ಬಂಡವಾಳಗಾರರಿಗೆ ‘ಉತ್ತೇಜನೆ’ಯ ಹೆಸರಿನಲ್ಲಿ ಹಣಕಾಸು ವರ್ಗಾವಣೆ: ನಿಜವಾಗಿ ಯಾರ ಪ್ರಯೋಜನಕ್ಕಾಗಿ?

-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್

ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಹೆಸರಿನಲ್ಲಿ ಬಂಡವಾಳಗಾರರಿಗೆ ಹಣಕಾಸು ವರ್ಗಾವಣೆಯನ್ನು ಸರ್ಕಾರಗಳು ಒದಗಿಸುತ್ತಿರುವ ಕ್ರಮಗಳು ವಾಸ್ತವವಾಗಿ ಅರ್ಥವ್ಯವಸ್ಥೆಯನ್ನು ಮತ್ತಷ್ಟು ಕುಗ್ಗಿಸುತ್ತವೆ. ಏಕೆಂದರೆ ಒಟ್ಟಾರೆಯಾಗಿ ಈ ವರ್ಗಾವಣೆಗಳು ಕಾರ್ಮಿಕರ ವರಮಾನವನ್ನು ಕಸಿದುಕೊಳ್ಳುತ್ತವೆ, ಬೇಡಿಕೆಯನ್ನು ಇಳಿಸುತ್ತವೆ. ಇದರಿಂದಾಗಿ ಒಟ್ಟಾರೆಯಾಗಿ ಬಂಡವಳಿಗರ ಲಾಭಗಳೂ ಹೆಚ್ಚುವುದಿಲ್ಲ. ಆದರೂ ಇಂತಹ ವರ್ಗಾವಣೆಗಳನ್ನು ಏಕೆ ಮಾಡಲಾಗುತ್ತದೆ? ಹಣಕಾಸು

ನಿಜಕಾರಣವೆಂದರೆ, ಬಂಡವಾಳಗಾರರ ನಡುವೆ ಲಾಭಗಳ ಹಂಚಿಕೆಯನ್ನು ಏಕಸ್ವಾಮ್ಯ ಸ್ತರದ ಬಂಡವಾಳಗಾರರ ಪರವಾಗಿ ಬದಲಾಯಿಸುವುದು. ಒಟ್ಟಾರೆ ಲಾಭಗಳು ಹೆಚ್ಚದಿದ್ದರೂ, ವರ್ಗಾವಣೆಗಳ ಸಿಂಹಪಾಲನ್ನು ಪಡೆದುಕೊಳ್ಳುವ ದೊಡ್ಡ ಬಂಡವಾಳಗಾರರು ನಿವ್ವಳ ಲಾಭಗಾರರಾಗುತ್ತಾರೆ. ಬೇಡಿಕೆಯ ಇಳಿಕೆಯ ಪರಿಣಾಮವನ್ನು ನೇರವಾಗಿ ಎದುರಿಸಬೇಕಾದ ಸಣ್ಣ ಬಂಡವಾಳಗಾರರು ನಿವ್ವಳ ನಷ್ಟಗಾರರಾಗುತ್ತಾರೆ, ಹಣಕಾಸು

ಬಂಡವಾಳಗಾರರು ಹೆಚ್ಚುಹೂಡಿಕೆಯನ್ನು ಮಾಡುವಂತೆ ಪ್ರೋತ್ಸಾಹಿಸುವ ಸಲುವಾಗಿ ಮತ್ತು ಆ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಎಂದು ಹೇಳುತ್ತ , ಕಾರ್ಪೊರೇಟ್ ತೆರಿಗೆ ದರ ಇಳಿಕೆಯ ಮೂಲಕವಾಗಲಿ ಅಥವಾ ನೇರವಾಗಿ ನಗದು ಸಬ್ಸಿಡಿಗಳನ್ನು ಒದಗಿಸುವ ಮೂಲಕವಾಗಲಿ, ಬಂಡವಾಳಗಾರರಿಗೆ ಹಣಕಾಸು ವರ್ಗಾವಣೆಯನ್ನು ಸರ್ಕಾರಗಳು ಒದಗಿಸುತ್ತಿರುವ ಕ್ರಮವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅರ್ಥವ್ಯವಸ್ಥೆಯನ್ನು
ಉತ್ತೇಜಿಸುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಡೊನಾಲ್ಡ್ ಟ್ರಂಪ್‌ರವರ ಮೊದಲ ಅಧ್ಯಕ್ಷಗಿರಿಯ ಅವಧಿಯಲ್ಲಿ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತ ಮಾಡಲಾಗಿತ್ತು. ಅದೇ ಉದ್ದೇಶದಿಂದ, ಭಾರತದಲ್ಲಿ ಮೋದಿ ಸರ್ಕಾರವೂ ಬಂಡವಾಳಗಾರರಿಗೆ ತೆರಿಗೆ ರಿಯಾಯಿತಿಗಳನ್ನು ಬೃಹತ್ ಪ್ರಮಾಣದಲ್ಲಿ ನೀಡಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಹಣಕಾಸು

ಇದನ್ನೂ ಓದಿ: ನೋಟು ಅಮಾನ್ಯೀಕರಣವೂ ನಕಲಿ ನೋಟು ಹಾವಳಿಯೂ 2016ರಲ್ಲೇ ನಕಲಿ ನೋಟು ಹಾವಳಿಗೆ ಅಂತ್ಯ ಹಾಡಿದರೂ ಇಂದಿಗೂ ಊರ್ಜಿತವಾಗಿರುವುದೇಕೆ?

ಬಂಡವಾಳಗಾರರಿಗೆ ಒದಗಿಸುವ ಅಂತಹ ವರ್ಗಾವಣೆಗಳು ಒಂದು ನವ ಉದಾರವಾದಿ ಆಳ್ವಿಕೆಯಲ್ಲಿ ನಿರೀಕ್ಷಿತ ಫಲ ನೀಡುವುದಿಲ್ಲ ಎಂಬುದನ್ನು ಅರ್ಥಶಾಸ್ತ್ರದ ಒಂದು ಕನಿಷ್ಠ ಜ್ಞಾನವೂ ಸಹ ತೋರಿಸುತ್ತದೆ. ಹಣಕಾಸು

ನಿರೀಕ್ಷಿತ ಫಲ ಸಿಗುವುದಿಲ್ಲ ಏಕೆಂದರೆ ನವ ಉದಾರವಾದಿ ಆಳ್ವಿಕೆಯು ವಿತ್ತೀಯ ಜವಾಬ್ದಾರಿ ಶಾಸನ ಬುದನ್ನು ವಿಧಿಸಿದೆ. ಈ ಶಾಸನವು, ಒಂದು ಸರ್ಕಾರವು ಹೊಂದಬಹುದಾದ ವಿತ್ತೀಯ ಕೊರತೆಯ ಮೇಲಿನ ಗರಿಷ್ಟ ಮಿತಿಯನ್ನು ಒಟ್ಟು ದೇಶೀಯ ಉತ್ಪನ್ನದ ಇಂತಿಷ್ಟು ಶೇಕಡಾವಾರು ಎಂದು ನಿಗದಿಪಡಿಸುತ್ತದೆ ಮತ್ತು ಸಾಮಾನ್ಯವಾಗಿ ಸರ್ಕಾರಗಳು ಈ ಮಿತಿಯನ್ನು ಮೀರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಬಂಡವಾಳಗಾರರಿಗೆ ಒದಗಿಸುವ ವರ್ಗಾವಣೆಗೆ
ಬೇಕಾಗುವ ಹಣವನ್ನು ಹೊಂದಿಸಿಕೊಳ್ಳಲು ಸಾಮಾನ್ಯವಾಗಿ ದುಡಿಯುವ ಬಡ ಜನರಿಗಾಗಿ ಕೈಗೊಳ್ಳುವ ಕಲ್ಯಾಣ ವೆಚ್ಚಗಳನ್ನು ಕಡಿತಗೊಳಿಸಲಾಗುತ್ತದೆ ಅಥವಾ ಈ ಹಣವನ್ನು ದುಡಿಯುವ ಬಡ ಜನರ ಮೇಲೆ ಹೇರುವ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಒದಗಿಸಿಕೊಳ್ಳಲಾಗುತ್ತದೆ. ಹಣಕಾಸು

ಈ ರೀತಿಯ ವರ್ಗಾವಣೆಯ ಪರಿಣಾಮವನ್ನು ಒಂದು ಉದಾಹರಣೆಯ ಮೂಲಕ ನೋಡೋಣ. ಬಡವರ ಕಲ್ಯಾಣ ವೆಚ್ಚಗಳಿಗಾಗಿ ಮಾಡುತ್ತಿದ್ದ 100 ರೂ.ಗಳಷ್ಟು ಕಡಿತಗೊಳಿಸಿ ಅದೇ 100 ರೂ.ಗಳನ್ನು ಬಂಡವಾಳಗಾರರಿಗೆ ವರ್ಗಾವಣೆ ಮಾಡಿದ ಕ್ರಮವು ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವುದರ ಬದಲು ಅದನ್ನು
ಮತ್ತಷ್ಟು ಕುಗ್ಗಿಸುವಲ್ಲಿ ಪರಿಣಮಿಸುತ್ತದೆ. ಅದು ಹೇಗೆ ಎಂಬುದರ ವಿವರಣೆ ಈ ಕೆಳಗಿನಂತಿದೆ. ಯಾವುದೇ ಒಂದು ಅವಧಿಯಲ್ಲಿ ಕೈಗೊಳ್ಳುವ ಹೂಡಿಕೆಗಳು ತತ್ಸಂಬಂಧವಾಗಿ ಹಿಂದೆಯೇ ತೆಗೆದುಕೊಂಡ ನಿರ್ಧಾರಗಳ ಫಲಿತಾಂಶವೇ ಆಗಿರುತ್ತವೆ. ಮಾತ್ರವಲ್ಲ, ಈ ಹೂಡಿಕೆಯ ಯೋಜನೆಗಳು ದೀರ್ಘಾವಧಿಯ ಗರ್ಭಾವಸ್ಥೆಯನ್ನು ಹೊಂದಿರುತ್ತವೆ ಎಂಬುದು ಸಾರ್ವಜನಿಕ ಮತ್ತು ಖಾಸಗಿ ಈ ಎರಡೂ ವಲಯಗಳ ಹೂಡಿಕೆಯ ವಿಷಯದಲ್ಲೂ ನಿಜವೇ. ಹಣಕಾಸು

ಹೂಡಿಕೆಯ ಲಯವನ್ನು ಒಂದು ವೇಳೆ ಎತ್ತರಿಸಬೇಕು ಎಂದಾದರೆ, ಅದನ್ನು ಕುರಿತ ನಿರ್ಧಾರವನ್ನು ಪ್ರಸ್ತುತ ಅವಧಿಯಲ್ಲಿ ಕೈಗೊಳ್ಳಬೇಕಾಗುತ್ತದೆ. ಆಗ ಮಾತ್ರವೇ ಹೂಡಿಕೆಯು ವೇಗ ವರ್ಧನೆ ಪಡೆಯುತ್ತದೆ. ಹಾಗಾಗಿ, ಯಾವುದೇ ಅವಧಿಯಲ್ಲಿ ಕೈಗೊಳ್ಳುವ ಹೂಡಿಕೆಯ ಪ್ರಮಾಣದ ಬಗ್ಗೆ ನಿರ್ದಿಷ್ಟತೆ ಇರಬೇಕು ಮತ್ತು ಸಂಬಂಧಿಸಿದ ಅವಧಿಯಲ್ಲಿ ಅದು ಬದಲಾಗಬಾರದು. ಆದರೆ, ಈ ಅವಧಿಯಲ್ಲಿ ಬಳಕೆಯ ಮಟ್ಟದಲ್ಲಿ ಬದಲಾವಣೆ ಇರುತ್ತದೆ. ಇಲ್ಲಿ, ಬಂಡವಾಳಗಾರರು ತಮ್ಮ
ಖರ್ಚು-ವೆಚ್ಚಗಳಿಗಾಗಿ ತಮ್ಮ ವರಮಾನದಿಂದ ಬಳಸಿಕೊಳ್ಳುವ ಪಾಲಿಗಿಂತ ಹೆಚ್ಚಿನ ಪಾಲನ್ನು ಕಾರ್ಮಿಕರು ತಮ್ಮ ವರಮಾನದಿಂದ ಬಳಸುವುದರಿಂದ, ಕೊಳ್ಳುವ ಶಕ್ತಿಯು ಕಾರ್ಮಿಕರಿಂದ ಬಂಡವಾಳಗಾರರತ್ತ ಹೊರಳುವ ಬದಲಾವಣೆಯ ಪರಿಣಾಮವಾಗಿ ಒಟ್ಟು ಬಳಕೆಯಲ್ಲಿ ಇಳಿಕೆಯಾಗುತ್ತದೆ (ಬಂಡವಾಳಶಾಹಿಗಳಿಗೆ ಹಣಕಾಸು ವರ್ಗಾವಣೆ ಮಾಡುವ ಸಲುವಾಗಿ ಸರ್ಕಾರವು ತನ್ನ ಬಳಕೆಯನ್ನು ಇಳಿಕೆ ಮಾಡಿದರೆ ಇದೇ ಪರಿಣಾಮ ಇರುತ್ತದೆ). ಹಣಕಾಸು

ಲಾಭದ ಮೊತ್ತ ಬದಲಾಗುವುದಿಲ್ಲ

ಕಾರ್ಮಿಕರಿಂದ ಬಂಡವಾಳಗಾರರಿಗೆ (ಮತ್ತು ಸರ್ಕಾರದಿಂದ ಬಂಡವಾಳಗಾರರಿಗೆ ಕೂಡ) ಆಗುವ ವರ್ಗಾವಣೆಗಳ ಪರಿಣಾಮವಾಗಿ ನಿವ್ವಳ ರಫ್ತುಗಳಲ್ಲಿ(ಅಂದರೆ, ಆಮದುಗಳಿಗಿಂತ ರಫ್ತುಗಳು ಎಷ್ಟು ಅಧಿಕ ) ಇಳಿಕೆಯಾಗುತ್ತದೆ. ಏಕೆಂದರೆ ಬಂಡವಾಳಗಾರರ ಬಳಕೆಯಲ್ಲಿ ಆಮದು ಮಾಡುವ ಸಾಮಗ್ರಿಗಳ ಪ್ರಮಾಣ ಹೆಚ್ಚಿರುತ್ತದೆ. ಇಲ್ಲಿ ಕಾರ್ಮಿಕರಿಗೆ ನಷ್ಟ ಉಂಟುಮಾಡಿ ಬಂಡವಾಳಗಾರರಿಗೆ ಹಣಕಾಸು ಒದಗಿಸುವ ವರ್ಗಾವಣೆಗಳು ನಿವ್ವಳ ರಫ್ತುಗಳನ್ನು ಬದಲಾಯಿಸುವುದಿಲ್ಲ ಎಂದೇ ಭಾವಿಸೋಣ. ಒಂದು ದೇಶದ ಒಟ್ಟು ರಾಷ್ಟ್ರೀಯ ವರಮಾನ Y, ಬಳಕೆ C, ಹೂಡಿಕೆ I, ಸರ್ಕಾರಿ ವೆಚ್ಚ G, ಮತ್ತು ಅದರ ಚಾಲ್ತಿ ಖಾತೆಯ ಪಾವತಿ ಶೇಷದ ಶಿಲ್ಕು (surplus on the current account of balance of payments) (X-M), ಇವುಗಳ ಮೊತ್ತಕ್ಕೆ ಸಮನಾಗಿರುತ್ತದೆ, ಅಂದರೆ, Y = C+ I + G + (X – M) …… (i)

ಇದರಲ್ಲಿ C ಅನ್ನು ಕಡಿಮೆ ಮಾಡುವ ಮೂಲಕ ಬಂಡವಾಳಗಾರರಿಗೆ ಒದಗಿಸುವ ವರ್ಗಾವಣೆ, ಬಲಭಾಗದ ಮೊತ್ತವನ್ನು ಕಡಿಮೆ ಮಾಡುತ್ತದೆ. ಇದು ಒಟ್ಟು ಬೇಡಿಕೆಯ ಮಟ್ಟವನ್ನು ಚಿತ್ರಿಸುತ್ತದೆ. ಆದ್ದರಿಂದ ಮೇಲಿನ ಸಮೀಕರಣವನ್ನು Y ಅನ್ನು ಕೆಳಗಿಳಿಸುವ ಮೂಲಕ, ಅಂದರೆ, ಉತ್ಪಾದನೆ ಮತ್ತು ಉದ್ಯೋಗದಲ್ಲಿನ ಕಡಿತದ ಮೂಲಕ, ಮಾತ್ರ ಪುನಃಸ್ಥಾಪಿಸಬಹುದು. ಬಳಕೆಯಲ್ಲಿ ಇಳಿಕೆ ಸಂಭವಿಸಿದಾಗ, ಅರ್ಥವ್ಯವಸ್ಥೆಯಲ್ಲಿ ಬಳಕೆಯಾಗದ ಸಾಮರ್ಥ್ಯದ ಮಟ್ಟ ಏರುತ್ತದೆ. ಇಂದಿನ ದಿನಮಾನಗಳಲ್ಲಿ ಇದರ ಪರಿಣಾಮವೆಂದರೆ ಬಂಡವಾಳಗಾರರು ಕೈಗೊಳ್ಳುವ ಹೂಡಿಕೆಯ ನಿರ್ಧಾರಗಳಲ್ಲಿ ಇಳಿಕೆ ಕಾಣುತ್ತದೆ. ಹಾಗಾಗಿ ತದನಂತರದ ಅವಧಿಯಲ್ಲಿ ಅವರ ನಿಜ ಹೂಡಿಕೆಯ ಪ್ರಮಾಣ ತಗ್ಗುವುದರಿಂದ, ಅರ್ಥವ್ಯವಸ್ಥೆಯು ಪುನಶ್ಚೇತನಗೊಳ್ಳುವುದರ ಬದಲು ಕುಗ್ಗುತ್ತದೆ.

ಕಥೆ ಅಲ್ಲಿಗೇ ಮುಗಿಯುವುದಿಲ್ಲ. ಅರ್ಥವ್ಯವಸ್ಥೆಯ ಅಂತಹ ಒಂದು ಸಂಕುಚನವೇ ಸ್ವತಃ, ಅಂದರೆ, ಇತರ ಅಂಶಗಳು ಬದಲಾಗದಿದ್ದರೆ, ಲಾಭವನ್ನು ಇಳಿಕೆ ಮಾಡುವ ಪರಿಣಾಮವನ್ನು ಹೊಂದಿರುತ್ತದೆ. ಹೀಗೆ ಬಂಡವಾಳಗಾರರಿಗೆ ಒದಗಿಸುವ ವರ್ಗಾವಣೆಯು ಲಾಭವನ್ನು ಹೆಚ್ಚಿಸುವ ಪರಿಣಾಮವನ್ನು ಹೊಂದಿದ್ದರೆ, ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುವ ಮೂಲಕ ಅಂತಹ ವರ್ಗಾವಣೆಗಳನ್ನು ಒದಗಿಸಿದ ಅಂಶವು ಬಂಡವಾಳಗಾರರ ಲಾಭವನ್ನು ಇಳಿಕೆ ಮಾಡುವ ಒಂದು ವಿರುದ್ಧ ಪರಿಣಾಮವನ್ನು ಹೊಂದಿದೆ. ತಕ್ಕಮಟ್ಟಿಗೆ ವಾಸ್ತವಿಕವಾದ ಊಹೆಗಳ ಆಧಾರದ ಮೇಲೆ ಹೇಳುವುದಾದರೆ, ಈ ಎರಡು ಪರಿಣಾಮಗಳು ನಿಖರವಾಗಿ ಒಂದನ್ನೊಂದು ರದ್ದುಗೊಳಿಸುತ್ತವೆ. ಹಾಗಾಗಿ ಬಂಡವಾಳಗಾರರ ಒಟ್ಟು ಲಾಭವು ವರ್ಗಾವಣೆಯಿಲ್ಲದೇ ಪಡೆದ ಲಾಭದಷ್ಟೇ ಇರುತ್ತದೆ. ಈ ಫಲಿತಾಂಶವು ದುಡಿಯುವ ಜನರು ತಮ್ಮ ಇಡೀ ವರಮಾನವನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಎಂಬ ಊಹೆಯನ್ನು ಆಧರಿಸಿದೆ.

ಈ ಊಹೆಯು ತಕ್ಕಮಟ್ಟಿಗೆ ವಾಸ್ತವಿಕವಾಗಿದೆ. ಏಕೆಂದರೆ ಜನಸಂಖ್ಯೆಯ ತಳಭಾಗದ ವರ್ಗವು ಹೊಂದಿರುವ ಸಂಪತ್ತಿನ ಒಡೆತನದ ಪ್ರಮಾಣವು ಅರ್ಥವ್ಯವಸ್ಥೆಯ ಒಟ್ಟು ಸಂಪತ್ತಿನ ಹೋಲಿಕೆಯಲ್ಲಿ ತುಂಬಾ ಸಣ್ಣದಿದೆ. ಉದಾಹರಣೆಯಾಗಿ ಹೇಳುವುದಾದರೆ, ಭಾರತದಲ್ಲಿ ತಳಭಾಗದ ಶೇ. 50ರಷ್ಟು ಜನರು ದೇಶದ ಒಟ್ಟು ಸಂಪತ್ತಿನ ಶೇ. 2ರಷ್ಟನ್ನು ಮಾತ್ರ ಹೊಂದಿದ್ದಾರೆ. ಎಲ್ಲ ಸಂಪತ್ತು ಅಗತ್ಯವಾಗಿ ಉಳಿತಾಯದಿಂದಲೇ ಉದ್ಭವಿಸುವುದರಿಂದ, ಇವರು ಏನನ್ನೂ ಉಳಿತಾಯ
ಮಾಡುವುದಿಲ್ಲ ಎಂಬುದನ್ನು ಮಾತ್ರ ಇದು ತೋರಿಸುತ್ತದೆ. ಆದ್ದರಿಂದ, ದುಡಿಯುವ ಜನರು ಉಳಿತಾಯ ಮಾಡುವುದಿಲ್ಲ ಎಂಬುದು ಮತ್ತು ಅರ್ಥವ್ಯವಸ್ಥೆಯಲ್ಲಿ ಉಂಟಾಗುವ ಸಂಪೂರ್ಣ ಉಳಿತಾಯವು, ಸರ್ಕಾರವನ್ನು ಹೊರತುಪಡಿಸಿದರೆ, ಶ್ರೀಮಂತರಿಂದ ಬರುತ್ತದೆ ಎಂಬ ನಮ್ಮ ಊಹೆಯು ವಾಸ್ತವಿಕವಾಗಿದೆ.

ಶ್ರೀಮಂತರು, ಅಂದರೆ ಈ ಸಂದರ್ಭದಲ್ಲಿ ಬಂಡವಾಳಗಾರರು, ತಮ್ಮ ಇಡೀ ವರಮಾನವನ್ನು ಉಳಿತಾಯ ಮಾಡುತ್ತಾರೆ ಎಂದು ನಾವು ಒಂದು ಕ್ಷಣ ಭಾವಿಸೋಣ. ಆಗ, ಖಾಸಗಿ ಉಳಿತಾಯವು ಲಾಭಗಳಿಗೆ ಸಮನಾಗಿರುತ್ತದೆ. ಯಾವುದೇ ಒಂದು ಅರ್ಥವ್ಯವಸ್ಥೆಯಲ್ಲಿ, ಒಟ್ಟು ದೇಶೀಯ ಉಳಿತಾಯವು ಒಟ್ಟು ದೇಶೀಯ ಹೂಡಿಕೆಯಿಂದ ವಿದೇಶಿ ಉಳಿತಾಯದ ಒಳಹರಿವನ್ನು ಕಳೆದ ಮೊತ್ತಕ್ಕೆ ಸಮನಾಗಿರುವುದರಿಂದ ಮತ್ತು ಸರ್ಕಾರದ ಹೂಡಿಕೆಯಿಂದ ಸರ್ಕಾರದ ಉಳಿತಾಯವನ್ನು
ಕಳೆದ (ಮೈನಸ್ ಮಾಡಿದ) ಮೊತ್ತವನ್ನು ವಿತ್ತೀಯ ಕೊರತೆ ಎಂದು ಕರೆಯಲಾಗುವುದರಿಂದ, ಅರ್ಥವ್ಯವಸ್ಥೆಯಲ್ಲಿ ಖಾಸಗಿ ಉಳಿತಾಯವು ಮತ್ತು ಅದರಿಂದಾಗಿ ಲಾಭಗಳು, ಅಗತ್ಯವಾಗಿ ಖಾಸಗಿ ಹೂಡಿಕೆ + ವಿತ್ತೀಯ ಕೊರತೆ – (ಮೈನಸ್) ಈ ಅವಧಿಯಲ್ಲಿ ಅರ್ಥವ್ಯವಸ್ಥೆಗೆ ಬರುವ ವಿದೇಶಿ ಉಳಿತಾಯ F ‍ ಇವುಗಳಿಗೆ ಸಮನಾಗಿರಬೇಕು ಎಂದು ಹೇಳಿದಂತಾಗುತ್ತದೆ.

ಅಂದರೆ, ಲಾಭಗಳು = ಖಾಸಗಿ ಹೂಡಿಕೆ + ವಿತ್ತೀಯ ಕೊರತೆ – F …(ii) ಖಾಸಗಿ ಹೂಡಿಕೆ ಮತ್ತು ವಿದೇಶಿ ಉಳಿತಾಯದ ಒಳಹರಿವು (ಇದು ಮೇಲೆ ತಿಳಿಸಿದ X – M ನ ಋಣಾತ್ಮಕ ಭಾಗ) ಈ ಅವಧಿಯಲ್ಲಿ ಬದಲಾಗದೆ ಉಳಿಯುತ್ತದೆ ಎಂದು ನಾವು ವಾದಿಸಿರುವುದರಿಂದ ವಿತ್ತೀಯ ಜವಾಬ್ದಾರಿ ಶಾಸನ ಕಾರಣದ ವಿತ್ತೀಯ ಕೊರತೆಯೂ ಬದಲಾಗದೆ ಉಳಿಯುವುದರಿಂದ, ಬಂಡವಾಳಗಾರರಿಗೆ ಒದಗಿಸುವ ಹಣಕಾಸು ವರ್ಗಾವಣೆಯ ಹೊರತಾಗಿಯೂ ಲಾಭಗಳು ಅಷ್ಟೇ ಆಗಿರಬೇಕು. ಎಲ್ಲ ಲಾಭಗಳನ್ನೂ ಉಳಿತಾಯ ಮಾಡಲಾಗಿದೆ ಎಂಬ ಊಹೆಯನ್ನು ಕೈಬಿಡುವುದರಿಂದ ಮೇಲಿನ ವಾದಕ್ಕೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಲಾಭಗಳ α ಅನುಪಾತವನ್ನು ಉಳಿತಾಯ ಮಾಡಿದರೆ, ಸಮೀಕರಣ (ii) ಹೀಗೆ ಇರುತ್ತದೆ: α. ಲಾಭಗಳು = ಖಾಸಗಿ ಹೂಡಿಕೆ + ವಿತ್ತೀಯ ಕೊರತೆ – ‍F (iii)

ನಾವು ಈಗ ಚರ್ಚಿಸಿದ ಕಾರಣಗಳಿಂದಾಗಿ (iii) ರ ಬಲಭಾಗವು ಒಂದು ವೇಳೆ ಬದಲಾಗದೆ ಉಳಿದಿದ್ದರೆ, α ಒಂದಕ್ಕೆ ಸಮನಾಗದಿದ್ದರೂ ಸಹ ಲಾಭವು ಬದಲಾಗದೆ ಉಳಿಯಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ಬಂಡವಾಳಗಾರರಿಗೆ ಒದಗಿಸುವ ಬಜೆಟ್ ವರ್ಗಾವಣೆಗಳು, ಅಂತಹ ವರ್ಗಾವಣೆಗಳಿಗೆ ಹಣಕಾಸು ಒದಗಿಸಲು ವಿತ್ತೀಯ ಕೊರತೆಯನ್ನು ಹೆಚ್ಚಿಸಲಾಗದ ನವ-ಉದಾರವಾದಿ ಆಳ್ವಿಕೆಯಲ್ಲಿ ಕಾರ್ಮಿಕರ ವರಮಾನವನ್ನು ಅದಕ್ಕೆ ಅನುಗುಣವಾಗಿ ಕಡಿಮೆ ಮಾಡಬೇಕಾಗುವುದರಿಂದ, ಕಾರ್ಮಿಕರು ತಮ್ಮ ಇಡೀ ವರಮಾನವನ್ನು ಒಂದು ವೇಳೆ ಬಳಕೆ ಮಾಡಿದರೆ, ಬಂಡವಾಳಗಾರರ ವರಮಾನವನ್ನೂ ಹೆಚ್ಚಿಸದೆ, ಉತ್ಪಾದನೆಯಲ್ಲಿ ಮತ್ತು ಉದ್ಯೋಗಗಳಲ್ಲಿ ಸಂಕುಚನ(ಛಿ contraction) ಉಂಟುಮಾಡುತ್ತವೆ.

ವಿಷಯವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬಂಡವಾಳಗಾರರಿಗೆ ಒದಗಿಸುವ ಬಜೆಟ್ ವರ್ಗಾವಣೆಗಳು, ಬಂಡವಾಳಗಾರರ ವರಮಾನವನ್ನೂ ಹೆಚ್ಚಿಸದೆ ಅರ್ಥವ್ಯವಸ್ಥೆಯಲ್ಲಿ ಅಸಮಾನತೆಯನ್ನು ಹೆಚ್ಚಿಸಲು ಕಾರಣವಾಗುತ್ತವೆ. ಏಕೆಂದರೆ, ಲಾಭ-ಹೆಚ್ಚಿಸುವ ಪರಿಣಾಮಗಳು ಇಲ್ಲದಂತೆ ಮಾಡುವ ಅಂತಹ ವರ್ಗಾವಣೆಗಳು ಉತ್ಪಾದನೆಯ ಸಂಕುಚನವನ್ನು ಉಂಟುಮಾಡುತ್ತವೆ.

ನಿಜವಾದ ಕಾರಣ

ಆದಾಗ್ಯೂ, ವರ್ಗಾವಣೆಗಳು ಬೇರೆಯದೇ ಆದ ಒಂದು ಪ್ರಮುಖ ಪರಿಣಾಮವನ್ನು ಹೊಂದಿವೆ. ಅದುವೇ ಸರ್ಕಾರವು ಈ ಕ್ರಮವನ್ನು ಅನುಸರಿಸುವ ನಿಜ ಕಾರಣ. ಈ ಕಾರಣವೆಂದರೆ, ಬಂಡವಾಳಗಾರರ ನಡುವೆ ಲಾಭಗಳ ಹಂಚಿಕೆಯನ್ನು ಏಕಸ್ವಾಮ್ಯೇತರ ಬಂಡವಾಳಗಾರರನ್ನು ದೂರವಿರಿಸಿ, ಏಕಸ್ವಾಮ್ಯ ಸ್ತರದ ಬಂಡವಾಳಗಾರರ ಪರವಾಗಿ ಬದಲಾಯಿಸುವುದು. ಇದು ಹೀಗಾಗುವುದು ಈ ಕಾರಣದಿಂದಾಗಿ: ಬಂಡವಾಳಗಾರರಿಗೆ ಒದಗಿಸುವ ಬಜೆಟ್ ವರ್ಗಾವಣೆಗಳು ಲಾಭಗಳಿಗೆ ಸೇರ್ಪಡೆಯಾದರೂ ಸಹ ಇಂತಹ ವರ್ಗಾವಣೆಗಳ ಹೊರತಾಗಿಯೂ ಒಟ್ಟು ಲಾಭಗಳು ಬದಲಾಗುವುದಿಲ್ಲ ಎಂಬುದನ್ನು ನಾವು ಕಂಡಿದ್ದೇವೆ.

ಏಕೆಂದರೆ, ಈ ವರ್ಗಾವಣೆಗಳು ಕಾರ್ಮಿಕರ ವರಮಾನವನ್ನು ಕಸಿದುಕೊಳ್ಳುವುದರೊಂದಿಗೆ ಮತ್ತು ಒಟ್ಟಾರೆ ಬೇಡಿಕೆಯನ್ನು ಇಳಿಕೆ ಮಾಡುವುದರೊಂದಿಗೆ ಸಂಬಂಧ ಹೊಂದಿದ್ದು, ಲಾಭಗಳನ್ನು ನಿಖರವಾಗಿ ಅದೇ ಸಮಾನ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ. ಒಟ್ಟಾರೆ ನೆಲೆಯಲ್ಲಿ ಇದು ನಿಜವಾಗಿದ್ದರೂ,
ಬೇಡಿಕೆಯಲ್ಲಿ ಇಳಿಕೆಯ ಪರಿಣಾಮವನ್ನು ಎದುರಿಸುವ ಬಂಡವಾಳಗಾರರೇ ಬೇರೆ ಮತ್ತು ವರ್ಗಾವಣೆಗಳ ಒಂದು ಬಹು ದೊಡ್ಡ ಭಾಗವನ್ನು ಪಡೆದುಕೊಳ್ಳುವ ಬಂಡವಾಳಗಾರರೇ ಬೇರೆ. ಎಲ್ಲ ಬಂಡವಾಳಗಾರರೂ ಒಂದೇ ಅಲ್ಲ.

ನಿರ್ದಿಷ್ಟವಾಗಿ ಹೇಳುವುದಾದರೆ, ಕಾರ್ಮಿಕರ ಬಳಕೆ ಬೇಡಿಕೆಯ ಕಡಿತದ ಪರಿಣಾಮವು ದೊಡ್ಡ ಬಂಡವಾಳಗಾರರನ್ನು ಹೆಚ್ಚು ತಟ್ಟುವುದಿಲ್ಲ. ಆದರೂ ಅವರು ಬಜೆಟ್ ವರ್ಗಾವಣೆಯ ಸಿಂಹಪಾಲನ್ನು ಪಡೆಯುತ್ತಾರೆ. ಹಾಗಾಗಿ ಒಟ್ಟು ಲಾಭಗಳು ಒಟ್ಟಾರೆ ಮಟ್ಟದಲ್ಲಿ ಬದಲಾಗದೆ ಇದ್ದರೂ ಸಹ ಅವರು ನಿವ್ವಳ ಲಾಭಗಾರರಾಗುತ್ತಾರೆ. ಆದರೆ, ಕಾರ್ಮಿಕರ ಬಳಕೆಯ ಸರಕುಗಳ ಮಾರುಕಟ್ಟೆಯಲ್ಲಿ ಎದ್ದು ಕಾಣುವ ಸಣ್ಣ ಬಂಡವಾಳಗಾರರು ನಿವ್ವಳ ನಷ್ಟಗಾರರಾಗುತ್ತಾರೆ,.
ಈ ರೀತಿಯಲ್ಲಿ ಬಂಡವಾಳಶಾಹಿಗಳಿಗೆ ಒದಗಿಸುವ ಬಜೆಟರಿ ವರ್ಗಾವಣೆಯು, ಸಣ್ಣ ಬಂಡವಾಳಗಾರರನ್ನು (ಅಥವಾ ಕಾರ್ಮಿಕರ ಬಳಕೆಗಾಗಿ ಸರಕುಗಳನ್ನು ಉತ್ಪಾದಿಸುವ ಸಣ್ಣ ಉತ್ಪಾದಕರನ್ನೂ ಸಹ) ದೊಡ್ಡ ಬಂಡವಾಳಗಾರರು ತ್ವರಿತವಾಗಿ ಸ್ಥಳಾಂತರಿಸುವ ಯಾವ ವಿಧಾನವನ್ನು ಬಂಡವಾಳದ ಕೇಂದ್ರೀಕರಣ ಎಂದು ಮಾರ್ಕ್ಸ್ ಕರೆದಿದ್ದರೋ ಅದಕ್ಕೆ ಸಹಾಯ ಮಾಡುವ ಒಂದು ವಿಧಾನವಾಗಿದೆ.

ಬಂಟ ಬಂಡವಾಳಗಾರರು ಬಯಸುವುದು ಇದನ್ನೇ ಮತ್ತು ಸರ್ಕಾರವು ಅವರನ್ನು ಅನುಗ್ರಹಿಸುತ್ತದೆ ಕೂಡ. ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ನೆಪದಲ್ಲಿ ಇಂತಹ ವರ್ಗಾವಣೆಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಈ ಉದ್ದೇಶವು ಈಡೇರುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಈ ವರ್ಗಾವಣೆಗಳು ಅರ್ಥವ್ಯವಸ್ಥೆಯನ್ನು ಕುಗ್ಗಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತವೆ. ಹೀಗೆ ಕುಗ್ಗುತ್ತಿರುವ ಒಂದು ಅರ್ಥವ್ಯವಸ್ಥೆಯ ಸಂದರ್ಭದಲ್ಲಿಯೂ ಸಹ, ಸರ್ಕಾರವು ಏಕಸ್ವಾಮ್ಯ ಬಂಡವಾಳಗಾರರನ್ನು ಬಲಪಡಿಸುತ್ತದೆ.

ನೋಟು ರದ್ದತಿಯ ಕ್ರಮದಿಂದ ಮತ್ತು ಸರಕು ಮತ್ತು ಸೇವಾ ತೆರಿಗೆಯ ಅಳವಡಿಕೆಯಿಂದ ದೇಶದ ಕಿರು ಉತ್ಪಾದಕರಿಗೆ ಹಾನಿ ಉಂಟಾಗಿದೆ ಎಂಬುದನ್ನು ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳುತ್ತವೆಯಾದರೂ. ಬಂಡವಾಳಗಾರರಿಗೆ ನೀಡಿದ ತೆರಿಗೆ ರಿಯಾಯಿತಿಗಳು ಮತ್ತು ಇತರೆ ರೂಪದ ಬಜೆಟ್ ವರ್ಗಾವಣೆಗಳು ಈ ಕಿರು ಉತ್ಪಾದಕರಿಗೆ ಉಂಟುಮಾಡಿದ ಹಾನಿಯನ್ನು ಗುರುತಿಸಿರುವುದು ಅತ್ಯಲ್ಪವೇ.

ಇದನ್ನೂ ನೋಡಿ: ಶೈಲಜಾ ಟೀಚರ್‌ ಆತ್ಮಕತೆ ಅನುವಾದಿಸುವಾಗ ಅವರೊಟ್ಟಿಗೆ ಹೆಜ್ಜೆ ಹಾಕಿದ ಅನುಭವವಾಯಿತು Janashakthi Media

Donate Janashakthi Media

Leave a Reply

Your email address will not be published. Required fields are marked *