ಫಿನ್ ಲ್ಯಾಂಡ್ ಇತ್ತೀಚೆಗೆ ಎರಡು ಕಾರಣಗಳಿಗೆ ಸುದ್ದಿಯಲ್ಲಿತ್ತು. ಆದರೆ ಬಹುಶಃ ಎರಡಕ್ಕೂ ನೇರ ಸಂಬಂಧವಿಲ್ಲ. ಫಿನ್ ಲ್ಯಾಂಡ್ ನಾಟೋ ಮಿಲಿಟರಿ ಕೂಟದ 31ನೆಯ ಸದಸ್ಯ ದೇಶವಾಗಿ ಎಪ್ರಿಲ್ 4ರಂದು ಪ್ರವೇಶ ಪಡೆಯಿತು. ಮೇ 2022ರಲ್ಲಿ ಉಕ್ರೇನ್ ಯುದ್ಧದಿಂದ ಉಂಟಾದ ‘ರಾಷ್ಟ್ರೀಯ ಭದ್ರತಾ ಆತಂಕ’ಗಳ ಹಿನ್ನೆಲೆಯಲ್ಲಿ ಸ್ವೀಡನ್ ಮತ್ತು ಫಿನ್ ಲ್ಯಾಂಡ್ ನಾಟೋ ಮಿಲಿಟರಿ ಕೂಟಕ್ಕೆ ಸೇರಲು ಅರ್ಜಿ ಹಾಕಿದ್ದವು. ಇದು ಆ ಎರಡು ದೇಶಗಳು ಹಲವಾರು ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಮಿಲಿಟರಿ ತಟಸ್ಥತೆಯ ನೀತಿಯ ಏಕಾಏಕಿ ಬದಲಾವಣೆ ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಕಳೆದ ವಾರ ಟರ್ಕಿ ಯ ಪಾರ್ಲಿಮೆಂಟ್ ಫಿನ್ ಲ್ಯಾಂಡ್ ಪ್ರಸ್ತಾವಕ್ಕೆ ಮಂಜೂರಾತಿ ನೀಡುವ ಮೂಲಕ ಇದು ಸಾಧ‍್ಯವಾಗಿದೆ. ಕುರ್ದಿಶ್ ಗೆರಿಲ್ಲಾಗಳಿಗೆ ಈ ಎರಡು ದೇಶಗಳು ರಾಜಕೀಯ ಆಶ್ರಯ ಮತ್ತು ಬೆಂಭಲ ನೀಡಿವೆ ಮತ್ತು ಟರ್ಕಿಗೆ ಶಸ್ತ್ರಾಸ್ತ್ರ ಮಾರಾಟದ ಮೇಲೆ ನಿರ್ಬಂಧ ಹೇರಿವೆಯೆಂದು ಟರ್ಕಿ ದೂರಿ ಮಂಜೂರಾತಿ ತಡೆ ಹಿಡಿದಿತ್ತು. ಫಿನ್ ಲ್ಯಾಂಡ್ ತನ್ನ ಆತಂಕಗಳನ್ನು ನಿವಾರಿಸಿದೆ. ಆದರೆ ಸ್ವೀಡನ್ ಇನ್ನೂ ನಿವಾರಿಸಿಲ್ಲವೆಂದು ಟರ್ಕಿ ಸರಕಾರ ಹೇಳಿದೆ.
ಫಿನ್ ಲ್ಯಾಂಡ್ ಜತೆಗೆ 1300 ಕಿ,ಮಿ ಉದ್ದವಾದ ಗಡಿ ಇರುವ ರಶ್ಯಾ ಇದಕ್ಕೆ ಪ್ರತಿಕ್ರಿಯಿಸುತ್ತಾ ಅದು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು ಎಂದಿದೆ. ಇತರ ನಾಟೋ ದೇಶಗಳ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಫಿನ್ ಲ್ಯಾಂಡ್ ನಲ್ಲಿ ನೆಲೆಸಿದರೆ ಇನ್ನಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು ಎಂದಿದೆ.
ಕೆಲವೇ ದಿನಗಳ ಮೊದಲು ಈ ರಾಜಕೀಯ ನಿರ್ಣಯವನ್ನು ತೆಗೆದುಕೊಂಡ ಹಿಂದಿನ ಪ್ರಧಾನಿ ಸನ್ನಾ ಮರಿನ್ ಅವರ ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷ (ಎಸ್.ಡಿ.ಪಿ) ಚುನಾವಣೆಗಳಲ್ಲಿ ಸೋತು ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಡು-ಬಲಪಂಥೀಯ ನೇಶನಲ್ ಕೊಲಿಶನ್ ಪಕ್ಷ 48 ಸೀಟು (10 ಹೆಚ್ಚು ಸೀಟು) ಮತ್ತು 20.8% ಮತ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದೆ. ಉಗ್ರ-ಬಲಪಂಥೀಯ ಫಿನ್ಸ್ ಪಕ್ಷ 46 ಸೀಟು (7 ಹೆಚ್ಚು ಸೀಟು) ಮತ್ತು 20.1% ಮತ ಪಡೆದು ಎರಡನೆಯ ಸ್ಥಾನ ಪಡೆದಿದೆ. ನೇಶನಲ್ ಕೊಲಿಶನ್ ಫಿನ್ಸ್ ಪಕ್ಷದ ಜತೆ ಸೇರಿ ಸರಕಾರ ನಡೆಸಲಿದೆ. ಅಂದರೆ ಫಿನ್ ಲ್ಯಾಂಡ್ ಬಲಪಂಥದತ್ತ ಸರಿದಿದೆ.
ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷ (ಎಸ್.ಡಿ.ಪಿ) 43 ಸೀಟು (3 ಹೆಚ್ಚು ಸೀಟು) ಮತ್ತು 19.9% ಮತ ಪಡೆದು ಮೂರನೆಯ ಸ್ಥಾನ ಪಡೆದಿದೆ. ಗ್ರೀನ್ ಲೀಗ್ 23 ಸೀಟು (7 ಸೀಟು ಕಡಿಮೆ) ,ತ್ತು ಎಡ ಕೂಟ 11 (5 ಸೀಟು ಕಡಿಮೆ) ಪಡೆದಿವೆ. ಸನ್ನಾ ಮರೀನ್ ನಾಟೋ ಸೇರುವ ಪ್ರಮಾದ ಮಾಡಿದ್ದಲ್ಲದೆ, ನಿರುದ್ಯೋಗ ಭತ್ಯೆ ಪಡೆಯುವ ಶರತ್ತುಗಳನ್ನು ಕಠಿಣಗೊಳಿಸಿದ್ದು, ಮುಷ್ಕರದ ವಿರುದ್ಧ ಕಟು ಕ್ರಮ ಕೈಗೊಂಡು ‘ಮಿತವ್ಯಯ’ದ ಕ್ರಮಗಳನ್ನು ಜಾರಿಗೊಳಿಸಿದ್ದು ಅವರ ಸರಕಾರಕ್ಕೆ ಮುಳುವಾಯಿತು ಎನ್ನಲಾಗಿದೆ. ಮುಂದಿನ ಸರಕಾರ ನಾಟೋ ನಿರ್ಣಯಕ್ಕೆ ಬದ್ಧವಾಗಿರುವುದಲ್ಲದೆ ‘ಮಿತವ್ಯಯ’ದ ಹೆಸರಲ್ಲಿ ಇನ್ನಷ್ಟು ಜನರ ಕಾರ್ಮಿಕರ ಕಲ್ಯಾಣ ಕ್ರಮಗಳನ್ನು ಕಡಿತ ಮಾಡಲಿದೆ.