ಕೊನೆಗೂ ಹೋರಾಟಕ್ಕೆ ಸಜ್ಜಾದ ಬಿಜೆಪಿ; ದಿಕ್ಕು ತಪ್ಪಿಸುವ ಕುತಂತ್ರವೆಂದ ಸೌಜನ್ಯ ಪರ ಹೋರಾಟಗಾರರು!

ಬಿಜೆಪಿಗೆ ತನ್ನ ಮುಖಮುಚ್ಚಿಕೊಳ್ಳಲು ಬೇರೆ ದಾರಿಯಿಲ್ಲದೆ ಹೋರಾಟದ ನಾಟಕವಾಡುತ್ತಿದ್ದು, ಇದು ಸೌಜನ್ಯ ಪರ ಚಳವಳಿಯನ್ನು ದಿಕ್ಕು ತಪ್ಪಿಸಿಕೊಳ್ಳುವ ಒಂದು ‍ಷಡ್ಯಂತ್ರ ಎಂದು ಆರೋಪಿಸಲಾಗಿದೆ

ಮಂಗಳೂರು: ರಾಜ್ಯದಾದ್ಯಂತ ಸೌಜನ್ಯ ಪರವಾಗಿ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ಎಚ್ಚೆತ್ತಿದ್ದು, ಆಗಸ್ಟ್‌ 27ರ ಭಾನುವಾರದಂದು ಪಕ್ಷದ ವತಿಯಿಂದ ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬಿಜೆಪಿಯ ಈ ಹೋರಾಟವನ್ನು ಷಡ್ಯಂತ್ರ ಎಂದು ಕರೆದಿರುವ ಸೌಜನ್ಯ ಪರ ಹೋರಾಟಗಾರರು, ಪಕ್ಷವು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ನಡೆಸುತ್ತಿರುವ ಕುತಂತ್ರದ ಮತ್ತು ಹತಾಶ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಳಿನ್ ಕುಮಾರ್, “ಪ್ರಕರಣದ ಮರು ತನಿಖೆ ಆಗಿ, ಸಂಶಯಗಳು ನಿವಾರಣೆಯಾಬೇಕು. ಪ್ರಕರಣದ ಹಿಂದೆ ಯಾವುದೆ ಪ್ರಭಾವಿಗಳಿರಲಿ, ಹಂತಕರನ್ನು ಬಂಧಿಸಿ, ಅವರಿಗೆ ಕಠೋರ ಶಿಕ್ಷೆ ಆಗುವಂತೆ ಮಾಡಬೇಕು. ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಪೊಲೀಸರು, ನಂತರ ಸಿಬಿಐ ತನಿಖೆ ನಡೆಸಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ತಪ್ಪಿತಸ್ಥ ಅಲ್ಲವೆಂದು ಸಿಬಿಐ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದೆ. ಸಿಬಿಐ ತನಿಖೆಯಿಂದಲೂ ಪ್ರಕರಣದ ಆರೋಪಿಗಳು ಯಾರು ಎಂದು ಸ್ಪಷ್ಟ ಆಗಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ಸೌಜನ್ಯ ಪ್ರಕರಣ: ವಿಶೇಷ ತನಿಖೆಗೆ ಒತ್ತಾಯಿಸಿ ಆಗಷ್ಟ್‌ 28 ರಂದು ಚಲೋ ಬೆಳ್ತಂಗಡಿ ಮಹಾಧರಣಿ

“ಪ್ರಕರಣದ ಮರು ತನಿಖೆ ಆಗಬೇಕು ಎಂಬುದು ಸೌಜನ್ಯಾ ಕುಟುಂಬ ಆಗ್ರಹಿಸಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ನಮ್ಮ ಪಕ್ಷದ ನಿಲುವು ಕೂಡಾ. ಈ ಉದ್ದೇಶದಿಂದ ಇದೇ 27ರಂದು (ಭಾನುವಾರ) ಬೆಳ್ತಂಗಡಿಯಲ್ಲಿ ಪಕ್ಷದ ವತಿಯಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೂ ಪಕ್ಷದ ಶಾಸಕರನ್ನು ಒಳಗೊಂಡ ನಿಯೋಗವು ಮನವಿ ಸಲ್ಲಿಸಲಿದೆ” ಎಂದು ನಳಿನ್‌ ಕುಮಾರ್ ತಿಳಿಸಿದ್ದರು.

