ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ ಎಂದಿದ್ದಕ್ಕೆ ಎಫ್‌ಐಆರ್? – ಸುಪ್ರಿಂ ಕೋರ್ಟ್ ಪ್ರಶ್ನೆ

“ನ್ಯಾಯಕ್ಕಾಗಿ ಹೋರಾಟದಲ್ಲಿ ಅನ್ಯಾಯವನ್ನು ಎದುರಿಸಬೇಕಾಗಿ ಬಂದರೂ ನಾವು ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ” ಎನ್ನುವ ಕವನ ಅದನ್ನು ಉಲ್ಲೇಖಿಸಿದವರ ಮೇಲೆ ಗುಜರಾತ್ ಪೊಲಿಸ್ ಹೇಗೆ ತಾನೇ ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿವಿಧ ಜನಸಮೂಹಗಳ ನಡುವೆ ವೈರತ್ವ ಪ್ರಚೋದಿಸುತ್ತಿದ್ದಾರೆ ಎಂದು ಎಫ್‌ಐಆರ್ ಹಾಕುವಂತೆ ಮಾಡಲು ಸಾಧ್ಯ?-ಇದು ದೇಶದ ಸರ್ವೋಚ್ಚ ನ್ಯಾಯಾಲಯ ಕೇಳಿರುವ ಪ್ರಶ್ನೆ. ಅನ್ಯಾಯ

ಗುಜರಾತ್ ಪೋಲಿಸ್ ತನ್ನ ಮೇಲೆ ಹಾಕಿರುವ ಎಫ್‌ಐಆರ್‌ನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್ ಸಂಸದ ಮತ್ತು ಆ ಪಕ್ಷದ ಅಲ್ಪಸಂಖ್ಯಾತ ಸೆಲ್‌ನ ರಾಷ್ಟಿçಯ ಅಧ್ಯಕ್ಷ ಇಮ್ರಾನ್ ಪ್ರತಾಪಗಡೀ ಸುಪ್ರಿಂ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ನ್ಯಾಯಮೂರ್ತಿಗಳಾದ ಎ ಎಸ್ ಓಕ್ ಮತ್ತು ಉಜ್ಜಲ್ ಬೂಯಾನ್‌ರವರ ನ್ಯಾಯಪೀಠ ಕೇಳಿದ ಪ್ರಶ್ನೆ ಇದು. ( ಲೈವ್ ಲಾ, ಮಾರ್ಚ್3)

“ಅಯ್ ಖೂನ್‌ಕೇ ಪ್ಯಾಸೋಂ ಬಾತ್ ಸುನೋ”(ರಕ್ತಪಿಪಾಸುಗಳೇ ಮಾತು ಕೇಳಿ) ಎಂಬ ಉರ್ದು ಕವನವನ್ನು ಹಾಡುವ ಹಿನ್ನೆಲೆಯ ಒಂದು ವಿಡಿಯೋ ಕ್ಲಿಪ್ಪನ್ನು ಇಮ್ರಾನ್ ಪ್ರತಾಪಗಡಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಕ್ಕೆ ಜನವರಿ 3 ರಂದು ಗುಜರಾತಿನ ಜಾಮ್ನಗರ್ ಪೋಲೀಸರು ಮೇಲೆ ಹೇಳಿದಂತೆ ಎಫ್‌ಐಆರ್ ಹಾಕಿ ಪ್ರಕರಣವನ್ನು ದಾಖಲಿಸಿದ್ದರು. ಗುಜರಾತ್ ಹೈಕೋರ್ಟ್ ಇದನ್ನು ರದ್ದು ಮಾಡಲು ನಿರಾಕರಿಸಿದ್ದರಿಂದ ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲುಗೊಳಿಸಿ- ಎಸ್ಎಫ್ಐ

ಈ ಕವನ ವಾಸ್ತವವಾಗಿ ಅಹಿಂಸೆಯ ಸಂದೇಶವನ್ನು ನೀಡುತ್ತದೆ, ಇದು ಧರ್ಮಕ್ಕೆ ಸಂಬಂಧಪಟ್ಟದೂ ಅಲ್ಲ, ಯಾವುದೇ ರಾಷ್ಟ್ರ-ವಿರೋಧಿ ಚಟುವಟಿಕೆಗೂ ಸಂಬಂಧಪಟ್ಟದ್ದಲ್ಲ. ಪೋಲೀಸರು ಸೂಕ್ಷ್ಮತೆಯ ಅಭಾವವನ್ನು ತೋರಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಟಿಪ್ಪಣಿ ಮಾಡಿದಾಗ ಗುಜರಾತ್ ಪೋಲೀಸ್ ಪರ ವಕೀಲ ಮತ್ತು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ಜನ ಈ ಕವನದ ಅರ್ಥವನ್ನು ಭಿನ್ನವಾಗಿ ಅರ್ಥಮಾಡಿಕೊಂಡಿರಬಹುದು ಎಂದರಂತೆ.

ಇದಕ್ಕೆ ಮೊದಲು ಅವರು ಈ ಕವನ ಫೈಜ್ (ಉರ್ದು ಭಾಷೆಯ ಒಬ್ಬ ಶ್ರೇಷ್ಠ ಕವಿ)ರವರದ್ದೇನಲ್ಲ, ಹೆಚ್ಚೆಂದರೆ ‘ಸಡಕ್ ಛಾಪ್’, ಅಂದರೆ ಬೀದಿ ಕವನ, ಇಮ್ರಾನ್‌ರನ್ನು ಮಹಾತ್ಮ ಗಾಂಧಿಯೊಂದಿಗೆ ಹೋಲಿಸಬೇಡಿ ಎಂದೂ ಅವರು ನ್ಯಾಯಪೀಠವನ್ನು ಆಗ್ರಹಿಸಿದ್ದಾಗಿ ವರದಿಯಾಗಿದೆ.( ದಿ ಹಿಂದು, ಮಾ.4)

ಇದೀಗ ಸಮಸ್ಯೆ”!

ಭಾರತ ಸರಕಾರದ ಅತ್ಯುಚ್ಚ ನ್ಯಾಯವಾದಿಯ ಹುದ್ದೆಯಲ್ಲಿರುವವರ ಇಂತಹ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸುತ್ತ ನ್ಯಾಯಮೂರ್ತಿ ಓಕ್ ‘ಇದೀಗ ಸಮಸ್ಯೆ’ ಎಂದು ಉದ್ಗರಿಸಿದರು. “ಈಗ ಯಾರಿಗೂ ಸೃಜನಶೀಲತೆಯ ಬಗ್ಗೆ ಗೌರವವಿಲ್ಲ. ನೀವು (ಈ ಕವನವನ್ನು) ಸರಳವಾಗಿ ಓದಿದರೆ, ಅದು, ಅನ್ಯಾಯವನ್ನು ಸಹಿಸಿಕೊಳ್ಳಬೇಕಾಗಿ ಬಂದರೂ, ಅದನ್ನು ಪ್ರೀತಿಯಿಂದ ಸಹಿಸಿಕೊಳ್ಳಿ ಎನ್ನುತ್ತದೆ. ರಕ್ತಪಿಪಾಸುಗಳೇ ಮಾತು ಕೇಳಿ- ನ್ಯಾಯಕ್ಕಾಗಿ ಹೋರಾಟದಲ್ಲಿ ಅನ್ಯಾಯವನ್ನು ಎದುರಿಸಬೇಕಾಗಿ ಬಂದರೂ ನಾವು ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ ಎಂಬುದೇ ಈ ಕವನದ ಅರ್ಥ” ಎಂದು ನ್ಯಾಯಮೂರ್ತಿ ಓಕ್ ಹೇಳಿದರು. ಅನ್ಯಾಯ

ಮುಂದುವರೆದು “ಪೋಲೀಸರು ತುಸು ಸೂಕ್ಷ್ಮತೆಯನ್ನು ತೋರಬೇಕು. ಏನಿಲ್ಲೆಂದರೂ ಅವರು ಓದಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು. ಈ ಕವನದ ಅರ್ಥವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಬೇಕಾಗಿತ್ತು….. ..ಸಂವಿಧಾನದ 75 ವರ್ಷಗಳ ಅಸ್ತಿತ್ವದ ನಂತರ ಈಗಲಾದರೂ ಪೋಲೀಸರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ನ್ಯಾಯಮೂರ್ತಿಗಳು ಹೇಳಿದರು. ಅನ್ಯಾಯ 

ಈ ಸಂದರ್ಭದಲ್ಲಿ ಇಮ್ರಾನ್ ಪ್ರತಾಪಗಡಿಯವರ ಪರ ವಕಾಲತು ವಹಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ “ಹೈಕೋರ್ಟ್ ನ್ಯಾಯಾಧೀಶರು ಏನು ಹೇಳಿದ್ದಾರೆ ನೋಡಿ. ಈ ಬಗ್ಗೆಯೂ ಮಾನ್ಯ ನ್ಯಾಯಮೂರ್ತಿಗಳು ಏನಾದರೂ ಹೇಳಬೇಕು” ಎನ್ನುತ್ತ ಹೈಕೋರ್ಟ್ ಕೂಡ ಸೂಕ್ಷ್ಮತೆಯನ್ನು ತೋರಬೇಕಾಗಿತ್ತು ಎಂದು ಸೂಚಿಸಿದರು.

