ಕೋಲಾರ: ರಾಜ್ಯದ ಮೊದಲ ಕಿಸಾನ್ ರೈಲಿಗೆ ಚಿಂತಾಮಣಿಯ ದೊಡ್ಡನತ್ತ ರೈಲು ನಿಲ್ದಾಣದಿಂದ ಇಂದು ಸಂಸದ ಎಸ್.ಮುನಿಸ್ವಾಮಿ ಅವರು ಚಾಲನೆ ನೀಡಿದ್ದಾರೆ.
ರೈತರು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ಉತ್ತರ ಭಾರತಕ್ಕೆ ಸರಬರಾಜು ಮಾಡಲು ಅನುಕೂಲವಂತೆ ನೈರುತ್ಯ ರೈಲ್ವೆ ಇಲಾಖೆ ಆರಂಭಿಸಿರುವ ರಾಜ್ಯದ ಮೊದಲ ಕಿಸಾನ್ ರೈಲು ಇದಾಗಿದೆ.
ಹಣ್ಣು, ತರಕಾರಿ ಹಾಗೂ ಬಹುಬೇಗ ಹಾಳಾಗುವ ರೈತರ ಉತ್ಪನ್ನಗಳನ್ನು ಸಾಗಣೆ ಮಾಡಲು ಕಳೆದ ವರ್ಷದಿಂದ ರೈಲ್ವೆ ಇಲಾಖೆ ದೇಶದ ವಿವಿಧ ಭಾಗಗಳಲ್ಲಿ ಕಿಸಾನ್ ರೈಲು ಸೇವೆಯನ್ನು ಆರಂಭ ಮಾಡಿದೆ. ಇದು ರೈತರಿಗೆ ತಮ್ಮ ಉತ್ಪನ್ನಗಳನ್ನು ತ್ವರಿತವಾಗಿ ಸಾಗಣೆ ಮಾಡಲು ಅವಕಾಶ ನೀಡಲಿದೆ.
ಸಾಗಾಣಿಕೆ ವೆಚ್ಚವೂ ಕಡಿಮೆ, ಸಾಗುವ ಸಮಯವೂ ಕಡಿಮೆ : ದೊಡ್ಡನತ್ತ ಗ್ರಾಮದ ರೈಲು ನಿಲ್ದಾಣದಿಂದ ಹೊರಡುವ ಕಿಸಾನ್ ರೈಲು 40 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಆದರ್ಶನಗರ ತಲುಪಲಿದೆ. ಇದೇ ತರಕಾರಿ ಹಣ್ಣುಗಳನ್ನು ರಸ್ತೆ ಮೂಲಕ ಸಾಗಿಸಿದರೆ 80 ಗಂಟೆಗಳ ಕಾಲ ಬೇಕು. ಆದರೆ ರೈಲಿನಲ್ಲಿ ಆ ಸಮಯ ಕಡಿತವಾಗಲಿದೆ. ಜೊತೆಗೆ ಸಾಗಾಣಿಕಾ ವೆಚ್ಚ ಕೂಡಾ ಸಾಕಷ್ಟು ಕಡಿಮೆಯಾಗಲಿದೆ. ಒಂದು ಕೆ.ಜಿ.ಗೆ 2.80 ಪೈಸೆ ವೆಚ್ಚ ತಗುಲಲಿದೆ. ಇದೇ ರಸ್ತೆ ಮೂಲಕ ಹೋದರೆ ಕೆ.ಜಿ.ಗೆ 7 ರಿಂದ 8 ರೂಪಾಯಿಯಾಗಲಿದೆ.
ಬೇಡಿಕೆ ಬಂದತೆ ಯಾವುದೇ ರಾಜ್ಯಕ್ಕೂ ಕಳುಹಿಸಲು ಸಿದ್ಧ : ಕಿಸಾನ್ ರೈಲು ಕೇವಲ ದೆಹಲಿಗಷ್ಟೇ ಅಲ್ಲ ಹೆಚ್ಚಿನ ಬುಕ್ಕಿಂಗ್ ಸಿಕ್ಕರೆ ದೇಶದ ಯಾವುದೇ ರಾಜ್ಯಕ್ಕೂ ಕಳಿಸಲು ರೈಲ್ವೇ ಇಲಾಖೆ ಸಿದ್ಧವಿದೆ. ಅಷ್ಟೇ ಅಲ್ಲ ಈ ಕಿಸಾನ್ ರೈಲು ರೈತರ ಬೇಡಿಕೆಗನುಗುಣವಾಗಿ ಓಡಲಿದೆ. ವಾರಕ್ಕೆ ಎರಡು ಮೂರು ಬಾರಿ ಬೇಕಾದರೂ ಓಡಲಿದೆ. ಅವಶ್ಯಕತೆ ಬಿದ್ದಲ್ಲಿ ಒಂದೇ ದಿನಕ್ಕೆ ಎರಡು ಮೂರು ರೈಲುಗಳು ಬೇಕಾದರೂ ಓಡಲಿವೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಡಿವಿಜನ್ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದರು. ಚಾಲನೆ ವೇಳೆ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಹಾಗೂ ರೈಲ್ವೆ ಅಧಿಕಾರಿಗಳು ಸಂಸದರಿಗೆ ಸಾಥ್ ನೀಡಿದ್ರು.