ಸಂವಿಧಾನ ರಕ್ಷಿಸಲು ಪ್ರಧಾನಿ ಮೋದಿ ಹತ್ಯೆ ಮಾಡಿ: ಕಾಂಗ್ರೆಸ್‌ ನಾಯಕ ವಿವಾದಾತ್ಮಕ ಹೇಳಿಕೆ

ಭೋಪಾಲ್‌: ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್‌ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅವರು ಮಾತನಾಡಿರುವುದನ್ನು ಚಿತ್ರೀಕರಿಸಿ ಅದನ್ನು ವೈರಲ್‌ ಮಾಡಲಾಗಿದೆ.

ಪ್ರಧಾನಿ ವಿರುದ್ಧ ಟೀಕೆ ಮಾಡುವ ಭರದಲ್ಲಿ ಮಾಜಿ ಶಾಸಕ ಹಾಗೂ ಮಧ್ಯ ಪ್ರದೇಶ ರಾಜ್ಯ ಕಾಂಗ್ರೆಸ್‌ ಉಪಾಧ್ಯಕ್ಷ ರಾಜಾ ಪಟೇರಿಯಾ ಎಂಬವರು ಪ್ರಧಾನಿಯ ಹತ್ಯೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ. ರಾಜಾ ಪಟೇರಿಯಾ ‘ಮೋದಿ ಚುನಾವಣೆಯನ್ನು ನಿಲ್ಲಿಸುತ್ತಾರೆ. ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಬದುಕು ಅಪಾಯದಲ್ಲಿದೆ. ಸಂವಿಧಾನ ಉಳಿಯಬೇಕಿದ್ದರೆ, ಮೋದಿಯನ್ನು ಕೊಲೆ ಮಾಡಲು ಸಜ್ಜಾಗಿರಿ. ಕೊಲ್ಲುವುದೆಂದರೆ ಹತ್ಯೆ ಮಾಡುವುದಲ್ಲ. ಅವರನ್ನು ಸೋಲಿಸಬೇಕು‘ ಎಂದು ಅವರು ಕರೆ ನೀಡಿದ್ದು ವಿಡಿಯೋದಲ್ಲಿ ದಾಖಲಾಗಿದೆ.

ರಾಜಾ ಪಟೇರಿಯಾ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕರು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರಿಗೆ ಮನವಿ ಮಾಡಿದ್ದಾರೆ. ಗೃಹ ಸಚಿವರು ಈ ಬಗ್ಗೆ ಎಫ್‌ಐಆರ್‌ ದಾಖಲಿಸಲು ಪನ್ನಾ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ.

ತಮ್ಮ ಮಾತು ಸಾಕಷ್ಟು ವೈರಲ್‌ ಆಗುತ್ತಿದ್ದಂತೆ, ಸ್ಪಷ್ಟನೆ ನೀಡಿರುವ ಪಟೇರಿಯಾ, ನನ್ನ ಅಭಿಪ್ರಾಯವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ನಾನು ಗಾಂಧಿಯನ್ನು ನಂಬುವ ವ್ಯಕ್ತಿ, ಈ ರೀತಿ ಮಾತನಾಡಲಾರೆ. ಸಂವಿಧಾನ ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ. ದಲಿತರು, ಆದಿವಾಸಿಗಳನ್ನು ರಕ್ಷಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂದು ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *