ಬಿಜೆಪಿ ಪರ ಚಾನೆಲ್ ಸಂಪಾದಕನ ಮೇಲೆ ಎಫ್‌ಐಆರ್‌; ಪೊಲೀಸ್ ಕಮಿಷನರ್ ವರ್ಗಾವಣೆ?

ಚಂಡೀಗಢ: ಬಲಪಂಥೀಯ ಪ್ರೊಪಗಾಂಡ ಚಾನೆಲ್ ಸುದರ್ಶನ್ ನ್ಯೂಸ್‌ನ ಸಂಪಾದಕನ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಹರಿಯಾಣದ ಬಿಜೆಪಿ ಸರ್ಕಾರವು ಗುರುಗ್ರಾಮ್ ಪೊಲೀಸ್ ಕಮಿಷನರ್ ಕಲಾ ರಾಮಚಂದ್ರನ್ ಅವರನ್ನು ವರ್ಗಾವಣೆ ಮಾಡಿದೆ. ತಮ್ಮ ವರ್ಗಾವಣೆಯು ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಕಲಾ ರಾಮಚಂದ್ರನ್ ಅವರು, “ಇದು ‘ವಾಡಿಕೆ’ಯ ವರ್ಗಾವಣೆಯಾಗಿದೆ’ ಎಂದು ಹೇಳಿದ್ದಾರೆ. ಬಲಪಂಥೀಯ ಪ್ರೊಪಗಾಂಡ ಚಾನೆಲ್ ಸುದರ್ಶನ್ ನ್ಯೂಸ್‌ನ ಸಂಪಾದಕರ ವಿರುದ್ಧ ದಾಖಲಾದ ಎಫ್‌ಐಆರ್‌ಗೂ ತಮ್ಮ ವರ್ಗಾವಣೆಗೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

ತಮ್ಮ ವರ್ಗಾವಣೆ ಬಗ್ಗೆ ಮಾತನಾಡಿದ 1994 ರ ಹರಿಯಾಣ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಕಲಾ ರಾಮಚಂದ್ರನ್ ಅವರು, “ನಾನು ಇಲ್ಲಿ ಒಂದೂವರೆ ವರ್ಷಗಳನ್ನು ಕಳೆದಿದ್ದೇನೆ. ಇದು ವಾಡಿಕೆಯ ವರ್ಗಾವಣೆಯಾಗಿದೆ” ಎಂದು ಹೇಳಿದ್ದಾರೆ. ಸಂಪಾದಕ ಮುಕೇಶ್ ಕುಮಾರ್ ವಿರುದ್ಧದ ಎಫ್‌ಐಆರ್‌ಗೂ, ತಮ್ಮ ವರ್ಗಾವಣೆಗೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಮಿನಲ್‌ ಮಾನಷ್ಟ ಪ್ರಕರಣ:ಬಾಂಬೆ ಹೈಕೋರ್ಟ್‌ಗೆ ಮೊರೆ ಹೋದ ರಾಹುಲ್‌ ಗಾಂಧಿ

ಹರಿಯಾಣದಲ್ಲಿ ಸೋಮವಾರ ವರ್ಗಾವಣೆಯಾದ 20 ಐಪಿಎಸ್ ಅಧಿಕಾರಿಗಳಲ್ಲಿ ಕಲಾ ರಾಮಚಂದ್ರನ್ ಅವರು ಕೂಡಾ ಇದ್ದಾರೆ. ವರ್ಗಾವಣೆಯ ನಂತರ ಗುರುಗ್ರಾಮ್‌ನ ಪೊಲೀಸ್‌ ಕಮೀಷನರ್‌ ಆಗಿ ವಿಕಾಸ್ ಅರೋರಾ ಅವರು ಅಧಿಕಾರ ವಹಿಸಿಕೊಂಡಿದ್ದು, ಕಲಾ ಅವರು ಈಗ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ) ವರ್ಗಾವಣೆಯಾಗಿದ್ದಾರೆ.

ಸುದರ್ಶನ್ ಟಿವಿ ಸಂಪಾದಕನ ವಿರುದ್ಧ ವಿರುದ್ಧ ಎಫ್‌ಐಆರ್

ಆಗಸ್ಟ್‌ 8ರಂದು ಟ್ವೀಟ್ ಮಾಡಿದ್ದ ಮುಕೇಶ್ ಕುಮಾರ್, “ನುಹ್‌ನಲ್ಲಿ ನಡೆದ ಕೋಮು ಹಿಂಸಾಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮ ಅಲ್ ಜಜೀರಾದಿಂದ ಕಲಾ ರಾಮಚಂದ್ರನ್ ಒತ್ತಡಕ್ಕೆ ಒಳಗಾಗಿದ್ದು, ಹೀಗಾಗಿ ಹಿಂದೂ ಕಾರ್ಯಕರ್ತರನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ” ಎಂದು ಹೇಳಿಕೊಂಡಿದ್ದರು. ಇದು ವಿವಾದವಾದ ಬಳಿಕ ಮುಕೇಶ್‌ ಕುಮಾರ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳನ್ನು ಹರಡಿ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತಿದ್ದಾರೆ ಎಂಬ ಆರೋಪದ ಮೇಲೆ ಆಗಸ್ಟ್ 9 ರಂದು ಗುರುಗ್ರಾಮ್ ಪೊಲೀಸರು ಮುಕೇಶ್‌ ಕುಮಾರ್ ವಿರುದ್ಧ  ಎಫ್ಐಆರ್ ದಾಖಲಿಸಿದ್ದರು. ಎರಡು ದಿನಗಳ ನಂತರ ಸೈಬರ್ ಕ್ರೈಂ ವಿಭಾಗವು ಆತನನ್ನು ಬಂಧಿಸಿತ್ತು.

ಇದನ್ನೂ ಓದಿ: ಗೋಡ್ಸೆ ವೈಭವೀಕರಣ: ಸಾರಿಗೆ ಇಲಾಖೆಯ ಮೆನ್ಷನ್ ಮಾಡಿ ಸುಮ್ಮನಾಯ್ತೆ ಬೆಂಗಳೂರು ನಗರ ಪೊಲೀಸ್‌?

ಮುಕೇಶ್ ಕುಮಾರ್ ಬಂಧನವಾಗಿ ಜಾಮೀನು ಪಡೆಯುವ ವರೆಗೆ ಬಲಪಂಥೀಯ ಟ್ವಿಟರ್‌ ಖಾತೆಗಳು #ReleaseMukeshKumar ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದವು. ತಮ್ಮ ಚಾನೆಲ್ ಸಂಪಾದಕನ ಬಂಧನವನ್ನು “ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ” ಎಂದು ಸುದರ್ಶನ್ ನ್ಯೂಸ್ ಇದನ್ನು  ಕರೆದಿದೆ.

ಆಗಸ್ಟ್ 19 ರಂದು, ಹರಿಯಾಣ ಸರ್ಕಾರವು ರೇವಾರಿ ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ರಾನ್ ರಜಾ ಸೇರಿದಂತೆ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ನುಹ್‌ನಲ್ಲಿ ನಡೆದ ಕೋಮುಗಲಭೆಯ ನಂತರ ಹಳ್ಳಿಗಳಿಗೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಿದ್ದಕ್ಕಾಗಿ ಸರಪಂಚ್‌ಗಳು ಮತ್ತು ಪಂಚಾಯತ್ ಸದಸ್ಯರಿಗೆ ಮೊಹಮ್ಮದ್ ಇಮ್ರಾನ್ ಅವರು  ನೋಟಿಸ್‌ ಜಾರಿ ಮಾಡಿದ್ದರು.

ಆಗಸ್ಟ್ ಆರಂಭದಲ್ಲಿ ಹರಿಯಾಣದಲ್ಲಿ ನಡೆದ ಹಿಂಸಾಚಾರದಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.  ಗಲಭೆಯಿಂದಾಗಿ ಗಲಭೆ ಪೀಡಿತ ಪ್ರದೇಶದಿಂದ ಮುಸ್ಲಿಂ ಕುಟುಂಬಗಳು ಪಲಾಯನ ಮಾಡಬೇಕಾಗಿ ಬಂದಿತ್ತು. ಅಷ್ಟೆ ಅಲ್ಲದೆ, ರಾಜ್ಯ ಸರ್ಕಾರವು 750 ಕ್ಕೂ ಹೆಚ್ಚು ಕಟ್ಟಡಗಳನ್ನು ಕೆಡವಿತು. ಇದರಲ್ಲಿ ನೂರಾರು ಜನರ ಮನೆಗಳು ಮತ್ತು ಅಂಗಡಿಗಳು ಇದ್ದವು. ಇವುಗಳಲ್ಲಿ ಹೆಚ್ಚಿನವು ಮುಸ್ಲಿಮರದ್ದಾಗಿತ್ತು.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಯಾವ ಬಾಯಿಂದ ಮುಗಿದ ಪ್ರಕರಣ ಅಂತ ಹೇಳ್ತೀರಿ? Janashakthi Media

Donate Janashakthi Media

Leave a Reply

Your email address will not be published. Required fields are marked *