ಮಂಗಳೂರು: ಮಳೆಯ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲಾ ತಾಣಗಳಲ್ಲಿ ನಕಲಿ ಆದೇಶ ಪ್ರತಿ ರವಾನಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ.
ಜುಲೈ 18 ರಂದು ರಜೆ ಘೋಷಿಸಲಾಗಿದೆ ಎಂಬ ನಕಲಿ ಪತ್ರವೊಂದು ಬುಧವಾರ ಸಂಜೆ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.
ರಜೆಯ ವಿಚಾರವಾಗಿ ಜಿಲ್ಲಾಧಿಕಾರಿಗಳ ಅಧಿಕೃತ ಮೊಬೈಲ್ ನಂಬರ್ ಗೆ ನಿರಂತರ ಕರೆಗಳು ಬರುತ್ತಿದೆ. ಇದರಿಂದ ಮಳೆಯಿಂದ ಸಂಭವಿಸುವ ವಿಪತ್ತು ನಿರ್ವಹಣೆಗೂ ಅಡ್ಡಿಯಾಗುತ್ತಿದೆ. ಶಾಲಾ ಮಕ್ಕಳ ಹೊರತಾಗಿ ಬೇರೆಯವರು ಇಂತಹ ಕರೆ ಮಾಡುತ್ತಿದ್ದು, ಇದರಿಂದ ಅಧಿಕೃತ ಮೊಬೈಲ್ ಉಪಯೋಗ ಇಲ್ಲದಂತಾಗಿದೆ ಎಂದಿರುವ ಜಿಲ್ಲಾಧಿಕಾರಿ, ಈ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರೆಡ್ ಅಲರ್ಟ್ ಇದ್ದ ಕಾರಣದಿಂದ ನಿರಂತರ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಬುಧವಾರ(ಜು.17)ಮೊಹರಂ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದು, ಗುರುವಾರ(ಜು.18) ಶಾಲೆ ಪುನರಾರಂಭಗೊಳ್ಳಲಿದೆ. ಆದರೆ ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಕೂಡಾ ರಜೆ ಘೋಷಣೆ ಮಾಡಲಾಗಿದೆ ಎಂಬ ಆದೇಶ ಪತ್ರ ಹರಿದಾಡಿದೆ. ಕಿಡಿಗೇಡಿಗಳು ಈ ನಕಲಿ ಆದೇಶ ಪತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.