ಬೆಂಗಳೂರು : ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆ ಆಂತರಿಕ ಸಮಿತಿಯನ್ನು ರಚಿಸಿ ಕೆಲವೇ ಘಂಟೆಗಳಲ್ಲಿ ವಾಣಿಜ್ಯ ಮಂಡಳಿಯು ತನ್ನ ಚುನಾವಣೆಯ ನೆಪ ಒಡ್ಡಿ ತಡೆಹಿಡಿದ ಕ್ರಮವನ್ನು ಫೈರ್ ಸಂಸ್ಥೆ ಯು ಪ್ರಶ್ನಿಸಿದೆ.
2017 ರಲ್ಲಿ ಅಧಿಕೃತವಾಗಿ ಪ್ರಾರಂಭಗೊಂಡಾಗಿನಿಂದಲೇ ಸಿನಿಮಾ ರಂಗದಲ್ಲಿ ಇರುವ ಲೈಂಗಿಕ ಕಿರುಕುಳ ಮತ್ತು ಕಾಸ್ಟಿಂಗ್ ಕೌಚ್ ದೌರ್ಜನ್ಯ ಗಳನ್ನು ತಡೆಯಲು ಕಾನೂನಿನ ಪ್ರಕಾರ ಸಮಿತಿಯನ್ನು ರಚಿಸಬೇಕೆಂದು ಫೈರ್ ಒತ್ತಾಯಿಸುತ್ತಿದೆ.
ಅದರೆ ಕೆ.ಎಫ್.ಸಿ.ಸಿ ಅದನ್ನು ರಚಿಸಿರಲಿಲ್ಲ. ದೀರ್ಘ ಅವಧಿಯ ನಂತರ ಡಿಸೆಂಬರ್ 2 2024 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕೃತವಾಗಿ 11 ಸದಸ್ಯರ ಆಂತರಿಕ ಸಮಿತಿಯನ್ನು ಕಾನೂನಿನ ಅನ್ವಯ ರಚಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೊಗಕ್ಕೆ ಕಳಿಸಿದೆ. ಮತ್ತು ಕೆಲವೇ ಘಂಟೆಗಳಲ್ಲಿ ಅದನ್ನು ತಡೆ ಹಿಡಿದಿದೆ. ಇದಕ್ಕೆ ಮಂಡಳಿಯ ಒಳಗೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ಕ್ರಮಕ್ಕೆ ಇರುವ ವಿರೋಧವೇ ಪ್ರಾಥಮಿಕ ಕಾರಣ ಎಂದು ಫೈರ್ ಸಂಸ್ಥೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಆನ್ಲೈನ್ ದಂಧೆ: ಕಾಲ್ ಮೂಲಕ ಸಾಫ್ಟ್ವೇರ್ ಡೆವಲರ್ಗೆ 1 ಲಕ್ಷ ವಂಚನೆ
ಈ ವಿರೋಧವು ಕಾನೂನಿನ ಉಲ್ಲಂಘನೆ ಮಾತ್ರವಲ್ಲದೇ, ಮಹಿಳೆಯರ ಘನತೆಯ ಬದುಕಿನ ಮೇಲಿನ ಧಾಳಿಯಾಗಿರುವ ಲೈಂಗಿಕ ಕಿರುಕುಳವನ್ನು ಮುಂದುವರೆಸಲು ಕೊಡುವ ಅವಕಾಶವೆಂದು ಫೈರ್ ಸಂಸ್ಥೆ ಆರೋಪಿಸಿದೆ.
ಡಿಸೆಂಬರ್ 15ರಂದು ನಡೆಯಲಿರುವ ಚುನಾವಣೆಯ ಕಾರಣ ನೀಡಿರುವ ಹಿನ್ನೆಲೆಯಲ್ಲಿ ಅದುವರೆಗೂ ಕಾಯುವುದಾಗಿಯೂ, ಮತ್ತು ಆ ನಂತರ ಸಮಿತಿಯ ಮರು ನೇಮಕ ಮಾಡಲು ಮುಂದಾಗದಿದ್ದಲ್ಲಿ ಕಾನೂನಾತ್ಮಕ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013 ರ ಅಡಿಯಲ್ಲಿ ಕ್ರಮಕ್ಕೆ ಮುಂದಾಗುವುದಾಗಿ ಮಾಧ್ಯಮ ಪ್ರಕಟಣೆಯ ಮೂಲಕ ಫೈರ್ ಸಂಸ್ಥೆಯು ತಿಳಿಸಿದೆ.
ಕೇರಳದಲ್ಲಿ ಸಿನಿಮಾ ರಂಗದ ಲೈಂಗಿಕ ದೌರ್ಜನ್ಯ ದ ಕುರಿತು ಜಸ್ಟೀಸ್ ಹೇಮಾ ಸಮಿತಿಯ ವರದಿ ಮತ್ತು ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಸಭೆ ನಡೆಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಯವರು 15. ದಿನಗಳ ಗಡುವು ನೀಡಿ ಆಂತರಿಕ ಸಮಿತಿ ರಚನೆ ಮಾಡಲು ನಿರ್ದೇಶನ ನೀಡಿದ್ದರು.
ಹದಿನೈದು ದಿನಗಳ ಒಳಗಲ್ಲದಿದ್ದರೂ ತಡವಾಗಿಯಾದರೂ ರಚನೆ ಮಾಡಿದಂತೆ ನಟಿಸಿ ಅದನ್ನು ತಡೆಹಿಡಿದ ಬೀಸುವ ದೊಣ್ಣೆಯಿಂದ ಪಾರಾಗುವ ಸೂತ್ರ ಹೆಣೆದಂತಿದೆ.
ಇದನ್ನೂ ನೋಡಿ : ಚಲನಚಿತ್ರ ವಾಣಿಜ್ಯ ಮಂಡಳಿ |ಲೈಂಗಿಕ ದೌರ್ಜನ್ಯ ತಡೆ? ಸಮಿತಿ ರಚಿಸಿ ತಡೆ ಹಿಡಿದದ್ದು ಯಾಕೆ? – ಕವಿತಾ ಲಂಕೇಶ್