ಕಾಡುವ ವಲಸಿಗ ಫಿಲಂಗಳು -2 : “ದಿ ಪಾರ್ಟಿ ಈಸ್ ಓವರ್” ಮತ್ತು “ಸಾಮಿಯ”

 

ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಹಲವು ಫಿಲಂಗಳಲ್ಲಿ ಒಂದೇ ಥೀಮ್ ಮತ್ತೆ ಮತ್ತೆ ಒತ್ತರಿಸಿ ಬರುವಂತೆ ಕಾಣುತ್ತಿತ್ತು.  ನಿರಾಶ್ರಿತ ವಲಸಿಗರು ವಲಸೆ ಹೋಗುವಾಗ ಮತ್ತು ಹೋದ ನಂತರವೂ ಎದುರಿಸುತ್ತಿರುವ ದಾರುಣ ಸ್ಥಿತಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಕಾಣುವ ಥೀಮ್ ಅದು.  ಕಳೆದ ಹಲವು ವರ್ಷಗಳಿಂದ ನಿರಾಶ್ರಿತ ವಲಸಿಗರ ಕುರಿತು ಫಿಲಂಗಳು ಬರುತ್ತಿದ್ದು ಅದು ಬರಿಯ ಥೀಮ್ ಮಾತ್ರವಲ್ಲ, ಒಂದು ಸಿನಿಮಾ ಜೋನರ್ (ಸಿನಿಮಾ ಪ್ರಕಾರ) ಆದಂತಿದೆ.  ಜಗತ್ತಿನಾದ್ಯಂತ ವಲಸಿಗರ ಸಮಸ್ಯೆ ಬೃಹದಾಕಾರ ಪಡೆದುಕೊಂಡಿರುವ ಸನ್ನಿವೇಶದಲ್ಲಿ ಬಹುಶಃ ಇದು ಸಹಜವಾಗಿದೆ.  ಈ 4 ಚಿತ್ರಗಳು ತೆರೆದಿಡುವ ವಲಸಿಗರ ದಾರುಣ ಸ್ಥಿತಿ ಬೆಚ್ಚಿ ಬೀಳಿಸುವಂಥದ್ದು, ಯಾರನ್ನಾದರೂ ಆಳವಾಗಿ ಕಲುಕುವಂಥದ್ದು. ಮರೆಯಲಾಗದ್ದು.  ಕಾಡುವ ವಲಸಿಗ ಫಿಲಂಗಳ ಚಿತ್ರಣ ಕೊಡುವ ಈ ಬರಹದ ಭಾಗ-1 ರಲ್ಲಿ  ‘ಕಾಣದ ನಾಡಿನತ್ತಎಂಬ ಅಥೇನ್ಸಿನಲ್ಲಿ ಪ್ಯಾಲೆಸ್ಟೀನ್  ವಲಸಿಗರ ಮತ್ತು ‘ಸುಲೈಮಾನ್ ಕತೆ’ ಎಂಬ ಫ್ರಾನ್ಸಿನಲ್ಲಿರುವ ಗಿನಿ ವಲಸಿಗನ ದಾರುಣ ಕತೆಯ ಕುರಿತು ಇದೆ. ಈ ಭಾಗ-2 ರಲ್ಲಿ “ದಿ ಪಾರ್ಟಿ ಈಸ್ ಓವರ್” (ಪಾರ್ಟಿ ಮುಗಿಯಿತು), ಮತ್ತು ಅರೆಬಿಕ್/ಸೊಮಾಲಿ/ಇಂಗ್ಲಿಷ್ ಫಿಲಂ “ಸಾಮಿಯ” ಕುರಿತ ಅನಿಸಿಕೆ ಇದೆ. ಈ ಫಿಲಂಗಳಲ್ಲಿ ಸಹಜವಾಗಿಯೇ ನಿರಾಶ್ರಿತ ವಲಸಿಗರ ಪಾಡನ್ನು ಮಾನವೀಯ ದೃಷ್ಟಿಯಿಂದ ನೋಡಲಾಗಿದೆ. ಆದರೆ  ಈ ಫಿಲಂಗಳು ನಿರಾಶ್ರಿತ ವಲಸಿಗರ ಪಾಡಿನ ರಾಜಕೀಯ-ಆರ್ಥಿಕ ಆಯಾಮದತ್ತವೂ ಗಮನ ಸೆಳೆಯುತ್ತವೆ.
ವಸಂತರಾಜ ಎನ್.ಕೆ.

ಜಗತ್ತಿನಾದ್ಯಂತ ವಲಸಿಗರ ಸಮಸ್ಯೆ ಬೃಹದಾಕಾರ ಪಡೆದುಕೊಂಡಿರುವ ಸನ್ನಿವೇಶದಲ್ಲಿ ಬಹುಶಃ ಇದು ಸಹಜವಾಗಿದೆ.  ಉತ್ತರ ಅಮೆರಿಕ ಮತ್ತು ಯುರೋಪಿನ ವಿಕಸಿತ ದೇಶಗಳಲ್ಲಿ ಇದು ರಾಜಕೀಯ ಅಲ್ಲೋಲ ಕಲ್ಲೋಲ ತಂದಿದೆ. ಆಫ್ರಿಕಾದಿಂದ ಯುರೋಪಿನತ್ತ ಮತ್ತು ಲ್ಯಾಟಿನ್ ಅಮೆರಿಕದಿಂದ ಹಾಗೂ ಇಡೀ ಜಗತ್ತಿನಿಂದ ಯು.ಎಸ್ ನತ್ತ ಹೋಗಲು ಯತ್ನಿಸುತ್ತಿರುವ ವಲಸಿಗರು ಪಡುತ್ತಿರುವ ಪಾಡು ಮತ್ತು ದಾರುಣ ಅಮಾನವೀಯ  ಸ್ಥಿತಿ ಜಗತಿನ ಗಮನ ಸೆಳೆದಿದೆ. ಭಾರತದ ಸಾವಿರಾರು ‘ಕಾನೂನು ಬಾಹಿರ’ ವಲಸಿಗರನ್ನು ಟ್ರಂಪ್ ಆಡಳಿತ ಅಪರಾಧಿಗಳಂತೆ ಕೈ ಕಾಲುಗಳನ್ನು ಸರಪಣಿಗಳಲ್ಲಿ ಕಟ್ಟಿ ಮಿಲಿಟರಿ ಸಾಗಾಣಿಕೆ ವಿಮಾನದಲ್ಲಿ ಹಾಕಿ ಕಳಿಸಿರುವ ದೃಶ್ಯಗಳ ಹಿನ್ನೆಲೆಯಲ್ಲಿ ನಮಗೂ ಇವು ದೂರದ ಸಮಸ್ಯೆ ಅನಿಸುತ್ತಿಲ್ಲ.

ನಿರಾಶ್ರಿತ ವಲಸಿಗರ ಕುರಿತು 16ನೇ ಬೆಂಗಳೂರು ಚಿತ್ರೋತ್ಸವದದಲ್ಲಿ ನಾನು ನೋಡಿದ ಫಿಲಂಗಳೆಂದರೆ ಅರೆಬಿಕ್ /ಗ್ರೀಕ್  ಫಿಲಂ ‘ಟು ಎ ಲ್ಯಾಂಡ್ ಅನ್ ನೋನ್’ (ಕಾಣದ ನಾಡಿನತ್ತ), ಫುಲಾ/ಮಲಿಂಕೆ/ಫ್ರೆಂಚ್ ಫಿಲಂ “ದಿ ಸ್ಟೋರಿ ಆಫ್ ಸುಲೈಮಾನ್” (ಸುಲೈಮಾನ್ ನ ಕತೆ), ಸ್ಪಾನಿಶ್/ಫ್ರೆಂಚ್ ಫಿಲಂ  “ದಿ ಪಾರ್ಟಿ ಈಸ್ ಓವರ್” (ಪಾರ್ಟಿ ಮುಗಿಯಿತು), ಮತ್ತು ಅರೆಬಿಕ್/ಸೊಮಾಲಿ/ಇಂಗ್ಲಿಷ್ ಫಿಲಂ “ಸಾಮಿಯ”.  ಈ ನಾಲ್ಕು ಯೂರೋಪ್ ಗೆ ವಲಸೆ ಹೋಗುತ್ತಿರುವ ಅಥವಾ ಹೋಗಿರುವ ಉತ್ತರ ಆಫ್ರಿಕಾ ಅಥವಾ ಪಶ್ಚಿಮ ಏಶ್ಯಾದ ವಲಸಿಗರ ದಾರುಣ ಕತೆಗಳ ಚಿತ್ರಣ.

  1. ‘ದಿ ಪಾರ್ಟಿ ಈಸ್ ಓವರ್’ (ಪಾರ್ಟಿ ಮುಗಿದಿದೆ)

ಮೊದಲೆರಡು ಫಿಲಂಗಳು ನಿರಾಶ್ರಿತ ವಲಸಿಗರ ದಾರುಣ ಸ್ಥಿತಿಯನ್ನು ತೋರಿಸಿದರೆ, ಈ ಫಿಲಂ ಯುರೋಪಿನ ಶ್ರೀಮಂತರು ವಲಸಿಗರಿಗೆ ಮತ್ತು ಅವರ ಸಂಕಷ್ಟಗಳಿಗೆ ತೋರಬಹುದಾದ ಪ್ರತಿಕ್ರಿಯೆಯ ವಿಡಂಬನಾತ್ಮಕ ಚಿತ್ರಣ. ಈ ಫಿಲಂ ಸ್ಪಾನಿಶ್/ಫ್ರೆಂಚ್ ಆಗಿದ್ದು ದಕ್ಷಿಣ ಸ್ಪೈನ್ ನ ಅಂಡುಲಾಶಿಯ ಪ್ರಾಂತ್ಯದ ಪ್ರದೇಶವೊಂದರಲ್ಲಿ ನೆಲೆ ಹೊಂದಿದೆ. ಸೆನೆಗಲ್ ನ ಹದಿಹರೆಯದ ‘ಕಾನೂನುಬಾಹಿರ ನಿರಾಶ್ರಿತ ವಲಸಿಗ’ ಬಿಲಾಲ್ ಪೋಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಒಂಟಿ ಶ್ರೀಮಂತ ಮಹಿಳೆ ಕಾರ್ಮಿನಾಳ ಕೋಟೆಯಂತಹ ತೋಟದಿಂದ ಸುತ್ತುವರೆದ ವಿಶಾಲ ಬಂಗಲೆಯ ಶೆಡ್ ನಲ್ಲಿ ಅಡಗುತ್ತಾನೆ. ಶೆಡ್ ನಿಂದಲೇ ತಡರಾತ್ರಿಯವರೆಗೆ ಕಾರ್ಮಿನಾ ಮತ್ತವಳ ಶ್ರೀಮಂತ ಮೋಜಿನ ಪಾರ್ಟಿಯನ್ನು ದೂರದಿಂದ ಗಮನಿಸುತ್ತಿದ್ದು ಒಂದು ದಿನ ಶೆಡ್ ನ್ನು ಯಾಕೋ ತೆರೆದ ಕಾರ್ಮಿನಾ ಕಣ್ಣಿಗೆ ಬೀಳುತ್ತಾನೆ. ಪೋಲಿಸರಿಗೆ ಕೊಡದಂತೆ ಅಥವಾ ತನ್ನನ್ನು ಅಲ್ಲಿಂದ ಅಟ್ಟದಂತೆ ಅಂಗಲಾಚುತ್ತಾನೆ.

ಆ ನಂತರ ಅವನ ಜೀವನ ಬದಲಾಗುತ್ತದೆ. ಕಾರ್ಮಿನಾ ಊಟ, ಬಟ್ಟೆ, ಪುಸ್ತಕ ಕೊಟ್ಟರೂ ಅವನಿಗೆ ಅದು ಒಂದು ಜೈಲಾಗಿ, ಚಿನ್ನದ ಪಂಜರವಾಗಿ ಕಾಣುತ್ತದೆ. ತಾನು ಪ್ಯಾರೀಸಿಗೆ ಹೋಗಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಓದಬೇಕು, ತನ್ನನ್ನು ಹತ್ತಿರದ ನಗರಕ್ಕೆ ಒಯ್ದು ಬಿಡಬೇಕು ಎಂಬ ಅವನ ಕೋರಿಕೆಯನ್ನು ಆಕೆ ತಿರಸ್ಕರಿಸುತ್ತಾಳೆ. ಯಾರ ಕಣ್ಣಿಗೂ, ಅಲ್ಲಿ ಕೆಲಸ ಮಾಡುತ್ತಿರುವ ಲೂಪ್ ಕಣ್ಣಿಗೂ ಬೀಳಬಾರದೆಂದು ತಾಕೀತು ಮಾಡುತ್ತಾಳೆ.  ಆಗಾಗ ತನ್ನ ಬೆಡ್ ರೂಮ್ ಗೂ ಒಯ್ಯುತ್ತಾಳೆ, ಕೆಲವೊಮ್ಮೆ ಶೇಡ್ ನಲ್ಲಿ ಲಾಕ್ ಮಾಡುತ್ತಾಳೆ. ಆಗಾಗ ಜನಾಂಗೀಯ ಬೈಗುಳ ಮತ್ತು ದ್ವೇಷವನ್ನು ತೋರಿಸುತ್ತಾಳೆ. ಒಮ್ಮೆ ದಯಾಮಯಿ, ಇನ್ನೊಮ್ಮೆ ಕ್ರೂರಿ, ಮತ್ತೊಮ್ಮೆ ಅಸಂಗತವಾಗಿ ವರ್ತಿಸುವ ಕಾರ್ಮಿನಾ ಳ ವರ್ತನೆಯಿಂದ ಆಕ್ರೋಶಗೊಂಡ ಬಿಲಾಲ್ ನ  ಅಲ್ಲಿಂದ ಓಡಿ ಹೋಗುವ ಪ್ರಯತ್ನವನ್ನು ತಡೆಯುತ್ತಾಳೆ. ಇನ್ನೊಮ್ಮೆ ಪ್ರಯತ್ನಿಸಿದರೆ ಪೋಲಿಸ್ ಕರೆಯುವುದಾಗಿ ಬೆದರಿಸುತ್ತಾಳೆ.  ಕೆಲಸದಾಕೆ ಲೂಪೆ ಕಣ್ಣಿಗೆ ಬಿದ್ದ ಮೇಲೆ,  ಆಕೆಯ ಅನುಕಂಪ ಸಿಕ್ಕಿದ ಮೇಲೆ ಮತ್ತು ಅದು ಕಾರ್ಮಿನಾಗೆ ತಿಳಿದ ಮೇಲೆ ಬಿಲಾಲ್ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಇವೆಲ್ಲವೂ ಸೇರಿ ಕಾರ್ಮಿನಾಳ ಹುಟ್ಟಿನ ಹಬ್ಬದ ಭವ್ಯ ಪಾರ್ಟಿಯಲ್ಲಿ ಬಿಲಾಲ್ ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತದೆ.

ಪಾರ್ಟಿಯಲ್ಲಿ ಮದ್ಯ, ಮಾದಕ ದ್ರವ್ಯ ಸೇವನೆಯಿಂದ ಮತ್ತಿನಲ್ಲಿರುವ ಕಾರ್ಮಿನಾ ಮತ್ತು ಅವಳ ಶ್ರೀಮಂತ ಸ್ನೇಹಿತ ಸ್ನೇಹಿತೆಯರು ಬಿಲಾಲ್ ನನ್ನು ವಿಚಿತ್ರ ವಸ್ತುವಿನಂತೆ ಕಾಣುತ್ತಾರೆ. ಹಾಡು ಹೇಳಲು ನೃತ್ಯ ಮಾಡಲು ಒತ್ತಾಯಿಸುತ್ತಾರೆ.  ದುರ್ವರ್ತನೆ ಮಾಡುತ್ತಾರೆ. ಅವರ ಕೋರಿಕೆ ಮನ್ನಿಸದಿದ್ದರೆ ಜನಾಂಗೀಯ ಬೈಗುಳದ ಸುರಿಮಳೆ ಗರೆಯುತ್ತಾರೆ. ದಾಳಿ ಮಾಡುತ್ತಾರೆ. ಬೆದರಿಸುತ್ತಾರೆ. ಈ ನಡುವೆ ಕೆಲಸದಾಕೆ ಲೂಪೆ ಮತ್ತು ಕಾರ್ಮಿನಾ ಳ ನಡುವೆ ಜಟಾಪಟಿ ನಡೆಯುತ್ತದೆ. ಪಾರ್ಟಿ ಅಸ್ತವ್ಯಸ್ತವಾಗುತ್ತದೆ. ಬಿಲಾಲ್ ಈ ಕ್ರೇಜಿ ಪಾರ್ಟಿ ಯ ಅರಾಜಕತೆ  ಬಳಸಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಾ? ಲೊಪೆ ಸಹಾಯ ಮಾಡುತ್ತಾಳಾ ? ಎಂಬುದನ್ನು ದೀರ್ಘ ಅಸಂಗತವೆನಿಸುವ ಪಾರ್ಟಿ ಸೀನ್ ನಲ್ಲಿ ನೋಡಬಹುದು.

ಇಡೀ ಫಿಲಂ ನ ಘಟನಾವಳಿಗಳನ್ನು ಅಸಂಗತ ನಾಟಕದಂತೆ ಹೆಣೆಯಲಾಗಿದೆ. ಕಾರ್ಮಿನಾ, ಲೂಪೆ ಮತ್ತು ಬಿಲಾಲ್ ರ ಮುಖ್ಯ ಪಾತ್ರಗಳನ್ನು ಸ್ಪೈನಿನ (ಯುರೋಪಿನ ಅಥವಾ ವಿಕಸಿತ ದೇಶಗಳ) ಶ್ರೀಮಂತ ಕುಲೀನರು, ತಮ್ಮದೇ ನಾಡಿನ ಕೆಳವರ್ಗದ ದುಡಿಯುವ ಜನ ಮತ್ತು ಇತರ ನಾಡುಗಳ ನಿರಾಶ್ರಿತ ವಲಸಿಗರ ಜತೆ ಯಾವ ವರ್ತನೆ ಮಾಡುತ್ತಾರೆ ಎಂಬುದನ್ನು ರೂಪಕಾತ್ಮಕವಾಗಿ ಬಿಂಬಿಸಲು ಬಳಸಲಾಗಿದೆ. ಪೋಲಿಸ್ ಅಧಿಕಾರಿ, ಕಾರ್ಮಿನಾಳ ಸಂಬಂಧಿಕರು, ಶ್ರೀಮಂತ ಗೆಳೆಯರ ಪಾತ್ರಕ್ಕೂ ಅದೇ ಅನ್ವಯಿಸುತ್ತದೆ. ಇತರರೊಡನೆ  ದರ್ಪದ, ಚೆಲ್ಲಾಟ ನಡೆಸುವ, ದುರುಪಯೋಗ ಮಾಡುವ, ಸ್ವಾರ್ಥಿ ಧೋರಣೆ ಕಾರ್ಮಿನಾಳ ವರ್ತನೆ ಒಂದು ಕಡೆ,  ಹಾಗೂ  ಇನ್ನೊಂದು ಕಡೆ ಬಿಲಾಲ್ ಜತೆ ವರ್ತನೆ ಕ್ಷುಲ್ಲಕದಿಂದ ಆರಂಭಿಸಿ ವಿಕಾರಕ್ಕೆ ಮತ್ತು ಕೇಡಿಗೆ ತಿರುಗುವುದು – ಹೀಗೆ ಶ್ರೀಮಂತ ಕಾರ್ಮಿನಾ ಳನ್ನು ಚಿತ್ರಿಸಲಾಗಿದೆ. ಆ ಮೂಲಕ ತನ್ನ ಕಾಲ ಮುಗಿದಿದ್ದರೂ ಸವಲತ್ತು, ಅಧಿಕಾರ ಬಿಟ್ಟು ಕೊಡದ ಶ್ರೀಮಂತ ವರ್ಗ ದ ಪ್ರತಿನಿಧಿಯಾಗಿ ತೀಕ್ಷ್ಣ ಟೀಕೆ ಮತ್ತು ವಿಡಂಬನೆಗೆ ಬಳಸಲಾಗಿದೆ. ಯುರೋಪಿನ ಸಾಮ್ರಾಜ್ಯಶಾಹಿ ಶೋಷಣೆ ಆಫ್ರಿಕಾದ ನಿರಾಶ್ರಿತ ವಲಸೆಗೆ ನೇರವಾಗಿ ಕಾರಣವಾಗಿರುವುದು ಮತ್ತು ಬದಲಿಗೆ ಆಫ್ರಿಕನ್ನರನ್ನೇ ನಿಂದಿಸಿ ಬಲಿಪಶು ಮಾಡುವ ಎಡಬಿಡಂಗಿತನವನ್ನು ಬಿಲಾಲ್ ರೋಷಭರಿತವಾದ ಸಂದರ್ಭದಲ್ಲಿ ಕಟುವಾಗಿ ಟೀಕಿಸುವುದು ಇದಕ್ಕೆ ಪುಷ್ಟಿ ನೀಡುತ್ತದೆ.

ಯುರೋಪಿನ ಶ್ರೀಮಂತರ ಅಸಂಗತತೆ ಮತ್ತು ಸ್ವಪ್ರತಿಷ್ಟತೆಯನ್ನು ಕಟು ಟೀಕೆ ಮಾಡಿದರೂ, ಈ ಫಿಲಂ ಅದರ ಹೆಸರು ಹೇಳುವಂತೆ ನೋಡುಗರನ್ನು ಸೇರಿಸಿ ‘ಪಾರ್ಟಿ’ ಯ ವಿನೋದಮಯ ತುಂಟ ವಾತಾವರಣ ಸೃಷ್ಟಿಸುತ್ತದೆ ಮತ್ತು ವಿಷಯವನ್ನು ಅಷ್ಟು ಗಂಭೀರವಲ್ಲವೋ ಎಂಬಂತೆ ನಿರ್ವಹಿಸುತ್ತದೆ.

ಇದು ನಿರ್ದೇಶಕಿ ಎಲೆನಾ ಮನ್ರೀಕ್ ಅವರ ಮೊದಲ ಫೀಚರ್ ಫಿಲಂ. ಅವರು ಹಲವಾರು ಫಿಲಂ ಗಳ ನಿರ್ಮಾಣದಲ್ಲಿ ದೀರ್ಘ ಕಾಲದಿಂದ ತೊಡಗಿದ್ದು ನಿರ್ದೇಶನ, ಚಿತ್ರಕತೆಗೆ ಮೊದಲ ಬಾರಿ ಹೊರಳಿದ್ದಾರೆ.

ಇದನ್ನೂ ಓದಿ : ಕಾಡುವ ವಲಸಿಗ ಫಿಲಂಗಳು -1: ‘ಕಾಣದ ನಾಡಿನತ್ತ’ ಮತ್ತು ‘ಸುಲೈಮಾನ್ ಕತೆ’

ಸಾಮಿಯ

ಸಾಮಿಯ ಯೂಸುಫ್ ಒಮರ್ ಎಂಬ ಸೊಮಾಲಿಯಾದ ಮಹಿಳಾ ಒಲಿಂಫಿಕ್ಸ್ ಆಟಗಾರ್ತಿಯ ಜೀವನದ ಮೇಲಿನ ಫಿಲಂ. ಆಂತರಿಕ ಯುದ್ಧದಿಂದ ತ್ರಸ್ತವಾದ ಸೋಮಾಲಿಯಾ ದಲ್ಲಿ ಹುಟ್ಟಿ “ನಾನು ಜಗತ್ತಿನಲ್ಲಿ ಅತ್ಯಂತ ವೇಗದ  ಓಟಗಾರ್ತಿ ಆಗ್ತೇನೆ” ಎಂದು ಘೋಷಿಸಲು ಎಂಟೆದೆ ಬೇಕು. ಅದನ್ನು ಛಲದಿಂದ ಹೆಚ್ಚು ಕಡಿಮೆ ನಿಜ ಮಾಡಿದ  ಸಾಮಿಯ ಳ ದುಃಖಾಂತವಾದರೂ ಸ್ಫೂರ್ತಿದಾಯಕ ಕತೆಯಿದು.  ಅವಳ ಜೀವನದ ಮೇಲೆ ಆಧಾರಿತ ಕಾದಂಬರಿ “Don’t Tell Me You’re Afraid” ಯಿಂದ ಸ್ಫೂರ್ತಿ ಪಡೆದು ಜರ್ಮನ್-ಟರ್ಕಿಶ್ ನಿರ್ದೇಶಕಿ ಯಾಸ್ಮಿನ್ ಸಂದೆರಿಲಿ ತಯಾರಿಸಿದ ಫಿಲಂ.

ಸಾಮಿಯ ಳ ಜೀವನದ ಎರಡು ಭಾಗಗಳನ್ನು (ಕಾಲಾನುಕ್ರಮದಲ್ಲಿ ಅಲ್ಲ) ಫಿಲಂ ಚಿತ್ರಿಸುತ್ತದೆ. ಶಾಲೆಯಲ್ಲಿ ಹುಡುಗರೊಂದಿಗೆ ಓಡಬಾರದು ಎಂಬ ತಾಕೀತಿದ್ದರೂ ಅದನ್ನು ಲೆಕ್ಕಿಸದೆ ನಗರದ ಓಟದಲ್ಲಿ ಮೊದಲ ಸ್ಥಾನದಲ್ಲಿ ಬರುತ್ತಾಳೆ ಸಾಮಿಯ. ಕುಟುಂಬದ ಒಳಗೆ, ಸಮಾಜದಲ್ಲಿ, ದೇಶದ ರಾಜಕೀಯ ದಲ್ಲಿ ಬರುವ ಏಳು ಬೀಳುಗಳ ನಡುವೆಯೂ 2008ರ ಬೆಜಿಂಗ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಾಳೆ. ಸಾಮಿಯ ಗೆ ಸೋದರ ಸಂಬಂಧಿ, ತಂದೆ, ಅಕ್ಕ, ತಾಯಿ – ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಅವಳ ಜೀವನದ ಮಹದಾಸೆ ಪೂರೈಸಲು ಬೆಂಬಲ ನೀಡುತ್ತಾರೆ. ಶೂ ಕೊಳ್ಳಲು ಆಗದ ಬಡತನ, ಓಟ ಪ್ರಾಕ್ಟೀಸಿಗೆ ಸಮಾಜದಲ್ಲಿರುವ ಪುರುಷಹಂಕಾರ, ಧಾರ್ಮಿಕ ಮೂಲಭೂತವಾದಿ ಗುಂಪುಗಳು, ಪರಸ್ಪರ ಹೊಡೆದಾಡುವ ಗೆರಿಲ್ಲಾ ಗುಂಪುಗಳು, ಆಂತರಿಕ ಯುದ್ಧ, ಪದೇ ಪದೇ ರಾಜಕೀಯ ಬೆಳವಣಿಗಳಿಂದ ತಡೆ – ಹೀಗೆ ಹಲವು ಎಡರು ತೊಡರುಗಳನ್ನು ಸ್ಥೈರ್ಯ, ಛಲ ದಿಂದ ಎದುರಿಸಿ ಗೆಲ್ಲುವ ಸಾಮಿಯ ಳ ಸ್ಫೂರ್ತಿದಾಯಕ ಬದುಕಿನ ಚಿತ್ರಣವಿದೆ ಮೊದಲ ಭಾಗದಲ್ಲಿ.

ಆದರೆ ಬೆಜಿಂಗ್ ಒಲಿಂಪಿಕ್ಸ್ ನಿಂದ ವಾಪಸು ಬಂದ ಮೇಲೆ ಆರಭವಾಗುವುದು ಎರಡನೇ ಹಂತ. ಈಗ ಸೋದರನೂ ಸೇರಿಕೊಂಡಿರುವ ಮೂಲಭೂತವಾದಿ ಗುಂಪಿನ ಭಯ ಮತ್ತು ಧಾರ್ಮಿಕ ಕಟ್ಟಳೆಗಳ ಕಟು ಜಾರಿ – ಇವುಗಳ ಹಿನ್ನೆಲೆಯಲ್ಲಿ ಮುಂದಿನ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕಾದರೆ ಯುರೋಪಿಗೆ ವಲಸೆ ಹೋಗದೆ ಬೇರೆ ಉಪಾಯವಿಲ್ಲವೆಂದು  ಸಾಮಿಯ ಗೆ ಮನವರಿಕೆಯಾಗುತ್ತದೆ. ಇದಕ್ಕಾಗಿ ಹೊರಟು ಲಿಬ್ಯಾದ ಗೆರಿಲ್ಲಾ ಗಳ ಕೈಗೆ ಸಿಕ್ಕಿ ಬೀಳುತ್ತಾಳೆ. ಕೊನೆಗೂ ಹಲವು ಹರಸಾಹಸಗಳ ನಂತರ  ಮಾನವ ಸಾಗಾಣಿಕೆದಾರರ ನೆರವಿನಿಂದ ದೋಣಿಗಳಲ್ಲಿ ಸಮುದ್ರ ದಾಟುವಾಗ ನೀರು ಪಾಲಾಗುತ್ತಾಳೆ. ಇದು ದುರಂತಮಯ ಎರಡನೇ ಭಾಗ. ಲಿಬ್ಯಾದ ಗೆರಿಲ್ಲಾ ಗಳ ಕೈಯಲ್ಲಿ ಸಿಕ್ಕಿ ಬೀಳುವ ಭಾಗ2 ರ ಮೊದಲ ಭಾಗದಿಂದ ಆರಂಭಿಸಿ, ಮೊದಲ ಭಾಗ ಮಧ್ಯದಲ್ಲಿ ಬಂದು, ಭಾಗ2 ರ ಕೊನೆಯ ಭಾಗ ಫಿಲಂನಲ್ಲಿ ಕಾಣುವ ಓಟ. ಸಾಮಿಯ ದುರಂತಕ್ಕೆ ಕಾರಣವಾಗುವ ಸೊಮಾಲಿಯಾದ ರಾಜಕೀಯ ಸಾಮಾಜಿಕ ಬೆಳವಣಿಗೆ ತಿಳಿಸಲು ಆಗಿನ ರೇಡಿಯೊ ಟಿವಿ ಪ್ರಸಾರಗಳನ್ನು  ಸೃಜನಾತ್ಮಕವಾಗಿ ಬಳಸಲಾಗಿದೆ.

ಸೊಮಾಲಿಯ 1960ರ  ವರೆಗೆ ಬ್ರಿಟಿಶ್-ಇಟಾಲಿಯನ್ ವಸಾಹತುವಾಗಿದ್ದು ಅದರ ಸಂಪನ್ಮೂಲಗಳನ್ನು ದೋಚಲಾಗಿತ್ತು. ಸ್ವತಂತ್ರವಾದ ಮೇಲೂ ಇತರ ಆಫ್ರಿಕನ್ ದೇಶಗಳಂತೆ ಇಲ್ಲೂ ಸಂಪನ್ಮೂಲಗಳ ಮತ್ತು ಅಭಿವೃದ್ಧಿಯ ಕೊರತೆ ರಾಜಕೀಯ ಬಿಕ್ಕಟ್ಟು ಮಿಲಿಟರಿ ಮತ್ತು ಧಾರ್ಮಿಕ ಮೂಲಭೂತವಾದಿಗಳ ಪೈಪೋಟಿ ಮತ್ತು ಆಡಳಿತಕ್ಕೆ ಹಾದಿ ಮಾಡಿಕೊಟ್ಟಿತ್ತು, ಈ ಸನ್ನಿವೇಶದಲ್ಲಿ ಸಾಮಿಯ ನಂತಹ ಒಲಿಂಪಿಕ್ಸ್  ಪಟು ಸಹ ವಲಸೆ ಹೋಗಬೇಕಾದ ಸನ್ನಿವೇಶ ಉಂಟಾಗಿ ಈ  ದುರಂತ ಕತೆಗೆ ಹಾದಿ ಮಾಡಿಕೊಟ್ಟಿದೆ. ಒಲಿಂಪಿಕ್ಸ್ ಪಟುವಿನ ಛಲದ ಸ್ಫೂರ್ತಿದಾಯಕ ಚಿತ್ರಣವಲ್ಲದೆ, ಇಲ್ಲಿ ನಿರಾಶ್ರಿತ ವಲಸಿಗರನ್ನು ಸೃಷ್ಟಿ ಮಾಡುವ ಆಫ್ರಿಕಾದ ಪರಿಸ್ಥಿತಿಯ ಉತ್ತಮ ಚಿತ್ರಣವಿದೆ.

ನಿರಾಶ್ರಿತ ವಲಸಿಗರ ಪಾಡಿನ ರಾಜಕೀಯ-ಆರ್ಥಿಕ ಆಯಾಮ

ಈ ಫಿಲಂಗಳಲ್ಲಿ ಸಹಜವಾಗಿಯೇ ನಿರಾಶ್ರಿತ ವಲಸಿಗರ ಪಾಡನ್ನು ಮಾನವೀಯ ದೃಷ್ಟಿಯಿಂದ ನೋಡಲಾಗಿದೆ. ಆದರೆ ಕಳೆದ ದಶಕಕ್ಕೂ ಹೆಚ್ಚು ಅವಧಿಯಲ್ಲಿ ಆಫ್ರಿಕಾ ದಿಂದ ಯುರೋಪಿಗೆ, ಏಶ್ಯಾ, ಲ್ಯಾಟಿನ್ ಅಮೆರಿಕಗಳಿಂದ ಯು.ಎಸ್ ಗೆ ನಡೆಯುತ್ತಿರುವ ವಲಸೆ ಹಿಂದಿನ ಶತಮಾನಗಳ ಮೂರು ಮಹಾ ವಲಸೆಗಳಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಪ್ರೊ. ಪ್ರಭಾತ್ ಪಟ್ನಾಯಕ್..1 ಹಿಂದಿನ ಮಹಾ ವಲಸೆಗಳು ಸಾಮ್ರಾಜ್ಯಶಾಹಿ ಬಂಡವಾಳದ ಅಗತ್ಯಕ್ಕೆ ಅನುಗುಣವಾಗಿ ಅದರ ಉತ್ತೇಜನದಿಂದ ನಡೆದದ್ದು. ಆದರೆ ಈಗಿನದ್ದು ಸಾಮ್ರಾಜ್ಯಶಾಹಿ ಬಂಡವಾಳದ ಅಣತಿಯನ್ನು ಮೀರಿ ನಡೆಯುತ್ತಿದೆ ಮತ್ತು ಮೂರನೇ ಜಗತ್ತಿನಲ್ಲಿ ಅದರ ಕಾರ್ಯಚಾರಣೆಗಳ ಪರಿಣಾಮವಾಗಿ ಮತ್ತು ಅದಕ್ಕೆ (ಪ್ರಜ್ಞಾಪೂರ್ವಕವಲ್ಲದಿದ್ದರೂ) ಪ್ರತಿರೋಧವಾಗಿ ನಡೆಯುತ್ತಿದೆ ಎನ್ನುತ್ತಾರೆ ಪ್ರೊ. ಪಟ್ನಾಯಕ್. ಹಾಗಾಗಿಯೇ ಏನೋ ಯುರೋಪಿನಲ್ಲಿ ಈಗ ನೆಲೆಸಿರುವ ಆಫ್ರಿಕನ್ನರಿಗೆ ನೀವು ಅಗತ್ಯ ಬಿದ್ದರೆ ಇಲ್ಲಿ ಬರಲು ಪಟ್ಟ ಪಾಡನ್ನು ಮತ್ತೆ ಪಡಲು ತಯಾರಿದ್ದೀರಾ ಎಂದು ಕೇಳಿದ್ದಕ್ಕೆ ಬಹುಸಂಖ್ಯಾತರು “ಹೌದು” ಎಂದು ಉತ್ತರಿಸಿದರಂತೆ

ವಸಾಹತುಶಾಹಿಯಿಂದ ಹೊರಬಂದ ನಂತರವೂ ಆಫ್ರಿಕನ್ ದೇಶಗಳ ಸಂಪನ್ಮೂಲಗಳನ್ನು ಯುರೋಪಿನ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ನವ-ವಸಾಹತುಶಾಹಿ ಲೂಟಿ ಮೂಲಕ ಸಾಗಿಸುತ್ತಲೇ ಇದ್ದವು. ಅವು ಮತ್ತು ಐ.ಎಂ.ಎಫ್/ವಿಶ್ವ ಬ್ಯಾಂಕ್ ನಂತಹ ಸಂಸ್ಥೆಗಳು ಕೊಟ್ಟ ‘ಅಭಿವೃದ್ಧಿ’ ಸಾಲ 1980ರ ದಶಕದ “ಸಾಲ ಮರುಪಾವತಿ” ಬಿಕ್ಕಟ್ಟು ಉಂಟು ಮಾಡಿತು. ಏಕೆಂದರೆ ಅವು ಹೊರಿಸಿ ಮುಂದುವರೆಸಿದ್ದ ‘ಅಭಿವೃದ್ಧಿ’ ಮಾದರಿ (ಪ್ರಾಥಮಿಕ ಸರಕುಗಳ ರಫ್ತು, ಕೃಷಿ/ಕೈಗಾರಿಕಾ ಉತ್ಪನ್ನಗಳ ಆಮದು) ಆರ್ಥಿಕದಲ್ಲಿ ಜನತೆಯ ಅಭಿವೃದ್ಧಿಗೆ ಬೇಕಾದ ಯಾವುದೇ ಸಂರಚನಾ ಬದಲಾವಣೆ ತಂದಿರಲಿಲ್ಲ. ಈಗ ಮತ್ತೆ ಅದೇ ಪರಿಸ್ಥಿತಿಯಿದೆ. 2006ರಿಂದ 2017 ಅವಧಿಯಲ್ಲಿ ಆಫ್ರಿಕಾದ (35ರಿಂದ 110 ಶತಕೋಟಿ ಡಾಲರು) ಸಾಲ ಮೂರು ಪಟ್ಟಾಗಿದೆ. ಆಪ್ರಿಕಾದ ಅರ್ಧದಷ್ಟು ದೇಶಗಳು  ಹೆಚ್ಚಿನ ಸಾಲ-ಜಿಡಿಪಿ ಪ್ರಮಾಣದಿಂದ ಬಳಲುತ್ತಿದ್ದು ಹಲವು ಬಿಕ್ಕಟ್ಟಿನ ಸೂಚಕ ಎನ್ನಲಾಗುವ ಶೇ.60 ಸಾಲ-ಜಿಡಿಪಿ ಪ್ರಮಾಣ ದಾಟಿವೆ. ಹೀಗೆ ಯುರೋಪ್ ಆಫ್ರಿಕಾದ ಮೇಲೆ ಹೊರಿಸಿದ ಅಭಿವೃದ್ಧಿ ಮಾದರಿ ಮತ್ತು ಸಾಲದ ಹೊರೆಯೇ ಈಗಿನ ಮಹಾವಲಸೆಗೆ ಕಾರಣ ಎನ್ನುತ್ತಾರೆ ಚಿಂತಕ ವಿಜಯ ಪ್ರಶಾದ್.2

ಫಿಲಂ ಅನಾವರಣಗೊಳಿಸುವ ದಾರುಣ ಮಾನವೀಯ ಸ್ಥಿತಿಯ ಮೂಲ ಕಾರಣ ಹೀಗಿದೆ.

1 https://peoplesdemocracy.in/2016/1009_pd/migration-revolt-against-capital

2 https://blackagendareport.com/europes-greedy-lending-africa-drives-migration-fuels-eus-xenophobic-politics  

ಇದನ್ನೂ ನೋಡಿವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media

Donate Janashakthi Media

Leave a Reply

Your email address will not be published. Required fields are marked *