ಬಿಜೆಪಿ ಈ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಬಿಜೆಪಿ ಸರ್ಕಾರ ಇದ್ದಾಗಲೆ ನಡೆದ ಕೊಲೆಯನ್ನು ರಾಜ್ಯದ ಪೊಲೀಸರು ತನಿಖೆ ನಡೆಸಿದ್ದರು. ಅವರ ತನಿಖೆಯ ಮೇಲೆ ನಂಬಿಕೆ ಇಲ್ಲವೆಂದು ಹೋರಾಟ ನಡೆದ ನಂತರ ನಂತರ ಬಂದ ಸಿದ್ದರಾಮಯ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. ಆದರೆ ಈ ವೇಳೆಗೆ ಕೇಂದ್ರದಲ್ಲಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅವರ ತನಿಖೆ ನಿಜವಾದ ಅಪರಾಧಿಯನ್ನು ಕಂಡು ಹಿಡಿದಿಲ್ಲ. ಇದೀಗ ಈ ಪ್ರತಿಭಟನೆಯ ಮೂಲಕ ಬಿಜೆಪಿ ಕೇಂದ್ರದ ಮೋದಿ ಸರಕಾರದ ಅಧೀನದಲ್ಲಿದ್ದ ಸಿಬಿಐ ಸರಿಯಾದ ತನಿಖೆ ನಡೆಸಲಿಲ್ಲ, ನೈಜ ಅಪರಾಧಿಗಳ ಬದಲಿಗೆ ಅಮಾಯಕನೋರ್ವನ ತಲೆಗೆ ಸೌಜನ್ಯ ಕೊಲೆ ಆರೋಪವನ್ನು ಕಟ್ಟಿದೆ ಎಂದು ಬಿಜೆಪಿಯೂ ಆರೋಪಿಸುತ್ತಿದೆಯೆ?. ” ಎಂದು ಕೇಳಿದ್ದಾರೆ.

“ತಪ್ಪು ಮಾಡಿದ ಸಿಬಿಐ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು, ಸಿಬಿಐನ ಉನ್ನತ ತಂಡದಿಂದ ಪ್ರಕರಣದ ಮುಂದುವರಿದ ತನಿಖೆ ಮಾಡಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯ ನಾಯಕತ್ವ ಆಗ್ರಹಿಸಬೇಕಿತ್ತಲ್ಲ ? ಯಾಕೆ ಆ ಕುರಿತು ಚಕಾರ ಇಲ್ಲ ? ಸಿಬಿಐ ಮಾತ್ರ ಅಲ್ಲ, ಮೋದಿ, ಶಾ ಮೇಲೆಯೂ ನಿಮಗೆ ಈ ಪ್ರಕರಣದಲ್ಲಿ ನಂಬಿಕೆ ಇಲ್ಲವೆ ? ರಾಜ್ಯದ ಮುಖ್ಯಮಂತ್ರಿಯಲ್ಲಿ ಸಿಬಿಯ ತನಿಖೆ ಮಾಡಿದ ಪ್ರಕರಣವನ್ನು ವಾಪಾಸು ಪಡೆದು ಮರು ತನಿಖೆಗೆ ಆಗ್ರಹಿಸುತ್ತೀರಿ ಅಂತದಾರೆ, ನಿಮಗೆ ಮೋದಿಗಿಂತ ಸಿದ್ದರಾಮಯ್ಯ ಮೇಲೆ ಹೆಚ್ಚು ನಂಬಿಕೆಯೆ ? ಅಥವಾ ಜನಾಕ್ರೋಶದ ದಿಕ್ಕು ತಪ್ಪಿಸುವ ಹೊಸ ತಂತ್ರವೆ?” ಎಂದು ಕೇಳಿದ್ದಾರೆ.

ಇದನ್ನೂ ಓದಿ: ಸೌಜನ್ಯ ಕುಟುಂಬದ ಮೇಲೆ ಹೆಗ್ಗಡೆ ಬೆಂಬಲಿಗರಿಂದ ಹಲ್ಲೆ – ಮಹಿಳಾ ಸಂಘಟನೆ ಖಂಡನೆ

ಮಹಿಳಾ ಹೋರಾಟಗಾರ್ತಿ ಕೆ. ನೀಲಾ ಮಾತನಾಡಿ, “ಸಿಬಿಐ 11 ವರ್ಷಗಳ ಕಾಲ ಒಬ್ಬ ನಿರಪರಾಧಿಯನ್ನು ಬಂಧಿಸಿ ಕೊನೆಗೆ ಆತನ ಬಿಡುಗಡೆ ಮಾಡಿತು. ಕೊಲೆಗಡುಕರು ಯಾರು ಎಂದು ಪತ್ತೆಹಚ್ಚುವಲ್ಲಿ ಸಿಬಿಐ ಸೋತಿದೆ. ಒಂದು ಕುಟುಂಬವನ್ನೆ ನಾಶ ಮಾಡಿದ ಸಿಬಿಐ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳುವ ಧೈರ್ಯ ನಳಿನ್ ಕುಮಾರ್‌ ಅವರಿಗಾಗಲಿ, ಅವರ ಬಿಜೆಪಿಗಾಗಲಿ ಇದೆಯೆ? ಸಿಬಿಐ ಇರುವುದು ಕೇಂದ್ರ ಸರ್ಕಾರದ ಅಡಿಯಲ್ಲಾಗಿದೆ. ಅಲ್ಲಿ ಆಡಳಿತ ನಡೆಸುತ್ತಿರುವುದು 56 ಇಂಚಿನೆದೆಯ ವಿಶ್ವಗುರು ಮತ್ತು ತಡಿಪಾರ್‌ ಗೃಹ ಮಂತ್ರಿಯಾಗಿದ್ದಾರೆ. ಇವರಿಬ್ಬರನ್ನೂ ಪ್ರಶ್ನೆ ಕೇಳುವ ಧೈರ್ಯ ರಾಜ್ಯದ ಬಿಜೆಪಿಗೆ ಇದೆಯೆ? ಇದೀಗ ಸಿದ್ದರಾಮಯ್ಯ ಅವರ ಜೊತೆಗೆ ತನಿಖೆ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಅವರದೇ ಕೇಂದ್ರ ಸರ್ಕಾರದ ಜೊತೆಗೆ ಅವರಿಗೆ ನಂಬಿಕೆ ಇಲ್ಲವೆ?” ಎಂದು ಕೇಳಿದರು.

“ರಾಜ್ಯ ಬಿಜೆಪಿಯ ನಾಯಕರಿಗೆ ಧಮ್ಮು ಮತ್ತು ತಾಖತ್ತಿದ್ದರೆ, ಕೇಂದ್ರ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಲಿ. ಸೌಜನ್ಯ ಪರವಾಗಿ ಇಡೀ ಕರ್ನಾಟಕವೆ ಚಳವಳಿ ಮಾಡುತ್ತಿದೆ ಎಂಬ ಕಾರಣಕ್ಕೆ ಬಿಜೆಪಿ ತನ್ನ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಹತಾಶ ಪ್ರಯತ್ನ ನಡೆಸುತ್ತಿದೆ. ಇಡೀ ಚಳವಳಿಯನ್ನು ದಿಕ್ಕು ತಪ್ಪಿಸಲು ನಾವೂ ಚಳವಳಿ ಮಾಡುತ್ತಿದ್ದೇವೆ ಎಂಬ ನಾಟಕ ಮಾಡುತ್ತಿದ್ದಾರೆ. ಈ ವೇಳೆ ಬಿಜೆಪಿಗೆ ತನ್ನ ಮುಖಮುಚ್ಚಿಕೊಳ್ಳಲು ಬೇರೆ ದಾರಿಯಿಲ್ಲ. ಹೀಗಾಗಿ ಹೋರಾಟದ ನಾಟಕವಾಡುತ್ತಿದ್ದಾರೆ. ಬಿಜೆಪಿಯ ಈ ನಾಟಕ ಸೌಜನ್ಯ ಪರ ಚಳವಳಿಯನ್ನು ದಿಕ್ಕು ತಪ್ಪಿಸಿಕೊಳ್ಳುವ ಒಂದು ‍ಷಡ್ಯಂತ್ರ ಹಾಗ ಕುತಂತ್ರ” ಎಂದು ಕೆ. ನೀಲಾ ಹೇಳಿದರು.

ಇದನ್ನೂ ಓದಿ: ಧರ್ಮಸ್ಥಳ ಹೆಗ್ಗಡೆ ಪರ ಪ್ರತಿಭಟನೆಯಲ್ಲಿ ಸೌಜನ್ಯ ಕುಟುಂಬ ಸದಸ್ಯರ ಮೇಲೆ ಹಲ್ಲೆಗೆ ಯತ್ನ!

ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಮಾತನಾಡಿ, “ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ಇದ್ದಾಗ ನಡೆದ ಕೊಲೆ-ಅತ್ಯಾಚಾರ ಇದಾಗಿದೆ. ಆಗ ಡಿ.ವಿ. ಸದಾನಂದ ಗೌಡ, ಆರ್‌. ಅಶೋಕ್, ಶೋಭಾ ಕರಂದ್ಲಾಜೆ, ಈಶ್ವರಪ್ಪ, ಯಡಿಯೂರಪ್ಪ ಅವರ ಧರ್ಮಸ್ಥಳಕ್ಕೆ ಬಂದರೂ, ಸೌಜನ್ಯ ಅವರ ಮನೆಗೆ ಭೇಟಿ ನೀಡದೆ ಅಲ್ಲಿಂದಲೆ ಹೊರಟುಹೋಗಿದ್ದರು. ಹಾಗಾಗಿ ಪ್ರತಿಭಟನೆ ಮಾಡಬೇಕಾದ ನೈತಿಕ ಹಕ್ಕು ಅವರಿಗೆ ಇಲ್ಲವೆ ಇಲ್ಲ, ಅವರು ಯಾವ ಮುಖವಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರೇ ಹೇಳಬೇಕು. ಈಗಿನ ಹೋರಾಟ ಸಂಘಪರಿವಾರದ ಯುವಕರನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ. ಅವರನ್ನು ತಮ್ಮ ಬಳಿಯೆ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನವಾಗಿದೆಯೆ ಹೊರತು ಸೌಜನ್ಯ ಪರವಾಗಿ ಅಲ್ಲವೆ ಅಲ್ಲ” ಎಂದು ಹೇಳಿದರು.

“2012ರಂದು ಬಿಜೆಪಿ ಸರ್ಕಾರ ಇದ್ದಾಗ ಸೌಜನ್ಯಳಿಗಾಗಿ ಅವರು ಏನು ಮಾಡಿದ್ದರು? ಮೃತಪಟ್ಟ ಮಗುವಿನ ಮನೆಯವರು ಎರೆಡೆರೆಡು ಬಾರಿ ದೂರು ನೀಡಿದ್ದಾಗ ಕೂಡಾ ಅದನ್ನು ಹರಿದು ಬಿಸಾಕಿದ್ದರು. ಈ ವೇಳೆ ಅವರದೆ ಸರ್ಕಾರವಿದ್ದು, ಮೃತಪಟ್ಟ ಬಾಲಕಿಯ ತಂದೆ-ತಾಯಿ ನೀಡಿದ್ದ ದೂರನ್ನು ಎಫ್‌ಐಆರ್‌ ಮಾಡೋಕೆ ಆಗಿಲ್ಲ. ಪ್ರಕರಣ ನಡೆದು ಎರಡು ಮೂರು ತಿಂಗಳವರೆಗೆ ಬಾಲಕಿಯ ಸಂಬಂಧಿಯೊಬ್ಬರು ನಾಪತ್ತೆ ಪ್ರಕರಣ ನೀಡಿದ್ದ ದೂರನ್ನು ಹಿಡಿದು ತನಿಖೆ ನಡೆಸುತ್ತಿದ್ದರು. ಇದು ಬಿಜೆಪಿ ಸರ್ಕಾರದ ಕೊಡುಗೆ” ಎಂದು ತಿಮರೋಡಿ ಹೇಳಿದರು.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಹೋರಾಟದ ದಾರಿ ತಪ್ಪಿಸುತ್ತಿದೆಯಾ ಬಿಜೆಪಿ?!

 

Donate Janashakthi Media

Leave a Reply

Your email address will not be published. Required fields are marked *