ಪೂರ್ಣ ಬರಪರಿಹಾರ ಬಿಡುಗಡೆಯಾಗುವವರೆಗೆ ಹೋರಾಟ ನಡೆಸಿ, ನಿಮ್ಮ ಜೊತೆ ನಾವಿದ್ದೇವೆ – ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ಕೇಂದ್ರ ಸರ್ಕಾರದಿಂದ ರೂ. 3,454 ಕೋಟಿ ಬರ ಪರಿಹಾರ ತರುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಾ. ಮುಖ್ಯಮಂತ್ರಿ ಚಂದ್ರು ಅಭಿನಂದನೆ ಸಲ್ಲಿಸಿದ್ದಾರೆ. ಬರಪರಿಹಾರ

ಭೀಕರ ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬರೋಬ್ಬರಿ 7 ತಿಂಗಳ ಬಳಿಕ ರೂ. 3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದೆ. ನಿರಂತರ ಮನವಿಗಳಿಗೆ ಸ್ಪಂದಿಸದೆ, ಕೇಂದ್ರದ ಅಧ್ಯಯನ ತಂಡವೇ ರಾಜ್ಯಕ್ಕೆ ರಾಜ್ಯವೇ ಬರಕ್ಕೆ ತುತ್ತಾಗಿದೆ ಎಂಬ ವರದಿ ಕೊಟ್ಟರೂ ಬರ ಪರಿಹಾರ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದಿಟ್ಟತನದಿಂದ ನ್ಯಾಯಯುತ ಹೋರಾಟ ನಡೆಸಿ, ಕೇಂದ್ರದಿಂದ ಬರ ಪರಿಹಾರ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು. ಬರಪರಿಹಾರ

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬರ ಪರಿಹಾರಕ್ಕಾಗಿ ಬೇಡಿಕೆ ಇಟ್ಟಾಗ ತಕ್ಷಣವೇ ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿರುತ್ತಿದ್ದರೆ ರಾಜ್ಯ ಸರ್ಕಾರವು ಇಂದು ಸುಪ್ರೀಂ ಕೋರ್ಟ್ ಗೆ ಹೋಗಿ ತನ್ನ ಹಕ್ಕನ್ನು ಪಡೆಯಬೇಕಾದ ಪ್ರಮೇಯವೇ ಇರುತಿರಲಿಲ್ಲ. ಸುಪ್ರೀಂ ಕೋರ್ಟ್ ಗೆ ಹೋಗಿ ರಾಜ್ಯದ ಹಕ್ಕಿನ ಪರಿಹಾರ ತಂದ ಕರ್ನಾಟಕ ರಾಜ್ಯ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ರಾಜ್ಯ ಸರ್ಕಾರದ ಈ ಕ್ರಮ ಇತರ ರಾಜ್ಯಗಳಿಗೂ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರು, ರಾಜ್ಯಕ್ಕೆ ಬಿಡುಗಡೆಯಾಗಿರುವ ಬರಪರಿಹಾರ ನಮ್ಮ ಮತ್ತು ನಾಡಿನ ರೈತರ ಹೋರಾಟಕ್ಕೆ ಸಿಕ್ಕ ಜಯ. ಎನ್.ಡಿ.ಆರ್.ಎಫ್ ನಿಯಮಾವಾಳಿ ಪ್ರಕಾರ ರಾಜ್ಯಕ್ಕೆ ಬಿಡುಗಡೆಯಾಗಬೇಕಿದುದ್ದು ರೂ.18,172 ಕೋಟಿ. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವುದು ಕೇವಲ ರೂ. 3,454 ಕೋಟಿ. ಇದು ಕೇವಲ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆ ಹಣವಾಗಿದೆ. ಇಷ್ಟಕ್ಕೆ ವಿರಮಿಸದೆ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಬರಬೇಕಿರುವ ಎಲ್ಲ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ವರೆಗೆ ಹೋರಾಟ ನಡೆಸಬೇಕು. ರಾಜ್ಯದ ರೈತರಿಗಾಗಿ ಎಎಪಿ ಮೊದಲಿನಂತೆ ನಿಷ್ಪಕ್ಷಪಾತವಾಗಿ ನಿಮ್ಮ ಜೊತೆ ನಿಲ್ಲಲಿದೆ ಎಂದು ಸಿದ್ದರಾಮಯ್ಯನವರಿಗೆ ಅಭಯ ನೀಡಿದರು. ಬರಪರಿಹಾರ

ಇದನ್ನು ಓದಿ : ಮೆಕ್ಯಾನಿಕ್ ಸಮುದಾಯಕ್ಕೆ ನಿಂದನಾತ್ಮಕ ಮಾತು; ನಟ ರಮೇಶ್ ಅರವಿಂದ್, ನಟಿ ಪ್ರೇಮಾ ಮತ್ತಿತರರ ವಿರುದ್ಧ ದೂರು

ಗಾಯಕ್ಕೆ ಮದ್ದು ಹಚ್ಚಬೇಕೇ ಹೊರತು ಗಾಯವು ಗ್ಯಾಂಗ್ರೆನ್ ಆಗುವ ತನಕ ಕಾಯಬಾರದು. ಹಲವು ಮನವಿ, ಪತ್ರಗಳ ಬಳಿಕವೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿ, ಇದೀಗ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ, ಅತ್ಯಂತ ಅನಿವಾರ್ಯವಾಗಿ ಕೇವಲ 20 % ಪರಿಹಾರ ಮಾತ್ರ ನೀಡಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಷ್ಟು ದಿನ ಬರ ಪರಿಹಾರ ವಿಚಾರವಾಗಿ ತುಟಿ ಪಿಟಿಕ್ ಎನ್ನದ ರಾಜ್ಯದ ಬಿಜೆಪಿ ನಾಯಕರು ಈಗ ಮೋದಿಯವರು ಕೊಟ್ಟ ದೊಡ್ಡ ಉಡುಗೊರೆ ಎಂದು ಪ್ರಚಾರ ನಡೆಸುತ್ತಿದ್ದಾರೆ. ಈ ಬಿಜೆಪಿಗರಿಗೆ ಕನಿಷ್ಠ ಮಾನ ಮರ್ಯಾದೆಯೂ ಇಲ್ಲವೇ? ಬರ ಪರಿಹಾರ ಕೊಡಿ ಎಂದು ಒಬ್ಬನೇ ಒಬ್ಬ ಬಿಜೆಪಿ ಸಂಸದ ಬಾಯಿ ಬಿಟ್ಟು ಕೇಳಿದ ಉದಾಹರಣೆ ಇದೆಯೇ? ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ ಒಂದು ವಾರ ಸಮಯಾವಕಾಶ ತೆಗೆದುಕೊಂಡ ಮೋದಿ ಸರ್ಕಾರ ಕೊನೆಗೂ ಅತ್ಯಲ್ಪ ಬರ ಪರಿಹಾರ ಬಿಡುಗಡೆ ಮಾಡಿದೆ. ಅದನ್ನು ಯಾವ ಭಂಡ ಬಾಯಿಯಲ್ಲಿ ಮೋದಿಯವರ ಕೊಡುಗೆ ಎಂದು ಬಿಂಬಿಸುತ್ತೀರಿ? ಎಂದು ಮುಖ್ಯಮಂತ್ರಿ ಚಂದ್ರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ನಮ್ಮ ದೇಶವು ಒಕ್ಕೂಟ ವ್ಯವಸ್ಥೆಯಲ್ಲಿರುವ ದೇಶ, ಸ್ವಾಭಾವಿಕವಾಗಿ ದೇಶದ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ಸರ್ಕಾರವನ್ನು ವಿವಿಧ ಪಕ್ಷಗಳು ಮುನ್ನಡೆಸುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ಪಕ್ಷದ ಹಿತ ಮರೆತು ರಾಜ್ಯಗಳ ಹಿತ ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಆಗಿರುತ್ತದೆ. ದೇಶದಲ್ಲಿ ನಾನಾ ರೀತಿಯ ತೆರಿಗೆ ಸಂಗ್ರಹಣೆ ಮಾಡಲಾಗುತ್ತಿದ್ದು, ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ತೆರಿಗೆಯ ಹಂಚಿಕೆಯಾಗುತ್ತದೆ . ಈ ಹಂಚಿಕೆಯಲ್ಲಿ ರಾಜ್ಯಗಳ ಅಹವಾಲನ್ನೂ ಕೇಳುವ ಕ್ರಮವನ್ನು ಕೇಂದ್ರ ಸರ್ಕಾರ ಮತ್ತು ಹಣಕಾಸು ಆಯೋಗವು ರೂಪಿಸಿಕೊಳ್ಳಬೇಕಾಗುತ್ತದೆ. ಸಂಗ್ರಹವಾದ ತೆರಿಗೆಯನ್ನು ಅಣ್ಣ – ತಮ್ಮ ರ ರೀತಿಯಲ್ಲಿ ಹಂಚಿಕೊಳ್ಳಬೇಕಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಆದರೆ ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಸರಿಯಾಗಿ ನೀಡದೆ ಕೇಂದ್ರ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರುತ್ತಾ ಬಂದಿರುವುದು ಅಕ್ಷಮ್ಯ. ಯಾವುದೇ ರಾಜ್ಯವು ವಿಪರೀತ ಪರಿಸ್ಥಿತಿಯಲ್ಲಿದ್ದಾಗ ತುರ್ತಾಗಿ ಕೇಂದ್ರ ಸರಕಾರ ನೆರವು ನೀಡಬೇಕು ಎಂದು ವಿವರಿಸಿದರು. ಬರಪರಿಹಾರ

ಇದನ್ನು ನೋಡಿ : “ಶೃತಿ ಮೆಡಂ ಶಕ್ತಿ ಯೋಜನೆ ನಮಗೆ ಬಲ ತಂದಿದೆ” ಬಾಯಿ ಇದೆ ಅಂತ ಹೆಂಗೆಂಗೊ ಮಾತಾಡಿದ್ರೆ ಹೇಗೆ ಮೆಡಂ” – ಮಹಿಳೆಯರ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *