ತರಕಾರಿಗಳ ಬೆಲೆಯೇರಿಕೆಗೆ ‘ಮಿಯಾಂ’ಮುಸ್ಲಿಮರು ಕಾರಣ ಎಂದ ಅಸ್ಸಾಂ ಮುಖ್ಯಮಂತ್ರಿ ಹೇಳಿಕೆ  ವಿರುದ್ಧ ಎಫ್‍ಐಆರ್

ಜುಲೈ 13 ರಂದು ಗುವಾಹಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ  ರಾಜ್ಯದಲ್ಲಿ ತರಕಾರಿ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಮುಸ್ಲಿಂ ಸಮುದಾಯದ ‘ಮಿಯಾ’ಗಳು( ಪೂರ್ವ ಬಂಗಾಲ ಮೂಲದ ಮುಸ್ಲಿಮರು)  ಕಾರಣ ಎಂದಿದ್ದಾರೆ.  ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಗೊಂಡಿದೆ. ಇವರು ಎರಡು ಸಮುದಾಯಗಳ ನಡುವೆ ವಿಭಜನೆ ಮತ್ತು ಸೆಳೆತಗಳನ್ನು ಸೃಷ್ಟಿಸುವ ಉದ್ದೇಶದಿಂದ ಕೋಮುವಾದೀ ನೆಲೆಯಲ್ಲಿ ಭಾಷಣಗಳನ್ನು ಮಾಡುತ್ತಲೇ ಇದ್ದಾರೆ  ಎಂದು ಸಿಪಿಐ(ಎಂ) ಅಸ್ಸಾಂ ರಾಜ್ಯ ಸಮಿತಿ  ಗುವಾಹಾಟಿಯ ಲತಾಶೀಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡುತ್ತ ಮುಖ್ಯಮಂತ್ರಿಗಳು ಅಷ್ಟಕ್ಕೇ ನಿಲ್ಲಲಿಲ್ಲ, ಅಸ್ಸಾಂನ ಯುವಜನ ಮುಂದೆ ಬರಬೇಕು ಎನ್ನುತ್ತ ಎಲ್ಲ ‘ಮಿಯಾ ಮುಸ್ಲಿಮ್’ ತರಕಾರಿ ಮಾರುವವರನ್ನು ನಗರದಿಂದ ಹೊಡೆದೋಡಿಸಲಾಗುವುದು ಎಂದೂ ಹೇಳಿದರು. ಕ್ಯಾಬ್‍ ಮತ್ತು ಬಸ್‍ ಸೇವೆಗಳಲ್ಲಿ ಅವರ ಸಂಖ್ಯೆ ಹೆಚ್ಚುತ್ತಿರುವುದು ಹೆಚ್ಚೆಚ್ಚು ಕಳವಳಕಾರಿ ಎಂದೂ ಅವರು ಹೇಳಿದ್ದಾರೆ , ಅವರ ಉದ್ರೇಕಕಾರಿ ಮತ್ತು ಕೋಮುವಾದಿ ಹೇಳಿಕೆಗಳ ವೀಡಿಯೋ ಮತ್ತು ಮತ್ತಿತರ ಸಾಕ್ಷ್ಯಗಳು ಸುಲಭವಾಗಿ ಸಿಗುತ್ತವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ದೂರಿನಲ್ಲಿ ಎಐಯುಡಿಎಫ್ ಮುಖ್ಯಸ್ಥ ಹಾಗೂ ಸಂಸದ ಬದ್ರುದ್ದೀನ್ ಅಜ್ಮಲ್ ವಿರುದ್ಧವೂ ಇದೇ ರೀತಿಯ ಆರೋಪಗಳನ್ನು ಮಾಡಲಾಗಿದೆ. ಅವರೂ ಇದೇ ರೀತಿಯಲ್ಲಿ ಮೋಮುವಾದಿ ದನಿಯಲ್ಲಿ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಜುಲೈ 12 ರಂದು ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರತಿಕ್ರಿಯಿಸಲು ಧುಬ್ರಿಯಲ್ಲಿ ನಡೆದ ಸಭೆಯಲ್ಲಿ ಅವರು ಮುಸ್ಲಿಮೇತರ ಧಾರ್ಮಿಕ ಸಮುದಾಯಗಳ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದರು. ಹೀಗಾಗಿ ಅವರ ವಿರುದ್ಧವೂ  ನಿರ್ದಿಷ್ಟ ಆರೋಪಗಳೊಂದಿಗೆ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ:ರಾಜ್ಯಪಾಲರನ್ನು ಭೇಟಿ ಮಾಡಿದ ಸ್ಪೀಕರ್‌ ಯು.ಟಿ ಖಾದರ್‌

ದೂರಿನಲ್ಲಿ ಏಪ್ರಿಲ್ 28 ರಂದು ದ್ವೇಷ ಭಾಷಣದ ಕುರಿತ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಲಾಗಿದೆ. ದ್ವೇಷ ಭಾಷಣ ಸಂಭವಿಸಿದಾಗ ಅದು ಐಪಿಸಿ ಕಲಮು153ಎ, 153ಬಿ, 295ಎ ಮತ್ತು 505 ಇವುಗಳ ಅಡಿಯಲ್ಲಿ ಅಪರಾಧ ವಾಗುತ್ತದೆ. ಅದು ದಾಖಲಾಗುವಂತೆ ರಾಜ್ಯಗಳಿಗೆ ಅದು ನಿರ್ದೇಶನ ನೀಡಿತ್ತು. ಈ ಬಗ್ಗೆ ದೂರು ಗಳು ಬರದಿದ್ದರೂ ತಾವಾಗಿಯೇ ದೂರು ದಾಖಲಿಸಬೇಕು , ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ  ಅದು ಹೇಳಿತ್ತು.

ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು,  ಇಬ್ಬರು ಅಪರಾಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ದೂರಿಗೆ ಸಿಪಿಐ(ಎಂ) ರಾಜ್ಯ ಸಮಿತಿಯ ಪರವಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ಸುಪ್ರಕಾಶ ತಾಲೂಕ್ದಾರ್ ಮತ್ತು ಕೇಂದ್ರ ಸಮಿತಿ ಸದಸ್ಯ ಇಸ್ಫಾಕುರ್ ರೆಹಮಾನ್ ಜಂಟಿಯಾಗಿ ಸಹಿ ಹಾಕಿದ್ದಾರೆ. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಯನ್ ಭುಯಾನ್ ಮತ್ತು ನಿರಂಕುಶ್ ನಾಥ್ ಅವರೊಂದಿಗೆ ಇದ್ದರು.

ಲತಾಶೀಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಗಳು ಸುಪ್ರಕಾಶ ತಾಲೂಕದಾರ್ ಸಂಜೆ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಢುತ್ತ ರಾಜ್ಯದಲ್ಲಿ ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪೊಲೀಸ್ ಆಡಳಿತವು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಅವರ ದ್ವೇಷಪೂರಿತ ಕೋಮುವಾದಿ ಹೇಳಿಕೆಗಳು ಅಸ್ಸಾಂನ ರಾಜಕೀಯವನ್ನು ಕಲುಷಿತಗೊಳಿಸಿವೆ ಮಾತ್ರವಲ್ಲದೆ ಸಾಮಾಜಿಕ ಜೀವನಕ್ಕೆ ಅಪಾಯವನ್ನುಂಟು ಮಾಡಿವೆ ಎಂದು ತಾಲೂಕ್ದಾರ್ ಹೇಳಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಸ್ಫಾಕುರ್ ರೆಹಮಾನ್, 2024 ರ ಲೋಕಸಭೆ ಚುನಾವಣೆಗೆ ಮುನ್ನ ಈ ನಾಯಕರು ಧಾರ್ಮಿಕ ಧ್ರುವೀಕರಣ ನಡೆಸಲು ಇಂತಹ ಹೇಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

Donate Janashakthi Media

Leave a Reply

Your email address will not be published. Required fields are marked *