್ಲಿ ಚನ್ನರಾಯಪಟ್ಟಣ ಬೆಳೆಗಾರರು ಸಮಾವೇಶವನ್ನು ನಡೆಸಿ ಪ್ರತಿಭಟನೆ ಮಾಡುವ ಮೂಲಕ ಈ ಕೆಳಗಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಮನವಿ ಮಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಂಖಡ ಎಚ್.ಎಸ್ ಮಂಜುನಾಥ್, ಕಾರ್ಯದರ್ಶಿ ವಾಸುದೇವ ಕಲ್ಕೆರೆ, ತಾಲ್ಲೂಕು ಮುಖಂಡರುಗಳಾದ ಶಿವಲಿಂಗೇಗೌಡ, ಗೋವಿಂದರಾಜು, ಹರೀಶ್, ಶ್ರೀನಿವಾಸ್,ದೇವನಾಥ್, ಪ್ರಾಣೇಶ್, ಮಧು, ಕೃಷ್ಣೇಗೌಡ,ಗಿರೀಶ್,ಧರ್ಮಣ್ಣ, ದೇವರಾಜ್, ರಮೇಶ್, ಮಂಜುನಾಥ್ ಕೆ.ಎಸ್. , ವಸಂತ ಕುಮಾರ್, ರಾಮಮೂರ್ತಿ , ಕಬ್ಬಳ್ಳಿ ಮಂಜು, ನಾಗರಾಜ್ ದಾಸಾಪುರ ಇದ್ದರು.