ಬೆಂಗಳೂರು | ನಟ ರಣ್​​ವೀರ್ ಸಿಂಗ್ ವಿರುದ್ಧ FIR ದಾಖಲು

ಬೆಂಗಳೂರು: ಬಾಲಿವುಡ್‌ ನಟ ರಣ್​ವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಂತಾರ’ ಸಿನಿಮಾದ ದೈವ ದೃಶ್ಯವನ್ನು ಅನುಕರಿಸಿ ವಿವಾದಕ್ಕೆ ಕಾರಣವಾಗಿದೆ.

ರಣ್​​ವೀರ್ ಸಿಂಗ್ ಅವರು ಲಕ್ಷಾಂತರ ಹಿಂದೂಗಳು ಹಾಗೂ ಕರ್ನಾಟಕದ ತುಳು ಭಾಷಿಕ ಸಮುದಾಯದ ಭಾವನೆಗಳನ್ನು ತೀವ್ರವಾಗಿ ನೋಯಿಸಿರುವುದರಿಂದ ಕಾನೂನು‌ ಕ್ರಮ ಜರುಗಿಸುವಂತೆ ವಕೀಲ ಪ್ರಶಾಂತ್ ಮೆಥಲ್ ಎಂಬುವರು ಹೈಗ್ರೌಂಡ್ಸ್ ಠಾಣೆಗೆ ಡಿಸೆಂಬರ್ 3ರಂದು ದೂರು ನೀಡಿದ್ದರು. ಎಫ್ಐಆರ್ ದಾಖಲಿಸುವಂತೆ ನಗರದ 1ನೇ ಎಸಿಜೆಎಂ ನ್ಯಾಯಾಲಯ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭ ನಟ ರಣ್​ವೀರ್ ಸಿಂಗ್ ಅವರು ನೀಡಿದ ಒಂದು ಕಾಮೆಂಟ್ ಅಥವಾ ಹೇಳಿಕೆಗೆ ಸಂಬಂಧಿಸಿದಂತೆ ಈ ದೂರು ದಾಖಲಾಗಿದೆ. ನಟನ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಕೇ ಮಾಹಿತಿ ನೀಡಿದ್ದು, ”ದೂರುದಾರರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ಆದೇಶದಂತೆ ನಿನ್ನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಅಗತ್ಯವಿದ್ದಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಕೇ ತಿಳಿಸಿದರು.

ಇದನ್ನೂ ಓದಿ : ಬೆಂಗಳೂರು |ಜವಳಿ ಕ್ಷೇತ್ರಕ್ಕೆ ಉತ್ತೇಜನ: ಹೊಸ ನೀತಿಯಲ್ಲಿ ಕೈಮಗ್ಗ ಮತ್ತು ಮಹಿಳಾ ಕಾರ್ಮಿಕರಿಗೆ ವಿಶೇಷ ನೆರವು

ನವೆಂಬರ್ 28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ರಣ್​ವೀರ್ ಸಿಂಗ್, ಕಾಂತಾರ ಚಿತ್ರದಲ್ಲಿ ಚಿತ್ರಿಸಲಾದ ಪವಿತ್ರ “ದೈವ” (ಭೂತ ಕೋಲ) ಸಂಪ್ರದಾಯವನ್ನು ಬಹಿರಂಗವಾಗಿ ಅಪಹಾಸ್ಯ ಮಾಡಿದ್ದಾರೆ. ವೇದಿಕೆಯಲ್ಲಿದ್ದ ರಣ್​ವೀರ್ ಸಿಂಗ್ ಅವರು ಪಂಜುರ್ಲಿ/ಗುಳಿಗ ದೈವದ (ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಪೂಜಿಸಲ್ಪಡುವ ಪವಿತ್ರ ಶಕ್ತಿ) ದೈವಿಕ ಅಭಿವ್ಯಕ್ತಿಗಳನ್ನು ಅಸಭ್ಯ, ಅವಹೇಳನಕಾರಿ ಮತ್ತು ಹಾಸ್ಯಮಯ ರೀತಿಯಲ್ಲಿ ಅನುಕರಿಸಿದ್ದಾರೆ. ಪವಿತ್ರ ದೈವವನ್ನು “ಭೂತ” (“ಸ್ತ್ರೀ ಭೂತ”) ಎಂದು ಮೌಖಿಕವಾಗಿ ಉಲ್ಲೇಖಿಸಿದ್ದಾರೆ.

ದೇವರನ್ನು “ಭೂತ” ಎನ್ನುವ‌ ಮೂಲಕ ರಣ್​ವೀರ್ ಸಿಂಗ್ ಅವರಿಂದ ದೇವದೂಷಣೆಯಾಗಿದೆ ಮತ್ತು ಹಿಂದೂ ನಂಬಿಕೆಗಳಿಗೆ ಉದ್ದೇಶಪೂರ್ವಕವಾಗಿ ನೋವುಂಟು ಮಾಡಲಾಗಿದೆ. ಚಿತ್ರದಲ್ಲಿರುವುದು ನಮ್ಮ ರಾಜ್ಯದ ಅಧಿದೇವತೆ ಚಾಮುಂಡೇಶ್ವರಿಯಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯಲ್ಲಿ ದೈವವು ದೆವ್ವವಲ್ಲ.  ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನಟರೊಬ್ಬರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂಥ ವ್ಯಂಗ್ಯ ಪ್ರದರ್ಶಿಸುವ ಮೂಲಕ ಕಾಂತಾರ ಚಲನಚಿತ್ರ ಮಾತ್ರವಲ್ಲದೇ ತುಳು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿದ್ದಾರೆ. ಆ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ದೈವ ಭಕ್ತರು ಮತ್ತು ಸಾರ್ವಜನಿಕರಿಗೆ ತೀವ್ರ ಮಾನಸಿಕ ಯಾತನೆ, ಕೋಪ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ಇದು ಸಾರ್ವಜನಿಕ ಶಾಂತಿ ಭಂಗಗೊಳಿಸುವ ಮತ್ತು ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಬಹುದು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇನ್ನು, ಡಿಸೆಂಬರ್​ 5ರಂದು ರಣ್​​ವೀರ್ ಸಿಂಗ್​​​ ಮುಖ್ಯಭೂಮಿಕೆಯ ಧುರಂಧರ್ ಸಿನಿಮಾ ತೆರೆಕಂಡಿತು. ಅದಕ್ಕೂ ಕೆಲ ದಿನಗಳ ಮುನ್ನ ಈ ವಿವಾದ ಶುರುವಾಯಿತು. ರಣ್​ವೀರ್​ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.​ ಈ ಹಿನ್ನೆಲೆ ಡಿಸೆಂಬರ್​ 2ರಂದು ಇನ್​ಸ್ಟಾಗ್ರಾಮ್​ ಸ್ಟೋರಿ ಸೆಕ್ಷನ್​ ಮೂಲಕ ಖ್ಯಾತ ನಟ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ”ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸುವುದು ಎಷ್ಟು ಸವಾಲಿನದ್ದು ಎಂಬುದು ನನಗೆ ತಿಳಿದಿದೆ. ಆ ನಟನೆಗೆ ನನ್ನ ಮೆಚ್ಚುಗೆ ಇದೆ. ನಮ್ಮ ದೇಶದ ಪ್ರತೀ ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಸದಾ ಗೌರವಿಸುತ್ತೇನೆ. ನಾನು ಯಾರದ್ದೇ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಬರೆದುಕೊಂಡಿದ್ದರು. ಧುರಂಧರ್ ಸಿನಿಮಾದ ಅದ್ಭುತ ಯಶಸ್ಸಿನಲೆಯಲ್ಲಿ ತೇಲುತ್ತಿರುವ ನಟನ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿ, ಸಂಕಷ್ಟ ಎದುರಾಗಿದೆ.

ಇದನ್ನೂ ನೋಡಿ : ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media

Donate Janashakthi Media

Leave a Reply

Your email address will not be published. Required fields are marked *