ಸುಪ್ರಿಂ ಕೋರ್ಟ್ ಕೂಡ ಈ ಮೊದಲೇ, ಪೋಲೀಸರೂ ಮತ್ತು ಹೈಕೋರ್ಟ್ ಕೂಡ ಕವನದ ನಿಜ ಅರ್ಥವನ್ನು ಮೆಚ್ಚಿಕೊಳ್ಳಲಿಲ್ಲ ಎಂದು ಹೇಳಿತ್ತು. ಈ ಕುರಿತ ತನ್ನ ತೀರ್ಪನ್ನು ಕಾಯ್ದಿಡುತ್ತ, ಈ ಎಫ್‌ಐಆರ್ ಅಡಿಯಲ್ಲಿ ಅದುವರೆಗೆ ಯಾವುದೇ ಮುಂದಿನ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿತು.

ಸಿಂಹಾಸನಕ್ಕೆ ಅಪಾಯ’!

ತನ್ನ ಮೇಲಿನ ಎಫ್‌ಐಆರ್‌ನ್ನು ರದ್ದು ಮಾಡಬೇಕು ಎಂದು ಕೇಳಿ ಇಮ್ರಾನ್ ಪ್ರತಾಪಗಡಿಯವರ ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ಸಂದೀಪ ಎನ್ ಭಟ್ಟ್ “ಕವನದ ದಾಟಿಯನ್ನು ನೋಡಿದರೆ, ಅದು ಖಂಡಿತವಾಗಿಯೂ ಸಿಂಹಾಸನದ ಬಗ್ಗೆ ಏನನ್ನೋ ಸೂಚಿಸುತ್ತದೆ. ಅವರ ಪೋಸ್ಟಿಗೆ ಇತÀರರಿಂದ ದೊರೆತ ಸ್ಪಂದನೆಗಳು ಅದನ್ನು ಸಾಮಾಜಿಕ ಸಾಮರಸ್ಯವನ್ನು ಕದಡುವ ರೀತಿಯಲ್ಲಿ ಹಾಕಲಾಗಿದೆ ಎಂಬುದನ್ನು ಸೂಚಿಸುತ್ತದೆ” ಎಂದು ತಮ್ಮ ಆದೇಶದಲ್ಲಿ ಹೇಳಿದ್ದರು. (ಡೆಕ್ಕನ್ ಹೆರಾಲ್ಡ್, ಜ.17)

ಇಲ್ಲಿ ಕವನದ ಆರಂಭದ ಕೆಲವು ಸಾಲುಗಳನ್ನು ನೋಡಬಹುದು:

ಅಯ್ ಖೂನ್‌ಕೇ ಪ್ಯಾಸೋಂ ಬಾತ್ ಸುನೊ

ಗರ್ ಹಕ್‌ಕೀ ಲಡಾಯಿ ಜುಲ್ಮ್ ಸಹೀ

ಹಮ್ ಜುಲ್ಮ್ ಸೆ ಇಶ್ಕ್ ನಿಭಾ ದೇಂಗೆ

ಗರ್ ಶಮ್ಮ-ಎ-ಗಿರ್ಯಾ ಆತಿಶ್ ಹೈ

ಹರ್ ರಾಹ್ ವೊ ಶಮ್ಮಾ ಜಲಾ ದೇಂಗೆ

ಗರ್ ಲಾಶ್ ಹಮಾರೇ ಅಪ್ನೋಂಕೀ

ಖತ್ರಾ ಹೈ ತುಮ್ಹಾರೇ ಮಸ್ನದ್ ಕಾ

ಉಸ್ ರಬ್‌ಕೀ ಕಸಮ್ ಹಂಸ್ತೇ-ಹಂಸ್ತೇ

ಇತ್ನೀ ಲಾಶ್ ದಫ್ನಾ ದೇಂಗೇ

ಅಯ್ ಖೂನ್‌ಕೇ ಪ್ಯಾಸೋಂ ಬಾತ್ ಸುನೊ

.. .. .. .. ..

ರಕ್ತಪಿಪಾಸುಗಳೇ, ಮಾತ ಕೇಳಿ!

ನ್ಯಾಯಕ್ಕಾಗಿ ಹೋರಾಟ ಅಪರಾಧವಾದರೆ,

ನಾವು ಪ್ರೀತಿಯಿಂದ ಅದನ್ನು ನಿಭಾಯಿಸುತ್ತೇವೆ.

ಮೇಣದ ದೀಪದ ಹನಿಗಳು ಜ್ವಾಲೆಯಾದರೆ,

ಪ್ರತಿ ಬೀದಿಯಲ್ಲೂ ದೀಪ ಹಚ್ಚುತ್ತೇವೆ

ನಮ್ಮ ಪ್ರೀತಿಪಾತ್ರರ ಶವಗಳಿಂದ

ನಿಮ್ಮ ಸಿಂಹಾಸನಕ್ಕೆ ಅಪಾಯ ಎನಿಸಿದರೆ

ದೇವರಾಣೆ, ನಗುತ್ತ ನಗುತ್ತಲೇ

ಅಷ್ಟೆಲ್ಲ ಶವಗಳನ್ನು ಹೂತು ಹಾಕುತ್ತೇವೆ

ರಕ್ತಪಿಪಾಸುಗಳೇ, ಮಾತ ಕೇಳಿ!.. .. .. ..

ಹೈಕೋರ್ಟಿನಲ್ಲಿ ಹಾಕಿದ ಅರ್ಜಿಯ ವಿಚಾರಣೆಯಲ್ಲಿ, ಈ ಕವನ ವೈರತ್ವವನ್ನು ಹುಟ್ಟುಹಾಕುವಂತದ್ದಲ್ಲ, ಪ್ರೀತಿಯ ಸಂದೇಶವನ್ನು ಸಾರುವಂತದ್ದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್(ಪೊಲಿಸ್ ಪರ ವಕೀಲರು) ‘ನಿಮ್ಮ ಸಿಂಹಾಸನಕ್ಕೆ ಅಪಾಯ ಎನಿಸಿದರೆ’ ಎಂಬ ಪದವನ್ನು ಉಲ್ಲೇಖಿಸುತ್ತ “ಕವನದ ಪದಗಳು ಸ್ಪಷ್ಟವಾಗಿ ರಾಜ್ಯದ ಸಿಂಹಾಸನದ ವಿರುದ್ಧ ಕ್ರೋಧ ಎಬ್ಬಿಸುವುದನ್ನು ಸೂಚಿಸುತ್ತದೆ, ಆದ್ದರಿಂದ ಮೇಲ್ನೋಟಕ್ಕೇ ಪ್ರಕರಣ ಕಾಣಬರುತ್ತದೆ” ಎಂದು ವಾದಿಸಿದರು.

ನ್ಯಾಯಮೂರ್ತಿ ಸಂದೀಪ ಭಟ್ಟರ ಮೇಲೆ ಹೇಳಿದ ಆದೇಶಅದನ್ನು ಎತ್ತಿ ಹಿಡಿದಂತೆ ಕಾಣುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಿಂಹಾಸನದ ಮಾತು?

ಇಲ್ಲಿ ಸಂಕೇತ ಪಟ್ಟಭದ್ರರ ಕಡೆಗೆ ಎಂದು ಹೈಕೋರ್ಟ್ ನ್ಯಾಯಾಧೀಶರು ಸೂಕ್ಷ್ಮವಾಗಿ ಗಮನಿಸಬೇಕಾಗಿತ್ತು, ಆದ್ದರಿಂದಲೇ ಬಹುಶಃ ಕಪಿಲ್ ಸಿಬಾಲ್ ರವರು, ಸುಪ್ರಿಂ ಕೋರ್ಟ್ “..ಸಂವಿಧಾನದ 75 ವರ್ಷಗಳ ಅಸ್ತಿತ್ವದ ನಂತರ ಈಗಲಾದರೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಪೋಲೀಸರ ಬಗ್ಗೆ ಹೇಳಿದ್ದು ಗುಜರಾತಿನ ಈ ಹೈಕೋರ್ಟ್ ನ್ಯಾಯಾಧೀಶರಿಗೂ ಅನ್ವಯಿಸುತ್ತದೆ ಎಂದು ಸೂಚಿಸಿದ್ದಾರೆ.

ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ, ವಿಚಾರಣೆ ವೇಳೆಯಲ್ಲಿ, ಈ ಕವನ ಸ್ವತಃ ಕವಿಗಳೂ ಆಗಿರುವ ಅರ್ಜಿದಾರರದ್ದೇ, ಅಲ್ಲವಾದರೆ ಬೇರೆ ಯಾರದ್ದು ಎಂದು ಅಫಿಡವಿಟ್ ಸಲ್ಲಿಸಬೇಕು ಎಂದು ಹೇಳಲಾಯಿತು. ಇದು ತನ್ನ ಕವನವಲ್ಲ, ಯಾರದ್ದಿರಬಹುದು ಎಂದು ತಿಳಿಯಲು ಪ್ರಯತ್ನ ಪಟ್ಟಿದ್ದೆ, ಆದರೆ ಸ್ಪಷ್ಟವಾಗಿ ತಿಳಿಯಲಿಲ್ಲ, ಫೈಜ್ ಅಹ್ಮದ್ ಫೈಜ್ ಅಥವ ಹಬೀಬ್ ಜಾಲಿಬ್ ರದ್ದು ಇರಬಹುದು ಎಂದು ಇಮ್ರಾನ್ ಪ್ರತಾಪಗಡಿ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದರು.

ಎಲ್ಲರಿಗೂ ತಿಳಿದಿರುವಂತೆ ಫೈಜ್ ಅವಿಭಜಿತ ಭಾರತೀಯ ಉಪಖಂಡದಜನಪ್ರಿಯ ಕ್ರಾಂತಿಕಾರಿ ಕವಿ, ಪತ್ರಕರ್ತ, ಪಾಕಿಸ್ತಾನ ರಚನೆಯಾದ ನಂತರ ಅಲ್ಲಿಯೂ ಹಲವು ವರ್ಷಗಳ ಕಾಲ ಅವರನ್ನು ಆಳುವ ಮಂದಿ ಜೈಲಿಗಟ್ಟಿದ್ದರು; ಹಬೀಬ್ ಜಾಲಿಬ್ ಕೂಡ ನಂತರ ಪಾಕಿಸ್ತಾನದ ಇನ್ನೊಬ್ಬ ಜನಪ್ರಿಯ ಕ್ರಾಂತಿಕಾರಿ ಕವಿಯಾಗಿ ಪ್ರಸಿದ್ಧರಾಗಿರುವವರು, ಅದರಿಂದಾಗಿ ಅಲ್ಲಿಯ ಆಳುವ ಮಂದಿಯ ಕೋಪಕ್ಕೆ ಗುರಿಯಾದವರು.

ಇಲ್ಲಿ ಮತ್ತೊಂದು ಸಂಗತಿಯನ್ನೂ ನೆನಪಿಸಿಕೊಳ್ಳಬಹುದು. ಪಾಕಿಸ್ತಾನದ ಆಳರಸರನ್ನು ಮತ್ತೆ-ಮತ್ತೆ ನಡುಗಿಸಿದ ಫೈಜ್‌ರವರ ಪ್ರಸಿದ್ಧಕವನ ‘ಹಮ್ ದೇಖೇಂಗೇ’(ಕಂಡೇ ಕಾಣುವೆವು) ಇತ್ತೀಚೆಗೆ ಭಾರತದಲ್ಲಿಯೂ ಆಳುವವರನ್ನು ನಡುಗಿಸಿತ್ತು. ಅದರಲ್ಲಿಯೂ ‘ಮಸ್ನದ್’ ಅಂದರೆ ‘ಸಿಂಹಾಸನ’ದ ಮಾತಿದೆ.

ತಿಳಿಮನದ ನಮ್ಮನು, ಮತಾಂಧರೊಲ್ಲದ ನಮ್ಮನು

ಸಿಂಹಾಸನದ ಮೇಲೆ ಕೂರಿಸುವರು

ಕಿರೀಟಗಳೆಲ್ಲ ಎಗರುವವು, ಗದ್ದುಗೆಗಳೆಲ್ಲ ಉರುಳುವವು

ಆದ್ದರಿಂದ ಗುಜರಾತಿನ ಪೋಲೀಸರನ್ನು, ಮಾತ್ರವಲ್ಲ ಅಲ್ಲಿನನ್ಯಾಯಾಧೀಶರನ್ನೂ ‘ಸಿಂಹಾಸನಕ್ಕೆ ಅಪಾಯ’ ಎಂಬುದು ಬಾಧಿಸಿರುವುದರಲ್ಲಿ ಆಶ್ಚರ್ಯವಿಲ್ಲ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠ ಹೇಳಿರುವಂತೆ ‘ಇದೀಗ ಸಮಸ್ಯೆ’!

ಇದನ್ನೂ ನೋಡಿ: ಬಜೆಟ್‌ 2025 ಚರ್ಚೆ| ಶ್ರಮಜೀವಿಗಳ ಜೀವ ತೆಗೆದ ಜನದ್ರೋಹಿ ಬಜೆಟ್‌Janashakthi Media

Donate Janashakthi Media

Leave a Reply

Your email address will not be published. Required fields are marked *