ವಿಕ್ಟೋರಿಯಾ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಅಗ್ನಿ ಅವಘಡ

ಬೆಂಗಳೂರು: ನಗರದ ಪ್ರಮುಖ ಸಾರ್ವಜನಿಕ ಆಸ್ಪತ್ರೆ ವಿಕ್ಟೋರಿಯಾದಲ್ಲಿ ಜುಲೈ 1 ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಸಿಬ್ಬಂದಿಗಳು, ಅಗ್ನಿಶಾಮಕ ದಳ ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ಸ್ ಬ್ಲಾಕ್ (MBCC) ನಲ್ಲಿರುವ ಸೆಮಿನಾರ್ ಕೊಠಡಿಯಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದ್ದೂ, ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಈ ಬೆಂಕಿ ಸಂಭವಿಸಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದರು.

ಈ ವಾರ್ಡ್‌ನಲ್ಲಿ ಒಟ್ಟು 26 ರೋಗಿಗಳಿದ್ದರು. ಅದರಲ್ಲಿ 14 ಪುರುಷರು, 5 ಮಹಿಳೆಯರು ಮತ್ತು 7 ಮಕ್ಕಳು ಇದ್ದು, ಐಸಿಯುನಲ್ಲಿ 5 ರೋಗಿಗಳನ್ನು ದಾಖಲಿಸಲಾಗಿತ್ತು. ಭಾರಿ ಹೊಗೆಯ ಕಾರಣದಿಂದ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ, ಎಲ್ಲಾ ಬರ್ನ್ಸ್ ರೋಗಿಗಳನ್ನು (26 ರೋಗಿಗಳು) ವಿಕ್ಟೋರಿಯಾ ಆಸ್ಪತ್ರೆಯ ಎಚ್ ಬ್ಲಾಕ್ಗೆ ಸ್ಥಳಾಂತರಿಸಲಾಗಿದೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.

ಇದನ್ನೂ ಓದಿ: ವಸತಿ ಇಲಾಖೆಯಲ್ಲಿ ನಡೆದ ಹಗರಣಗಳನ್ನು ಬಿಚ್ಚಿಟ್ಟ ಬಿ ಆರ್ ಪಾಟೀಲ್

ಮುಂಜಾನೆ 3:15ರ ಸುಮಾರಿಗೆ ಮಹಾಬೋಧಿ ಬರ್ನ್ಸ್ ಸೆಂಟರ್‌ನ ಸೆಮಿನಾರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಚಾಮರಾಜಪೇಟೆ ಅಗ್ನಿಶಾಮಕ ಠಾಣೆಯಿಂದ ಒಂದು ವಾಹನವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬೆಂಕಿ ಇಡೀ ಬ್ಲಾಕ್‌ಗೆ ಹರಡುವ ಮುನ್ನವೇ ಅದನ್ನು ನಂದಿಸಲಾಯಿತು.

“ಕೊಠಡಿಯ ಸ್ವಿಚ್‌ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಟ್ಟವಾದ ಹೊಗೆ ಆವರಿಸಿದ್ದನ್ನು ಸಿಬ್ಬಂದಿ ಮತ್ತು ರೋಗಿಗಳ ಸಹಾಯಕರ ಗಮನಿಸಿದರು. ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಸೆಮಿನಾರ್ ಕೊಠಡಿಯ ಪಕ್ಕದಲ್ಲಿದ್ದ ಬರ್ನ್ಸ್ ವಾರ್ಡ್‌ನಿಂದ ರೋಗಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ರೋಗಿಗಳನ್ನು ಸ್ಥಳಾಂತರಿಸಲು ಸಹಾಯ ಮಾಡಿದರು.

ಬಿಎಂಸಿಆರ್‌ಐನ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ, ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮತ್ತು ಇತರ ಸಂಬಂಧಪಟ್ಟ ವೈದ್ಯರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಲು ಕ್ರಮ ಕೈಗೊಂಡರು. ಎಲ್ಲಾ ರೋಗಿಗಳು, ರೋಗಿಗಳ ಸಹಾಯಕರು, ವೈದ್ಯರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಸ್ಪತ್ರೆ ತಿಳಿಸಿದೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ಇನ್ನೂ ಯಾವುದೇ ಅಧಿಕೃತ ದೂರು ಬಂದಿಲ್ಲ.

ಇದನ್ನೂ ನೋಡಿ: ಭೂಸ್ವಾಧೀನ ವಿರೋಧಿಸಿ ಅನ್ನದಾತರಿಂದ ಅಹೋರಾತ್ರಿ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *